ಬಾಗ್ದಾದ್: ಕಾರ್‌ಬಾಂಬ್ ದಾಳಿಗೆ 10 ಬಲಿ

Update: 2016-07-25 18:28 GMT

ಬಾಗ್ದಾದ್,ಜು.25: ಇರಾಕ್‌ನ ದಿಯಾಲಾ ಪ್ರಾಂತದಲ್ಲಿ ಸೋಮವಾರ ನಡೆದ ಭೀಕರ ಆತ್ಮಹತ್ಯಾ ಕಾರ್ ಬಾಂಬ್ ದಾಳಿಯಲ್ಲಿ ಕನಿಷ್ಠ 10 ಮಂದಿ ಸಾವನ್ನಪ್ಪಿದ್ದು, 12 ಮಂದಿ ಗಾಯಗೊಂಡಿದ್ದಾರೆ.

ಖಾಲಿಸ್ ಪಟ್ಟಣದಲ್ಲಿ ಸ್ಫೋಟಕಗಳಿಂದ ತುಂಬಿದ್ದ ವಾಹನವನ್ನು ಚಲಾಯಿಸಿಕೊಂಡು ಬಂದ ಭಯೋತ್ಪಾದಕನೊಬ್ಬನು, ಜನದಟ್ಟಣೆಯಿಂದ ಕೂಡಿದ್ದ ತಪಾಸಣಾಠಾಣೆಗೆ ಢಿಕ್ಕಿ ಹೊಡೆಸಿದನೆಂದು ಕ್ಸಿನುವಾ ಸುದ್ದಿಸಂಸ್ಥೆ ವರದಿ ಮಾಡಿದೆ.

ಸ್ಫೋಟದ ತೀವ್ರತೆಯಿಂದಾಗಿ ಹಲವಾರು ವಾಹನಗಳಿಗೆ ಬೆಂಕಿಹತ್ತಿಕೊಂಡಿದ್ದು, ಇತರ ಅನೇಕ ವಾಹನಗಳು ಹಾನಿಗೀಡಾಗಿವೆ. ಘಟನೆಯಲ್ಲಿ ಹಲವಾರು ಮಂದಿ ಗಂಭೀರ ಗಾಯಗೊಂಡಿದ್ದು, ಸಾವಿನ ಸಂಖ್ಯೆ ಇನ್ನೂ ಏರುವ ಭೀತಿಯಿದೆಯೆಂದು ಪೊಲೀಸರು ತಿಳಿಸಿದ್ದಾರೆ. ಬಾಗ್ದಾದ್‌ನಲ್ಲಿ ರವಿವಾರ ಶಂಕಿತ ಐಸಿಸ್ ಉಗ್ರರು ನಡೆಸಿದ ಆತ್ಮಹತ್ಯಾ ದಾಳಿಗೆ 21 ಮಂದಿ ನಾಗರಿಕರು ಬಲಿಯಾದ ಘಟನೆಯ ಬೆನ್ನಲ್ಲೆ ಈ ಕಾರ್‌ಬಾಂಬ್ ದಾಳಿ ನಡೆದಿದೆ. 2014ರಿಂದೀಚೆಗೆ ಐಸಿಸ್, ಬಾಗ್ದಾದ್‌ನ ಉತ್ತರದ ಹಾಗೂ ಪಶ್ಚಿಮ ಪ್ರಾಂತಗಳ ಬಹುತೇಕ ಪ್ರದೇಶಗಳನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿದೆ. ಆದರೆ ಇತ್ತೀಚಿನ ತಿಂಗಳುಗಳಲ್ಲಿ ಇರಾಕಿ ಪಡೆಗಳು, ಹಲವೆಡೆ ಐಸಿಸ್ ಉಗ್ರರನ್ನು ಹಿಮ್ಮೆಟ್ಟಿಸುವಲ್ಲಿ ಸಫಲವಾಗಿವೆ.ತಮ್ಮ ನೆಲೆಗಳು ಕೈತಪ್ಪುತ್ತಿರುವ ಹಿನ್ನೆಲೆಯಲ್ಲಿ ಐಸಿಸ್ ಉಗ್ರರು ಬಾಂಬ್ ದಾಳಿಗಳನ್ನು ಹೆಚ್ಚಿಸುವ ಸಾಧ್ಯತೆಗಳಿವೆಯೆಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News