×
Ad

ಪ್ಲಾಚಿಮಾಡ: ಬಡಜನತೆಯ ಜಲಸಂಪನ್ಮೂಲ ಕಸಿದ ಕೋಕಾಕೋಲಾ

Update: 2016-07-22 22:58 IST

 70 ವರ್ಷದ ವಯೋವೃದ್ಧೆ ಕನ್ನಿಯಮ್ಮಳ ಬದುಕು ಈಗ ಅತ್ಯಂತ ದುಸ್ತರವಾಗಿದೆ. ಕೇರಳದ ಪಾಲಕ್ಕಾಡ್ ಜಿಲ್ಲೆಯ ಪ್ಲಾಚಿಮಾಡ ಗ್ರಾಮದಲ್ಲಿರುವ ವಿಜಯನಗರ ಕಾಲನಿಯಲ್ಲಿರುವ ಆಕೆಯ ಮನೆಯ ಮೇಲೆ ಸುರಿಯುವ ಮುಂಗಾರಿನ ಮಳೆಯು, ಒಮ್ಮೆ ನೆಲ ಸೇರಿತೆಂದರೆ ಅದರಿಂದ ಆಕೆಗೆ ಎಳ್ಳಷ್ಟೂ ಪ್ರಯೋಜನವಿಲ್ಲ.

2004ರಲ್ಲಿ ಜನರ ಪ್ರತಿಭಟನೆಗೆ ಮಣಿದು ಮುಚ್ಚಲ್ಪಟ್ಟ ಕೋಕಾ ಕೋಲಾ ತಯಾರಿಕಾ ಘಟಕವು ಈಗಲೂ ಆ ಗ್ರಾಮಕ್ಕೆ ಶಾಪವಾಗಿ ಕಾಡುತ್ತಿದೆ. ‘‘ಇಲ್ಲಿ ಕೋಕಾಕೋಲಾ ಕಾರ್ಖಾನೆ ಆರಂಭಗೊಳ್ಳುವ ಮೊದಲು ನಾವು ನಮ್ಮ ನೀರಿನ ಆವಶ್ಯಕತೆಗಳಿಗೆ ನಮ್ಮ ಬಾವಿಗಳನ್ನೇ ಅವಲಂಬಿಸಿದ್ದೆವು’’ ಎಂದು ಕನ್ನಿಯಮ್ಮ ಹೇಳುತ್ತಾರೆ.
 ‘‘ಯಾವಾಗ ಕೋಕಾಕೋಲಾ ಕಾರ್ಖಾನೆ ಆರಂಭಗೊಂಡಿತೋ ಅಂದಿನಿಂದ ನಮ್ಮ ಬಾವಿಯ ನೀರಿನ ಮಟ್ಟವು ಇಳಿಯುತ್ತಲೇ ಹೋಯಿತು’’ ಎಂದು ಆಕೆ ಹೇಳುತ್ತಾರೆ. ‘‘ಮೊದಲಿಗೆ ನಮಗೆ ಅದಕ್ಕೆ ಕಾರಣವೇನೆಂದು ತಿಳಿಯಲಿಲ್ಲ. ನಾವು ನೀರನ್ನು ಬಳಸಿ ದಾಗ ನಮ್ಮ ಕಣ್ಣುಗಳು ಹಾಗೂ ಚರ್ಮದಲ್ಲಿ ಉರಿಯುಂಟಾಗುತ್ತಿತ್ತು. ಆಗ ನಮಗೆ, ನಮ್ಮ ಬಾವಿ ನೀರು ವಿಷಪೂರಿತಗೊಂಡಿರುವುದು ಅರಿವಾಯಿತು’’ ಎನ್ನುತ್ತಾರವರು.
 ಕನ್ನಿಯಮ್ಮಳಂತೆ ಆ ಗ್ರಾಮದ ಹಲವರು ತಮ್ಮ ಗೋಳಿನ ಕತೆಯನ್ನು ಹೇಳತೊಡಗುತ್ತಾರೆ. ಕಳೆದ ತಿಂಗಳು ಕೇರಳ ಪೊಲೀಸರು ಕೋಕಾಕೋಲಾ ಕಂಪೆನಿ ವಿರುದ್ಧ ಪರಿಶಿಷ್ಟ ಜಾತಿ ಹಾಗೂ ಬುಡಕಟ್ಟು ಪಂಗಡಗಳ ಕಾಯ್ದೆ (ದೌರ್ಜನ್ಯ ತಡೆ)ಯಡಿ ಎಫ್‌ಐಆರ್ ದಾಖಲಿ ಸಿದ್ದರು.
 
