×
Ad

ಕಾಶ್ಮೀರ: ಸಂವಾದವೊಂದೇ ಉಳಿದ ದಾರಿ

Update: 2016-08-12 23:41 IST

ದೇಶದಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ತುಂಬಾ ತಡವಾಗಿ ಸ್ಪಂದಿಸುವುದು ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭ್ಯಾಸವಾಗಿದೆ. ಆಫ್ರಿಕದಲ್ಲಿ ಏನಾದರೂ ಘಟನೆ ಸಂಭವಿಸಿದರೆ ಮೋದಿಯವರು ತಕ್ಷಣ ಟ್ವೀಟ್ ಮಾಡುತ್ತಾರೆ. ನೇಪಾಳ ಅಥವಾ ಪಾಕಿಸ್ತಾನಗಳಲ್ಲಿ ದುರ್ಘಟನೆ ನಡೆದರೆ ಅನುಕಂಪ ವ್ಯಕ್ತಪಡಿಸುತ್ತಾರೆ. ಆದರೆ, ನಮ್ಮದೇ ದೇಶದಲ್ಲಿ ನಿತ್ಯವೂ ಇಂತಹ ಅತಿರೇಕಗಳು ನಡೆಯುತ್ತಿದ್ದರೂ ಕಾಟಾಚಾರಕ್ಕೆ ಎಂಬಂತೆ ತುಂಬಾ ತಡವಾಗಿ ಅವರು ಸ್ಪಂದಿಸುತ್ತಾರೆ. ಕಾಶ್ಮೀರ ವಿವಾದದ ಕುರಿತಂತೆ ಮೋದಿ ಅವರು ಸಂಸತ್ತಿನಲ್ಲಿ ಯಾವುದೇ ಹೇಳಿಕೆ ನೀಡಲಿಲ್ಲ. ಆದರೆ ತುಂಬಾ ತಡವಾಗಿ ಸಂಸತ್ತಿನ ಹೊರಗೆ ಮಧ್ಯಪ್ರದೇಶದ ಸಭೆಯೊಂದರಲ್ಲಿ ದಿಢೀರನೆ ಒಂದು ಹೇಳಿಕೆ ನೀಡಿದರು. ಅಲ್ಲಿ ‘ಮಾನವೀಯತೆ’ ಎಂಬ ಪದವನ್ನು ಉಲ್ಲೇಖಿಸಿದರು. ಈ ಬಗ್ಗೆ ರಾಜ್ಯಸಭೆಯಲ್ಲಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ವಿರೋಧ ಪಕ್ಷದ ನಾಯಕ ಗುಲಾಂ ನಬಿ ಆಝಾದ್ ಅವರು ಪ್ರಧಾನ ಮಂತ್ರಿಗಳು ಕಾಟಾಚಾರಕ್ಕೆ ಇಂತಹ ಹೇಳಿಕೆ ನೀಡಬಾರದು, ಅವರ ಮಾತು ಹೃದಯದಿಂದ ಬರಬೇಕು ಎಂದು ಹೇಳಿದ್ದಾರೆ. ಈ ಮಾತು ಆಝಾದ್ ಒಬ್ಬರೇ ಹೇಳಲಿಲ್ಲ. ಎರಡೂ ಸದನಗಳ ಎಲ್ಲ ಪ್ರತಿಪಕ್ಷ ನಾಯಕರೂ ಈ ಮಾತನ್ನು ಹೇಳಿದ್ದಾರೆ. ಭಾರತದ ಶಿರವಾದ ಕಾಶ್ಮೀರ ಹೊತ್ತಿ ಉರಿಯುತ್ತಿರುವಾಗ ಪ್ರಧಾನಿ ಈ ರೀತಿ ತಡವಾಗಿ ಸ್ಪಂದಿಸುತ್ತಿರುವುದು ಸರಿಯಲ್ಲ. ಅಂತಲೇ ಸದನದಲ್ಲಿ ಪ್ರತಿಪಕ್ಷಗಳು ತರಾಟೆಗೆ ತೆಗೆದುಕೊಂಡಾಗ ಸರ್ವಪಕ್ಷ ಸಭೆಯನ್ನು ಕರೆಯುವ ಸಬೂಬನ್ನು ನೀಡಲಾಗಿದೆ.

