×
Ad

ಪಾಕ್ ಪಡೆಗಳ ದೌರ್ಜನ್ಯ ವಿರೋಧಿಸಿ ಗಿಲ್ಗಿಟ್‌ನಲ್ಲಿ ಪ್ರತಿಭಟನೆ

Update: 2016-08-13 23:56 IST

ಗಿಲ್ಗಿಟ್ ಸಿಟಿ (ಪಾಕ್ ಆಕ್ರಮಿತ ಕಾಶ್ಮೀರ), ಆ. 13: ಮಾನವಹಕ್ಕು ಉಲ್ಲಂಘನೆಗಳು ಮತ್ತು ಪಾಕಿಸ್ತಾನಿ ಭದ್ರತಾ ಪಡೆಗಳ ದೌರ್ಜನ್ಯವನ್ನು ಪ್ರತಿಭಟಿಸಿ ಜನರು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ (ಪಿಒಕೆ) ಗಿಲ್ಗಿಟ್-ಬಾಲ್ಟಿಸ್ತಾನ್ ಪ್ರದೇಶದಲ್ಲಿ ಶನಿವಾರ ಬೀದಿಗಿಳಿದರು.

ಗಿಲ್ಗಿಟ್‌ನ ರಾಜಕೀಯ ಕಾರ್ಯಕರ್ತ ಬಾಬಾ ಜಾನ್ ಸೇರಿದಂತೆ 500ಕ್ಕೂ ಅಧಿಕ ಯುವಕರನ್ನು ಪಾಕಿಸ್ತಾನಿ ಭದ್ರತಾ ಪಡೆಗಳು ತಮ್ಮ ವಶಕ್ಕೆ ತೆಗೆದುಕೊಂಡಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ರಾಜಕೀಯ ಹಕ್ಕುಗಳನ್ನು ಕೇಳಿರುವುದಕ್ಕಾಗಿ ಹಾಗೂ ಗಿಲ್ಗಿಟ್‌ನ ನೆಲದಿಂದ ಪಾಕಿಸ್ತಾನದ ಸೇನೆ ಹೊರಹೋಗುವಂತೆ ಒತ್ತಾಯಿಸಿರುವುದಕ್ಕಾಗಿ ಈ ಯುವಕರನ್ನು ಜೈಲಿಗೆ ಹಾಕಲಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಗಿಲ್ಗಿಟ್-ಬಾಲ್ಟಿಸ್ತಾನ್ ಪ್ರದೇಶದ ಗಿಲ್ಗಿಟ್ ಪಟ್ಟಣ, ಅಸ್ತೋರ್, ಡಯಮರ್ ಮತ್ತು ಹುಂಝಗಳಲ್ಲಿ ಬೀದಿಗಿಳಿದ ಉದ್ರಿಕ್ತ ಪ್ರತಿಭಟನಾಕಾರರು ‘‘ಪಾಕ್-ವಿರೋಧಿ’’ ಘೋಷಣೆಗಳನ್ನು ಕೂಗಿದರು.

ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರನ್ನು ವಿರೋಧಿಸುತ್ತಿರುವುದಕ್ಕಾಗಿ ಗಿಲ್ಗಿಟ್‌ನಲ್ಲಿ ರಾಜಕೀಯ ದೌರ್ಜನ್ಯ ಮತ್ತು ಬಂಧನಗಳನ್ನು ನಡೆಸಲಾಗುತ್ತಿದೆ. ಈ ಕಾರಿಡಾರ್ ಚೀನಾ ಮತ್ತು ಪಾಕಿಸ್ತಾನದ ಪಂಜಾಬ್‌ನ ವ್ಯಾಪಾರಿಗಳಿಗೆ ಮಾತ್ರ ಪ್ರಯೋಜನಕಾರಿಯಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.

ಈ ಆರ್ಥಿಕ ಕಾರಿಡಾರ್‌ನಲ್ಲಿ ಗಿಲ್ಗಿಟ್‌ನ ಯುವಕರನ್ನು ಯಾವುದೇ ವಿಧದಲ್ಲಿ ತೊಡಗಿಸಲಾಗುತ್ತಿಲ್ಲ ಹಾಗೂ ಇದನ್ನು ಪ್ರತಿಭಟಿಸಿದವರನ್ನು ಕಠಿಣವಾಗಿ ದಮನಿಸಲಾಗುತ್ತಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News