   ಪ್ಲಾಚಿಮಾಡ ಹೋರಾಟ ಸಮಿತಿಯು ನೀಡಿದ ದೂರಿನ ಮೇರೆಗೆ ನೊಯ್ಡಾದಲ್ಲಿರುವ ಕಂಪೆನಿಯ ಭಾರತೀಯ ವಿಭಾಗದ ಮುಖ್ಯಸ್ಥ, ಕೊಚ್ಚಿಯಲ್ಲಿರುವ ಪ್ರಾದೇಶಿಕ ಮುಖ್ಯಸ್ಥ ಹಾಗೂ ಪ್ಲಾಚಿಮಾಡ ಘಟಕದ ವರಿಷ್ಠನ ವಿರುದ್ಧ ಮೀನಾಕ್ಷಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 2004ರಿಂದ ಮುಚ್ಚುಗಡೆಯಾಗಿರುವ ಪ್ಲಾಚಿಮಾಡದ ಕೋಕಾಕೋಲಾ ಘಟಕವು, ಅಲ್ಲಿನ ಜಲಮೂಲಗಳು ಬತ್ತುವಂತೆ ಮಾಡಿದೆ ಹಾಗೂ ಉದ್ದೇಶಪೂರ್ವಕವಾಗಿ ಅಂತರ್ಜಲವನ್ನು ಕಲುಷಿತಗೊಳಿಸಿದೆಯೆಂದು ದೂರಿನಲ್ಲಿ ಆರೋಪಿಸಲಾಗಿದೆ.
ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿರುವ ಪ್ಲಾಚಿಮಾಡದಲ್ಲಿ ಎರವಳರು ಎಂಬ ಪರಿಶಿಷ್ಟ ಬುಡಕಟ್ಟು ಸಮುದಾಯದ ಜನರು ಅಧಿಕ ಸಂಖ್ಯೆಯಲ್ಲಿ ವಾಸವಾಗಿದ್ದಾರೆ. ಈ ಪುಟ್ಟ ಗ್ರಾಮದಲ್ಲಿ 2 ಸಾವಿರ ನಿವಾಸಿಗಳಿದ್ದು, ಕೃಷಿ ಹಾಗೂ ಕೂಲಿ ಇಲ್ಲಿನ ಜನರ ಮುಖ್ಯ ವೃತ್ತಿಗಳಾಗಿವೆ.
 ‘‘ಈಗ ಮುಂಗಾರಿನ ಸಮಯ. ಯಥೇಚ್ಛ ಮಳೆ ಸುರಿದುದರಿಂದ ಇಡೀ ಗ್ರಾಮಕ್ಕೆ ಸಂತಸವಾಗಿದೆ. ಹಿಂದಿನ ಕಾಲದಲ್ಲಿ ನಮ್ಮ ಬಾವಿಯಲ್ಲಿ ನೀರು ತುಂಬಿ ತುಳುತಿತ್ತು. ನಾವು ಕೈಗಳಿಂದಲೇ ಕೊಡವನ್ನು ಬಾವಿಗೆ ಮುಳುಗಿಸಿ ನೀರನ್ನು ತೆಗೆಯುತ್ತಿದ್ದೆವು. ಆದರೆ ಈಗ, ನೀರು ವಿಷಪೂರಿತ ಗೊಂಡಿರುವುದರಿಂದ, ನೀರಿನ ಆವಶ್ಯಕತೆಗಳಿಗೆ ನಾವು ನಳ್ಳಿಗಳ ಮುಂದೆ ಸಾಲುಗಟ್ಟಿ ನಿಲ್ಲಬೇಕಾಗಿದೆ. ಈಗ ಬಾವಿಯ ನೀರನ್ನು ಬಳಸುವುದು ಸಾಧ್ಯವೇ ಇಲ್ಲ’’ ಎಂದು ಪ್ಲಾಚಿಮಾಡದ ನಿವಾಸಿ ಮುರುಗೇಶನ್ ಹೇಳುತ್ತಾರೆ.

