×
Ad

T20 ವಿಶ್ವಕಪ್‌ ಗೆ ಭಾರತ ಕ್ರಿಕೆಟ್ ತಂಡ ಪ್ರಕಟ; ಹೊರಗುಳಿದ ಗಿಲ್, ಇಶಾನ್ ಕಿಶನ್ ಸೇರ್ಪಡೆ

Update: 2025-12-20 15:40 IST

ಸೂರ್ಯಕುಮಾರ್ ಯಾದವ್ , ಶುಭಮನ್ ಗಿಲ್ | Photo Credit : PTI 

ಹೊಸದಿಲ್ಲಿ, ಡಿ.20: ಮುಂಬರುವ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿ ಹಾಗೂ ನ್ಯೂಝಿಲ್ಯಾಂಡ್ ವಿರುದ್ಧದ ಐದು ಪಂದ್ಯಗಳ ಟಿ-20 ಸರಣಿಗೆ ಆಯ್ಕೆ ಸಮಿತಿಯ ಮುಖ್ಯಸ್ಥ ಅಜಿತ್ ಅಗರ್ಕರ್ ಶನಿವಾರ 15 ಸದಸ್ಯರನ್ನು ಒಳಗೊಂಡ ಟೀಮ್ ಇಂಡಿಯಾವನ್ನು ಪ್ರಕಟಿಸಿದರು.

ಟಿ-20 ಸರಣಿಯು 2026ರ ಜನವರಿ 21ರಿಂದ ನಾಗ್ಪುರದಲ್ಲಿ ಆರಂಭವಾಗಲಿದೆ. ಫೆಬ್ರವರಿ 7ರಿಂದ ಮಾರ್ಚ್ 8ರ ತನಕ ನಡೆಯಲಿರುವ ಜಾಗತಿಕ ಪಂದ್ಯಾವಳಿಗಿಂತ ಮೊದಲು ಭಾರತ ತಂಡ ಆಡಲಿರುವ ಕೊನೆಯ ಸರಣಿ ಇದಾಗಿದೆ.

ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡವು ನಮೀಬಿಯಾ, ನೆದರ್‌ಲ್ಯಾಂಡ್ಸ್, ಪಾಕಿಸ್ತಾನ ಹಾಗೂ ಅಮೆರಿಕ ತಂಡಗಳೊಂದಿಗೆ ‘ಎ’ ಗುಂಪಿನಲ್ಲಿ ಸ್ಥಾನ ಪಡೆದಿದೆ. ಆತಿಥೇಯ ಭಾರತ ತಂಡವು ಮುಂಬೈನಲ್ಲಿ ಫೆಬ್ರವರಿ 7ರಂದು ಅಮೆರಿಕ ತಂಡವನ್ನು ಎದುರಿಸುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ. ಆ ನಂತರ ನಮೀಬಿಯಾ, ಪಾಕಿಸ್ತಾನ ಹಾಗೂ ನೆದರ್‌ಲ್ಯಾಂಡ್ಸ್ ತಂಡಗಳನ್ನು ಎದುರಿಸಲಿದೆ.

