ಐಸಿಸ್ ನಂಟು ಶಂಕೆ: ಒಟ್ಟು 54 ಮಂದಿ ಬಂಧನ
ಹೊಸದಿಲ್ಲಿ, ಆ.11: ಜಾಗತಿಕ ಮಟ್ಟದ ಭಯೋತ್ಪಾದಕ ಸಂಘಟನೆ ಐಸಿಸ್‌ನ 54 ಮಂದಿ ಬೆಂಬಲಿಗರನ್ನು ಹಾಗೂ ಸಹಾನುಭೂತಿ ಉಳ್ಳವರನ್ನು ದೇಶದ ವಿವಿಧ ಭಾಗಗಳಲ್ಲಿ ಬಂಧಿಸಲಾಗಿದೆಯೆಂದು ಕೇಂದ್ರ ಸರಕಾರವು ಗುರುವಾರ ರಾಜ್ಯಸಭೆಗೆ ತಿಳಿಸಿದೆ. ದೇಶದ ವಿವಿಧೆಡೆ ಐಸಿಸ್ ನಂಟಿರುವ ಹಲವು ಪ್ರಕರಣಗಳನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ಹಾಗೂ ರಾಜ್ಯ ಪೊಲೀಸ್ ಪಡೆಗಳು ದಾಖಲಿಸಿವೆಯೆಂದು ಕೇಂದ್ರ ಸಹಾಯಕ ಗೃಹ ಸಚಿವ ಹನ್ಸ್‌ರಾಜ್ ಆಹಿರ್ ತಿಳಿಸಿದ್ದಾರೆ. ‘‘ದೇಶದೊಳಗೆ ಯಾವುದೇ ಭಯೋತ್ಪಾದಕ ದಾಳಿಗಳನ್ನು ನಡೆಸುವ ಮೊದಲೇ 54 ಮಂದಿ ಐಸಿಸ್ ಬೆಂಬಲಿಗರನ್ನು ಬಂಧಿಸಲಾಗಿದೆ’’ ಎಂದು ಆಹಿರ್, ರಾಜ್ಯಸಭೆಯಲ್ಲಿ ಲಿಖಿತ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ತಿಳಿಸಿದ್ದಾರೆ. ರಾಷ್ಟ್ರೀಯ ತನಿಖಾಸಂಸ್ಥೆ (ಎನ್‌ಐಎ)ಯ, ಕಾನೂನುಬಾಹಿರ ಚಟುವಟಿಕೆ (ತಡೆ) ಕಾಯ್ದೆ 1967ರನ್ವಯ ಈಗಾಗಲೇ 29 ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದೆಯೆಂದು ಅವರು ತಿಳಿಸಿದ್ದಾರೆ.
ಸರಕಾರಕ್ಕೆ ಲಭ್ಯವಿರುವ ಮಾಹಿತಿಯ ಪ್ರಕಾರ ಕೇರಳ, ತೆಲಂಗಾಣ, ಕರ್ನಾಟಕ, ತಮಿಳುನಾಡು, ಮಹಾರಾಷ್ಟ್ರ, ಆಂಧ್ರಪ್ರದೇಶ, ದಿಲ್ಲಿ, ಜಮ್ಮು ಕಾಶ್ಮೀರ, ಜಾರ್ಖಂಡ್ ಹಾಗೂ ಪಶ್ಚ್ಚಿಮಬಂಗಾಳ ರಾಜ್ಯಗಳಿಂದ ನಾಪತ್ತೆ ಯಾಗಿರುವ ಕೆಲವು ವ್ಯಕ್ತಿಗಳು ಐಸಿಸ್‌ನಂತಹ ಭಯೋತ್ಪಾದಕ ಗುಂಪುಗಳನ್ನು ಸೇರಿದ್ದಾರೆಂದು ಶಂಕಿಸ ಲಾಗಿದೆಯೆಂದು ಸಚಿವರು ತಿಳಿಸಿದ್ದಾರೆ.