ಕೋಕಾಕೋಲಾ ಸೃಷ್ಟಿಸಿದ ಅವಾಂತರ
    ಕೇವಲ ಇದೊಂದೇ ದೂರಲ್ಲ. ಕೋಕಾಕೋಲಾ ಹಾಗೂ ಅದರ ಉಪಕಂಪೆನಿಗಳು ತಮ್ಮ ಕಾರ್ಖಾನೆಗಳಿಗಾಗಿ ಭಾರೀ ಪ್ರಮಾಣದ ನೀರನ್ನು ತೆಗೆಯುವ ಮೂಲಕ ತೀವ್ರವಾದ ನೀರಿನ ಸಮಸ್ಯೆಯನ್ನು ಸೃಷ್ಟಿಸುತ್ತಿದೆ. ಇದರಿಂದ ಭಾರತದ ಹಲವಾರು ಜಿಲ್ಲೆಗಳಲ್ಲಿ ನೀರಿನ ಗುಣಮಟ್ಟ ಹಾಗೂ ಪ್ರಮಾಣದ ಮೇಲೆ ಗಂಭೀರವಾದ ಪರಿಣಾಮವನ್ನು ಉಂಟು ಮಾಡುತ್ತಿವೆಯೆಂಬ ಆರೋಪವನ್ನ್ನೂ ಎದುರಿಸುತ್ತಿವೆ.
                            
ಈ ಕಂಪೆನಿಗೆ ಭಾರತದಲ್ಲಿ ಅತೀ ದೊಡ್ಡ ಪ್ರಮಾಣದ ಲಘುಪಾನೀಯ ಬಾಟ್ಲಿಂಗ್ ಘಟಕಗಳಿವೆ. ಭಾರತಾದ್ಯಂತ ಈ ಕಂಪೆನಿಯ ಕಾರ್ಯ ನಿರ್ವಹಣೆಯ ವಿರುದ್ಧ ಸಾವಿರಾರು ನಾಗರಿಕರು ಹಾಗೂ ಎನ್‌ಜಿಒ ಸಂಘಟನೆಗಳು ಅನೇಕ ಸಲ ಪ್ರತಿಭಟನೆ ನಡೆಸಿವೆ. ವಾರಣಾಸಿ ಸಮೀಪದ ಮೆಹದ್‌ಗಂಜ್, ಜೈಪುರ ಸಮೀಪದ ಕಾಲಾ ದೇರಾ ಹಾಗೂ ಮಹಾರಾಷ್ಟ್ರದ ಥಾಣೆ ಹಾಗೂ ತಮಿಳುನಾಡಿನ ಶಿವಗಂಗಾ ಸೇರಿದಂತೆ ಹಲವಾರು ಜಿಲ್ಲೆಗಳಲ್ಲಿ ಕೋಕಾಕೋಲಾ ಫ್ಯಾಕ್ಟರಿ ವಿರುದ್ಧ ಪ್ರತಿಭಟನೆಗಳು ನಡೆದಿವೆ.