ಭಾರತದ ವಿಶ್ವಕಪ್ ತಂಡದಲ್ಲಿ ಮೂವರು ಬ್ಯಾಟರ್‌ಗಳಾದ ಸೂರ್ಯಕುಮಾರ್, ತಿಲಕ್ ವರ್ಮಾ, ರಿಂಕು ಸಿಂಗ್, ಆರು ಆಲ್‌ರೌಂಡರ್‌ಗಳಾದ ಅಭಿಷೇಕ್ ಶರ್ಮಾ, ಶಿವಂ ದುಬೆ, ಅಕ್ಷರ್ ಪಟೇಲ್, ಹಾರ್ದಿಕ್ ಪಾಂಡ್ಯ, ಸುಂದರ್ ಹಾಗೂ ಹರ್ಷಿತ್ ರಾಣಾ, ಇಬ್ಬರು ವಿಕೆಟ್‌ ಕೀಪರ್‌ ಗಳಾದ ಸಂಜು ಸ್ಯಾಮ್ಸನ್, ಇಶಾನ್ ಕಿಶನ್ ಹಾಗೂ ನಾಲ್ವರು ಬೌಲರ್‌ ಗಳಾದ ಜಸ್‌ಪ್ರಿತ್ ಬುಮ್ರಾ, ವರುಣ್ ಚಕ್ರವರ್ತಿ, ಕುಲದೀಪ ಯಾದವ್, ಅರ್ಷದೀಪ ಸಿಂಗ್ ಅವರಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧ ಶುಕ್ರವಾರ ಕೊನೆಗೊಂಡಿರುವ ಟಿ-20 ಸರಣಿಯನ್ನು ಭಾರತವು 3-1 ಅಂತರದಿಂದ ಗೆದ್ದುಕೊಂಡಿದ್ದು, ತಂಡದ ನಾಯಕತ್ವವಹಿಸಿದ್ದ ಸೂರ್ಯಕುಮಾರ್ ಯಾದವ್ ರನ್ ಬರ ಎದುರಿಸಿದ್ದಾರೆ. ಆದರೆ ಅವರು ಟಿ-20 ವಿಶ್ವಕಪ್‌ನಲ್ಲಿ ತನ್ನ ನಾಯಕತ್ವ ಸ್ಥಾನ ಉಳಿಸಿಕೊಂಡಿದ್ದಾರೆ. ಈ ವರ್ಷ ಆಡಿರುವ 20 ಪಂದ್ಯಗಳ 18 ಇನಿಂಗ್ಸ್‌ಗಳಲ್ಲಿ ಸೂರ್ಯಕುಮಾರ್ 14.20ರ ಸರಾಸರಿಯಲ್ಲಿ ಕೇವಲ 125ರ ಸ್ಟ್ರೈಕ್‌ರೇಟ್‌ನಲ್ಲಿ 213 ರನ್ ಗಳಿಸಿದ್ದಾರೆ. ಒಂದೇ ಒಂದು ಅರ್ಧಶತಕವನ್ನು ಗಳಿಸಿಲ್ಲ.

ಭಾರತದ ಟಿ-20 ವಿಶ್ವಕಪ್ ತಂಡದಲ್ಲಿ ಕೆಲವು ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದೆ. ಟಿ-20 ತಂಡದ ಉಪ ನಾಯಕನಾಗಿದ್ದ ಶುಭಮನ್ ಗಿಲ್‌ರನ್ನು ತಂಡದಿಂದ ಕೈಬಿಡಲಾಗಿದ್ದು, ಆಲ್‌ರೌಂಡರ್ ಅಕ್ಷರ್ ಪಟೇಲ್ ಅವರನ್ನು ನೂತನ ಉಪ ನಾಯಕನಾಗಿ ನೇಮಿಸಲಾಗಿದೆ.

ಆರಂಭಿಕ ಆಟಗಾರನಾಗಿ ಆಡುತ್ತಿರುವ ಗಿಲ್ ಸದ್ಯ ಕಳಪೆ ಫಾರ್ಮ್‌ನಲ್ಲಿದ್ದಾರೆ. ದೀರ್ಘಕಾಲ ನಾಯಕತ್ವದ ಯೋಜನೆಯ ಭಾಗವಾಗಿ ಆಡುವ 11ರ ಬಳಗಕ್ಕೆ ವಾಪಸಾಗಿರುವ ಗಿಲ್ ಅವರು ಈ ವರ್ಷ 15 ಟಿ-20 ಪಂದ್ಯಗಳಲ್ಲಿ 24.25ರ ಸರಾಸರಿಯಲ್ಲಿ 137ರ ಸ್ಟ್ರೈಕ್‌ರೇಟ್‌ನಲ್ಲಿ ಒಟ್ಟು 291 ರನ್ ಗಳಿಸಿದ್ದು, ಅರ್ಧಶತಕವನ್ನು ಗಳಿಸುವಲ್ಲಿಯೂ ಅಸಮರ್ಥರಾಗಿದ್ದಾರೆ. ಶುಕ್ರವಾರ ಕೊನೆಗೊಂಡಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಟಿ-20 ಸರಣಿಯಲ್ಲಿ 4,0 ಹಾಗೂ 28 ರನ್ ಗಳಿಸಿದ್ದರು.