ಸಂಘಪರಿವಾರದ ಗೋರಕ್ಷಕರೆಂಬ ನರಭಕ್ಷಕರು ದಲಿತರ ಮೇಲೆ ದೌರ್ಜನ್ಯ ಎಸಗಿದಾಗಲೂ ಪ್ರಧಾನಮಂತ್ರಿಗಳು ಇದೇ ರೀತಿ ತಡವಾಗಿ ಕಾಟಾಚಾರದ ಮಾತುಗಳನ್ನು ಆಡಿದರು. ‘‘ಬೇಕಾದರೆ ನನ್ನನ್ನು ಗುಂಡಿಕ್ಕಿ ಸಾಯಿಸಿ ಆದರೆ, ದಲಿತರ ಮೇಲೆ ಹಲ್ಲೆ ಮಾಡಬೇಡಿ’’ ಎಂದು ಪ್ರಧಾನಿ ಹೇಳಿದರು. ಒಬ್ಬ ಪ್ರಧಾನಿಯಾಗಿ ಈ ರೀತಿ ಅಸಹಾಯಕ ಮಾತುಗಳನ್ನು ಅವರು ಆಡಬೇಕಾಗಿರಲಿಲ್ಲ. ಇದಕ್ಕೆ ಬದಲಾಗಿ ಗೋರಕ್ಷಣೆಯ ಹೆಸರಿನಲ್ಲಿ ಕಾನೂನನ್ನು ಕೈಗೆತ್ತಿಕೊಂಡು ದಲಿತರು ಮತ್ತು ಅಲ್ಪಸಂಖ್ಯಾತರ ಮೇಲೆ ಹಲ್ಲೆ ಮಾಡುವ ದುಷ್ಟವ್ಯಕ್ತಿಗಳನ್ನು ತಕ್ಷಣ ಬಂಧಿಸಿ ಜೈಲಿಗೆ ಹಾಕುವಂತೆ ಅವರು ಆದೇಶ ನೀಡಬೇಕಾಗಿತ್ತು. ಸಮಾಜದಲ್ಲಿ ಅಶಾಂತಿ ಉಂಟು ಮಾಡುವಂತಹ ಇಂತಹ ಗೋರಕ್ಷಕ ಸಂಘಟನೆಗಳನ್ನು ನಿಷೇಧಿಸಬೇಕಾಗಿದೆ. ಇಂತಹ ದಿಟ್ಟ ಕ್ರಮವನ್ನು ಕೈಗೊಳ್ಳದೆ ಸುಮ್ಮನೆ ಕಾಟಾಚಾರದ ಹೇಳಿಕೆಯನ್ನು ಅವರು ನೀಡಿದರು. ಕೇಂದ್ರ ಸರಕಾರದ ತಪ್ಪು ಧೋರಣೆಯಿಂದಾಗಿ ಕಾಶ್ಮೀರದ ಪರಿಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಲೇ ಇದೆ. ಚುನಾಯಿತ ಸರಕಾರ ಇರುವ ರಾಜ್ಯವೊಂದರಲ್ಲಿ ಸುದೀರ್ಘ ಕಾಲ ಕರ್ಫ್ಯೂ ಮೂಲಕ ರಾಜ್ಯವನ್ನು ಆಳುವುದು ಪ್ರಜಾಪ್ರಭುತ್ವಕ್ಕೆ ಶೋಭೆ ತರುವುದಿಲ್ಲ. ಪೊಲೀಸ್ ಮತ್ತು ಭದ್ರತಾ ಪಡೆಗಳ ಬಲವನ್ನು ಬಳಸಿ ಜನತೆಯ ಧ್ವನಿಯನ್ನು ಅಡಗಿಸಲು ಸಾಧ್ಯವಿಲ್ಲ.