ಟೈಮ್‌ಲೈನ್: ಕೋಕಾಕೋಲಾ ವರ್ಸಸ್ ಪ್ಲಾಚಿಮಾಡ
 1999: ಅಮೆರಿಕದ ಆಟ್ಲಾಂಟಾ ಮೂಲದ ಕೋಕಾಕೋಲಾ ಕಂಪೆನಿಯ ಅಂಗಸಂಸ್ಥೆಯಾದ ಹಿಂದೂಸ್ಥಾನ್ ಕೋಕಾಕೋಲಾ ಬೇವರೇಜಸ್ ಪ್ರೈ. ಲಿಮಿಟೆಡ್ ಕಂಪೆನಿಯು ಪ್ಲಾಚಿಮಾಡದಲ್ಲಿ ಸ್ಥಾವರವೊಂದನ್ನು ಸ್ಥಾಪಿಸಿತ್ತು. ಪೆರುಮಾಟ್ಟಿ ಗ್ರಾಮಪಂಚಾಯತ್, 2001ರಲ್ಲಿ ಕಂಪೆನಿಗೆ ಉತ್ಪಾದನೆಯನ್ನು ಆರಂಭಿಸಲು ಅನುಮತಿ ನೀಡಿತ್ತು. ಗ್ರಾಮದಲ್ಲಿ ತೋಡಲಾದ ಕೊಳವೆಬಾವಿಗಳಿಂದ ಹಾಗೂ ತೆರೆದ ಬಾವಿಗಳಿಂದ ಪ್ರತೀ ದಿನವೂ ಅದು 5.10 ಲಕ್ಷ ಲೀಟರ್ ನೀರನ್ನು ಎಳೆಯುತ್ತಿತ್ತು. ತಾನು ಬಳಸಿಕೊಳ್ಳುವ ಪ್ರತೀ 3.75 ಲೀಟರ್ ನೀರಿಗೆ ಅದು ಒಂದು ಲೀಟರ್ ಕೋಕಾಕೋಲಾ ಹಾಗೂ ಭಾರೀ ಪ್ರಮಾಣದ ತ್ಯಾಜ್ಯನೀರನ್ನು ಉತ್ಪಾದಿಸುತ್ತಿತ್ತು.
2002: ಪ್ಲಾಚಿಮಾಡ ಕಾರ್ಖಾನೆಯ ವಿರುದ್ಧ ಅಲ್ಲಿನ ಜನತೆ ದಿನವೂ ಪ್ರತಿಭಟನೆ ನಡೆಸತೊಡಗಿದರು. ಜಲಮಾಲಿನ್ಯ ಹಾಗೂ ನೀರಿನ ತೀವ್ರ ಕೊರತೆಯು ತಮ್ಮ ಬದುಕಿನ ಮೇಲೆ ದುಷ್ಪರಿಣಾಮ ಬೀರುತ್ತಿರುವುದಾಗಿ ಸ್ಥಳೀಯ ಸಮುದಾಯಗಳು ದೂರು ನೀಡಿದವು.
 2003: ಕೋಕಾಕೋಲಾ ಘಟಕವು ಗ್ರಾಮದ ಅಂತರ್ಜಲ ಸಂಪನ್ಮೂಲ ಗಳನ್ನು ಮಿತಿಮೀರಿ ಬಳಸಿಕೊಳ್ಳುತ್ತಿರುವುದರಿಂದ ತಮ್ಮ ಬಾವಿಗಳು ಬತ್ತಿರುವುದಾಗಿ ಪ್ಲಾಚಿಮಾಡದ ವಿಜಯನಗರಮ್ ಕಾಲನಿಯ ಮಹಿಳೆ ಯರು ಪ್ರತಿಭಟನೆ ನಡೆಸಿದರು. ಈಗ ಉಳಿದಿರುವ ನೀರು ಕೂಡಾ ಕುಡಿಯಲು ಅಯೋಗ್ಯವಾಗಿದೆ ಮತ್ತು ಅದನ್ನು ಸ್ನಾನಕ್ಕೆ ಬಳಸಿಕೊಂಡಾಗ ತಮ್ಮ ಕಣ್ಣು ಮತ್ತು ಚರ್ಮಗಳಲ್ಲಿ ಉರಿಯುಂಟಾಗುತ್ತದೆಯೆಂದು ಅವರು ಆಪಾದಿಸಿದ್ದರು. ಆರೋಗ್ಯ ಸಮಸ್ಯೆಗಳ ಜೊತೆಗೆ, ಅಂತರ್ಜಲ ಕಡಿಮೆಯಾಗಿ ಸ್ಥಳೀಯ ನಿವಾಸಿಗಳಿಗೆ ತಮ್ಮ ಭತ್ತ ಹಾಗೂ ತೆಂಗು ಕೃಷಿಗೆ ಬೇಕಾದ ನೀರನ್ನು ಒದಗಿಸಲೂ ಸಾಧ್ಯವಾಗುತ್ತಿಲ್ಲವೆಂದು ದೂರಿದ್ದರು.
