ಮೋದಿ, ಅದಾನಿ ಹಾಗೂ ಕಪ್ಪು ಹಣ
ಅಕ್ರಮ ಸಂಪಾದನೆಯಾದ ಕಪ್ಪುಹಣವನ್ನು ಬೇರೆಡೆಗೆ ವರ್ಗಾಯಿಸುವ ಭಾರತದ ಶ್ರೀಮಂತ ಮತ್ತು ಪ್ರಭಾವಿಗಳ ಅಭ್ಯಾಸದಿಂದ ಹಲವಾರು ಕೆಟ್ಟ ಪರಿಣಾಮಗಳು ಆಗಲಿವೆ. ಬಡತನ, ಸಾಕ್ಷರತೆ ಮತ್ತು ಇತರ ಸಾಮಾಜಿಕ- ಆರ್ಥಿಕ ಸವಾಲುಗಳ ವಿರುದ್ಧ ಹೋರಾಡುವ ದೇಶದ ಶಕ್ತಿ ಕುಂಠಿತವಾಗುತ್ತದೆ. ರಾಷ್ಟ್ರೀಯ ಭದ್ರತೆಯ ಆದ್ಯತೆಗಳಿಗೆ ಸವಾಲೊಡ್ಡಲಿದೆ. ಸಾರ್ವಜನಿಕ ಬೊಕ್ಕಸಕ್ಕೆ ನಷ್ಟವಾಗಲಿದೆ ಮತ್ತು ಹಿತಕರವಾದ ಸ್ಪರ್ಧೆಗಳಿಗೆ ಅವಕಾಶವಿರುವುದಿಲ್ಲ.
2011ರಲ್ಲಿ ಮುಖ್ಯ ವಿಪಕ್ಷವಾಗಿದ್ದ ಬಿಜೆಪಿ ಕಪ್ಪು ಹಣದ ಪ್ರಮಾಣವನ್ನು ಅಧ್ಯಯನ ಮಾಡಲು ಟಾಸ್ಕ್ ಫೋರ್ಸನ್ನು ರಚಿಸಿತ್ತು ಮತ್ತು ನಂತರ ವರದಿಯನ್ನೂ ಬಿಡುಗಡೆ ಮಾಡಿತ್ತು. ನಂತರದ ವರ್ಷ ಯುಪಿಎ ಸರ್ಕಾರವು ಕಪ್ಪು ಹಣದ ಮೇಲೆ ಸಂಸತ್ತಿನಲ್ಲಿ ಶ್ವೇತಪತ್ರವನ್ನು ಮಂಡಿಸಿತ್ತು. ಈ 97 ಪುಟಗಳ ವರದಿಯನ್ನು ಮುಂದಿಡುವುದು ಮತ್ತು ಇನ್ನೂ ಅನೇಕ ಕ್ರಮಗಳನ್ನು ಸರ್ಕಾರ ಆಶ್ವಾಸನೆ ನೀಡಿತ್ತು. ಹಣಕಾಸು ಸಚಿವರಾಗಿದ್ದ ಪ್ರಣಬ್ ಮುಖರ್ಜಿ ವರ್ಷದ ನಂತರ ದೇಶದ 13ನೇ ರಾಷ್ಟ್ರಪತಿಯಾದರು. ಅವರು ವರದಿಯಲ್ಲಿ ಹೇಳಿರುವಂತೆ, ನಮ್ಮ ಜೀವನದ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಪರಿಸರದಲ್ಲಿ ಕಪ್ಪು ಹಣದ ಸಂಗ್ರಹವು ಆಡಳಿತದ ಅಂಗಗಳು ಮತ್ತು ದೇಶದ ಸಾರ್ವಜನಿಕ ನೀತಿಯನ್ನು ದುರ್ಬಲಗೊಳಿಸುವ ಪರಿಣಾಮ ಬೀರುವುದರಲ್ಲಿ ಸಂಶಯವಿಲ್ಲ. ಆಡಳಿತದ ವೈಫಲ್ಯ ಮತ್ತು