ಪ್ರಗತಿಪರ ಸಿದ್ದರಾಮಯ್ಯ ಇರುವ ಬೆಂಗಳೂರಿನಲ್ಲಿ ಬ್ರಾಹ್ಮಣ ಟೌನ್‌ಶಿಪ್ ಆಗಲು ಬಿಟ್ಟಿದ್ದು ಹೇಗೆ?
ಬ್ರಾಹ್ಮಣ ಸಮುದಾಯದ ಕಳೆದು ಹೋದ ಪರಂಪರೆಯನ್ನು ಮರಳಿ ತರುವ ಉದ್ದೇಶದಿಂದ ಬ್ರಾಹ್ಮಣರಿಗಾಗಿಯೇ ಮೀಸಲಿಟ್ಟ ಟೌನ್‌ಶಿಪ್ ಬೆಂಗಳೂರಲ್ಲಿ ಅಸ್ತಿತ್ವಕ್ಕೆ ಬಂದಿದೆ. ಇಲ್ಲಿನ ವಾಸ್ತು, ಜೀವನಶೈಲಿ ಮತ್ತು ಸಂಸ್ಕೃತಿ ಬ್ರಾಹ್ಮಣ ಜೀವನಶೈಲಿಯನ್ನು ಪ್ರೋತ್ಸಾಹಿಸಲಿದೆ. ಬೆಂಗಳೂರಿನ ಹೊರವಲಯದಲ್ಲಿ 2013ರಲ್ಲಿ ಅಸ್ತಿತ್ವಕ್ಕೆ ಬಂದಿರುವ ಶಂಕರ ಅಗ್ರಹಾರಂನ ವೇದಿಕ್ ಗ್ರಾಮಕ್ಕೆ ಬಂದರೆ ಬ್ರಾಹ್ಮಣರಿಗೆ ಮಾತ್ರವಿರುವ ವಸತಿ ಯೋಜನೆ ಕಣ್ಣಿಗೆ ಬೀಳುತ್ತದೆ. ಈ ಟೌನ್‌ಶಿಪ್ ಉದ್ಘಾಟಿಸಿದಾಗಲೇ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಾಧ್ಯಮಗಳು ಸುದ್ದಿ ಮಾಡಿದ್ದವು. ಭಾರತದ ವಸತಿ ಯೋಜನೆಯ ವರ್ಣಭೇದ ಎಂದು ಇದನ್ನು ಪರಿಗಣಿಸಲಾಗಿತ್ತು.
ಸಾಮಾಜಿಕ ಕಾರ್ಯಕರ್ತರು ಮತ್ತು ವಕೀಲರು ರಾಜ್ಯ ಸರಕಾರ ಮತ್ತು ಮಾನವ ಹಕ್ಕುಗಳ ಆಯೋಗಕ್ಕೆ ತಕ್ಷಣ ಇಂತಹ ಜಾತಿ ತಾರತಮ್ಯದ ಯೋಜನೆಯನ್ನು ರದ್ದು ಮಾಡಬೇಕೆಂದು ಬೇಡಿಕೆ ಇಟ್ಟಿದ್ದರು. ಆದರೆ ಮೂರು ವರ್ಷಗಳ ನಂತರ ವೇದಿಕ್ ಗ್ರಾಮ ಪೂರ್ಣಗೊಳ್ಳುವ ಹಂತದಲ್ಲಿದೆ. ಕರ್ನಾಟಕದ ಪಟ್ಟಣ ಮತ್ತು ರಾಷ್ಟ್ರನಿರ್ಮಾಣ ಇಲಾಖೆಯಿಂದಲೂ ಅಂಗೀಕಾರ ಸಿಕ್ಕಿದೆ. ಯೋಜನೆ ಮ್ಯಾನೇಜರ್‌ಗಳು 900 ವಸತಿಗಳನ್ನು ಮಾರಿದ್ದಾರೆ ಮತ್ತು 1800 ವಸತಿಗಳ ಯೋಜನೆ ಹಾಕಿದ್ದಾರೆ.
