ನೇಪಾಳ ಪ್ರಧಾನಿ ಓಲಿ ಪದತ್ಯಾಗ
ಕಾಠ್ಮಂಡು,ಜು.24: ತನ್ನ ಸರಕಾರದ ವಿರುದ್ಧ ಮಂಡಿಸಲಾದ ಅವಿಶ್ವಾಸ ನಿರ್ಣಯದ ಮೇಲಿನ ಮತದಾನಕ್ಕೆ ಕೆಲವೇ ತಾಸುಗಳ ಮೊದಲು ನೇಪಾಳದ ಪ್ರಧಾನಿ ಕೆ.ಪಿ. ಓಲಿ ರಾಜೀನಾಮೆ ನೀಡಿದ್ದಾರೆ. ವಿದೇಶಿ ಶಕ್ತಿಗಳು ದೇಶವನ್ನು ತಮ್ಮ ಪ್ರಯೋಗಶಾಲೆಯಾಗಿ ಪರಿವರ್ತಿಸುತ್ತಿವೆ ಹಾಗೂ ನೂತನ ಸಂವಿಧಾನದ ಜಾರಿಗೆ ಅಡ್ಡಿಪಡಿಸುತ್ತಿವೆಯೆಂದು ಅವರು ಆರೋಪಿಸಿದ್ದಾರೆ.
ನೇಪಾಳದ ಪ್ರಧಾನಿಯಾಗಿ ಓಲಿ ಕಳೆದ ಅಕ್ಟೋಬರ್‌ನಲ್ಲಿ ಅಧಿಕಾರಕ್ಕೇರಿದ್ದರು. ಆದರೆ ಸರಕಾರ ರಚನೆಗೆ ಅವರಿಗೆ ಬೆಂಬಲ ನೀಡಿದ ಮಾವೊವಾದಿಗಳು ಮೈತ್ರಿಕೂಟ ಸರಕಾರಕ್ಕೆ ಬೆಂಬಲ ಹಿಂದೆಗೆದುಕೊಂಡಿದ್ದು,ಅವಿಶ್ವಾಸನಿರ್ಣಯ ವುಂಡಿಸಿದ್ದಾರೆ.
‘‘ಈ ಸಂಸತ್‌ನಲ್ಲಿ ನೂತನ ಪ್ರಧಾನಿಯ ಆಯ್ಕೆಗೆ ಹಾದಿಮಾಡಿಕೊಡುವ ಉದ್ದೇಶದಿಂದ ನಾನು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡುತ್ತಿದ್ದೇನೆ ಹಾಗೂ ಅಧ್ಯಕ್ಷರಿಗೆ ನನ್ನ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದೇನೆ’’ ಎಂದು 64 ವರ್ಷ ವಯಸ್ಸಿನ ಓಲಿ ತಿಳಿಸಿದ್ದಾರೆ. ನೇಪಾಳಿ ಕಾಂಗ್ರೆಸ್ (ಎನ್‌ಸಿ) ಹಾಗೂ ಪ್ರಚಂಡ ನೇತೃತ್ವದ ಸಿಪಿಎನ್-ಮಾವೊಯಿಸ್ಟ್ ಸೆಂಟರ್ ಪಕ್ಷವು ಮಂಡಿಸಿದ ಅವಿಶ್ವಾಸ ನಿರ್ಣಯವನ್ನು ಮೈತ್ರಿಕೂಟದ ಪ್ರಮುಖ ಪಾಲುದಾರ ಪಕ್ಷಗಳಾದ ಮಾಧೇಶಿ ಜನತಾ ಹಕ್ಕುಗಳ ಪ್ರಜಾತಾಂತ್ರಿಕ ವೇದಿಕೆ ಹಾಗೂ ರಾಷ್ಟ್ರೀಯ ಪ್ರಜಾತಂತ್ರ ಪಕ್ಷಗಳು ಬೆಂಬಲಿಸಲು ನಿರ್ಧರಿಸಿದ ಬೆನ್ನಲ್ಲೇ ಓಲಿ ರಾಜೀನಾಮೆ ನೀಡಿದ್ದಾರೆ. ಪ್ರಧಾನಿ ಹುದ್ದೆಯ ಆಕಾಂಕ್ಷಿಯಾಗಿರುವ ಪ್ರಚಂಡ ಶುಕ್ರವಾರ ಓಲಿ ಓರ್ವ ಅಹಂಕಾರಿ ಹಾಗೂ ಸ್ವಹಿತಾಸಕ್ತಿಯನ್ನು ಗಮನದಲ್ಲಿರಿಸಿ ಅಧಿಕಾರ ಚಲಾಯಿಸುತ್ತಿರುವ ವ್ಯಕ್ತಿಯಾಗಿದ್ದು, ಅವರ ಜೊತೆ ಕಾರ್ಯನಿರ್ವಹಿಸಲು ಸಾಧ್ಯವಿಲ್ಲವೆಂದು ಹೇಳಿದ್ದರು.
ಇಂದು ಅವಿಶ್ವಾಸ ನಿರ್ಣಯ ಮಂಡನೆಗೆ ಮೊದಲು 598 ಸದಸ್ಯ ಬಲದ ನೇಪಾಳ ಸಂಸತ್ತನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರಚಂಡ ಮತ್ತಿತರು ತನ್ನ ವಿರುದ್ಧ ಮಾಡಿದ ಆರೋಪಗಳನ್ನು ತಿರಸ್ಕರಿಸಿದರು. ನೇಪಾಳದ ನೂತನ ಸಂವಿಧಾನವನ್ನು ವಿರೋಧಿಸುತ್ತಿರುವ ಮಾಧೇಶಿಗಳ ಜೊತೆ ಶಾಂತಿಯುತ ಮಾತುಕತೆಗೆ ಅವರು ಬೆಂಬಲವನ್ನು ವ್ಯಕ್ತಪಡಿಸಿದರು. ಪ್ರಧಾನಿ ಹುದ್ದೆಗೆ ತನ್ನ ರಾಜೀನಾಮೆಯಿಂದ ದೇಶದ ಮೇಲೆ ದೂರಗಾಮಿ ಪರಿಣಾಮಗಳಾಗಲಿದೆ ಆಹಗೂ ರಾಜಕೀಯ ಅಸ್ಥಿತೆಗೆ ಕಾರಣವಾಗಲಿದೆಯೆಂದು ಓಲಿ ಆತಂಕ ವ್ಯಕ್ತಪಡಿಸಿದರು.