ವ್ಯವಸ್ಥೆಯಲ್ಲಿನ ಭ್ರಷ್ಟಾಚಾರವು ಬಡವರ ಮೇಲೆ ಅಳತೆ ಮೀರಿ ಪರಿಣಾಮ ಬೀರುತ್ತಿದೆ. ಎಲ್ಲರನ್ನೂ ಒಳಗೊಂಡ ಅಭಿವೃದ್ಧಿ ಕಾರ್ಯತಂತ್ರದ ಯಶಸ್ಸು ನಿರ್ಣಾಯಕವಾಗಿ ಭ್ರಷ್ಟಾಚಾರ ಮತ್ತು ಕಪ್ಪುಹಣದ ಭೂತವನ್ನು ತಳಮಟ್ಟದಿಂದ ಬೇರು ಸಮೇತ ಕಿತ್ತು ಎಸೆಯುವ ನಮ್ಮ ಸಮಾಜದ ಸಾಮರ್ಥ್ಯವನ್ನು ಅವಲಂಬಿಸಿದೆ. ಈ ನಿಟ್ಟಿನಲ್ಲಿ ಹೆಚ್ಚು ಪಾರದರ್ಶಕವಾದ ಮತ್ತು ಫಲಿತಾಂಶ ಆಧಾರಿತ ಆರ್ಥಿಕ ನಿರ್ವಹಣೆ ವ್ಯವಸ್ಥೆಯತ್ತ ಭಾರತವು ವೇಗವಾಗಿ ಬದಲಾಗುವ ಅಗತ್ಯವಿದೆ.
ಶ್ವೇತಪತ್ರವು ವಿಶ್ವಬ್ಯಾಂಕ್ 2010 ಜುಲೈನಲ್ಲಿ ಬಹಿರಂಗಪಡಿಸಿದ ವರದಿಯಲ್ಲಿನ ವಿಷಯವನ್ನು ಮುಂದಿಟ್ಟಿತ್ತು. ವಿಶ್ವಬ್ಯಾಂಕ್ 1999ರಿಂದ 2007ರ ನಡುವೆ 162 ದೇಶಗಳ ಶ್ಯಾಡೋ ಇಕಾನಮಿ (ಕಾಳ ಅರ್ಥವ್ಯವಸ್ಥೆ) ಬಗ್ಗೆ ಅಧ್ಯಯನ ವರದಿ ಸಲ್ಲಿಸಿತ್ತು. ವರದಿಯಲ್ಲಿ ಹೇಳಿರುವಂತೆ ಈ ದೇಶಗಳ ಶಾಡೋ ಇಕಾನಮಿಯ (ಅಧಿಕೃತ ಜಿಡಿಪಿ ಶೇಕಡಾವಾರು ಪ್ರಕಾರ) ಸರಾಸರಿ ಗಾತ್ರವು 1999ರಲ್ಲಿ ಶೇ.34ರಷ್ಟಿದ್ದರೆ 2007ರಲ್ಲಿ ಶೇ. 31ರಷ್ಟಿತ್ತು. ಆದರೆ ಭಾರತದ ಮಟ್ಟಿಗೆ ಈ ಅಂಕಿ ಅಂಶಗಳು 1999ರಲ್ಲಿ ಶೇ. 23.2ರಷ್ಟಿದ್ದರೆ 2007ರಲ್ಲಿ ಶೇ. 20.7ರಷ್ಟಿತ್ತು. ಸರ್ಕಾರದ ಉದ್ಯಮ ನೀತಿ ಮತ್ತು ಪ್ರೋತ್ಸಾಹ ಇಲಾಖೆಯೇ 2000 ಏಪ್ರಿಲ್‌ನಿಂದ 2011 ಮಾರ್ಚ್ ನಡುವೆ ಮಾರಿಷಸ್‌ನಿಂದ ಭಾರತವು ಪಡೆದ ಒಟ್ಟಾರೆ ಮೊತ್ತದ ಶೇ. 41.8ರಷ್ಟನ್ನು ವಿದೇಶಿ ನೇರ ಹೂಡಿಕೆಯೆಂದು ಕಂಡು ಹಿಡಿದಿರುವುದನ್ನು ಒಪ್ಪಿಕೊಂಡಿದೆ.
