ಬಸ್ ಚಾಲಕ ಸಹಿತ ಮೂರು ಮೃತದೇಹ ಪತ್ತೆ

Update: 2016-08-04 06:29 GMT

ಮಹಾಡ್, ಆ.4: ಮುಂಬೈ-ಗೋವಾ ಹೆದ್ದಾರಿಯಲ್ಲಿ ಬ್ರಿಟಿಷ್ ಕಾಲದ ಸೇತುವೆ ಕುಸಿತದಲ್ಲಿ ಕೊಚ್ಚಿ ಹೋಗಿರುವವರ ಪೈಕಿ ಮೂವರ ಮೃತದೇಹ ಗುರುವಾರ ಪತ್ತೆಯಾಗಿದೆ. ನದಿ ಪಾಲಾಗಿರುವ ಎರಡು ಬಸ್‌ಗಳ ಅವಶೇಷಗಳ ಪತ್ತೆಗಾಗಿ ಬೃಹತ್ ಗಾತ್ರದ ಆಯಸ್ಕಾಂತವನ್ನು ಬಳಸಲಾಗುತ್ತಿದೆ.

ಕಳೆದ 36 ಗಂಟೆಗಳಿಂದ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ಸರಕಾರಿ ಬಸ್ ಚಾಲಕ ಶ್ರೀಕಾಂತ್ ಕಾಂಬ್ಳೆಯ ಮೃತದೇಹ ಕುಸಿದು ಬಿದ್ದ ಸೇತುವೆಯಿಂದ 100 ಕಿ.ಮೀ.ದೂರದಲ್ಲಿ ಪತ್ತೆಯಾಗಿದೆ. ಗುರುತು ಪತ್ರದ ಮೂಲಕ ಕಾಂಬ್ಳೆ ಮೃತದೇಹ ಪತ್ತೆಯಾಗಿದೆ. ಪತ್ತೆಯಾದ ಇನ್ನೆರಡು ಮಹಿಳೆಯರ ಶವವಾಗಿದ್ದು, ಗುರುತು ಪತ್ತೆಯಾಗಿಲ್ಲ.

ಮುಂಬೈನಿಂದ 170 ಕಿ.ಮೀ. ದೂರದಲ್ಲಿರುವ ಮಹಾಡ್‌ನಲ್ಲಿ 1940ರಲ್ಲಿ ನಿರ್ಮಿಸಲ್ಪಟ್ಟಿದ್ದ ಸೇತುವೆ ಬುಧವಾರ ಭಾರೀ ಮಳೆಯಿಂದಾಗಿ ಕೊಚ್ಚಿ ಹೋದ ಪರಿಣಾಮ ಎರಡು ಸರಕಾರಿ ಬಸ್ಸುಗಳು, 22 ಜನರು ಹಾಗೂ ಇತರ ವಾಹನಗಳು ನೀರುಪಾಲಾಗಿದ್ದವು.

ಬಸ್‌ಗಳ ಅವಶೇಷವನ್ನು ಪತ್ತೆ ಹಚ್ಚಲು 300 ಕೆಜಿ ತೂಕದ ಆಯಸ್ಕಾಂತವನ್ನು ನದಿಯ 40 ಅಡಿ ಆಳಕ್ಕೆ ಇಳಿಸಿ ಶೋಧ ಕಾರ್ಯ ನಡೆಸಲಾಗುತ್ತಿದೆ. ಆಯಸ್ಕಾಂತಕ್ಕೆ ಏನಾದರೂ ಹೊಡೆದರೆ ಅದನ್ನು ಹೊರ ತರಲು ಎಲ್ಲ ಪ್ರಯತ್ನ ನಡೆಸಲಾಗುವುದು ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.
ನದಿತಟ ರಕ್ಷಣಾ ಪಡೆ, ಎನ್‌ಡಿಆರ್‌ಎಫ್ ಹಾಗೂ ನೌಕಾ ದಳದವರು ಮಳೆಯಿಂದ ತುಂಬಿ ಹರಿಯುತ್ತಿರುವ ನದಿಯಲ್ಲಿ ಶೋಧ ಕಾರ್ಯ ನಡೆಸುತ್ತಿದ್ದಾರೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News