ನಾಥೂರಾಮ್ ಗೋಡ್ಸೆ ಆರೆಸ್ಸೆಸ್‌ಗೆ ಸಂಬಂಧಿಸಿದ ವ್ಯಕ್ತಿ: ಹಿಂದೂ ಮಹಾಸಭಾ
ಮೀರತ್, ಜು.22: ‘‘ಗಾಂಧೀಜಿಯನ್ನು ಕೊಂದಿದ್ದು ಆರೆಸ್ಸೆಸ್’’ ಎಂದು ತಾವು 2014ರಲ್ಲಿ ನೀಡಿದ್ದ ಹೇಳಿಕೆಯ ಸಂಬಂಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಎದುರಿಸುತ್ತಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ತಮ್ಮ ಹೇಳಿಕೆಗೆ ಕ್ಷಮೆಯಾಚಿಸಲು ನಿರಾಕರಿಸಿ ಸುಪ್ರೀಂ ಕೋರ್ಟಿನಿಂದ ಟೀಕೆಗೆ ಒಳಗಾಗಿ ರುವಂತೆಯೇ ಆಶ್ಚರ್ಯಕರ ಬೆಳವಣಿಗೆ ಯೊಂದರಲ್ಲಿ ‘‘ರಾಹುಲ್ ಹೇಳಿಕೆಯಲ್ಲಿ ತಪ್ಪೇನೂ ಇಲ್ಲ’’ ಎಂದು ಹಿಂದೂ ಮಹಾಸಭಾ ಸದಸ್ಯರು ಹೇಳಿದ್ದಾರೆ.
‘‘ಮಹಾತ್ಮ ಗಾಂಧಿಯನ್ನು ಕೊಲ್ಲುವ ನಿರ್ಧಾರ ಕೈಗೊಂಡಾಗ ಬಿಜೆಪಿ ಹಾಗೂ ಆರೆಸ್ಸೆಸ್ ನಾಥೂರಾಮ್ ಗೋಡ್ಸೆ ಜೊತೆಗೇ ಇದ್ದವು. ಮಹಾತ್ಮ ಗಾಂಧಿ ಯವರಿಗೆ ಗುಂಡಿಕ್ಕಿದ ಘಟನೆ ನಡೆದು ಎರಡು ಗಂಟೆಗಳಾಗುವಷ್ಟರ ಹೊತ್ತಿಗೆ ಆರೆಸ್ಸೆಸ್ ಸದಸ್ಯರು ನೆಹರೂ ಬಳಿ ಹೋಗಿ ತಾವು ಹಿಂದೂ ಮಹಾಸಭಾವನ್ನು ಮುಗಿಸುವುದಾಗಿ ಹೇಳಿದರು. ಗೋಡ್ಸೆ ಆರೆಸ್ಸೆಸ್ ಹಾಗೂ ಹಿಂದೂ ಮಹಾಸಭಾದ ಭಾಗವಾಗಿದ್ದರೂ ಆತ ತನ್ನ ಜೀವವನ್ನು ಒಂದು ಒಳ್ಳೆಯ ಉದ್ದೇಶಕ್ಕೆ ನೀಡಿರುವಾಗ ಆತನ ಬಗ್ಗೆ ರಾಜಕೀಯ ಮಾಡಲಾಗುತ್ತಿದೆ’’ ಎಂದು ಹಿಂದೂ ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷ ಪಂಡಿತ್ ಅಶೋಕ್ ಶರ್ಮ ಹೇಳಿದ್ದಾರೆ.
ಗೋಡ್ಸೆಗೆ ಆರೆಸ್ಸೆಸ್ ಜೊತೆ ಸಂಬಂಧವಿತ್ತೇ ಅಥವಾ ಇಲ್ಲವೇ ಎಂಬ ಬಗ್ಗೆ ಪ್ರತಿಕ್ರಿಯಿಸಿದ ಹಿಂದೂ ಮಹಾ ಸಭಾದ ರಾಷ್ಟ್ರೀಯ ಅಧ್ಯಕ್ಷ ಚಂದ್ರ ಪ್ರಕಾಶ್ ಕೌಶಿಕ್ ‘‘ಗೋಡ್ಸೆ ಆರೆಸ್ಸೆಸ್ ಮತ್ತು ಹಿಂದೂ ಮಹಾಸಭಾದೊಂದಿಗೆ ನಂಟು ಹೊಂದಿದ್ದ ಓರ್ವ ರಾಷ್ಟ್ರೀಯವಾದಿ ಲೇಖಕನಾಗಿದ್ದರು. ಈಗ ಗೋಡ್ಸೆಗೂ ತಮಗೂ ಯಾವುದೇ ಸಂಬಂಧವಿಲ್ಲವೆಂದು ಆರೆಸ್ಸೆಸ್ ಹೇಳುವುದು ತಪ್ಪು. ‘‘ಗೋಡ್ಸೆಗೆ ಹಿಂದೂ ಮಹಾಸಭಾ ದೊಂದಿಗೆ ಸಂಬಂಧವಿತ್ತು ಎಂದು ಹೇಳುವುದಕ್ಕೆ ನಮಗೇನೂ ಹಿಂಜರಿಕೆಯಿಲ್ಲ. ನಾವು ಆತನ ಜನ್ಮದಿನವನ್ನೂ ಆಚರಿಸುತ್ತೇವೆ. ಆದರೆ ಆರೆಸ್ಸೆಸ್ ಕೂಡ ಇದನ್ನು ಒಪ್ಪಬೇಕಾಗಿದೆ’’ ಎಂದು ಹೇಳಿದರು.