2000 ಏಪ್ರಿಲ್ ನಿಂದ 2011 ಮಾರ್ಚ್ ನಡುವೆ ಅತ್ಯಧಿಕ ಕಪ್ಪು ಹಣ ಭಾರತದಿಂದ ಹರಿದ ಎರಡು ದೇಶಗಳು ಮಾರಿಷಸ್ (ಶೇ. 41.8) ಮತ್ತು ಸಿಂಗಾಪುರ (ಶೇ. 9.17) ಎನ್ನುವುದು ಪಟ್ಟಿಯಿಂದ ತಿಳಿಯಬಹುದು. ಮಾರಿಷಸ್ ಮತ್ತು ಸಿಂಗಾಪುರ ತಮ್ಮ ಸಣ್ಣ ಅರ್ಥವ್ಯವಸ್ಥೆಯಿಂದ ಭಾರೀ ಪ್ರಮಾಣದ ಹೂಡಿಕೆಗಳಿಗೆ ಹಣ ಹೊಂದಿಸಲು ಸಾಧ್ಯವಿಲ್ಲ. ಹೀಗಾಗಿ ಈ ಹೂಡಿಕೆಗಳು ತೆರಿಗೆ ಕಳ್ಳರ ಸುಲಭ ಸ್ವರ್ಗ ಮತ್ತು ಅಂತಿಮ ಹೂಡಿಕೆದಾರರ ವಿವರಗಳನ್ನು ಕಂದಾಯ ಅಧಿಕಾರಿಗಳಿಂದ ನಿಗೂಢವಾಗಿಟ್ಟು ಆಗಿವೆ. ಈ ಹೂಡಿಕೆದಾರರಲ್ಲಿ ಬಹುತೇಕರು ಭಾರತೀಯ ನಿವಾಸಿಗಳು ಮತ್ತು ಅವರು ರೌಂಡ್ ಟ್ರಿಪ್ಪಿಂಗ್ ಎನ್ನುವ ಪ್ರಕ್ರಿಯೆ ಮೂಲಕ ತಮ್ಮದೇ ಕಂಪೆನಿಗಳಲ್ಲಿ ಹೂಡಿಕೆ ಮಾಡಿದ್ದಾರೆ. ಈ ವಿಷಯವನ್ನು ಸರ್ಕಾರವೇ ಒಪ್ಪಿಕೊಂಡಿದೆ.
ಆದರೆ ಎಷ್ಟು ಪ್ರಮಾಣದಲ್ಲಿ ಹಣ ವರ್ಗಾವಣೆಯಾಗಿದೆ ಎನ್ನುವುದರ ವಿಶ್ವಾಸಾರ್ಹ ಅಂದಾಜು ಪ್ರಮಾಣವಿಲ್ಲ. ಇವುಗಳಲ್ಲಿ ಯಾವುದನ್ನು ಮತ್ತು ಎಷ್ಟು ಪ್ರಮಾಣವನ್ನು ಕ್ರಿಮಿನಲ್ ಚಟುವಟಿಕೆಗಳ ಜೊತೆಗೆ ತಳಕು ಹಾಕಬಹುದೆನ್ನುವುದೂ ದೊಡ್ಡ ಸಮಸ್ಯೆಯೇ. ಎಷ್ಟರ ಮಟ್ಟಿಗೆ ಕಪ್ಪು ಹಣವು ಕ್ರಿಮಿನಲ್ ದಾರಿಯಲ್ಲಿ ಹರಿದು ಬರುತ್ತಿದೆ ಮತ್ತು ಎಷ್ಟು ಶೇಕಡಾವಾರು ಕೇವಲ ತೆರಿಗೆ ಕಳ್ಳತನದಿಂದ ಬಂದಿದೆ ಎನ್ನುವ ವಿವರ ಸರ್ಕಾರದ ಬಳಿಯೂ ಇಲ್ಲ. ಭಾರತದ ಬಹುತೇಕ ಯಶಸ್ವೀ ಉದ್ಯಮಿಗಳು ವರ್ಷಗಳಿಂದ ಅನಿವಾಸಿ ಭಾರತೀಯರ ಸ್ಥಾನವನ್ನು ಪಡೆದುಕೊಂಡು ಆದಾಯ ತೆರಿಗೆ ಸಲ್ಲಿಸುವುದು, ತಮ್ಮ ಆದಾಯದ ಕುರಿತ ಅಹಿತಕರ ಪ್ರಶ್ನೆಗಳನ್ನು ಮತ್ತು ತವರು ಮತ್ತು ವಿದೇಶಗಳ ಹೂಡಿಕೆ ವಿವರಗಳನ್ನು ಸಲ್ಲಿಸುವುದನ್ನು ತಪ್ಪಿಸುತ್ತಿದ್ದಾರೆ. 2016ರಲ್ಲಿ ನ್ಯೂ ವರ್ಲ್ಡ್ ವೆಲ್ತ್ ಸಂಶೋಧನಾ ಸಂಸ್ಥೆ ಅಂದಾಜು ಮಾಡಿರುವ ಪ್ರಕಾರ 2015ರಲ್ಲಿ ಜಾಗತಿಕವಾಗಿ ಅಧಿಕ ಆದಾಯ ಹೊಂದಿರುವ ವ್ಯಕ್ತಿಗಳು ದೇಶದಿಂದ ಹೊರ ಹೋಗುವುದನ್ನು ಕಂಡ ನಾಲ್ಕನೇ ಅತೀ ದೊಡ್ಡ ದೇಶ ಭಾರತ. 2015ರಲ್ಲಿ ಭಾರತ 4000 ಮಿಲಿಯನೇರ್ ಗಳು ತಮ್ಮ ನಿವಾಸವನ್ನು ಬದಲಿಸಿದ್ದಾರೆ. ಅಲ್ಲದೆ ಭಾರತೀಯ ವ್ಯವಸ್ಥೆ ಹೇಗೆ ಕೆಲಸ ಮಾಡುತ್ತಿದೆ ಎನ್ನುವುದರ ಬಹುತೇಕ ಮಾಹಿತಿಗಳು ಹೊರಗಿನ ತನಿಖೆಗಳಿಂದಲೇ ತಿಳಿದಿದೆ. ವಿದೇಶಿ ಕಂಪೆನಿಗಳು ಭಾರತದಲ್ಲಿ ಕಾಂಟ್ರಾಕ್ಟ್ ಗಳನ್ನು ಪಡೆಯುವ ಪ್ರಯತ್ನದಲ್ಲಿ ಅಧಿಕಾರಿಗಳ ಗಮನವನ್ನು ತಮ್ಮೆಡೆಗೆ ಪ್ರಯತ್ನಿಸುವ ನಿಟ್ಟಿನಲ್ಲಿ ಈ ವಿಷಯಗಳನ್ನು ಹೊರಗಿಟ್ಟಿದ್ದಾರೆ.
ಲಂಚಗಳು ವ್ಯಾಪಕವಾಗಿವೆ ಮತ್ತು ರಾಜಕೀಯ ನಾಯಕರಿಂದ ತೊಡಗಿ ಸರ್ಕಾರಿ ಕಚೇರಿಗಳ ಬಾಗಿಲು ಕಾಯುವ ಸಿಬ್ಬಂದಿಯವರೆಗೆ ಆಹಾರ ಸರಪಣಿಯ ಪ್ರತೀ ಹಂತವನ್ನೂ ತಲುಪಿದೆ. ಎಲ್ಲರೂ ಇದರಿಂದ ಲಾಭವನ್ನೇ ಮಾಡಿಕೊಳ್ಳುವ ಕಾರಣ ದೊಡ್ಡ ಮೌನ ಇದರ ಸುತ್ತ ಹರಡಿದೆ. ಎಲ್ಲಕ್ಕಿಂತ ಹೆಚ್ಚಾಗಿ ಭಾರತದ ಭ್ರಷ್ಟ ವ್ಯವಸ್ಥೆಯಿಂದ ಒಬ್ಬ ವಿಷಲ್ ಬ್ಲೋವರ್ (ಬದಲಾವಣೆಯ ಹರಿಕಾರ) ಕೂಡ ಹುಟ್ಟದೆ ಇರುವುದನ್ನೂ ಇದು ವಿವರಿಸುತ್ತದೆ. 