ಸನಾತನ ಧರ್ಮ ಪರಿರಕ್ಷಣ ಟ್ರಸ್ಟ್ ಈ ಅಭಿವೃದ್ಧಿ ಯೋಜನೆಗೆ ಅನುದಾನ ನೀಡಿದ್ದು, ಅವರಿಗೆ ಬ್ರಾಹ್ಮಣ ಸಮುದಾಯದ ಬೆಂಬಲವಿದೆ. ಬ್ರಾಹ್ಮಣ ಸಮುದಾಯದ ಜೀವನಶೈಲಿಯನ್ನು ಅಭಿವೃದ್ಧಿಪಡಿಸುವುದು ಮತ್ತು ಅವರಿಗೆ ಜೀವನ ನಡೆಸಬಹುದಾದ ಪರಿಸರವನ್ನು ನಿರ್ಮಿಸುವುದು ಮತ್ತು ಸಮುದಾಯದ ಭವಿಷ್ಯದ ತಲೆಮಾರಿಗೆ ಆಸ್ತಿ ರೂಪಿಸುವುದು ಟ್ರಸ್ಟ್ ಉದ್ದೇಶವಾಗಿದೆ. ಈ ವಸತಿ ಯೋಜನೆಯಲ್ಲಿ ಬ್ರಾಹ್ಮಣೇತರರಿಗೆ ಅವಕಾಶವಿಲ್ಲ. ಅದೊಂದೇ ಈ ಯೋಜನೆಯ ಸಮಸ್ಯೆಯೂ ಅಲ್ಲ. ಈ ಟೌನ್‌ಶಿಪ್ ಉನ್ನತ ವರ್ಗಕ್ಕೆಂದು ಅದರ ವೆಬ್‌ತಾಣ ಮತ್ತು ಕರಪತ್ರಗಳು ಪದೇ ಪದೇ ಹೇಳಿದೆ. "ನಮ್ಮ ವಸತಿಗಳು ಕೇವಲ ಬ್ರಾಹ್ಮಣರಿಗೆ ಮಾತ್ರವಾಗಿದೆ. ಎಲ್ಲಾ ರೀತಿಯಲ್ಲೂ ಉನ್ನತವಾಗಿರುವುದನ್ನು ಉನ್ನತರಿಗೆ ಕೊಡುವ ಪ್ರಯತ್ನ" ಎಂದು ಕರಪತ್ರ ಹೇಳುತ್ತದೆ.
ಶಂಕರ ಅಗ್ರಹಾರದ ಮಾರುಕಟ್ಟೆ ಪ್ರತಿನಿಧಿ ಪ್ರಕಾರ ಬ್ರಾಹ್ಮಣೇತರರು ಇಲ್ಲಿ ಸ್ನೇಹಿತರು ಮತ್ತು ಸಂಬಂಧಿಕರನ್ನು ಭೇಟಿಯಾಗಲು ಬರಬಹುದು. ಈ ಜಾಗದಲ್ಲಿ ಕೆಲಸ ಮಾಡುವವರು ಬ್ರಾಹ್ಮಣೇತರರು ಆಗಿರಬಹುದು. "ಇಲ್ಲಿ ಜಾಗ ಖರೀದಿಸಲು ಕುಟುಂಬದ ಒಬ್ಬ ವ್ಯಕ್ತಿ ಬ್ರಾಹ್ಮಣನಾಗಿರಬೇಕು. ಮನೆಕೆಲಸದವರು ಮತ್ತು ಇತರ ಸಿಬ್ಬಂದಿ ಬ್ರಾಹ್ಮಣೇತರರು ಆಗಿರಬಹುದು. ಬ್ರಾಹ್ಮಣರು ಹೇಗೂ ರಸ್ತೆ ಗುಡಿಸುವುದಿಲ್ಲ. ಸಮುದಾಯದೊಳಗೂ ಅದಕ್ಕೆ ಮಿತಿಗಳಿವೆ ಎನ್ನುವುದು ನಮಗೆ ಗೊತ್ತಿದೆ" ಎಂದು ಶಂಕರ್ ಅಗ್ರಹಾರ ವೇದಿಕ್ ಗ್ರಾಮದ ಮಾರುಕಟ್ಟೆ ಕಾರ್ಯಕಾರಿ ನಿತೇಶ್ ಹೇಳಿದ್ದಾರೆ.