ಎಪ್ರಿಲ್, 2003: ಕೋಕಾಕೋಲಾದ ಲೈಸನ್ಸನ್ನು ಪುನರ್‌ನವೀಕರಣಗೊಳಿಸಲು ಪೆರುಮಾಟ್ಟಿ ಗ್ರಾಮ ಪಂಚಾಯತ್ (ಗ್ರಾಮ ಮಂಡಳಿ) ನಿರಾಕರಿಸಿತು. ಕೋಕಾಕೋಲಾ ಕಂಪೆನಿಯು ಪ್ಲಾಚಿಮಾಡದಲ್ಲಿ ಅಂತರ್ಜಲವನ್ನು ಮಿತಿ ಮೀರಿ ಉಪಯೋಗಿಸುತ್ತಿರುವುದರಿಂದ ಪೆರುಮಾಟ್ಟಿ ಪಂಚಾಯತ್ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ನೀರಿನ ತೀವ್ರ ಕೊರತೆಯುಂಟಾಗಿದೆ. ಸ್ಥಳೀಯ ಜನರ ಹಿತಾಸಕ್ತಿಯನ್ನು ಕಾಪಾಡುವ ದೃಷ್ಟಿಯಿಂದ ತಾನು ಕಂಪೆನಿಯ ಪರವಾನಿಗೆಯನ್ನು ರದ್ದುಪಡಿಸುವುದಾಗಿ ಅದು ತಿಳಿಸಿತು.
 ಡಿಸೆಂಬರ್ 2003: ಗ್ರಾಮಪಂಚಾಯತ್‌ನ ನಿರ್ಧಾರವನ್ನು ಕೇರಳ ಹೈಕೋರ್ಟ್‌ನಲ್ಲಿ ಪ್ರಶ್ನಿಸಿತು. ಆಲಿಕೆಯನ್ನು ನಡೆಸಿದ ನ್ಯಾಯಾಲಯವು, ರಾಜ್ಯ ಸರಕಾರವು ಪ್ರಾಕೃತಿಕ ಸಂಪನ್ಮೂಲಗಳನ್ನು ರಕ್ಷಿಸುವಂತಹ ಕಾನೂನಾತ್ಮಕ ಕರ್ತವ್ಯವನ್ನು ಹೊಂದಿದೆ. ಸಾರ್ವಜನಿಕರ ಬಳಕೆಗಾಗಿರುವ ಈ ಸಂಪನ್ಮೂಲಗಳನ್ನು ಖಾಸಗಿ ಮಾಲಕತ್ವದ ಸೊತ್ತಾಗಿ ಪರಿವರ್ತಿಸಬಾರದು ಎಂದು ಅದು ತೀರ್ಪು ನೀಡಿತು. ಇದಕ್ಕೆ ವ್ಯತಿರಿಕ್ತವಾಗಿ ಅದು ನಡೆದರೆ, ಭಾರತದ ಸಂವಿಧಾನವು 21ನೆ ಪರಿಚ್ಛೇದದಡಿ ಖಾತರಿಪಡಿಸಿರುವ ಜನತೆಯ ಬದುಕುವ ಹಕ್ಕಿನ ಉಲ್ಲಂಘನೆಯಾಗಿದೆಯೆಂದು ನ್ಯಾಯಮೂರ್ತಿ ಕೆ. ಬಾಲಕೃಷ್ಣನ್ ನೇತೃತ್ವದ ನ್ಯಾಯಪೀಠ ತೀರ್ಪು ನೀಡಿತು. ಒಂದು ತಿಂಗಳೊಳಗೆ ಅಂತರ್ಜಲವನ್ನು ಎಳೆಯುವುದನ್ನು ನಿಲ್ಲಿಸುವಂತೆ ಅದು ಕೋಕಾಕೋಲಾ ಕಂಪೆನಿಗೆ ಆದೇಶಿಸಿತು.
2005: ಹೈಕೋರ್ಟ್‌ನ ವಿಭಾಗೀಯ ಪೀಠವು 2005-2006ನೆ ಸಾಲಿನಲ್ಲಿ ಪ್ರತಿದಿನವೂ ಸಾಮಾನ್ಯ ಅಂತರ್ಜಲದ ಮೂಲಕ 2 ಲಕ್ಷ ಲೀಟರ್ ನೀರನ್ನು ತೆಗೆಯಲು ಅನುಮತಿ ನೀಡಿತು. ಪ್ಲಾಚಿಮಾಡದಲ್ಲಿ ಅಂತರ್ಜಲದ ಪ್ರಮಾಣ ಕ್ಷೀಣಿಸಿರುವುದರ ಹಿಂದಿರುವ ಕಾರಣಗಳ ಬಗ್ಗೆ ವೈಜ್ಞಾನಿಕ ಅಂದಾಜನ್ನು ನಡೆಸದೆ ಕೋಕಾಕೋಲಾ ಕಾರ್ಖಾನೆಯ ಲೈಸೆನ್ಸ್ ರದ್ದುಪಡಿಸಿರುವುದು ಸಮರ್ಥನೀಯವಲ್ಲವೆಂದು ಅದು ವಾದಿಸಿತ್ತು.