2014 ಮೇ 28ರಂದು ಕಚೇರಿಯಲ್ಲಿ ಮೊದಲ ದಿನವೇ ಪ್ರಧಾನಿ ನರೇಂದ್ರ ಮೋದಿಯ ಬಿಜೆಪಿ ಸರ್ಕಾರವು ಪ್ರಮುಖ ನಿರ್ಧಾರ ಘೋಷಿಸಿದೆ. ನಿವೃತ್ತ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ನೇತೃತ್ವದಲ್ಲಿ ಕಪ್ಪುಹಣದ ವಿಷಯವನ್ನು ಗಮನಿಸಲು ವಿಶೇಷ ತನಿಖಾ ತಂಡ ರಚಿಸಲಾಗುವುದು ಎನ್ನುವ ಘೋಷಣೆ. ಆಡಳಿತ ಯುಪಿಎ ಸರ್ಕಾರದ ವಿರುದ್ಧ ಚುನಾವಣೆಗೆ ಮುನ್ನ ದೊಡ್ಡ ಪ್ರಮಾಣದ ಪ್ರಚಾರಾಭಿಯಾನದಲ್ಲಿ ಮೋದಿ ಅತೀ ಹೆಚ್ಚಾಗಿ ಮಾತನಾಡಿದ್ದೇ ಕಪ್ಪುಹಣದ ಬಗ್ಗೆ. ದೇಶದಲ್ಲಿ ಭ್ರಷ್ಟಾಚಾರದ ವಿರುದ್ಧ ಎದ್ದಿದ್ದ ದೊಡ್ಡ ಅಲೆಯ ಮೇಲೆ ಅವರು ಸವಾರಿ ಮಾಡಿದ್ದರು. ಈ ಒಟ್ಟಾರೆ ಚಳವಳಿಯೇ ರಾಜಕೀಯೇತರ ಮತ್ತು ನಾಗರಿಕ ಸಮಾಜದ ಚಳವಳಿಯಾಗಿತ್ತು. ಮೋದಿ ಅದರ ಅತೀ ದೊಡ್ಡ ರಾಜಕೀಯ ಲಾಭ ಪಡೆದುಕೊಂಡು ಭಾರತದಲ್ಲಿ ಅತೀ ದುಬಾರಿ ಪ್ರಚಾರಾಭಿಯಾನ ಆರಂಭಿಸಿದರು. ಚಾರ್ಟರ್ಡ್ ವಿಮಾನ, ಹೆಲಿಕಾಪ್ಟರ್ ಗಳು, ಹೋಲೋಗ್ರಾಂಗಳು, ಮಾಧ್ಯಮ ಪ್ರಚಾರ, ಸಾಟಿಯೇ ಇಲ್ಲದ ಸಾಮಾಜಿಕ ಮಾಧ್ಯಮ ಮತ್ತು ಇಂಟರ್ನೆಟ್ ಕಾರ್ಯತಂತ್ರ ಇತ್ಯಾದಿ. ಹೀಗಾಗಿ ತಮ್ಮ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದ ಮೊದಲ ದಿನವೇ ಅವರು ವಿಶೇಷ ತನಿಖಾ ತಂಡ ರಚಿಸುವ ಘೋಷಣೆ ಮಾಡಿದ್ದು ಅಚ್ಚರಿಯ ವಿಷಯವೇನೂ ಆಗಿರಲಿಲ್ಲ.
