ಹಾಲು ಕಲಬೆರಕೆ ಮಾಡುವವರಿಗೆ ಜೀವಾವಧಿ ಶಿಕ್ಷೆ ನೀಡಬೇಕು: ಸುಪ್ರೀಂಕೋರ್ಟ್
ಹೊಸದಿಲ್ಲಿ, ಆ.6: ದೇಶದಲ್ಲಿ ವ್ಯಾಪಕ ಪ್ರಮಾಣದಲ್ಲಿ ಹಾಲು ಕಲಬೆರಕೆಯಾಗುತ್ತಿರುವ ಬಗ್ಗೆ ಸುಪ್ರೀಂಕೋರ್ಟ್ ತೀವ್ರ ಕಳವಳ ವ್ಯಕ್ತಪಡಿಸಿದೆ. ಇಂಥ ಕೃತ್ಯ ಎಸಗುವವರಿಗೆ ಜೀವಾವಧಿ ಶಿಕ್ಷೆ ವಿಧಿಸಬೇಕು ಎಂದು ಕೋರ್ಟ್ ಸಲಹೆ ಮಾಡಿದೆ. ಹಾಲಿ ಇರುವ ಕಾನೂನಿನ ಅನ್ವಯ ಆರು ತಿಂಗಳವರೆಗೆ ಮಾತ್ರ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ.
ಮುಖ್ಯ ನ್ಯಾಯಮೂರ್ತಿ ಟಿ.ಎಸ್.ಠಾಕೂರ್ ಹಾಗೂ ನ್ಯಾಯಮೂರ್ತಿಗಳಾದ ಆರ್.ಭಾನುಮತಿ ಮತ್ತು ಯು.ಯು.ಲಲಿತ್ ಅವರನ್ನೊಳಗೊಂಡ ನ್ಯಾಯಪೀಠ, ಹೆಚ್ಚುತ್ತಿರುವ ಹಾಲು ಕಲಬೆರಕೆ ದಂಧೆ ಹಾಗೂ ಕೃತಕ ಹಾಲಿನ ದಂಧೆ ತಡೆಯಲು ಕಠಿಣ ಕ್ರಮ ಕೈಗೊಳ್ಳುವುದು ಅಗತ್ಯ. ಇಂಥ ದಂಧೆಯಿಂದ ಭವಿಷ್ಯದ ಪೀಳಿಗೆಯ ಮೇಲೆ ತೀರಾ ವ್ಯತಿರಿಕ್ತ ಪರಿಣಾಮ ಉಂಟಾಗಲಿದೆ. ಮಕ್ಕಳು ಹಾಗೂ ಶಿಶುಗಳ ಬೆಳವಣಿಗೆಯೇ ಹಾಲನ್ನು ಅಲವಂಬಿಸಿರುವುದರಿಂದ ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು ಸೂಚಿಸಿದೆ.
ಹಾಲಿ ಇರುವ ಕಾಯ್ದೆಗೆ ತಿದ್ದುಪಡಿ ತರಲು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದೆ. ಉತ್ತರ ಪ್ರದೇಶ, ಬಂಗಾಳ ಹಾಗೂ ಒಡಿಶಾ ಈಗಾಗಲೇ ಹಾಲು ಕಲಬೆರಕೆ ದಂಧೆಯಲ್ಲಿ ಸಿಕ್ಕಿಹಾಕಿಕೊಂಡವರಿಗೆ ಜೀವಾವಧಿ ಶಿಕ್ಷೆ ವಿಧಿಸುವ ಕಾನೂನು ಜಾರಿಗೆ ತಂದಿವೆ ಎಂದು ಕೋರ್ಟ್ ಹೇಳಿದೆ.