ನಾಸರ್ ಮಅದನಿ : ವಿಚಾರಣಾಧೀನ ಕೈದಿಯಾಗಿ ಹದಿನೈದುವರೆ ವರ್ಷ
ಕೊಲ್ಲಂ, ಆ.6: 2008ರ ಬೆಂಗಳೂರು ಸ್ಫೋಟ ಪ್ರಕರಣ ಸಂಬಂಧ ಬಂಧಿತರಾಗಿ ಕಳೆದ ಆರು ವರ್ಷದಿಂದ ಪಿಡಿಪಿ ನಾಯಕ ಅಬ್ದುಲ್ ನಾಸರ್ ಮದನಿ ವಿಚಾರಣಾಧೀನ ಕೈದಿಯಾಗಿರುವ ಹಿನ್ನೆಲೆಯಲ್ಲಿ ಸಾಲಿಡಾರಿಟಿ ಯುತ್ ಮೂವ್‌ಮೆಂಟ್ ಕೊಲ್ಲಂ ನಗರದಲ್ಲಿ ಆಗಸ್ಟ್ 17 ರ ಸಂಜೆ 4 ಗಂಟೆಗೆ ಸಾಲಿಡಾರಿಟಿ ಸಂಗಮ ಕಾರ್ಯಕ್ರಮ ಆಯೋಜಿಸಲಿದೆಯೆಂದು ಸಂಘಟನೆಯ ಪತ್ರಿಕಾ ಹೇಳಿಕೆಯೊಂದು ತಿಳಿಸಿದೆ.
ಮದನಿಯವರು ಕೊಯಮತ್ತೂರು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆಯೂ ಸುಮಾರು ಒಂಬತ್ತೂವರೆ ವರ್ಷಗಳ ಕಾಲ ವಿಚಾರಣಾಧೀನ ಕೈದಿಯಾಗಿದ್ದರಿಂದ ಅವರು ವಿಚಾರಣಾಧೀನ ಕೈದಿಯಾಗಿ ಹದಿನೈದುವರೆ ವರ್ಷ ಪೂರೈಸಿದಂತಾಗಿದೆ.
ಈ ಸಾಲಿಡಾರಿಟಿ ಸಂಗಮವನ್ನು ಮದನಿಯವರ ಮಾನವ ಹಕ್ಕುಗಳನ್ನು ಸಂರಕ್ಷಿಸುವ ಸಲುವಾಗಿ ಆಯೋಜಿಸಲಾಗುತ್ತಿದೆಯೆಂದು ಸಂಘಟನೆ ಹೇಳಿಕೊಂಡಿದೆ.ಈ ಸಮಾರಂಭದಲ್ಲಿ ರಾಜಕೀಯ ಹಾಗೂ ಸಾಂಸ್ಕೃತಿಕ ಕ್ಷೇತ್ರದ ಹಲವು ಗಣ್ಯರು ಭಾಗವಹಿಸಲಿದ್ದು ಖ್ಯಾತ ಲೇಖಕ ಹಾಗೂ ಮಾನವ ಹಕ್ಕು ಕಾರ್ಯಕರ್ತ ಬಿ.ಆರ್.ಪಿ. ಭಾಸ್ಕರ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.
ಕೊಯಮತ್ತೂರು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂಬತ್ತೂವರೆ ವರ್ಷ ವಿಚಾರಣಾಧೀನ ಕೈದಿಯಾಗಿದ್ದ ಮದನಿಯವರನ್ನು ಮತ್ತೆ 2010ರ ಆಗಸ್ಟ್ 17ರಂದು ಬೆಂಗಳೂರು ಸ್ಫೋಟ ಸಂಬಂಧದ 31ನೆ ಆರೋಪಿಯಾಗಿ ಅಕ್ರಮ ಚಟುವಟಿಕೆ ನಿಯಂತ್ರಣ ಕಾಯ್ದೆಯನ್ವಯ ಬಂಧಿಸಲಾಗಿತ್ತು. ಅವರ ಆರೋಗ್ಯ ಕೈಕೊಟ್ಟಾಗ ಅವರಿಗೆ ಸೂಕ್ತ ಚಿಕಿತ್ಸೆಗೂ ಅವಕಾಶ ನೀಡದೆ ಅವರ ಮಾನವ ಹಕ್ಕುಗಳನ್ನು ಉಲ್ಲಂಘಿಸಲಾಗಿದೆಯೆಂಬ ಆರೋಪವೂ ಕೇಳಿ ಬಂದಿತ್ತು. ಹಲವಾರು ಕಾನೂನು ಹೋರಾಟಗಳ ನಂತರವಷ್ಟೇ ಅವರಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಸುಪ್ರೀಂ ಕೋರ್ಟ್ ಆದೇಶಿಸಿತ್ತು.
ಅಕ್ರಮ ಚಟುವಟಿಕೆ ನಿಯಂತ್ರಣ ಕಾಯ್ದೆಯನ್ವಯ ಬಂಧಿತರಾದ ಮದನಿ ಹಾಗೂ ಇನ್ನಿತರರ ಶೀಘ್ರ ಬಿಡುಗಡೆಗೆ ವಿವಿಧ ಕ್ರಮಗಳ ಮೂಲಕ ಸರಕಾರವನ್ನು ಒತ್ತಾಯಿಸುವಂತೆ ಸಾಲಿಡಾರಿಟಿ ಮೂವ್ ಮೆಂಟ್ ವಿವಿಧ ಸಂಘಟನೆಗಳನ್ನು ಒತ್ತಾಯಿಸಿದೆ. ನಾಸರ್ ಮದನಿಯನ್ನು ಬಿಡುಗಡೆಗೊಳಿಸಿ, ಅಕ್ರಮ ಚಟುವಟಿಕೆ ನಿಯಂತ್ರಣ ಕಾಯಿದೆಯನ್ನು ಹಿಂದಕ್ಕೆ ಪಡೆಯಿರಿ’ ಎಂಬ ಸಮಾನ ಅಜೆಂಡಾದೊಂದಿಗೆ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಸಂಘಟನೆ ಮನವಿ ಮಾಡಿದೆ.