ಕಟ್ಟಡ ನಿರ್ಮಾತೃಗಳ ವೆಬ್‌ತಾಣವು ಬೆಂಗಳೂರಿನಲ್ಲಿ ಬ್ರಾಹ್ಮಣ ನಿವೇಶನವನ್ನು ಖರೀದಿಸಲು 11 ಕಾರಣಗಳನ್ನು ನೀಡಿದೆ. ಅದರಲ್ಲಿ ಪ್ರಮುಖವಾದುದು ಇದು ಭಾರತದ ಐಟಿ ಕ್ರಾಂತಿಗೆ ಕಾರಣವಾದ ಬ್ರಾಹ್ಮಣ ಎನ್.ಆರ್.ನಾರಾಯಣ ಮೂರ್ತಿ ಜನ್ಮಸ್ಥಳವಾಗಿರುವುದು. ಬೆಂಗಳೂರು ಮೂಲದ ಸುಪ್ರೀಂಕೋರ್ಟ್ ವಕೀಲ ಮತ್ತು ಕಾರ್ಯಕರ್ತ ಕೆವಿ ಧನಂಜಯ್ ಮೊತ್ತ ಮೊದಲಿಗೆ ಈ ತಾರತಮ್ಯದ ವಸತಿ ಯೋಜನೆ ವಿರುದ್ಧ ಧ್ವನಿ ಎತ್ತಿದ್ದಾರೆ. ಅವರು ರಾಜ್ಯ ಸರಕಾರ ಮತ್ತು ಕೇಂದ್ರ ಮಾನವ ಹಕ್ಕುಗಳ ಆಯೋಗಕ್ಕೂ ದೂರು ಕೊಟ್ಟಿದ್ದಾರೆ. ಗೃಹ ಸಚಿವಾಲಯವು ಈ ವಿಷಯವನ್ನು ಸಾಮಾಜಿಕ ನ್ಯಾಯ ಮತ್ತು ಅಭಿವೃದ್ಧಿ ಸಚಿವಾಲಯಕ್ಕೆ ಕಳುಹಿಸಿರುವುದಾಗಿ ಹೇಳಿದೆ. ಈ ಪ್ರಕರಣದಲ್ಲಿ ಹೆಚ್ಚಿನ ವಿವರಗಳಿಲ್ಲ.
"ದೇಶದಲ್ಲಿ ಬಹುವಲಯದ, ಬಹು ಪದರದ ಮತ್ತು ಕಠಿಣ ಭೂ ಕಾನೂನು ಇರುವ ರಾಜ್ಯಗಳಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ಒಂದು ಯೋಜನೆಯನ್ನು ಹಲವು ಪ್ರಾಧಿಕಾರಗಳು ಅಂಗೀಕರಿಸಬೇಕು ಮತ್ತು ಯಾವುದೇ ನಿರ್ಮಾಣ ಯೋಜನೆಯಲ್ಲಿ ಭೂ ಸಂಪನ್ಮೂಲಗಳ ದುರ್ಬಳಕೆ ಆಗುತ್ತಿದ್ದಲ್ಲಿ ಅದನ್ನು ನಿಲ್ಲಿಸುವ ಅಧಿಕಾರ ಈ ಪ್ರಾಧಿಕಾರಗಳಿಗಿವೆ. ಈ ಅಂಗೀಕಾರ ಪಡೆದ ಶಂಕರ ಅಗ್ರಹಾರ ಕಾನೂನು ವಿರೋಧಿ. ಕೃಷಿ ಭೂಮಿಯಲ್ಲಿ ನಿರ್ಮಾಣವಾಗುತ್ತಿರುವ ಈ ಯೋಜನೆ ಸಾರ್ವಜನಿಕ ಹಿತಾಸಕ್ತಿಗೆ ಅನುಗುಣವಾಗಿಲ್ಲ. ಆದರೆ ಯೋಜನೆಯನ್ನು ಇನ್ನೂ ನಿಲ್ಲಿಸದೆ ಇರುವುದು ವಿಪರ್ಯಾಸ" ಎಂದು ಸುಪ್ರೀಂಕೋರ್ಟ್ ವಕೀಲ ಕೆವಿ ಧನಂಜಯ್ ಹೇಳಿದ್ದಾರೆ.
