×
Ad

ಉಳ್ಳವರ ದುರ್ಬಲ ಸಂವಿಧಾನ

Update: 2016-08-01 23:07 IST

ಉಳ್ಳವರು ಎಲ್ಲಾ ರೀತಿಯಿಂದಲೂ ಬೂಟಾಟಿಕೆ ಮಾಡುವವರು. ಈ ಬೂಟಾಟಿಕೆಯಿಂದ ಹೊರಬರುವುದು ಕೇವಲ ಸಾಹಸ ಮಾತ್ರವಲ್ಲ ನಮ್ಮದೆಂದು ಕರೆಯಲು ಒಂದು ಉತ್ತಮ ಸಮಾಜವನ್ನು ಹೊಂದಲು ಇದು ಅತ್ಯಗತ್ಯ. ಕಡಿಮೆ ಸವಲತ್ತು ಹೊಂದಿರುವವರ ಬಗ್ಗೆ ಉಳ್ಳವರು ಹೊಂದಿರುವ ಅಗೌರವ ಬಗ್ಗೆ ನನಗೆ ಆಘಾತವಾಗಿ ದ್ದರೆ, ಅವರು ಇತರರನ್ನು ಟೀಕಿಸುವ ಕಾರಣಗಳು ಹಲವು ಬಾರಿ ಅವರಲ್ಲೇ ಮೈಗೂಡಿಕೊಂಡಿರುತ್ತವೆ ಎಂಬುದು ಅದಕ್ಕೂ ಹೆಚ್ಚಿನ ಆಘಾತ ನೀಡುತ್ತದೆ. ಹೆಚ್ಚು ಸಹಾಯಧನ ಪಡೆಯುವ ಮತ್ತು ಅಪಾಯದಿಂದ ದೂರವಿರುವ ಶ್ರೀಮಂತರು (ಅಪಾಯವನ್ನು ಸರಕಾರ ತೆಗೆದುಕೊಳ್ಳುತ್ತದೆ, ಲಾಭ ಮಾತ್ರ ಶ್ರೀಮಂತರ ಪಾಲಾಗುತ್ತದೆ) ಬಡಜನರು ಪಡೆಯುವ ಕ್ಷುಲ್ಲಕ ಸಹಾಯಧನದ ಬಗ್ಗೆ ಕೂಗೆಬ್ಬಿಸುತ್ತಾರೆ. ಬಡಮಕ್ಕಳು ಕಡಿಮೆ ದರದಲ್ಲಿ ಊಟ ಅಥವಾ ತಿಂಡಿ ಪಡೆದರೆ ಅವರನ್ನು ‘‘ಉಚಿತ ಪಡೆಯುವವರು’’ ಎಂದು ಹಂಗಿಸಲಾಗುತ್ತದೆ. ಅದೇ ತೆರಿಗೆ ಕಡಿತ, ಪ್ರೋತ್ಸಾಹಧನ ಮತ್ತು ಸಾರ್ವಜನಿಕ ವಸ್ತುಗಳ ಉಚಿತ ಬಳಕೆ ಶ್ರೀಮಂತರ ಉದ್ಯಮಶೀಲತೆಯಾಗಿದೆ.

