×
Ad

ರಾಯಭಾರ ಕಚೇರಿಯಲ್ಲಿ ಅಸಾಂಜ್‌ಪ್ರಶ್ನಿಸಲು ಸ್ವೀಡನ್‌ಗೆ ಅವಕಾಶ

Update: 2016-08-11 23:53 IST

ಕ್ವಿಟೊ (ಇಕ್ವೆಡಾರ್), ಆ. 11: ಲಂಡನ್‌ನಲ್ಲಿರುವ ತನ್ನ ರಾಯಭಾರ ಕಚೇರಿಯಲ್ಲಿ ವಿಕಿಲೀಕ್ಸ್ ಸ್ಥಾಪಕ ಜೂಲಿಯನ್ ಅಸಾಂಜ್‌ರನ್ನು ಪ್ರಶ್ನಿಸಲು ಸ್ವೀಡನ್ ಅಧಿಕಾರಿಗಳಿಗೆ ಅವಕಾಶ ನೀಡುವುದಾಗಿ ಇಕ್ವೆಡಾರ್ ಬುಧವಾರ ಹೇಳಿದೆ.

ಲಂಡನ್‌ನಲ್ಲಿರುವ ಇಕ್ವೆಡಾರ್ ರಾಯಭಾರ ಕಚೇರಿಯಲ್ಲಿ ಅಸಾಂಜ್ 2012 ಜೂನ್‌ನಿಂದ ಆಶ್ರಯ ಪಡೆದಿದ್ದಾರೆ. ಲಂಡನ್ ನಲ್ಲಿರುವ ಇಕ್ವೆಡಾರ್‌ನ ರಾಯಭಾರ ಕಚೇರಿಯಲ್ಲಿ ಸ್ವೀಡನ್ ಅಧಿಕಾರಿಗೊಳೊಂದಿಗೆ ಭೇಟಿ ಏರ್ಪಡಿಸಲು ಇಕ್ವೆಡಾರ್ ಸರಕಾರ ಪತ್ರವೊಂದನ್ನು ಕಳುಹಿಸಿದೆ ಎಂದು ಹೇಳಿಕೆಯೊಂದರಲ್ಲಿ ವಿದೇಶ ಸಚಿವಾಲಯ ತಿಳಿಸಿದೆ.

‘‘ಮುಂಬರುವ ವಾರಗಳಲ್ಲಿ’’ ಭೇಟಿ ನಡೆಯಲಿದೆ ಎಂದು ಹೇಳಿಕೆ ತಿಳಿಸಿದೆ. ಅಸಾಂಜ್ ವಿರುದ್ಧ ದಾಖಲಾದ 2010ರ ಅತ್ಯಾಚಾರ ಆರೋಪಕ್ಕೆ ಸಂಬಂಧಿಸಿ ಅವರನ್ನು ಪ್ರಶ್ನಿಸಲು ಸ್ವೀಡನ್‌ನ ಪ್ರಾಸಿಕ್ಯೂಟರ್‌ಗಳು ಬಯಸಿದ್ದಾರೆ. ತನ್ನನ್ನು ಸ್ವೀಡನ್‌ಗೆ ಗಡಿಪಾರು ಮಾಡುವುದರ ವಿರುದ್ಧ ಎಲ್ಲ ಕಾನೂನು ಹೋರಾಟಗಳನ್ನು ಮುಗಿಸಿದ ಬಳಿಕ, 45 ವರ್ಷದ ಅಸಾಂಜ್ ಲಂಡನ್‌ನ ಇಕ್ವೆಡಾರ್ ರಾಯಭಾರ ಕಚೇರಿಯಲ್ಲಿ ಆಶ್ರಯ ಪಡೆದರು.

ವಿಚಾರಣೆ ಎದುರಿಸುವುದಕ್ಕಾಗಿ ತನ್ನನ್ನು ಸ್ವೀಡನ್‌ಗೆ ಕಳುಹಿಸಿದರೆ, ಅಮೆರಿಕ ಸರಕಾರದ ಲಕ್ಷಾಂತರ ಗುಪ್ತ ದಾಖಲೆಗಳನ್ನು ವಿಕಿಲೀಕ್ಸ್ ಮೂಲಕ ಬಹಿರಂಗಪಡಿಸಿರುವುದಕ್ಕಾಗಿ ವಿಚಾರಣೆ ಎದುರಿಸಲು ತನ್ನನ್ನು ಅಮೆರಿಕಕ್ಕೆ ಗಡಿಪಾರು ಮಾಡುವ ಭೀತಿಯನ್ನು ಅಸಾಂಜ್ ಹೊಂದಿದ್ದಾರೆ. ಇದಕ್ಕಾಗಿ ಅಮೆರಿಕದಲ್ಲಿ ತನಗೆ ದೀರ್ಘಾವಧಿ ಜೈಲು ಶಿಕ್ಷೆಯಾಗಬಹುದು ಅಥವಾ ಮರಣ ದಂಡನೆಯೂ ಸಿಗಬಹುದು ಎಂಬ ಬೀತಿ ಅವರಲ್ಲಿದೆ.

ತನ್ನ ಮೇಲಿನ ಅತ್ಯಾಚಾರ ಆರೋಪವನ್ನು ಅಸಾಂಜ್ ನಿರಾಕರಿಸುತ್ತಾರೆ.

ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಸ್ವೀಡನ್‌ನ ವಿಚಾರಣೆಯಲ್ಲಿ ತಾನು ಮಧ್ಯಪ್ರವೇಶಿಸುವುದಿಲ್ಲ ಎಂಬುದಾಗಿ ಇಕ್ವೆಡಾರ್‌ಈ ಹಿಂದೆ ಹೇಳಿತ್ತು.

ವಿಕಿಲೀಕ್ಸ್ ದಾಖಲೆಗಳ ಬಹಿರಂಗ ಪ್ರಕರಣದಲ್ಲಿ ಅಸಾಂಜ್‌ರನ್ನು ಅಮೆರಿಕಕ್ಕೆ ಗಡಿಪಾರು ಮಾಡುವುದಿಲ್ಲ ಎಂಬ ಭರವಸೆಯನ್ನು ಸ್ವೀಡನ್ ಕೊಟ್ಟರೆ, ಅವರನ್ನು ಸ್ವೀಡನ್‌ಗೆ ಕಳುಹಿಸುವುದಾಗಿ ಇಕ್ವೆಡಾರ್ ಹೇಳಿದೆ.

ಇಡೀ ದಿನ ಕಂಪ್ಯೂಟರ್‌ನಲ್ಲಿ ಕಳೆಯುವ ಅಸಾಂಜ್

ಅಸಾಂಜ್‌ರ 15-13 ಅಡಿ ವಿಸ್ತೀರ್ಣದ ಕೋಣೆಯನ್ನು ಕಚೇರಿ ಮತ್ತು ಮನೆಯನ್ನಾಗಿ ವಿಂಗಡಿ ಸಲಾಗಿದೆ. ಅವರ ಕೋಣೆಯಲ್ಲಿ ಟ್ರೆಡ್‌ಮಿಲ್, ಶವರ್, ಮೈಕ್ರೋವೇವ್ ಮತ್ತು ಸನ್‌ಲ್ಯಾಂಪ್ ಇವೆ. ಅವರು ತನ್ನ ಹೆಚ್ಚಿನ ಸಮಯವನ್ನು ಕಂಪ್ಯೂಟರ್‌ನಲ್ಲಿ ಕಳೆಯುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News