×
Ad

ಅಮೆರಿಕದ ಮೇಲೆ ದಾಳಿಯಾದರೆ ಜಪಾನೀಯರು ಸೋನಿ ಟಿವಿ ನೋಡುತ್ತಾರೆ!: ಡೊನಾಲ್ಡ್ ಟ್ರಂಪ್

Update: 2016-08-06 23:59 IST

ವಾಶಿಂಗ್ಟನ್, ಆ. 6: ಅಮೆರಿಕದ ಅತ್ಯಂತ ಆಪ್ತ ಮಿತ್ರದೇಶಗಳ ಪೈಕಿ ಒಂದಾಗಿರುವ ಜಪಾನ್ ವಿರುದ್ಧ ವಾಗ್ದಾಳಿಗೈದಿರುವ ಅಮೆರಿಕದ ರಿಪಬ್ಲಿಕನ್ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್, ಒಂದು ವೇಳೆ ಅಮೆರಿಕದ ಮೇಲೆ ದಾಳಿ ನಡೆದರೆ ಎಲ್ಲಾ ಜಪಾನೀಯರು ‘‘ಮನೆಯಲ್ಲಿ ಕುಳಿತು ಸೋನಿ ಟೆಲಿವಿಶನ್ ನೋಡುತ್ತಾರೆ’’ ಎಂದು ಹೇಳಿದ್ದಾರೆ.

‘‘ಜಪಾನ್‌ನೊಂದಿಗೆ ನಾವು ಒಪ್ಪಂದವೊಂದನ್ನು ಹೊಂದಿರುವುದು ನಿಮಗೆ ಗೊತ್ತೇ ಇದೆ. ಆ ಒಪ್ಪಂದದ ಪ್ರಕಾರ, ಜಪಾನ್ ಮೇಲೆ ಆಕ್ರಮಣ ನಡೆದರೆ ನಾವು ಅಮೆರಿಕದ ಪೂರ್ಣ ಬಲವನ್ನು ಅದರ ರಕ್ಷಣೆಗೆ ನಿಯೋಜಿಸಬೇಕು. ನಮ್ಮ ಮೇಲೆ ದಾಳಿ ನಡೆದರೆ, ಜಪಾನ್ ಏನೂ ಮಾಡಬೇಕಾಗಿಲ್ಲ. ಅವರು ಮನೆಯಲ್ಲಿ ಕುಳಿತು ಸೋನಿ ಟೆಲಿವಿಶನ್ ನೋಡಬಹುದು. ಇವು ಯಾವ ಮಾದರಿಯ ಒಪ್ಪಂದಗಳು?’’ ಎಂದು ಟ್ರಂಪ್ ಪ್ರಶ್ನಿಸಿದರು. ಅವರು ಅಯೋವ ರಾಜ್ಯದ ಡೆಸ್ ಮೊಯಿನ್ಸ್‌ನಲ್ಲಿ ಚುನಾವಣಾ ಸಭೆಯೊಂದನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

ಜಪಾನ್ ಅಮೆರಿಕದ ಪ್ರಮುಖ ಮಿತ್ರಪಕ್ಷವಾಗಿದೆ ಹಾಗೂ ಏಶ್ಯ-ಪೆಸಿಫಿಕ್ ವಲಯದಲ್ಲಿ ಅದರ ಪ್ರಧಾನ ಭಾಗೀದಾರನಾಗಿದೆ.

ಅಮೆರಿಕ-ಜಪಾನ್ ಮೈತ್ರಿ ಒಪ್ಪಂದದ ಬಗ್ಗೆ ಪ್ರಸ್ತಾಪಿಸಿದ ಟ್ರಂಪ್, ಈ ಒಪ್ಪಂದ ಹಾಸ್ಯಾಸ್ಪದವಾಗಿದೆ ಎಂದು ಬಣ್ಣಿಸಿದರು.

ಜಪಾನ್‌ಗೆ ರಕ್ಷಣೆ ನೀಡುವುದಕ್ಕೆ ಅಮೆರಿಕದ ಸೇನೆಗೆ ತಗಲುವ ಸಂಪೂರ್ಣ ವೆಚ್ಚವನ್ನು ಆ ದೇಶ ನೀಡಬೇಕು; ಅದು ಈಗ ನೀಡುತ್ತಿರುವ ಸುಮಾರು 50 ಶೇಕಡ ಸಾಕಾಗುವುದಿಲ್ಲ ಎಂದರು.

ಜಪಾನ್‌ನಲ್ಲಿ ಈಗ ಸುಮಾರು 47,000 ಅಮೆರಿಕನ್ ಸೈನಿಕರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News