ಭಿಕ್ಷುಕರು ಮತ್ತು ಅಸಮರ್ಥರು ನಾಟಕವಾಡುತ್ತಿದ್ದಾರೆ ಎಂದು ಹೇಳಲಾಗುತ್ತದೆ. ‘‘ನೋಡು ಆ ವ್ಯಕ್ತಿಯನ್ನು ಆತ ನಿಜವಾಗಿಯೂ ಅಷ್ಟು ದುಸ್ತರ ಸ್ಥಿತಿಯನ್ನು ಹೊಂದಿಲ್ಲ ಅಥವಾ ಅನಾರೋಗ್ಯಪೀಡಿತನಾಗಿಲ್ಲ’’ ಎಂಬ ಮಾತುಗಳು ವಸತಿಹೀನರಿಗೆ ಅಥವಾ ನಿರುದ್ಯೋಗಿಗಳಿಗೆ ತನ್ನ ಬಿಲದಂತಹ ಜೇಬಿನಿಂದ ಒಂದು ಡಾಲರ್ ಕೂಡಾ ನೀಡಲೊಲ್ಲದ ಕೋಟ್ಯಧಿಪತಿಗಳ ಬಾಯಿಂದ ಬರುತ್ತವೆ. ಅದೇ ಕೋಟ್ಯಧಿಪತಿ ನಮ್ಮಂಥವರು ಉದ್ಯೋಗ ಸಂದರ್ಶನಕ್ಕೆ ತೆರಳಿದಾಗ ಅಲ್ಲಿ ‘‘ನೀವು ಸಾಧಿಸುವವರೆಗೂ ನಾಟಕವಾಡಿ’’ ಎಂಬ ಸಲಹೆ ನೀಡುತ್ತಿರುತ್ತಾನೆ. ನಾಟಕವಾಡುವುದು ಒಂದು ಕಡೆ ಅಪರಾಧವಾದರೆ ಮತ್ತೊಂದು ಕಡೆ ಅದೊಂದು ಕಲೆ. ನಿಜವಾಗಿಯೂ ಒಬ್ಬ ಬಿಸಿಲು ಮತ್ತು ಮಳೆಯಲ್ಲಿ ಗಂಟೆಗಟ್ಟಲೆ ನಿಂತು ಭಿಕ್ಷೆ ಬೇಡುತ್ತಾನೆ ಎಂದಾದರೆ ಆತನಿಗೆ ಎರಡೂ ವಿಧಗಳಿಂದಲೂ ಸಹಾಯದ ಅಗತ್ಯವಿರುವುದರಿಂದ ಆತ ನಾಟಕವಾಡುತ್ತಿದ್ದಾನೆಯೇ ಎಂಬುದು ಮುಖ್ಯವಾಗುವುದಿಲ್ಲ ಎಂಬುದನ್ನು ಬೇರೆ ಹೇಳಬೇಕಾಗಿಲ್ಲ. ಬಡವರ ಸೋಮಾರಿತನದ ಬಗ್ಗೆ ಮಾತನಾಡುವ ಕೋಟ್ಯಧಿಪತಿಗಳು ತಾವು ಮಾತ್ರ ವಾರಕ್ಕೆ ನಾಲ್ಕೇ ದಿನ ಕೆಲಸ ಎಂಬಂತಹ ಪುಸ್ತಕಗಳನ್ನು ಹುಡು ಕುತ್ತಾ, ರಮಣೀಯ ಪ್ರದೇಶಗಳಲ್ಲಿ ರಜಾಮಜಾವನ್ನು ಅನುಭವಿಸುತ್ತಾ ಇರುತ್ತಾರೆ. ಹಲವು ಮಕ್ಕಳನ್ನು ಹೊಂದಿರುವ ಶ್ರೀಮಂತ ಕುಟುಂಬಗಳು ಬಡವರು ಮೊಲಗಳಂತೆ ಮಕ್ಕಳನ್ನು ಹೆರುತ್ತಾರೆ ಎಂದು ದೂಷಿಸುತ್ತಾರೆ. ಅನಕ್ಷರಸ್ಥರು ಮತ ಹಾಕಬಾರದು ಎಂಬ ಸಲಹೆ ನೀಡುವ ಒಂದು ಸಂಪ್ರದಾಯ ಭಾರತದಲ್ಲೀಗ ಬೆಳೆದಿದೆ, ಅದೇನೋ ಶಿಕ್ಷಿತ ವರ್ಗ ದೇಶದಲ್ಲಿ ರಾಜಕೀಯ ಚಮತ್ಕಾರವನ್ನೇನೋ ನಡೆಸಿದೆ ಎಂಬಂತೆ. ಇನ್ನು ವಿಶ್ವವಿದ್ಯಾನಿಲಯದ ಮೆಟ್ಟಲೇ ಹತ್ತದ ಶ್ರೀಮಂತರ ಬಗ್ಗೆ ಉಲ್ಲೇಖಿಸಬೇಕೆಂದಿಲ್ಲ (ಬಿಲ್‌ಗೇಟ್ಸ್ ರಂತೆ). ಶ್ರೀಮಂತರು ಹೊಟೇಲ್‌ಗಳಲ್ಲಿ ಸಾವಿರಗಟ್ಟಲೆ ಹಣ ಖರ್ಚು ಮಾಡುತ್ತಾರೆ ಮತ್ತು ಕೊನೆಯಲ್ಲಿ ವೈಟರ್‌ಗೆ ಒಂದು ಡಾಲರ್ ನೀಡುವುದೋ ಅಥವಾ ಎರಡೋ ಎಂಬ ಬಗ್ಗೆ ಯೋಚಿಸುತ್ತಾರೆ. ಮತ್ತೆ ಇವರು ಇತರರ ಸಣ್ಣತನದ ಬಗ್ಗೆ ಮಾತನಾಡುತ್ತಾರೆ. ಶ್ರೀಮಂತರು ಮನರಂಜನೆಗಾಗಿ ದುಂದುವೆಚ್ಚ ಮಾಡುತ್ತಾರೆ ಆದರೆ ಬಡವರು ಮಾತ್ರ ಜೀವನಾಧಾರದ ಬಗ್ಗೆ ಯೋಚಿಸಬೇಕು ಮತ್ತು ಅದಕ್ಕಿಂತ ಹೆಚ್ಚುವರಿ ಖರ್ಚು ಮಾಡಿದರೆ ಅವರನ್ನು ಹಿಂದುಳಿದವರು ಎಂದು ಭಾವಿಸಲಾಗುತ್ತದೆ. ಬಹುತೇಕ ಉಳ್ಳವರು ಕೆಳವರ್ಗದವರನ್ನು ಹಿಂದುಳಿದವರು ಎಂದು ಭಾವಿಸುತ್ತಾರೆ ನಂತರ ವೈಜ್ಞಾನಿಕ ನಿರಾಕರಣೆಗೆ ಮುಂದಾಗುತ್ತಾರೆ. ಶ್ರೀಮಂತರು, ಬಡವರು ದೇಶಕ್ಕೆ ಒಳ್ಳೆಯದಾಗುವಂತಹ ಕೆಲಸಗಳನ್ನು ಮಾಡಬೇಕೆಂದು ಬಯಸುತ್ತಾರೆ ಮತ್ತು ತಾವು ಮಾತ್ರ ತಮ್ಮ ಕುಟುಂಬಕ್ಕೆ ಒಳ್ಳೆಯದಾಗುವಂತಹ ಕೆಲಸವನ್ನು ಮಾತ್ರ ಮಾಡುತ್ತಾರೆ. ಅವರು ತಮ್ಮ ದೇಶವನ್ನು ಸ್ವಚ್ಛಗೊಳಿಸಬೇಕೆಂದು ಬಯಸುತ್ತಾರೆ ಆದರೆ ಕೈಗಾರಿಕಾ ತ್ಯಾಜ್ಯ ಮತ್ತು ಇತರ ತ್ಯಾಜ್ಯಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ, ಜಲಪ್ರದೇಶಗಳಲ್ಲಿ, ಸಮುದ್ರ ಹಾಗೂ ಬಡರಾಷ್ಟ್ರಗಳಲ್ಲಿ ಬಿಸಾಡುತ್ತಾರೆ. ಸರಕಾರದ ಮತ್ತು ಬಡವರ ಅಸಾಮರ್ಥ್ಯದ ಬಗ್ಗೆ ಶೋಕಿಸುವ ಶ್ರೀಮಂತರು ನಂತರ ಅವರಿಬ್ಬರನ್ನೂ ಪ್ರತೀ ಪೈಸೆಯಲ್ಲೂ ವಂಚಿಸುವ ಮೂಲಕ ತಾವು ದ್ವೇಷಿಸುವ ಅಸಾಮರ್ಥ್ಯದ ಸೃಷ್ಟಿಗೆ ಕಾರಣರಾಗುತ್ತಾರೆ. ಆಧಿಕಾರಿಗಳು ಸಂಘಟನೆಗಳು ಮತ್ತು ಅಂತಹ ಸ್ಥಾಪನೆಗಳನ್ನು ದ್ವೇಷಿಸುತ್ತಾರೆ. ಆದರೆ ಅವರೊಳಗೇ ಜೀವಮಾನದವರೆಗೆ ಉದ್ಯೋಗ ಅಥವಾ ಜೀವವಿರುವವರೆಗೆ ಪಾವತಿ ಎಂಬುವುದನ್ನು ಪ್ರತ್ಯೇಕ ವಿಧಿ ಮತ್ತು ಇತರ ಸಾಧನಗಳ ಮೂಲಕ ಖಚಿತಪಡಿಸಿಕೊಳ್ಳುತ್ತಾರೆ.

