×
Ad

ಸ್ವಿಸ್ ಪ್ರಜೆಯಿಂದ ರೈಲಿಗೆ ಬೆಂಕಿ; ಪ್ರಯಾಣಿಕರಿಗೆ ಇರಿತ

Update: 2016-08-14 23:57 IST

ಜಿನೇವಾ, ಆ.13: ಸ್ವಿಟ್ಜರ್‌ಲ್ಯಾಂಡ್‌ನ ಪೂರ್ವ ಪ್ರಾಂತದಲ್ಲಿ ಶನಿವಾರ ಚಲಿಸುತ್ತಿದ್ದ ರೈಲೊಂದರಲ್ಲಿ 27 ವರ್ಷದ ಸ್ವಿಸ್ ಪ್ರಜೆಯೊಬ್ಬ ದಹನಶೀಲ ದ್ರಾವಣವೊಂದನ್ನು ಬಳಸಿ ಬೋಗಿಗೆ ಬೆಂಕಿ ಹಚ್ಚಿದ್ದಲ್ಲದೆ, ಕೆಲವು ಸಹಪ್ರಯಾಣಿಕರಿಗೆ ಚೂರಿಯಿಂದ ಇರಿದು ಗಾಯಗೊಳಿಸಿದ್ದಾನೆ. ಘಟನೆಯಲ್ಲಿ ಗಂಭೀರವಾದ ಸುಟ್ಟಗಾಯಗಳಿಂದ ದಾಳಿಕೋರ ಹಾಗೂ ಇರಿತಕ್ಕೊಳಗಾದ ಓರ್ವ ಮಹಿಳೆ ಸಾವನ್ನಪ್ಪಿದ್ದಾರೆ.

ಲಿಶೆನ್‌ಸ್ಟೈನ್‌ಗೆ ತಾಗಿಕೊಂಡಿರುವ ಸ್ವಿಟ್ಜರ್‌ಲ್ಯಾಂಡ್‌ನ ಗಡಿಯಲ್ಲಿರುವ ಸಾಲೆಝ್ ರೈಲು ನಿಲ್ದಾಣದ ಸಮೀಪ , ಶನಿವಾರ ಸ್ಥಳೀಯ ಕಾಲಮಾನ 2:20ರ ವೇಳೆಗೆ ಈ ದಾಳಿ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಘಟನೆಯಲ್ಲಿ ಕನಿಷ್ಠ 6 ಮಂದಿಗೆ ಇರಿತದ ಹಾಗೂ ಸುಟ್ಟ ಗಾಯಗಳಾಗಿದ್ದು ಅವರೆಲ್ಲರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆಯೆಂದು ತಿಳಿದುಬಂದಿದೆ. ಗಾಯಾಳುಗಳಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆಯೆನ್ನಲಾಗಿದೆ.

ದಾಳಿಗೊಳದವರೆಲ್ಲರೂ 17ರಿಂದ 50 ವರ್ಷದೊಳಗಿನವರಾಗಿದ್ದು, ಅವರಲ್ಲಿ ಮೂವರು ಮಹಿಳೆಯರೂ ಇದ್ದಾ. ದಾಳಿ ನಡೆದ ಸಂದರ್ಭದಲ್ಲಿ ರೈಲಿನಲ್ಲಿ ನೂರಕ್ಕೂ ಅಧಿಕ ಮಂದಿಯಿದ್ದರೆಂದು ಪೊಲೀಸ್ ಹೇಳಿಕೆ ತಿಳಿಸಿದೆ. ಘಟನೆ ನಡೆದ ಬೆನ್ನಲ್ಲೇ ಪೊಲೀಸರು, ಅಗ್ನಿಶಾಮಕದಳ ಸೇರಿದಂತೆ ಭಾರೀ ಸಂಖ್ಯೆಯ ರಕ್ಷಣಾ ಕಾರ್ಯಕರ್ತರು ಸ್ಥಳಕ್ಕೆ ಧಾವಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News