ಆದರೆ ಈವರೆಗೆ ವಿಶೇಷ ತನಿಖಾ ತಂಡದ ಮುಂದೆ ಬಂದಿರುವ ಅತೀ ದೊಡ್ಡ ಕಪ್ಪು ಹಣದ ಪ್ರಕರಣವೆಂದರೆ ಗೌತಮ್ ಅದಾನಿ ಪ್ರಾಯೋಜಿತ ಅದಾನಿ ಗ್ರೂಪ್‌ನದ್ದಾಗಿದೆ ಎನ್ನುವುದು ದೊಡ್ಡ ವ್ಯಂಗ್ಯ. ಅದಾನಿ ಅವರು ಮೋದಿಯ ಅತೀ ಆಪ್ತ ಸಹಚರರಲ್ಲಿ ಒಬ್ಬರು. ಅವರದ್ದೇ ಚಾರ್ಟರ್ಡ್ ವಿಮಾನದಲ್ಲಿ ಪ್ರಧಾನಿಯಾಗುವ ಮೊದಲು ಮೋದಿ ಭಾರತದಾದ್ಯಂತ ಸುತ್ತಿ ಆಗಿನ ಸರ್ಕಾರದ ಮೇಲೆ ಭ್ರಷ್ಟಾಚಾರದ ವಿರುದ್ಧ ನಿಷ್ಕ್ರಿಯರಾಗಿರುವ ಆರೋಪ ಹೊರಿಸಿದ್ದರು. ಅದಾನಿ ಗ್ರೂಪ್ ದಕ್ಷಿಣ ಕೊರಿಯ ಮತ್ತು ಚೀನಾದಿಂದ ವಿದ್ಯುತ್ ಪರಿಕರಗಳನ್ನು ಆಮದು ಮಾಡಲು ವಾಸ್ತವಕ್ಕಿಂತ ಅಧಿಕ ಶುಲ್ಕ ತೋರಿಸಿ ಸುಮಾರು ರೂ. 5000 ಕೋಟಿಯನ್ನು ತೆರಿಗೆ ಸ್ವರ್ಗಗಳಿಗೆ ಕೊಂಡೊಯ್ದಿರುವ ಆರೋಪವಿದೆ. ಡೈರೆಕ್ಟರೇಟ್ ಆಫ್ ರೆವೆನ್ಯೂ ಇಂಟೆಲಿಜೆನ್ಸಿ ಮತ್ತು ಎನ್ಫೋರ್ಸ್‌ಮೆಂಟ್ ಡೈರೆಕ್ಟರೇಟ್ ಈ ಬಗ್ಗೆ ಕಪ್ಪು ಹಣದ ವಿಶೇಷ ತನಿಖಾ ತಂಡಕ್ಕೆ ವಿವರ ಸಲ್ಲಿಸಿದೆ. ವಿಶೇಷ ತನಿಖಾ ತಂಡದ ಜೊತೆಗಿರುವ ಹಿರಿಯ ಎನ್ಫೋರ್ಸ್‌ಮೆಂಟ್ ಡೈರೆಕ್ಟರೇಟ್ ಅಧಿಕಾರಿಯ ಪ್ರಕಾರ ಅದಾನಿ ಪ್ರಕರಣಕ್ಕೆ ತಾತ್ವಿಕ ಅಂತ್ಯ ಸಿಕ್ಕಲ್ಲಿ ಸಂಸ್ಥೆ ರೂ. 15,000 ಕೋಟಿ ದಂಡ ಕಟ್ಟಬೇಕಾಗಿ ಬರಬಹುದು. “ಇದು ಬಹಳ ನಾಜೂಕಾದ ಪ್ರಕರಣ” ಎಂದು ಅವರು ಹೇಳಿದ್ದಾರೆ. ಸಂಸ್ಥೆಯು ರೂ. 5,468 ಕೋಟಿ ಹಣವನ್ನು ಮಾರಿಷಸ್‌ಗೆ ದುಬೈ ಮೂಲಕ ವರ್ಗಾಯಿಸಿದೆ ಎನ್ನಲಾಗಿದೆ. ಅದಾನಿ ಗ್ರೂಪ್ ಈ ಆರೋಪವನ್ನು ನಿರಾಕರಿಸಿದೆ. ಆದರೆ ಭ್ರಷ್ಟಾಚಾರದ ವಿರೋಧದಲ್ಲಿ ನಿತ್ಯವೂ ಪ್ರಚಾರ ಮಾಡುತ್ತಿದ್ದ ಮೋದಿ ಮೌನವಾಗಿದ್ದಾರೆ.
