×
Ad

ಟರ್ಕಿ: 42 ಪತ್ರಕರ್ತರ ಬಂಧನ

Update: 2016-07-26 23:55 IST

ಇಸ್ತಾಂಬುಲ್, ಜು. 26: ನಲ್ವತ್ತೆರಡು ಪತ್ರಕರ್ತರನ್ನು ಬಂಧಿಸುವಂತೆ ಟರ್ಕಿ ಸೋಮವಾರ ಆದೇಶ ಹೊರಡಿಸಿದೆ ಎಂದು ಎನ್‌ಟಿವಿ ಸುದ್ದಿಜಾಲ ವರದಿ ಮಾಡಿದೆ. ಜುಲೈ 15-16ರಂದು ನಡೆದ ವಿಫಲ ಸೇನಾ ಕ್ರಾಂತಿಯ ಬಳಿಕ ಟರ್ಕಿಯಲ್ಲಿ ಅಭೂತಪೂರ್ವ ದಮನ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸೈನಿಕರು, ಪೊಲೀಸರು, ನ್ಯಾಯಾಧೀಶರು ಮತ್ತು ನಾಗರಿಕ ಅಧಿಕಾರಿಗಳನ್ನು ಒಂದೋ ಬಂಧಿಸಲಾಗುತ್ತಿದೆ ಅಥವಾ ಅಮಾನತಿನಲ್ಲಿಡಲಾಗುತ್ತಿದೆ. ಇದು ಮಾನವಹಕ್ಕು ಸಂಘಟನೆಗಳು ಮತ್ತು ಪಾಶ್ಚಾತ್ಯ ದೇಶಗಳ ಕಳವಳಕ್ಕೆ ಕಾರಣವಾಗಿದೆ.

ವಿಫಲ ಕ್ಷಿಪ್ರಕ್ರಾಂತಿಯ ಕಾರಣವನ್ನು ಬಳಸಿಕೊಂಡು ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ದೊಗಾನ್ ದೇಶದ ಮೇಲಿನ ತನ್ನ ಹಿಡಿತವನ್ನು ಬಲಪಡಿಸಿಕೊಳ್ಳುತ್ತಿದ್ದಾರೆ ಎಂಬ ಆತಂಕವನ್ನು ಮಾನವಹಕ್ಕು ಸಂಘಟನೆಗಳು ಮತ್ತು ಪಾಶ್ಚಾತ್ಯ ದೇಶಗಳು ವ್ಯಕ್ತಪಡಿಸಿವೆ. ಐರೋಪ್ಯ ಒಕ್ಕೂಟಕ್ಕೆ ಸೇರಲು ಟರ್ಕಿ ಹೊಂದಿರುವ ತುಡಿತವನ್ನು ಐರೋಪ್ಯ ಒಕ್ಕೂಟ ಆಯೋಗದ ಅಧ್ಯಕ್ಷ ಜೀನ್-ಕ್ಲಾಡ್ ಜಂಕರ್ ಪ್ರಶ್ನಿಸಿದ್ದಾರೆ. ‘‘ಈಗಿನ ಪರಿಸ್ಥಿತಿಯಲ್ಲಿ ಸದ್ಯಕ್ಕಂತೂ ಇಲ್ಲ, ಮುಂದಿನ ದೀರ್ಘಾವಧಿಯಲ್ಲೂ ಐರೋಪ್ಯ ಒಕ್ಕೂಟದ ಭಾಗವಾಗುವ ಸ್ಥಿತಿಯಲ್ಲಿ ಟರ್ಕಿ ಇಲ್ಲ’’ ಎಂದು ಫ್ರಾನ್ಸ್‌ನ ಟಿವಿ ಚಾನೆಲ್ ‘ಫ್ರಾನ್ಸ್ 2’ನಲ್ಲಿ ಜಂಕರ್ ಹೇಳಿದ್ದಾರೆ. ಎರ್ದೊಗಾನ್ ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಹೇರಿದ್ದಾರೆ. ಇದು ಸಂಸತ್ತಿನ ಪೂರ್ವಾನುಮತಿಯನ್ನು ಪಡೆಯದೆಯೇ ಹೊಸ ಕಾನೂನುಗಳನ್ನು ಜಾರಿಗೊಳಿಸಲು ಹಾಗೂ ಅಗತ್ಯವೆಂದು ಕಂಡರೆ ನಾಗರಿಕರ ಹಕ್ಕುಗಳನ್ನು ಮೊಟಕುಗೊಳಿಸಲು ಅಧ್ಯಕ್ಷರಿಗೆ ಅಧಿಕಾರ ನೀಡುತ್ತದೆ. ಬಂಧನಕ್ಕೆ ವಾರಂಟ್ ಹೊರಡಿಸಲಾದ 42 ಪತ್ರಕರ್ತರ ಪೈಕಿ ಖ್ಯಾತ ವಾಗ್ಮಿ ಹಾಗೂ ಮಾಜಿ ಸಂಸದ ನಝ್ಲಿ ಇಲಿಕಾಕ್ ಕೂಡ ಸೇರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News