ಗಂಭೀರ ಪರಿಣಾಮಗಳನ್ನು ಎದುರಿಸಿ: ಭಾರತಕ್ಕೆ ಚೀನಿ ಮಾಧ್ಯಮದ ‘ಎಚ್ಚರಿಕೆ ’

Update: 2016-07-25 18:29 GMT

ಬೀಜಿಂಗ್,ಜು.25: ಚೀನಾದ ಮೂವರು ಪತ್ರಕರ್ತರಿಗೆ ವೀಸಾ ಅವಧಿಯನ್ನು ವಿಸ್ತರಿಸಲು ನಿರಾಕರಿಸಿದ ಭಾರತ ಸರಕಾರದ ಕ್ರಮವನ್ನು ಅಲ್ಲಿನ ಸರಕಾರಿ ಸ್ವಾಮ್ಯದ ದಿನಪತ್ರಿಕೆಯೊಂದು ಕಟುವಾಗಿ ಟೀಕಿಸಿದೆ. ಒಂದು ವೇಳೆ ಅಣುಪೂರೈಕೆದಾರರ ಬಳಗ (ಎನ್‌ಎಸ್‌ಜಿ)ಕ್ಕೆ ಭಾರತದ ಸೇರ್ಪಡೆಯನ್ನು ಬೆಂಬಲಿಸಲು ಚೀನಾವು ನಿರಾಕರಿಸಿದ್ದಕ್ಕಾಗಿ ಭಾರತವು ಈ ಕ್ರಮ ಕೈಗೊಂಡಿದ್ದಲ್ಲಿ, ಅದರ ಪರಿಣಾಮ ಗಂಭೀರವಾಗಲಿದೆಯೆಂದು ಅದು ಎಚ್ಚರಿಕೆ ನೀಡಿದೆ.

‘‘ಎನ್‌ಎಸ್‌ಜಿಗೆ ಭಾರತದ ಸೇರ್ಪಡೆಗೆ ಚೀನಾ ವಿರೋಧಿಸಿರುವ ಹಿನ್ನೆಲೆಯಲ್ಲಿ ಅದು ಈ ರೀತಿಯ ಪ್ರತೀಕಾರಕ್ರಮವನ್ನು ಕೈಗೊಂಡಿದೆಯೆಂಬ ಸಂದೇಹಗಳು ಸುಳಿದಾಡುತ್ತಿವೆ. ಒಂದು ವೇಳೆ ಹೊಸದಿಲ್ಲಿಯು ನಿಜವಾಗಿಯೂ ಎನ್‌ಎಸ್‌ಜಿ ಸದಸ್ಯತ್ವ ವಿವಾದಕ್ಕೆ ಸಂಬಂಧಿಸಿ ಈ ಪ್ರತೀಕಾರವನ್ನು ಕೈಗೊಂಡಿದೆಯೆಂದಾದಲ್ಲಿ, ಅದರ ಪರಿಣಾಮಗಳು ಗಂಭೀರವಾಗಲಿವೆ’’ ಎಂದು ಗ್ಲೋಬಲ್ ಟೈಮ್ಸ್ ಪತ್ರಿಕೆಯು ತನ್ನ ಸಂಪಾದಕೀಯದಲ್ಲಿ ತಿಳಿಸಿದೆ.

ಭಾರತದಲ್ಲಿ ಚೀನಾದ ಸರಕಾರಿ ಸುದ್ದಿಸಂಸ್ಥೆ ಕ್ಸಿನುವಾದ ಪರವಾಗಿ ಕೆಲಸ ಮಾಡುತ್ತಿದ್ದ ಮೂವರು ಚೀನಿ ಪತ್ರಕರ್ತರ ವೀಸಾ ಅವಧಿಯನ್ನು ವಿಸ್ತರಿಸಲು ಕೇಂದ್ರ ಸರಕಾರ ನಿರಾಕರಿಸಿರುವುದು ಬೀಜಿಂಗ್‌ನ ಕೆಂಗಣ್ಣಿಗೆ ಕಾರಣವಾಗಿದೆ.

ಕ್ಸಿನವಾದ ದಿಲ್ಲಿ ಬ್ಯೂರೋ ಮುಖ್ಯಸ್ಥ ವೂ ಕ್ವಿಯಾಂಗ್ ಹಾಗೂ ಮುಂಬೈನ ಇನ್ನಿಬ್ಬರು ವರದಿಗಾರರಾದ ಟಾಂಗ್ ಲು ಹಾಗೂ ಮಾ ಕ್ವಿಯಾಂಗ್ ಅವರ ವೀಸಾ ಅವಧಿಯು ಈ ತಿಂಗಳ ಅಂತ್ಯದಲ್ಲಿ ಕೊನೆಗೊಳ್ಳಲಿದೆ. ತಮ್ಮ ಉತ್ತರಾಧಿಕಾರಿಗಳು ಬರುವವರೆಗೆ ವೀಸಾ ಅವಧಿಯನ್ನು ವಿಸ್ತರಿಸುವಂತೆ ಕೋರಿ ಅವರು ಅರ್ಜಿ ಸಲ್ಲಿಸಿದ್ದರು.

ಚೀನಾದ ಸರಕಾರಿ ಸ್ವಾಮ್ಯದ ಸುದ್ದಿಸಂಸ್ಥೆ ಕ್ಸಿನುವಾದ ಮೂವರು ಪತ್ರಕರ್ತರಿಗೆ ವೀಸಾ ವಿಸ್ತರಣೆಯನ್ನು ನಿರಾಕರಿಸಿದ ಭಾರತದ ಕ್ರಮವು ಉಚ್ಚಾಟನೆಗೆ ಸಮಾನವಾಗಿದೆಯೆಂದು ವಿದೇಶಿ ಮಾಧ್ಯಮಗಳು ಬಣ್ಣಿಸಿವೆ. ಈ ಮೂವರು ಪತ್ರಕರ್ತರು, ನಕಲಿ ಹೆಸರಿನಲ್ಲಿ ದಿಲ್ಲಿ ಹಾಗೂ ಮುಂಬೈನಲ್ಲಿ ಪ್ರವೇಶ ನಿರ್ಬಂಧವಿರುವ ಹಲವು ಇಲಾಖೆಗಳಿಗೆ ಭೇಟಿ ನೀಡಿದ್ದರೆಂದು ಕೆಲವು ಭಾರತೀಯ ಮಾಧ್ಯಮಗಳು ಆರೋಪಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News