ಬಿಹಾರ: ಇಬ್ಬರು ನಕ್ಸಲೀಯರು ಶರಣು
ಔರಂಗಾಬಾದ್, ಜು.22: ಜಿಲ್ಲೆಯಲ್ಲಿ 8 ಮಂದಿ ಪೊಲೀಸರ ಹತ್ಯೆಗೆ ಕಾರಣವಾದ ನೆಲಬಾಂಬ್ ಸ್ಫೋಟದ ಸಂಬಂಧ ಬೇಕಾಗಿದ್ದ ಮಾವೋವಾದಿಯೊಬ್ಬರು ಇನ್ನೊಬ್ಬ ಬಂಡುಕೋರನೊಂದಿಗೆ ಬಿಹಾರದ ಔರಂಗಾಬಾದ್ ಜಿಲ್ಲೆಯ ಪೊಲೀಸ್ ಅಧೀಕ್ಷಕರ ಮುಂದೆ ಶರಣಾಗಿದ್ದಾನೆ.
ನಿನ್ನೆ ಶರಣಾಗಿರುವ ಈ ಇಬ್ಬರು ನಕ್ಸಲರನ್ನು ಜೆಹ್ನಾಬಾದ್ ಜೈಲ್‌ಬ್ರೇಕ್ ಪ್ರಕರಣದ ಆರೋಪಿ ನರೇಶ್ ಮಿಸ್ತ್ರಿ ಅಲಿಯಾಸ್ ದಡನ್ ಹಾಗೂ ನೆಲಬಾಂಬ್ ಸ್ಫೋಟ ಆರೋಪಿ ಸಂಜಯ್ ಸಿಂಗ್ ಎಂದು ಗುರುತಿಸಲಾಗಿದೆಯೆಂದು ಎಸ್ಪಿ ಬಾಬುರಾಮ್ ತಿಳಿಸಿದ್ದಾರೆ.
ನರೇಶ್ ಪ್ರತಾಪ್‌ಪುರದ ನಿವಾಸಿಯಾಗಿದ್ದರೆ, ಸಂಜಯ್ ಗನು ಗ್ರಾಮದವನಾಗಿದ್ದಾನೆಂದು ಅವರು ಹೇಳಿದ್ದಾರೆ.
‘ಆಪರೇಶನ್ ವಿಶ್ವಾಸ್’ ಹೆಸರಿನ ಸಮುದಾಯ ಅಭಿಯಾನದಿಂದ ಪ್ರಭಾವಿತರಾಗಿ ಅವರು ಪೊಲೀಸರ ಮುಂದೆ ಶರಣಾದರೆಂದು ಬಾಬುರಾಮ್ ಪ್ರತಿಪಾದಿಸಿದ್ದಾರೆ.
ಇದೇ ವೇಳೆ, ಇನ್ನೊಂದು ಘಟನೆಯಲ್ಲಿ ನಿನ್ನೆ ರಾತ್ರಿ ನಕ್ಸಲರು, ಜಿಲ್ಲೆಯ ಬಕ್ಸಿವಿದಿಯ ಗ್ರಾಮದಲ್ಲಿ ಸೌರಶಕ್ತಿ ಕಂಪೆನಿಯೊಂದರ ಶಿಬಿರಕ್ಕೆ ಬೆಂಕಿ ಹಚ್ಚಿದ್ದಾರೆಂದು ಪೊಲೀಸರಿಂದು ತಿಳಿಸಿದ್ದಾರೆ.