ಆರಂಭಿಕ ಆಟಗಾರನಾಗಿ ಮೂರು ಶತಕಗಳನ್ನು ಗಳಿಸಿ ಅತ್ಯುತ್ತಮ ಪ್ರದರ್ಶನ ನೀಡಿರುವ ಸಂಜು ಸ್ಯಾಮ್ಸನ್ ಅವರು ಗಿಲ್ ಪುನರಾಗಮನದ ನಂತರ ಕೆಳ ಸರದಿಗೆ ಹಿಂಬಡ್ತಿ ಪಡೆದಿದ್ದರು. ಏಶ್ಯಕಪ್ ಟೂರ್ನಿಯಲ್ಲಿ 132 ರನ್ ಗಳಿಸಿ ಮೂರನೇ ಗರಿಷ್ಠ ರನ್ ಸ್ಕೋರರ್ ಎನಿಸಿಕೊಂಡಿದ್ದರು. ಅಭಿಷೇಕ್ ಶರ್ಮಾ(314 ರನ್) ಹಾಗೂ ತಿಲಕ್ ವರ್ಮಾ(213 ರನ್)ಮೊದಲೆರಡು ಸ್ಥಾನದಲ್ಲಿದ್ದಾರೆ. ಆಸ್ಟ್ರೇಲಿಯದಲ್ಲಿ ಮೂರನೇ ಕ್ರಮಾಂಕದಲ್ಲಿ ಆಡಿ ಸಾಧಾರಣ ಪ್ರದರ್ಶನ ನೀಡಿದ್ದ ಸ್ಯಾಮ್ಸನ್ ಅವರು ಆ ನಂತರ ಆಡುವ 11ರ ಬಳಗದಿಂದ ಹೊರಗುಳಿದಿದ್ದರು.

ದಕ್ಷಿಣ ಆಫ್ರಿಕಾ ವಿರುದ್ಧ ಟಿ-20 ಪಂದ್ಯದಲ್ಲಿ ಶುಕ್ರವಾರ ಗಿಲ್ ಅನುಪಸ್ಥಿತಿಯಲ್ಲಿ ಮತ್ತೊಮ್ಮೆ ಇನಿಂಗ್ಸ್ ಆರಂಭಿಸಿರುವ ಸ್ಯಾಮ್ಸನ್ 22 ಎಸೆತಗಳಲ್ಲಿ 27 ರನ್ ಗಳಿಸಿ ಭಾರತಕ್ಕೆ ಉತ್ತಮ ಆರಂಭ ಒದಗಿಸಿದ್ದರು. ತಂಡದ ಆಡಳಿತವು ವಿಕೆಟ್‌ಕೀಪರ್-ಬ್ಯಾಟರನ್ನು ಅಗ್ರ ಸರದಿಯಲ್ಲಿ ಆಡಿಸುವ ತನ್ನ ಮೂಲ ಯೋಜನೆಗೆ ಮರಳುವ ಯೋಚನೆಯಲ್ಲಿದೆ. ಜಿತೇಶ್ ಶರ್ಮಾರನ್ನು ಕೈಬಿಡಲಾಗಿದ್ದು, ಇಶಾನ್ ಕಿಶನ್‌ರನ್ನು ಎರಡನೇ ಕೀಪರ್ ಆಗಿ ಆಯ್ಕೆ ಮಾಡಲಾಗಿದೆ.

ಇಶಾನ್ ಕಿಶನ್ ಹಾಗೂ ರಿಂಕು ಸಿಂಗ್ ಟಿ-20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಶುಭಮನ್ ಗಿಲ್ ಹಾಗೂ ಜಿತೇಶ್ ಶರ್ಮಾ ಸ್ಥಾನ ವಂಚಿತರಾಗಿದ್ದಾರೆ. ದೇಶೀಯ ಟಿ-20 ಟೂರ್ನಿ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಹಿನ್ನೆಲೆಯಲ್ಲಿ ಕಿಶನ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಕಿಶನ್ ನಾಯಕತ್ವದಲ್ಲಿ ಜಾರ್ಖಂಡ್ ತಂಡ ತನ್ನ ಚೊಚ್ಚಲ ಟಿ-20 ಪ್ರಶಸ್ತಿ ಜಯಿಸಿತ್ತು. ಈ ಋತುವಿನಲ್ಲಿ 10 ಪಂದ್ಯಗಳಲ್ಲಿ 57.44ರ ಸರಾಸರಿಯಲ್ಲಿ 197ರ ಸ್ಟ್ರೈಕ್‌ರೇಟ್‌ನಲ್ಲಿ ಒಟ್ಟು 517 ರನ್ ಗಳಿಸಿರುವ ಕಿಶನ್ ಅಗ್ರ ರನ್ ಸ್ಕೋರರ್ ಎನಿಸಿಕೊಂಡಿದ್ದರು.

