2.16 ಕೋಟಿ ನಕಲಿ ಪಡಿತರ ಕಾರ್ಡ್ ಪತ್ತೆ

Update: 2016-08-02 18:14 GMT

ಹೊಸದಿಲ್ಲಿ,ಆ.2: ದೇಶಾದ್ಯಂತ ಸುಮಾರು 2.16 ಕೋಟಿ ನಕಲಿ ಪಡಿತರ ಕಾರ್ಡ್‌ಗಳನ್ನು ಪತ್ತೆಹಚ್ಚಲಾಗಿದ್ದು, ಇದರಿಂದಾಗಿ 13 ಸಾವಿರ ರೂ. ಸೋರಿಕೆಯನ್ನು ತಡೆಗಟ್ಟಲಾಗಿದೆ. ಇದೀಗ ಅದರ ಪ್ರಯೋಜನವು ನೈಜ ಫಲಾನುಭವಿಗಳಿಗೆ ಲಭಿಸುತ್ತಿದೆಯೆಂದು ಕೇಂದ್ರ ಸರಕಾರವು ಮಂಗಳವಾರ ತಿಳಿಸಿದೆ.
ಕೇಂದ್ರ ಗ್ರಾಹಕ ವ್ಯವಹಾರಗಳ ಸಹಾಯಕ ಸಚಿವ ಸಿ.ಆರ್.ಚೌಧುರಿ ಲೋಕಸಭೆಗೆ ಈ ಬಗ್ಗೆ ಮಾಹಿತಿ ನೀಡುತ್ತಾ, 34 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಶೇ.60ರಷ್ಟು ಪಡಿತರ ಕಾರ್ಡ್ ಗಳನ್ನು ಆಧಾರ್ ಜೊತೆ ಸಂಪರ್ಕಿಸಲಾಗಿದೆಯೆಂದರು.
ಪ್ರಶ್ನೋತ್ತರ ವೇಳೆಯಲ್ಲಿ ಮಾತನಾಡುತ್ತಿದ್ದ ಅವರು, ಈವರೆಗೆ 2.16 ಕೋಟಿ ನಕಲಿ ಅಥವಾ ಅಕ್ರಮ ರೇಶನ್ ಕಾರ್ಡ್‌ಗಳನ್ನು ಪತ್ತೆ ಹಚ್ಚಲಾಗಿದೆಯೆಂದು ತಿಳಿಸಿದರು. ಸರಕಾರವು ಪಡಿತರ ಕಾರ್ಡ್ ಗಳ ಡಿಜಿಟಲೀಕರಣ ಪ್ರಕ್ರಿಯೆಯನ್ನು ಪೂರ್ಣಗೊಳಿಸಿರುವುದಾಗಿ ತಿಳಿಸಿದರು.
 ಹಾಲಿನ ಕಲಬೆರಕೆ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ಸದಸ್ಯರೊಬ್ಬರು ವ್ಯಕ್ತಪಡಿಸಿದ ಕಳವಳಕ್ಕೆ ಪ್ರತಿಕ್ರಿಯಿಸಿದ ಅವರು, ನಿಜಕ್ಕೂ ಇದೊಂದು ಸಮಸ್ಯೆಯಾಗಿದೆ ಎಂದರು. ಕಲಬೆರಕೆಯನ್ನು ಮಟ್ಟಹಾಕಲು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆಯೆಂದವರು ತಿಳಿಸಿದರು.
ಇನ್ನೊಂದು ಪ್ರಶ್ನೆಗೆ ಉತ್ತರಿಸಿದ ಗ್ರಾಹಕ ವ್ಯವಹಾರಗಳ ಸಚಿವ ರಾಮ್‌ವಿಲಾಸ್ ಪಾಸ್ವಾನ್ ಅವರು ಹಲವು ದಶಕಗಳಷ್ಟು ಹಳೆಯದಾದ ಗ್ರಾಹಕ ಸಂರಕ್ಷಣಾ ಕಾಯ್ದೆಯನ್ನು ತಿದ್ದುಪಡಿಗೊಳಿಸಲು, ಕೇಂದ್ರ ಸರಕಾರವು ಈಗಾಗಲೇ ವಿಧೇಯಕವೊಂದನ್ನು ಸದನದಲ್ಲಿ ಮಂಡಿಸಿರುವುದಾಗಿ ತಿಳಿಸಿದರು.
 
ಗ್ರಾಹಕ ಜಾಗೃತಿ ಚಟುವಟಿಕೆಗಳನ್ನು ಜಾರಿಗೊಳಿಸಲು ಕೇಂದ್ರ ಸರಕಾರವು 10 ಕೋಟಿ ರೂ.ಗಳ ಕಾರ್ಪಸ್ ನಿಧಿಯನ್ನು ಸ್ಥಾಪಿಸಲಿದೆಯೆಂದು ಅವರು ಹೇಳಿದರು. ಈ ನಿಧಿಗೆ ಕೇಂದ್ರ ಸರಕಾರವು ಶೇ.75ರಷ್ಟು ಪಾಲು ನೀಡಲಿದ್ದು, ಉಳಿದ ಮೊತ್ತವನ್ನು ರಾಜ್ಯಸರಕಾರಗಳು ಭರಿಸಬೇಕೆಂದು ಅವರು ಹೇಳಿದರು. ಕರ್ನಾಟಕ, ಕೇರಳ, ತಮಿಳುನಾಡು, ಗುಜರಾತ್ ಸೇರಿದಂತೆ 11 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಕಾರ್ಪಸ್ ನಿಧಿಯನ್ನು ಸ್ಥಾಪಿಸಲಾಗಿದೆಯೆಂದು ಪಾಸ್ವಾನ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News