ಮೋದಿ ಪ್ರಧಾನಿ ಕಚೇರಿಗೆ ಹೋದ ಮೇಲೆ ಅಹಮದಾಬಾದಲ್ಲಿ ಅದಾನಿ ವಿರುದ್ಧ ಪ್ರಾಥಮಿಕ ಮೊಕದ್ದಮೆಯನ್ನು ನೋಂದಾಯಿಸಿಕೊಂಡು ಡಿಆರ್‌ಐಗೆ ಪತ್ತೆ ಮಾಡಿದ ವಿವರಗಳನ್ನು ನೀಡಿದ ಮೇಲೆ ಎನ್ಫೋರ್ಸ್‌ಮೆಂಟ್ ಡೈರೆಕ್ಟರೇಟ್ ನಲ್ಲಿ ಏನಾಗಿದೆ ಎನ್ನುವುದು ಗೊತ್ತೇ ಇದೆ. ಅಹಮದಾಬಾದ್ ಶಾಖೆಯ ನೇತೃತ್ವ ವಹಿಸಿದ್ದ ಎನ್ಫೋರ್ಸ್‌ಮೆಂಟ್ ಡೈರೆಕ್ಟರೇಟ್ ಅಧಿಕಾರಿಯ ಮೇಲೆ ಸಿಬಿಐ ದಾಳಿಯಾಗಿದೆ. ಅಧಿಕಾರಿ ಮೇಲೆ ಅಕ್ರಮ ಆಸ್ತಿ ಸಂಗ್ರಹದ ಆರೋಪ ಹೊರಿಸಲಾಗಿದೆ. ಆದರೆ ತಿಂಗಳುಗಳೇ ಕಳೆದರೂ ತನಿಖೆಯ ಬಳಿಕವೂ ಅಕ್ರಮ ಆಸ್ತಿಯ ಆರೋಪವನ್ನು ಸಾಬೀತು ಮಾಡಲು ಸಿಬಿಐಗೆ ಸಾಧ್ಯವಾಗಿಲ್ಲ. ಮುಂಬೈ ಪ್ರಾದೇಶಿಕ ಕಚೇರಿಯ ಇಬ್ಬರು ಹಿರಿಯ ಅಧಿಕಾರಿಗಳು ಅಹಮದಾಬಾದ್ ನಲ್ಲಿ ತನಿಖೆಯ ನಿಗಾ ವಹಿಸಿದ್ದರು. ಅವರನ್ನು ಏಜೆನ್ಸಿಯಿಂದಲೇ ಹೊರ ಹಾಕಲಾಗಿದೆ. ಪ್ರಕರಣ ತೆರೆದುಕೊಂಡಾಗ ಎನ್ಫೋರ್ಸ್‌ಮೆಂಟ್ ಡೈರೆಕ್ಟರೇಟ್ ನೇತೃತ್ವ ವಹಿಸಿದ್ದ ರಾಜನ್ ಎಸ್ ಕಟೋಚ್ ಅವಧಿಯನ್ನು ಪೂರ್ಣಗೊಳ್ಳುವ ಮೊದಲೇ ಅವರನ್ನು ಬದಲಿಸಲಾಯಿತು. ಅದಾನಿ ಪ್ರಕರಣ ಹೊರತಾಗಿ ಅಹಮದಾಬಾದ್ ಎನ್ಫೋರ್ಸ್‌ಮೆಂಟ್ ಡೈರೆಕ್ಟರೇಟ್ ತನಿಖಾ ಅಧಿಕಾರಿಗಳು ಇನ್ನೂ ಹಲವು ದೊಡ್ಡ ಹಣ ದುರ್ವ್ಯವಹಾರದ ಪ್ರಕರಣಗಳನ್ನು ಗುಜರಾತಲ್ಲಿ ತನಿಖೆ ಮಾಡುತ್ತಿದ್ದಾರೆ.
ಈ ಎಲ್ಲಾ ಅಕಾಲಿಕ ವರ್ಗಾವಣೆಯ ಹಿಂದಿನ ಕೆಟ್ಟ ಉದ್ದೇಶವನ್ನು ಸಾಬೀತು ಮಾಡುವುದು ಸಾಧ್ಯವಿಲ್ಲ. ಆದರೆ ಮೋದಿ ಸರ್ಕಾರವು ಭಾರತಕ್ಕೆ ಕಪ್ಪು ಹಣವನ್ನು ವಾಪಾಸು ತರುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವುದಕ್ಕೆ ವಿಶ್ವಾಸಾರ್ಹ ಸಾಕ್ಷ್ಯಗಳೇನೂ ಇಲ್ಲ. ಅಥವಾ ಅದು ಅತೀ ದೊಡ್ಡ ಕಪ್ಪು ಹಣದ ಪ್ರಕರಣದ ತನಿಖೆ ಹೇಗೆ ಮಾಡಲಿದೆ ಎನ್ನುವುದನ್ನು ಇನ್ನೂ ಕಾದು ನೋಡಬೇಕಿದೆ.
ಕೃಪೆ:thewire.in