×
Ad

ಭಾರತದ ನೆರವು ಕೋರುತ್ತಿರುವ ಚೀನಾ

Update: 2016-08-06 23:58 IST

ಬೀಜಿಂಗ್, ಆ. 6: ಚೀನಾ ವಿದೇಶ ಸಚಿವ ವಾಂಗ್ ಯಿ ಆಗಸ್ಟ್ 12ರಿಂದ ಭಾರತಕ್ಕೆ ಮೂರು ದಿನಗಳ ಭೇಟಿ ನೀಡಲಿದ್ದಾರೆ.

ಸೆಪ್ಟಂಬರ್‌ನಲ್ಲಿ ನಡೆಯಲಿರುವ ಜಿ20 ಸಮ್ಮೇಳನದಲ್ಲಿ ವಿವಾದಾಸ್ಪದ ದಕ್ಷಿಣ ಚೀನಾ ಸಮುದ್ರ ವಿಷಯವನ್ನು ಪ್ರಸ್ತಾಪಿಸುವ ದೇಶಗಳಿಗೆ ಪ್ರಧಾನಿ ನರೇಂದ್ರ ಮೋದಿ ಬೆಂಬಲ ನೀಡದಂತೆ ಮನವೊಲಿಸುವುದು ಚೀನಾ ವಿದೇಶ ಸಚಿವರ ಭೇಟಿಯ ಉದ್ದೇಶ ಎನ್ನಲಾಗಿದೆ.

ದಕ್ಷಿಣ ಚೀನಾ ಸಮುದ್ರದ ಮೇಲೆ ಚೀನಾಕ್ಕೆ ಐತಿಹಾಸಿಕ ಹಕ್ಕಿಲ್ಲ ಎಂಬುದಾಗಿ ಹೇಗ್‌ನ ಅಂತಾರಾಷ್ಟ್ರೀಯ ಪಂಚಾಯಿತಿ ನ್ಯಾಯಮಂಡಳಿಯೊಂದು ಇತ್ತೀಚೆಗೆ ತೀರ್ಪು ನೀಡಿರುವ ಹಿನ್ನೆಲೆಯಲ್ಲಿ, ಅಮೆರಿಕ ಸೇರಿದಂತೆ ಹಲವಾರು ದೇಶಗಳು ಈ ವಿಷಯವನ್ನು ಪ್ರಸ್ತಾಪಿಸುವ ಸಾಧ್ಯತೆ ಬಗ್ಗೆ ಚೀನಾ ಕಳವಳಗೊಂಡಿದೆ.

ಈ ವಿಷಯದಲ್ಲಿ ಭಾರತ ನೀಡಿರುವ ಎಚ್ಚರಿಕೆಯ ಪ್ರತಿಕ್ರಿಯೆಯಿಂದ ಚೀನಾ ಸಂತುಷ್ಟಗೊಂಡಿಲ್ಲ. ವಿಶ್ವಸಂಸ್ಥೆಯ ಸನದನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು ಹಾಗೂ ಈ ಪ್ರಯತ್ನದಲ್ಲಿ ಸಂಬಂಧಿತ ಎಲ್ಲ ಪಕ್ಷಗಳು ಸಹಕಾರ ನೀಡಬೇಕು ಎಂಬುದಾಗಿ ಭಾರತ ಹೇಳಿದೆ. ಜಿ20 ಸಮಾವೇಶದಲ್ಲಿ ಈ ವಿಷಯದ ಬಗ್ಗೆ ಚರ್ಚೆ ನಡೆಯುವುದನ್ನು ಚೀನಾ ಬಯಸುತ್ತಿಲ್ಲ ಹಾಗೂ ಚರ್ಚೆ ನಡೆಯಬೇಕೆಂದು ಕೋರುವ ಯಾವುದೇ ದೇಶಕ್ಕೆ ಭಾರತ ಬೆಂಬಲ ನೀಡುವುದನ್ನೂ ಅದು ಬಯಸುತ್ತಿಲ್ಲ.

ಇತ್ತೀಚೆಗೆ ಬೀಜಿಂಗ್‌ನಲ್ಲಿ ನಡೆದ ಆಸಿಯಾನ್ ದೇಶಗಳ ಸಮ್ಮೇಳನದ ಜಂಟಿ ಹೇಳಿಕೆಯಲ್ಲಿ ಈ ವಿಷಯ ಪ್ರಸ್ತಾಪಗೊಳ್ಳದಂತೆ ನೋಡಿಕೊಳ್ಳುವಲ್ಲಿ ಅದು ಯಶಸ್ವಿಯಾಗಿತ್ತು. ಆದರೆ, ಜಿ20 ಸಮ್ಮೇಳನದಲ್ಲೂ ಇದೇ ಯಶಸ್ಸು ಸಿಗುತ್ತದೆ ಎಂಬ ಖಾತರಿಯನ್ನು ಅದು ಹೊಂದಿಲ್ಲ.

ನರೇಂದ್ರ ಮೋದಿ ಸೆಪ್ಟಂಬರ್ 3ರಿಂದ ಚೀನಾಕ್ಕೆ ಮೂರು ದಿನಗಳ ಭೇಟಿ ನೀಡಲಿದ್ದಾರೆ. ಈ ಅವಧಿಯಲ್ಲಿ ಹಂಗ್‌ಝೂ ನಗರದಲ್ಲಿ ನಡೆಯಲಿರುವ ಸಮ್ಮೇಳನದ ನೇಪಥ್ಯದಲ್ಲಿ ಅವರು ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮತ್ತು ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮರನ್ನು ಭೇಟಿಯಾಗುವ ನಿರೀಕ್ಷೆಯಿದೆ.

ಚೀನಾದಿಂದ ಯುದ್ಧ ವಿಮಾನಗಳ ನಿಯೋಜನೆ

ದಕ್ಷಿಣ ಚೀನಾ ಸಮುದ್ರದಲ್ಲಿರುವ ವಿವಾದಾಸ್ಪದ ದ್ವೀಪಗಳ ಸಮೀಪ ಚೀನಾ ವಾಯುಪಡೆಯು ‘‘ಯುದ್ಧ ಗಸ್ತಿ’’ಗಾಗಿ ಬಾಂಬರ್ ಮತ್ತು ಹೋರಾಟ ವಿಮಾನಗಳನ್ನು ನಿಯೋಜಿಸಿದೆ.

ಇಂಥ ಕಾರ್ಯಾಚರಣೆಗಳನ್ನು ಸಾಮಾನ್ಯಗೊಳಿಸುವ ಹಾಗೂ ಭದ್ರತಾ ಬೆದರಿಕೆಗಳಿಗೆ ಪ್ರತಿಕ್ರಿಯಿಸುವ ಪ್ರಯತ್ನಗಳ ಭಾಗವಾಗಿ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದು ಹಿರಿಯ ಕರ್ನಲ್ ಒಬ್ಬರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News