×
Ad

ನೂತನ ಜಿಎಸ್‌ಟಿ ತೆರಿಗೆ

Update: 2016-08-02 15:11 IST

ಹೊಸದಿಲ್ಲಿ,ಆ.2: ಬಹು ನಿರೀಕ್ಷಿತ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿಗೊಳ್ಳುವ ಹಾದಿ ಸುಗಮವಾಗಿದ್ದು, ಪ್ರಸಕ್ತ ಅಧಿವೇಶನದಲ್ಲೇ ಇದು ರಾಜ್ಯಸಭೆಯ ಒಪ್ಪಿಗೆ ಪಡೆಯುವ ನಿರೀಕ್ಷೆ ಇದೆ. ಈ ಸಂವಿಧಾನ ತಿದ್ದುಪಡಿ ಮಸೂದೆಗೆ ಒಪ್ಪಿಗೆ ಪಡೆಯುವ ನಿಟ್ಟಿನಲ್ಲಿ ವಿರೋಧ ಪಕ್ಷಗಳು ಆಗ್ರಹಿಸಿದ್ದ ತಿದ್ದುಪಡಿಗಳಿಗೆ ಕೇಂದ್ರ ಸಂಪುಟ ಅನುಮೋದನೆ ನೀಡಿರುವ ಹಿನ್ನೆಲೆಯಲ್ಲಿ ತಿದ್ದುಪಡಿಯಾದ ಜಿಎಸ್‌ಟಿ ಮಸೂದೆಗೆ ಅಂಗೀಕಾರ ಸಿಗುವುದು ಬಹುತೇಕ ಖಚಿತ. ಮಸೂದೆ ಬಗ್ಗೆ ನೀವು ತಿಳಿದುಕೊಳ್ಳಲೇಬೇಕಾದ ಐದು ಮಹತ್ವದ ಅಂಶಗಳು ಇಲ್ಲಿವೆ.

ಶೇಕಡ 1ರ ಉತ್ಪಾದನಾ ತೆರಿಗೆ ಕೈಬಿಡಲಾಗುತ್ತದೆ: ಶೇಕಡ 1ರ ಉತ್ಪಾದನಾ ತೆರಿಗೆ ಕೈಬಿಡುವ ಪ್ರಸ್ತಾವನೆಗೆ ಕೇಂದ್ರ ಸಚಿವ ಸಂಪುಟ ಕಳೆದ ವಾರ ಒಪ್ಪಿಗೆ ನೀಡಿದೆ. ಜಿಎಸ್‌ಟಿ ತೆರಿಗೆ ಜಾರಿಯಾಗಿರುವುದರಿಂದ ರಾಜ್ಯಗಳ ಆದಾಯಕ್ಕೆ ಧಕ್ಕೆಯಾಗದಂತೆ ಮಾಡಲು ಈ ಕ್ರಮ ಕೈಗೊಳ್ಳಲಾಗಿತ್ತು. ಆದರೆ ಕಳೆದ ಸಭೆಯಲ್ಲಿ ಬಹುತೇಕ ರಾಜ್ಯಗಳು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದವು.

ಪರಿಹಾರ ಖಾತ್ರಿ: ಜಿಎಸ್‌ಟಿ ಆರಂಭವಾಗುವುದರಿಂದ ರಾಜ್ಯಗಳಿಗೆ ಆಗುವ ನಷ್ಟ ತುಂಬಿಕೊಡಲು ಐದು ವರ್ಷವರೆಗೆ ಪರಿಹಾರವನ್ನು ನೀಡಲು ನಿರ್ಧರಿಸಲಾಗಿತ್ತು. ಇದೀಗ ತಿದ್ದುಪಡಿ ಮಾಡಿ, ಐದು ವರ್ಷ ಕಾಲ ನಷ್ಟ ಪರಿಹಾರ ತುಂಬಿಕೊಡಲು ಕೇಂದ್ರ ಒಪ್ಪಿಕೊಂಡಿದೆ.

ಜಿಎಸ್‌ಟಿ ದರ: ಜಿಎಸ್‌ಟಿ ತೆರಿಗೆ ದರಕ್ಕೆ ಶೇಕಡ 18ರ ಗರಿಷ್ಠ ಮಿತಿ ನಿಗದಿಪಡಿಸಬೇಕು ಎಂಬ ಬೇಡಿಕೆಯಿಂದ ಕಾಂಗ್ರೆಸ್ ಹಿಂದೆ ಸರಿದಿದೆ. ಆದರೆ ಜನರ ಮೇಲಾಗುವ ಪರಿಣಾಮವನ್ನು ಆಧರಿಸಿ ಈ ದರ ನಿಗದಿ ಮಾಡಬೇಕು ಎನ್ನುವುದು ರಾಜ್ಯಗಳ ಒತ್ತಡ. ಜತೆಗೆ ಈ ದರವು ರಾಜ್ಯಗಳ ಆದಾಯ ಸೃಷ್ಟಿ ಸಾಮರ್ಥ್ಯವನ್ನೂ ರಕ್ಷಿಸಬೇಕು ಎಂದು ರಾಜ್ಯಗಳು ಆಗ್ರಹಿಸಿವೆ. ಈ ಬದಲಾವಣೆ ಮಾಡಿಕೊಳ್ಳಲು ಕೇಂದ್ರ ಒಪ್ಪಿಗೆ ನೀಡಿದೆ.

ಅವಳಿ ನಿಯಂತ್ರಣ: 1.5 ಕೋಟಿ ರೂಪಾಯಿಗಿಂತ ಕೆಳಗಿನ ವಹಿವಾಟಿನ ಮೇಲೆ ವಿಧಿಸುವ ತೆರಿಗೆಗೆ ಕೇಂದ್ರದ ನಿಯಂತ್ರಣ ಇರಬಾರದು ಎನ್ನುವುದು ರಾಜ್ಯಗಳ ಒತ್ತಡ. ಈ ಸಂವಿಧಾನ ತಿದ್ದುಪಡಿ ಮಸೂದೆಗೆ ಒಪ್ಪಿಗೆ ನೀಡಲು ರಾಜ್ಯಗಳಿಗೆ ಅವಳಿ ನಿಯಂತ್ರಣದ ಭರವಸೆ ನೀಡಬೇಕು ಎನ್ನುವುದು ರಾಜ್ಯಗಳ ಒತ್ತಾಯವಾಗಿತ್ತು. ಸರ್ಕಾರ ಇದಕ್ಕೆ ಒಪ್ಪಿಕೊಂಡಿದೆ.

 ವ್ಯಾಜ್ಯ ಪರಿಹಾರ ವ್ಯವಸ್ಥೆ: ಜಿಎಸ್‌ಟಿಗೆ ಸಂಬಂಧಿಸಿದ ವ್ಯಾಜ್ಯಗಳ ಪರಿಹಾರಕ್ಕೆ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಯವರ ಅಧ್ಯಕ್ಷತೆಯ ವ್ಯಾಜ್ಯ ಪರಿಹಾರ ಮಂಡಳಿ ಇರಬೇಕು ಎನ್ನುವುದು ರಾಜ್ಯಗಳ ಆಗ್ರಹವಾಗಿದ್ದು, ಈ ಬಗ್ಗೆ ಕಾರ್ಯ ಪ್ರಗತಿಯಲ್ಲಿದ್ದು, ಈ ವಿಚಾರದಲ್ಲಿ ಒಮ್ಮತಕ್ಕೆ ಬರುವುದಾಗಿ ಎಂದು ಕೇಂದ್ರ ಸರ್ಕಾರ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News