ಕಾಶ್ಮೀರದಲ್ಲಿ ದೌರ್ಜನ್ಯ ಎಷ್ಟು ವಿಪರೀತಕ್ಕೆ ಹೋಗಿದೆಯೆಂದರೆ ಅಲ್ಲಿನ ಪೊಲೀಸರು ಪಾಲೆಟ್ ಗನ್ ಬಳಸಿ ಜನರನ್ನು ಹತ್ತಿಕ್ಕುತ್ತಿದ್ದಾರೆ. ಹೀಗಾಗಿ ಅನೇಕ ನಾಗರಿಕರು ಕಣ್ಣು ಕಳೆದುಕೊಂಡಿದ್ದಾರೆ. ಈ ಪಾಲೆಟ್ ಗನ್‌ಗಳನ್ನು ಮಧ್ಯಪ್ರಾಚ್ಯದ ಗಾಝಾ ಪ್ರದೇಶದಲ್ಲಿ ಇಸ್ರೇಲಿ ಸೈನಿಕರು ಕೂಡಾ ಫೆಲೆಸ್ತೀನಿಗಳ ವಿರುದ್ಧ ಬಳಸುವುದಿಲ್ಲ. ಅಂತಹ ಅಸ್ತ್ರಗಳನ್ನು ನಮ್ಮದೇ ಪ್ರಜೆಗಳ ವಿರುದ್ಧ ಬಳಸುತ್ತಿರುವುದು ಸರಿಯಲ್ಲ. ಈ ಹಿನ್ನೆಲೆಯಲ್ಲಿ ಪ್ರತಿಪಕ್ಷ ಸದಸ್ಯರು ಟೀಕಿಸಿದಾಗ ಸರ್ವಪಕ್ಷ ಸಭೆಯನ್ನು ಕರೆಯುವುದಾಗಿ ಸರಕಾರವೇನೋ ಒಪ್ಪಿಕೊಂಡಿದೆ. ಆದರೆ, ಬರೀ ಸರ್ವಪಕ್ಷ ಸಭೆಯಿಂದ ಪ್ರಯೋಜನವಿಲ್ಲ. ಸರ್ವಪಕ್ಷ ಸಭೆಗೂ ಮುಂಚೆ ಅಲ್ಲಿ ಕಳುಹಿಸಲಾದ ಹೆಚ್ಚುವರಿ ಸೇನಾ ಪಡೆಗಳನ್ನು ವಾಪಸ್ ಕರೆಸಿಕೊಳ್ಳಬೇಕು. ಅಲ್ಲಿನ ಚುನಾಯಿತ ಸರಕಾರದ ಮೂಲಕ ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸಲು ಯತ್ನಿಸಬೇಕು. ಕಾಶ್ಮೀರದ ಪರಿಸ್ಥಿತಿ ಎಷ್ಟು ಹದಗೆಟ್ಟಿದೆಯೆಂದರೆ ಪೊಲೀಸ್ ಹಾಗೂ ಭದ್ರತಾ ಪಡೆಗಳ ದಾಳಿಯಿಂದ ನಾಲ್ಕು ಸಾವಿರಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಅಷ್ಟೇ ಸಂಖ್ಯೆಯಲ್ಲಿ ಭದ್ರತಾ ಪಡೆ ಸಿಬ್ಬಂದಿ ಹಾಗೂ ಪೊಲೀಸರು ಕೂಡಾ ಗಾಯಗೊಂಡಿದ್ದಾರೆ. ಇದೇ ಸ್ಥಿತಿ ಮುಂದುವರಿದರೆ ಜಗತ್ತು ನಮ್ಮನ್ನು ನೋಡಿ ನಗುತ್ತದೆ. ಈ ಸಮಸ್ಯೆಗೆ ನಾವು ಮಾನವೀಯ ಪರಿಹಾರ ಕಂಡುಕೊಳ್ಳಬೇಕಾಗಿದೆ. ರಾಜಕೀಯ ಉದ್ದೇಶದ ಕೆಲ ಕೋಮುವಾದಿ ಸಂಘಟನೆಗಳು ಕಾಶ್ಮೀರ ಸಮಸ್ಯೆಗೆ ಶಾಂತಿಯುತ ಪರಿಹಾರ ಕಲ್ಪಿಸುವುದನ್ನು ವಿರೋಧಿಸುತ್ತವೆ. ಇಂತಹ ಸಂಘಟನೆಗಳ ಮಾತಿಗೆ ಸರಕಾರ ಕಿವಿಗೊಡಬಾರದು. ಕಾಶ್ಮೀರಿಗಳ ಭಾವನೆಗಳನ್ನು ನಾವು ಅರ್ಥಮಾಡಿಕೊಳ್ಳಬೇಕಾಗಿದೆ. ಶೇಖ್ ಅಬ್ದುಲ್ಲಾ ಕಾಲದಿಂದ ಕಾಶ್ಮೀರದ ಜನತೆ ಭಾರತದ ಜೊತೆಗಿದ್ದಾರೆ. ಅವರೆಂದೂ ನಮಗೆ ದ್ರೋಹ ಬಗೆಯಲು ಸಾಧ್ಯವಿಲ್ಲ. ಆದರೆ, ತಮ್ಮ ರಾಜ್ಯದ ಭವಿಷ್ಯ ಹೇಗಿರಬೇಕು ಎಂಬ ಬಗ್ಗೆ ತಮ್ಮ ಮಾತಿಗೂ ಬೆಲೆ ಕೊಡಬೇಕೆಂದು ಅವರ ಬಹುದಿನದ ಆಸೆಯಾಗಿದೆ. ಅದನ್ನು ನಾವು ಗೌರವಿಸಬೇಕಾಗಿದೆ.