ವೇದಿಕ್ ಗ್ರಾಮ ಯೋಜನೆಗೆ ಕರ್ನಾಟಕದಲ್ಲಿ ಬಿಜೆಪಿ ಆಡಳಿತವಿದ್ದ ಸಂದರ್ಭದಲ್ಲಿ ಅಂಗೀಕಾರ ಸಿಕ್ಕಿದೆ. 2013ರಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಅಧಿಕಾರ ಸ್ವೀಕರಿಸಿದಾಗ, ಸಾಮಾಜಿಕ, ಜಾತ್ಯತೀತ, ಜಾತಿವಾದ ವಿರೋಧಿ ಮುಖ್ಯಮಂತ್ರಿಯೆನ್ನುವ ಹೆಗ್ಗಳಿಕೆ ಹೊಂದಿದ್ದರು. ಆದರೆ ಟೌನ್‌ಶಿಪ್ ತಡೆಯಲು ಅವರು ಏನೂ ಮಾಡಿಲ್ಲ. ಇಂತಹ ಪ್ರತ್ಯೇಕತಾಭಾವ ಮೂಡಿಸುವ ವಸತಿ ಯೋಜನೆಗಳು ಭಾರತದಲ್ಲಿ ಹೊಸದೇನಲ್ಲ. 2002 ಗುಜರಾತ್ ಕೋಮು ಗಲಭೆಗಳ ನಂತರ ಉನ್ನತ ಮುಸ್ಲಿಂ ಸಹೋದರರ ಕನಸಿನ ಮನೆಗಳೆಂದು ಜುಹಾಪುರದ ಮುಸ್ಲಿಂ ವಸತಿ ಯೋಜನೆ ದೆಹಲಿಯಲ್ಲಿದ್ದರೆ, ಅಹಮದಾಬಾದ್ ನಲ್ಲಿ ದಲಿತರ ಟೌನ್‌ಶಿಪ್ ಸಮುದಾಯಕ್ಕೆ ಸಮಾಜದಲ್ಲಿ ಗೌರವ ತಂದುಕೊಡುವ ಹೆಸರಲ್ಲಿ ನಿರ್ಮಾಣವಾಗಿದೆ. ಆದರೆ ಈ ಟ್ರೆಂಡ್ ಕುಸಿಯುವ ಬದಲಾಗಿ ಹೆಚ್ಚಾಗುತ್ತಿರುವುದು ದುರಂತ. ಬ್ರಾಹ್ಮಣ, ಜೈನ, ಪಾರ್ಸಿ, ದಲಿತ ಅಥವಾ ಮುಸ್ಲಿಂ ಎನ್ನುವ ಕಾಲನಿಗಳು ಸಾಂಸ್ಕೃತಿಕಪರಂಪರೆಗೆ ಮರುಹುಟ್ಟು ನೀಡಲಿದೆ ಎನ್ನುವುದು ಪೊಳ್ಳು ನಂಬಿಕೆ. ವಾಸ್ತವದಲ್ಲಿ ಇವೆಲ್ಲವೂ ಸಾಮಾಜಿಕ ಚೌಕಟ್ಟಿಗೆ ಗಂಭೀರ ಅಪಾಯವೊಡ್ಡುತ್ತಿವೆ ಮತ್ತು ತಾರತಮ್ಯವಿಲ್ಲದ ಎಲ್ಲರನ್ನು ಒಳಗೊಂಡ ನೆರೆಹೊರೆಯ ಕಲ್ಪನೆಗೆ ಛಡಿಯೇಟು ನೀಡುತ್ತಿದೆ ಎಂದು ನಗರ ಸಮಾಜ ವಿಜ್ಞಾನಿ ಲಾಯ್ಕಾ ವ್ಯಾಕ್ವಂಟ್ ಅಭಿಪ್ರಾಯಪಟ್ಟಿದ್ದಾರೆ.
ಅಂತರ್ಜಾಲ ವೆಬ್‌ತಾಣವೊಂದು ಇತ್ತೀಚೆಗೆ ಬ್ರಾಹ್ಮಣರಿಗಾಗಿ ಮಾತ್ರ ಇರುವ ಟೌನ್‌ಶಿಪ್ ಬಗ್ಗೆ ಬರೆದ ಮೇಲೆ ಸಾಮಾಜಿಕ ತಾಣದಲ್ಲಿ ವಿಷಯ ಬಹಳ ಚರ್ಚೆಗೆ ಒಳಗಾಗಿದೆ. ಬ್ರಾಹ್ಮಣೇತರರು ಇಲ್ಲಿ ವಸತಿ ಹೊಂದುವಂತಿಲ್ಲ ಎನ್ನುವ ವಿಷಯವೇ ಆಘಾತಕಾರಿ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಅಲ್ಲದೆ, ಹಲವರ ವಿರೋಧದ ನಡುವೆಯೂ ಈ ವಸತಿ ಯೋಜನೆ ಅನುಷ್ಠಾನಕ್ಕೆ ಬಂದಿರುವುದಕ್ಕಾಗಿಯೂ ಆಕ್ರೋಶ ವ್ಯಕ್ತವಾಗಿದೆ.
ಕೃಪೆ: www.thequint.com