ಬಂಗಾಳ ಕೊಲ್ಲಿಯಲ್ಲಿ ಬೃಹತ್ ನೈಸರ್ಗಿಕ ಅನಿಲ ನಿಕ್ಷೇಪ ಪತ್ತೆ

Update: 2016-07-26 18:21 GMT

ವಾಶಿಂಗ್ಟನ್, ಜು. 26: ಭಾರತವು ಬಂಗಾಳ ಕೊಲ್ಲಿಯಲ್ಲಿ ಬೃಹತ್ ಹಾಗೂ ಸಮೃದ್ಧ ನೈಸರ್ಗಿಕ ಅನಿಲ ನಿಕ್ಷೇಪವೊಂದನ್ನು ಪತ್ತೆಹಚ್ಚಿದೆ ಎಂದು ಈ ಶೋಧನೆಯಲ್ಲಿ ನೆರವು ನೀಡಿರುವ ಅಮೆರಿಕದ ಸಂಸ್ಥೆಯೊಂದು ತಿಳಿಸಿದೆ.

‘‘ಬಂಗಾಳ ಕೊಲ್ಲಿಯಲ್ಲಿ ನೈಸರ್ಗಿಕ ಅನಿಲ ನಿಕ್ಷೇಪವನ್ನು ಪತ್ತೆಹಚ್ಚಲು ಬಳಸಲಾದ ತಂತ್ರಜ್ಞಾನವು ಜಾಗತಿಕ ಇಂಧನ ಸಂಪನ್ಮೂಲಗಳನ್ನು ಅನಾವರಣಗೊಳಿಸಲು ನೆರವಾಗುತ್ತದೆ ಹಾಗೂ ಅವುಗಳನ್ನು ಸುರಕ್ಷಿತವಾಗಿ ಬಳಸುವ ತಂತ್ರಜ್ಞಾನದ ಸಂಶೋಧನೆಗೆ ಹಾದಿ ಮಾಡಿಕೊಡುತ್ತದೆ’’ ಎಂದು ಯುಎಸ್ ಜಿಯಾಲಜಿಕಲ್ ಸರ್ವೆ (ಯುಎಸ್‌ಜಿಎಸ್)ಯ ಇಂಧನ ಸಂಪನ್ಮೂಲಗಳ ಕಾರ್ಯಕ್ರಮ ಸಮನ್ವಯಕಾರ ವಾಲ್ಟರ್ ಗ್ವಿಡ್ರೋಝ್ ಹೇಳಿದರು.

ಭಾರತ, ಅಮೆರಿಕ ಮತ್ತು ಜಪಾನ್‌ಗಳ ವಿಜ್ಞಾನಿಗಳನ್ನು ಒಳಗೊಂಡ ತಂಡವೊಂದು ನಡೆಸಿದ ಸಮಗ್ರ ಪ್ರಯತ್ನದ ಫಲವಾಗಿ ಬಂಗಾಳ ಕೊಲ್ಲಿಯಲ್ಲಿ ನೈಸರ್ಗಿಕ ಅನಿಲ ನಿಕ್ಷೇಪ ಪತ್ತೆಯಾಗಿದೆ ಎಂದು ಯುಎಸ್‌ಜಿಎಸ್ ತಿಳಿಸಿದೆ.

ಭೌಗೋಳಿಕ ಪರಿವರ್ತನೆಗಳು, ಪ್ರಾದೇಶಿಕ ಭಿನ್ನತೆ ಮತ್ತು ಅನಿಲ ನಿಕ್ಷೇಪಗಳ ಲಕ್ಷಣಗಳನ್ನು ತಿಳಿಯಲು ವಿಜ್ಞಾನಿಗಳು ಸಮುದ್ರವನ್ನು ಕೊರೆದರು, ಸಾಂಪ್ರದಾಯಿಕ ಸೆಡಿಮೆಂಟ್ ಕೋರಿಂಗ್, ಪ್ರೆಶರ್ ಕೋರಿಂಗ್, ಡೌನ್‌ಹೋಲ್ ಲಾಗಿಂಗ್ ಮತ್ತು ವಿಶ್ಲೀಷಣಾತ್ಮಕ ಚಟುವಟಿಕೆಗಳನ್ನು ನಡೆಸಿದರು ಎಂದು ಅದು ಸೋಮವಾರ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News