ತಮ್ಮ ಆಡುಗಳ ತಂಟೆಗೆ ಬಂದ ಚಿರತೆಯನ್ನು ಕೊಂದೇ ಬಿಟ್ಟ ದಂಪತಿ
ಡೆಹ್ರಾಡೂನ್, ಅ.6: ತಮ್ಮ ಆಡುಗಳ ಮೇಲೆ ದಾಳಿ ನಡೆಸಿದ ಚಿರತೆಯೊಂದಿಗೆ ಸೆಣಸಾಡಿ ಕೋತ್‌ದ್ವಾರ್ ಎಂಬ ಗ್ರಾಮದ ದಂಪತಿ ಅದನ್ನು ಕೊಂದೇ ಬಿಟ್ಟ ಘಟನೆ ವರದಿಯಾಗಿದೆ.
ವಿಜಯ್ ಪ್ರಸಾದ್ ಎಂಬ ವ್ಯಕ್ತಿ ತನ್ನ ಆಡುಗಳ ಹಿಂಡನ್ನು ಅರಣ್ಯ ಪ್ರದೇಶದಲ್ಲಿ ಮೇಯಲು ಕರೆದುಕೊಂಡು ಹೋಗಿದ್ದಾಗ ಸಂಜೆ ಸುಮಾರು ಆರು ಗಂಟೆಗೆ ಚಿರತೆಯೊಂದು ಆಡೊಂದರ ಮೇಲೆ ದಾಳಿ ನಡೆಸಿತ್ತು. ಆಗ ಎದೆಗುಂದದೆ ಪ್ರಸಾದ್ ತನ್ನ ಆಡನ್ನು ಚಿರತೆಯ ಕೈಯ್ಯಿಂದ ತಪ್ಪಿಸಲು ಯತ್ನಿಸಿ ತನ್ನ ಕೊಡಲಿಯಿಂದ ಅದರ ಮೇಲೆ ದಾಳಿ ನಡೆಸಿದಾಗ ಗಾಯಗೊಂಡ ಚಿರತೆ ಆಡನ್ನು ತನ್ನ ಹಿಡಿತದಿಂದ ಬಿಟ್ಟಿತು.
ಈ ನಡುವೆ ಏನೋ ನಡೆಯಬಾರದು ನಡೆದಿದೆ ಎಂದು ಬೊಬ್ಬೆ ಕೇಳಿ ಓಡಿ ಬಂದ ಪ್ರಸಾದ್ ಹೆಂಡತಿ ಕೂಡ ಆತನೊಂದಿಗೆ ಸೇರಿ ಚಿರತೆಯನ್ನು ಓಡಿಸಲು ಸಫಲವಾದರೂ ಅವರು ಹಿಂದಿರುಗುತ್ತಿದ್ದಾಗ ಚಿರತೆ ಅವರ ಮೇಲೆ ಮತ್ತೆ ದಾಳಿ ನಡೆಸಿತು. ಆಗ ದಂಪತಿಗಳು ಕಲ್ಲುಗಳನ್ನೆಸೆದು ಚಿರತೆಯನ್ನು ಕೊಂದೇ ಬಿಟ್ಟರು. ನಂತರ ಅರಣ್ಯಾಧಿಕಾರಿಗಳಿಗೆ ಮಾಹಿತಿ ಹೋಗಿ ಅವರು ಚಿರತೆಯನ್ನು ಪರೀಕ್ಷಿಸಿ ಅದನ್ನು ಹೂಳಲು ಏರ್ಪಾಟು ಮಾಡಿದರು.
ಪ್ರಕರಣದ ಬಗ್ಗೆ ತನಿಖೆ ನಡೆಸಿ ದಂಪತಿಗಳ ತಪ್ಪೇನಾದರೂ ಕಂಡು ಬಂದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಅರಣ್ಯಾಧಿಕಾರಿಗಳ ಹೇಳಿದ್ದಾರೆ. ಸತ್ತ ಚಿರತೆಯ ಪ್ರಾಯ ಎರಡೂವರೆ ವರ್ಷಗಳಾಗಿರಬಹುದೆಂದು ಅಂದಾಜಿಸಲಾಗಿದೆ.
ಇತ್ತೀಚೆಗೆ ಹರಿದ್ವಾರ್ ಅರಣ್ಯ ವಿಭಾಗದ ಚಿಡಿಯಾಘರ್ ರೇಂಜ್ ಪ್ರದೇಶದಲ್ಲಿ ಎರಡು ವರ್ಷ ಪ್ರಾಯದ ಚಿರತೆಯೊಂದು ಹಾಡುಹಗಲೇ ಗುಡಿಸಲೊಂದನ್ನು ಪ್ರವೇಶಿಸಿದಾಗ ಅಲ್ಲಿದ್ದ ಮೂವರು ವನ್ ಗುಜ್ಜರ್ ಮಹಿಳೆಯರು ಅದನ್ನು ಹೊಡೆದು ಸಾಯಿಸಿದ ಘಟನೆ ನಡೆದಿತ್ತು.