ಎಡಗೈ ಬ್ಯಾಟರ್ ಕಿಶನ್ 2023ರಲ್ಲಿ ಆಸ್ಟ್ರೇಲಿಯದ ವಿರುದ್ಧ ಕೊನೆಯ ಟಿ-20 ಅಂತರ್‌ರಾಷ್ಟ್ರೀಯ ಪಂದ್ಯ ಆಡಿದ್ದರು. ಎಡಗೈ ಬ್ಯಾಟರ್ ರಿಂಕು ಸಿಂಗ್ ದೇಶೀಯ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ಕಾರಣ ಭಾರತ ತಂಡದಲ್ಲಿ ಮತ್ತೊಮ್ಮೆ ಅವಕಾಶ ಪಡೆದಿದ್ದಾರೆ. ಕೆಳ ಕ್ರಮಾಂಕದಲ್ಲಿ ಸುಂದರ್ ಜೊತೆಗೆ ಸ್ಪರ್ಧಿಸುವ ಸಾಧ್ಯತೆ ಇದೆ.

ಟಿ-20 ವಿಶ್ವಕಪ್‌ ಗೆ ಭಾರತ ತಂಡ

ಸೂರ್ಯಕುಮಾರ್ ಯಾದವ್(ನಾಯಕ), ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್(ವಿಕೆಟ್‌ ಕೀಪರ್), ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್, ಜಸ್‌ಪ್ರಿತ್ ಬುಮ್ರಾ, ರಿಂಕು ಸಿಂಗ್, ಹರ್ಷಿತ್ ರಾಣಾ, ಅರ್ಷದೀಪ್ ಸಿಂಗ್, ಕುಲದೀಪ ಯಾದವ್, ವರುಣ್ ಚಕ್ರವರ್ತಿ, ವಾಶಿಂಗ್ಟನ್ ಸುಂದರ್, ಇಶಾನ್ ಕಿಶನ್.

ನ್ಯೂಝಿಲ್ಯಾಂಡ್ ವಿರುದ್ಧ ಟಿ-20 ಸರಣಿಗೆ ಭಾರತ ತಂಡ

ಸೂರ್ಯಕುಮಾರ ಯಾದವ್(ನಾಯಕ), ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್(ವಿಕೆಟ್‌ ಕೀಪರ್), ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್, ಜಸ್‌ಪ್ರಿತ್ ಬುಮ್ರಾ, ರಿಂಕು ಸಿಂಗ್, ಹರ್ಷಿತ್ ರಾಣಾ, ಅರ್ಷದೀಪ ಸಿಂಗ್, ಕುಲದೀಪ ಯಾದವ್, ವರುಣ್ ಚಕ್ರವರ್ತಿ, ವಾಶಿಂಗ್ಟನ್ ಸುಂದರ್, ಇಶಾನ್ ಕಿಶನ್.

ನ್ಯೂಝಿಲ್ಯಾಂಡ್ ವಿರುದ್ಧ ಟಿ-20 ಸರಣಿ ವೇಳಾಪಟ್ಟಿ

ಮೊದಲ ಟಿ-20: ಜನವರಿ 21,2026-ವಿದರ್ಭ ಕ್ರಿಕೆಟ್ ಸ್ಟೇಡಿಯಂ, ನಾಗ್ಪುರ

ಎರಡನೇ ಟಿ-20: ಜನವರಿ 23, 2026, ನಾರಾಯಣ ಸಿಂಗ್ ಸ್ಟೇಡಿಯಂ, ರಾಯ್ಪುರ

ಮೂರನೇ ಟಿ-20: ಜನವರಿ 25,2026, ಬರ್ಸಪಾರ ಸ್ಟೇಡಿಯಂ, ಗುವಾಹಟಿ

ನಾಲ್ಕನೇ ಟಿ-20: ಜನವರಿ 28,2026, ವೈ.ಎಸ್. ರಾಜಶೇಖರ ರೆಡ್ಡಿ ಸ್ಟೇಡಿಯಂ, ವಿಶಾಖಪಟ್ಟಣ

ಐದನೇ ಟಿ-20: ಜನವರಿ 31,2026, ಗ್ರೀನ್‌ಫೀಲ್ಡ್ ಸ್ಟೇಡಿಯಂ, ತಿರುವನಂತಪುರ

ಎಲ್ಲ ಪಂದ್ಯಗಳ ಆರಂಭದ ಸಮಯ: ರಾತ್ರಿ 7:00

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News