ಜೂನ್, 2006: ಹೊಸತಾಗಿ ಎಡರಂಗ ಸರಕಾರವು ಪ್ಲಾಚಿಮಾಡದ ಕೋಕಾಕೋಲಾ ಬಾಟ್ಲಿಂಗ್ ಸ್ಥಾವರದ ವಿರುದ್ಧ ಕ್ರಮಗಳನ್ನು ಕೈಗೊಳ್ಳುವುದಾಗಿ ಸಾಮಾಜಿಕ ಹೋರಾಟಗಾರರಿಗೆ ಭರವಸೆ ನೀಡಿತು.
ಆಗಸ್ಟ್, 2006: ಪ್ರತಿಭಟನೆಯು ಹೊಸತಿರುವನ್ನು ಪಡೆದುಕೊಂಡಿತು. ಕೇರಳ ಮಾಲಿನ್ಯ ನಿಯಂತ್ರಣ ಮಂಡಳಿಯು ಕೋಕಾಕೋಲಾ ಆರೋಗ್ಯಕ್ಕೆ ಎಷ್ಟು ಸುರಕ್ಷಿತವೆಂದು ಪ್ರಶ್ನಿಸಿ ಅದರ ಮಾರಾಟ ಹಾಗೂ ಉತ್ಪಾದನೆಯನ್ನು ನಿಷೇಧಿಸಲು ಆದೇಶಿಸಿತು. ಕೋಕಾಕೋಲಾ ಪಾನೀಯವು ಕೀಟನಾಶಕ ಹಾಗೂ ಹಾನಿಕಾರಕ ರಾಸಾಯನಿಕಗಳನ್ನು ಒಳಗೊಂಡಿದೆಯೆಂಬ ಹೊಸದಿಲ್ಲಿಯ ವಿಜ್ಞಾನ ಹಾಗೂ ಪರಿಸರ ಸಂಸ್ಥೆ ಎಂಬ ಎನ್‌ಜಿಒ ಸಂಘಟನೆಯ ವರದಿಯನ್ನು ಅದು ಉಲ್ಲೇಖಿಸಿತ್ತು.
2006, ಸೆಪ್ಟಂಬರ್: ರಾಜ್ಯದಲ್ಲಿ ಕೋಕಾಕೋಲಾದ ಮಾರಾಟ ಹಾಗೂ ಉತ್ಪಾದನೆಯನ್ನು ನಿಷೇಧಿಸುವ ಕೇರಳ ಮಾಲಿನ್ಯ ನಿಯಂತ್ರಣ ಮಂಡಳಿಯ ಆದೇಶವನ್ನು ಕೇರಳ ಹೈಕೋರ್ಟ್ ರದ್ದುಪಡಿಸಿತು. ಎನ್‌ಜಿಒ ಸಂಸ್ಥೆಯ ವರದಿಯನ್ನು ಆಧರಿಸಿ ಕೋಕಾಕೋಲಾದ ನಿಷೇಧವನ್ನು ಸಮರ್ಥಿಸಲು ಸಾಧ್ಯವಿಲ್ಲವೆಂದು ಅದು ಹೇಳಿತು.
 ಕೋಕಾಕೋಲಾ ಕಂಪೆನಿಯು ಅಂತರ್ಜಲವನ್ನು ಮಿತಿಮೀರಿ ಶೋಷಿಸುತ್ತಿದೆಯೆಂದು ಆರೋಪಿಸಿ ಕೇರಳ ಸರಕಾರವು ಸುಪ್ರೀಂಕೋರ್ಟ್ ಮೆಟ್ಟಿಲೇರಿತು. ಬಡಜನರ ಬಳಕೆಗಾಗಿರುವ ನೀರನ್ನು ಬಹುರಾಷ್ಟ್ರೀಯ ಕಂಪೆನಿಯಾದ ಕೋಕಾಕೋಲಾ ಕಸಿದುಕೊಳ್ಳುತ್ತಿರುವುದಾಗಿ ಅದು ಆರೋಪಿಸಿತು.

Writer - ಆನಂದ ಕುಮಾರ್

contributor

Editor - ಆನಂದ ಕುಮಾರ್

contributor

Similar News