ಅನಕ್ಷರಸ್ಥರನ್ನು ದ್ವೇಷಿಸುವ ಶ್ರೀಮಂತರು ಸಾರ್ವಜನಿಕ ಶಿಕ್ಷಣ ಹೂಡಿಕೆ ಹಾಗೂ ಇತರ ಕ್ರಮಗಳ ಬಗ್ಗೆ ಬೊಬ್ಬಿಡುತ್ತಾರೆ. ಪಟ್ಟಿ ಹೀಗೇ ಮುಂದುವರಿಯುತ್ತದೆ.

ನಮ್ಮಂಥಾ ಉಳ್ಳವರು ದುರ್ಬಲ ಸಂವಿಧಾನವನ್ನು ಹೊಂದಿದ್ದಾರೆ ಮತ್ತು ಸ್ವಸ್ಥಿರ ನೈತಿಕತೆಯ ಕೊರತೆಯನ್ನು ಹೊಂದಿದ್ದಾರೆ. ನಮ್ಮ ಸಿರಿವಂತಿಕೆಯನ್ನು ಕಳೆದುಕೊಳ್ಳುವ ಭಯ ನಮಗೆಷ್ಟಿದೆಯೆಂದರೆ ಅದನ್ನು ಉಳಿಸುವ ಸಲುವಾಗಿ ಸಂತೋಷವಾಗಿಯೇ ನಾವು ಕಪಟ ವೇಷಧಾರಿಗಳಾಗುತ್ತೇವೆ.

ಹಾಗಾದರೆ ನಿಜವಾಗಿಯೂ ನಮ್ಮ ದ್ವೇಷದ ಮೂಲವಾಗಿರಬೇಕಾದವರು ಯಾರು? ನಮ್ಮ ಮುಖಕ್ಕೆ ಕನ್ನಡಿ ಹಿಡಿಯುವ ಸಮಯವಿದು.

Writer - ರೋಮಿ ಮಹಾಜನ್

contributor

Editor - ರೋಮಿ ಮಹಾಜನ್

contributor

Similar News