ಮೂರನೆ ಟೆಸ್ಟ್ : ರಾಹುಲ್ ಅರ್ಧಶತಕ, ಭಾರತ 121/4

Update: 2016-08-09 18:35 GMT

ಗ್ರಾಸ್ ಐಸ್ಲೆಟ್, ಆ.9: ಇಲ್ಲಿ ಇಂದು ಆರಂಭಗೊಂಡ ಮೂರನೆ ಕ್ರಿಕೆಟ್ ಟೆಸ್ಟ್‌ನಲ್ಲಿ ವಿಂಡೀಸ್ ವಿರುದ್ಧ ಭಾರತ ಮೊದಲ ಇನಿಂಗ್ಸ್‌ನಲ್ಲಿ 47 ಓವರ್‌ಗಳಲ್ಲಿ 4 ವಿಕೆಟ್ ನಷ್ಟದಲ್ಲಿ 121 ರನ್ ಗಳಿಸಿದೆ.
ಆರಂಭಿಕ ದಾಂಡಿಗ ಲೋಕೇಶ್ ರಾಹುಲ್ ಅರ್ಧಶತಕ (50) ದಾಖಲಿಸಿ ಔಟಾಗಿದ್ದಾರೆ.
  ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತ ತಂಡ ಎರಡು ವಿಕೆಟ್‌ಗಳನ್ನು ಬೇಗನೆ ಕಳೆದುಕೊಂಡಿತ್ತು. ವಿಂಡೀಸ್‌ನ ಬೌಲರ್‌ಗಳಾದ ಜೋಸೆಫ್ 2 ವಿಕೆಟ್ , ಗ್ಯಾಬ್ರಿಯಲ್ ಮತ್ತು ಚೇಸ್ ತಲಾ 1 ವಿಕೆಟ್ ಉಡಾಯಿಸಿ ತಂಡದ ಬ್ಯಾಟಿಂಗ್‌ಗೆ ಕಡಿವಾಣ ಹಾಕಿದರು.
   ಆರಂಭಿಕ ದಾಂಡಿಗ ಶಿಖರ್ ಧವನ್ 1ರನ್ ಮತ್ತು ನಾಯಕ ವಿರಾಟ್ ಕೊಹ್ಲಿ3 ರನ್ ಗಳಿಸಿ ಬೇಗನೆ ಔಟಾದರು. ಮೂರನೆ ವಿಕೆಟ್‌ಗೆ ಲೊಕೇಶ್ ರಾಹುಲ್ ಮತ್ತು ಅಜಿಂಕ್ಯ ರಹಾನೆ ಜೊತೆಯಾಗಿ 58 ರನ್ ಸೇರಿಸಿದರು. ಲೋಕೇಶ್ ರಾಹುಲ್ 65 ಎಸೆತಗಳನ್ನು ಎದುರಿಸಿ 6 ಬೌಂಡರಿಗಳ ಸಹಾಯದಿಂದ 50 ರನ್ ಗಳಿಸಿದ ಬೆನ್ನಲ್ಲೆ ಚೇಸ್ ಅವರ ಎಸೆತದಲ್ಲಿ ಬ್ರಾಥ್‌ವೈಟ್‌ಗೆ ಕ್ಯಾಚ್ ನೀಡಿದರು. ಇದು ರಾಹುಲ್ ಅವರ ಮೊದಲ ಅರ್ಧಶತಕ. ಈ ವರೆಗೆ ಅವರು 6 ಟೆಸ್ಟ್‌ಗಳನ್ನು ಆಡಿದ್ದಾರೆ. ಮೂರು ಶತಕಗಳನ್ನು ದಾಖಲಿಸಿದ್ದಾರೆ. ಸರಣಿಯಲ್ಲಿ ಮೊದಲ ಬಾರಿ ಆಡಿದ ರೋಹಿತ್ ಶರ್ಮ (9) ಅವರು ಚೊಚ್ಚಲ ಟೆಸ್ಟ್ ಆಡುತ್ತಿರುವ ವಿಂಡೀಸ್‌ನ ಜೋಸೆಫ್‌ಗೆ ವಿಕೆಟ್ ಒಪ್ಪಿಸಿದರು. ಅಜಿಂಕ್ಯ ರಹಾನೆ ಔಟಾಗದೆ 34 ರನ್ ಮತ್ತು ಅಶ್ವಿನ್ 16 ರನ್ ಗಳಿಸಿ ಬ್ಯಾಟಿಂಗ್ ಮುಂದುವರಿಸಿದ್ದಾರೆ.
ಸಂಕ್ಷಿಪ್ತ ಸ್ಕೋರ್ ವಿವರ
ಭಾರತ ಮೊದಲ ಇನಿಂಗ್ಸ್ 47 ಓವರ್‌ಗಳಲ್ಲಿ 121/4(ರಾಹುಲ್ 50; ಜೋಸೆಫ್ 20ಕ್ಕೆ 2).

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News