 ಕಾಶ್ಮೀರದಲ್ಲಿ ವಿದೇಶಿ ಹಸ್ತಕ್ಷೇಪ ಇಲ್ಲವೆಂದಲ್ಲ. ಪಾಕಿಸ್ತಾನ, ಅಫ್ಘಾನಿಸ್ತಾನ ಮಾತ್ರವಲ್ಲ ಅಮೆರಿಕದಂತಹ ಸಾಮ್ರಾಜ್ಯಶಾಹಿ ದೇಶಗಳು ಭಾರತ ಉಪಖಂಡದಲ್ಲಿ ಅಶಾಂತಿಯನ್ನು ಉಂಟು ಮಾಡಲು ಕಾಶ್ಮೀರ ಸಮಸ್ಯೆಯನ್ನು ಬಳಸುತ್ತಾ ಬಂದಿವೆ. ಈ ರೀತಿಯ ಬಾಹ್ಯ ಹಸ್ತಕ್ಷೇಪಕ್ಕೆ ನಾವು ಅವಕಾಶ ಮಾಡಿಕೊಡಬಾರದು. ಕಾಶ್ಮೀರ ರಾಜ್ಯಕ್ಕೆ ಸಂಸ್ಕೃತಿ, ವೈಶಿಷ್ಟ ಇದೆ. ಆ ವೈಶಿಷ್ಟವನ್ನು ನಾವು ಗೌರವಿಸಿದರೆ, ಸಹಾನುಭೂತಿಯಿಂದ ಕಂಡರೆ ಈ ಸಮಸ್ಯೆಗೆ ಪರಿಹಾರವನ್ನು ಕಂಡುಹಿಡಿಯಬಹುದು. ಈ ನಡುವೆ ಉತ್ತರಕಾಶ್ಮೀರದಲ್ಲಿ ಲಷ್ಕರೆ ತಯ್ಯಿಬಾ ಸಂಘಟನೆಗೆ ಸೇರಿದ ಉಗ್ರಗಾಮಿಯೊಬ್ಬ ನೀಡಿರುವ ತಪ್ಪೊಪ್ಪಿಗೆ ಹೇಳಿಕೆ ಪ್ರಕಾರ ಕಾಶ್ಮೀರ ಗಲಭೆಗಳಲ್ಲಿ ಪಾಕಿಸ್ತಾನ ಸೇನೆಯ ಕೈವಾಡ ಇರುವುದು ಸ್ಪಷ್ಟವಾಗಿದೆ. ಇದನ್ನೆಲ್ಲಾ ಗಮನದಲ್ಲಿ ಇಟ್ಟುಕೊಂಡು ಸಂಸತ್ತಿನಲ್ಲಿ ಕರಣ್ ಸಿಂಗ್ ನೀಡಿರುವ ಸಲಹೆಯಂತೆ ಕೋಮುಸೌಹಾರ್ದ ಮತ್ತು ಭಾವೈಕ್ಯಕ್ಕೆ ಧಕ್ಕೆಯಾಗದಂತೆ ಅಲ್ಲಿನ ಸಮಸ್ಯೆಗೆ ಪರಿಹಾರವನ್ನು ಕಲ್ಪಿಸಬೇಕಾಗಿದೆ. ಸೇನಾ ಬಲಪ್ರಯೋಗವನ್ನು ತೀವ್ರಗೊಳಿಸಿದಷ್ಟು ಅಲ್ಲಿಯ ಜನತೆಯಲ್ಲಿ ಪ್ರತ್ಯೇಕತಾ ಮನೋ ಭಾವ ಅಷ್ಟೇ ತೀವ್ರವಾಗಿ ಬೆಳೆಯುತ್ತದೆ. ಅದಕ್ಕೆ ಯಾವುದೇ ಕಾರಣಕ್ಕೂ ನಾವು ಅವಕಾಶ ಕೊಡಬಾರದು. ಪರಸ್ಪರ ಮಾತುಕತೆ, ಸಂಧಾನ ಮಾರ್ಗವೊಂದೇ ಕಾಶ್ಮೀರ ಸಮಸ್ಯೆ ಪರಿಹಾರಕ್ಕೆ ಉಳಿದ ದಾರಿಯಾಗಿದೆ. ಈ ನಿಟ್ಟಿನಲ್ಲಿ ತುಂಬಾ ತಡವಾಗಿಯಾದರೂ ಕೇಂದ್ರ ಸರಕಾರ ಸರ್ವಪಕ್ಷಗಳ ಸಭೆಯನ್ನು ಕರೆದಿರುವುದು ಸೂಕ್ತವಾಗಿದೆ. ಈ ಸರ್ವಪಕ್ಷ ಸಭೆಯ ನಂತರ ಸರ್ವಪಕ್ಷ ನಿಯೋಗ ಕಾಶ್ಮೀರಕ್ಕೆ ತೆರಳಿ ಅಲ್ಲಿನ ಜನತೆಯನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News