ತಟರಕ್ಷಣಾ ಪಡೆಯಿಂದ ಮೀನುಗಾರರ ಸುರಕ್ಷತೆಗೆ ಮಾರ್ಗಸೂಚಿ ಪ್ರಕಟ
ಮುಂಬೈ,ಜು.31: ಮೀನುಗಾರಿಕೆ ನಿಷೇಧದ ಅವಧಿ ಜು.31ಕ್ಕೆ ಕೊನೆಗೊಂಡಿದ್ದು, ಭಾರೀ ಮಳೆಯಿಂದಾಗಿ ಸಮುದ್ರದಲ್ಲಿ ಪ್ರತಿಕೂಲ ಹವಾಮಾನವಿರುವ ಹಿನ್ನೆಲೆಯಲ್ಲಿ ಮೀನುಗಾರರ ಸುರಕ್ಷತೆಗಾಗಿ ಮೀನುಗಾರಿಕೆ ದೋಣಿಗಳು,ಬಾರ್ಜ್‌ಗಳು ಇತ್ಯಾದಿಗಳಿಗೆ ಸಂಬಂಧಿಸಿದಂತೆ ಕರಾವಳಿ ರಾಜ್ಯಗಳಾದ ಮಹಾರಾಷ್ಟ್ರ,ಗೋವಾ,ಕರ್ನಾಟಕ,ಕೇರಳ ಮತ್ತು ಕೇಂದ್ರಾಡಳಿತ ಪ್ರದೇಶ ಲಕ್ಷದ್ವೀಪಗಳಿಗಾಗಿ ಮುಂಬೈನ ತಟರಕ್ಷಣಾ ಪಡೆಯ ಪ್ರಾದೇಶಿಕ ಕೇಂದ್ರಕಚೇರಿಯು ಮಾರ್ಗಸೂಚಿಯನ್ನು ಹೊರಡಿಸಿದೆ.
ಮೀನುಗಾರಿಕೆ ದೋಣಿಗಳು ಆ.1ರಿಂದ ಸಮುದ್ರಕ್ಕಿಳಿಯುವ ಮುನ್ನ ಅಗತ್ಯ ಮಾನದಂಡಗಳನ್ನು ಹೊಂದಿವೆಯೇ ಎಂಬ ಬಗ್ಗೆ ತಪಾಸಣೆಯನ್ನು ಪೂರ್ಣಗೊಳಿಸುವಂತೆ ಮೀನುಗಾರಿಕೆ ಇಲಾಖೆಯ ಅಧಿಕಾರಿಗಳನ್ನು ಅದು ಕೋರಿದೆ.
ಅಲ್ಲದೆ,ಸಮುದ್ರದಲ್ಲಿನ ಪ್ರತಿಕೂಲ ವಾತಾವರಣದ ಬಗ್ಗೆ ಮೀನುಗಾರರು ಎಚ್ಚರಿಕೆಯಿಂದಿರಬೇಕು ಎಂದು ತಟರಕ್ಷಣಾ ಪಡೆಯು ಸೂಚಿಸಿದೆ.
ಸಮುದ್ರ ಹವಾಮಾನ ಕುರಿತು ಪಡೆಯು ನಿಗಾಯಿರಿಸಿದ್ದು,ಎಲ್ಲ ಮೀನುಗಾರರಿಗೆ ಅಧಿಕಾರಿಗಳ ಮೂಲಕ ರೇಡಿಯೊ ಮತ್ತು ಎಸ್‌ಎಂಎಸ್ ವ್ಯವಸ್ಥೆಯನ್ನು ಬಳಸಿಕೊಂಡು ಕಾಲಕಾಲಕ್ಕೆ ಅಗತ್ಯ ಮಾಹಿತಿಗಳನ್ನು ಒದಗಿಸುತ್ತದೆ.
14 ವರ್ಷಕ್ಕಿಂತ ಕೆಳಗಿನ ಮಕ್ಕಳನ್ನು ಮೀನುಗಾರಿಕೆಯಲ್ಲಿ ತೊಡಗಿಸದಂತೆ ಮೀನುಗಾರರಿಗೆ ಕಟ್ಟುನಿಟ್ಟಾದ ಸೂಚನೆಯನ್ನು ನೀಡಲಾಗಿದೆ.