ಉರ್ದು,ಅರೆಬಿಕ್ ಭಾಷೆಗಳನ್ನು ಕಲಿಯುತ್ತಿರುವ ಎನ್.ಐ.ಎ. ಅಧಿಕಾರಿಗಳು !
ಕೊಲ್ಕತಾ, ಆ.16: ಜಮಾಅತುಲ್ ಮುಜಾಹಿದೀನ್(ಜೆಎಂಬಿ) ಸಹಿತ ಭಯೋತ್ಪಾದಕ ಸಂಘಟನೆಗಳ ಚಟುವಟಿಕೆಗಳು ಭಾರತದ ಪೂರ್ವ ಕ್ಷೇತ್ರಗಳಲ್ಲಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಎನ್‌ಐಎ ಅಧಿಕಾರಿಗಳು ಉರ್ದು ಅರೇಬಿಕ್, ಪರ್ಶಿಯನ್ ಭಾಷೆಗಳನ್ನು ಕಲಿಯುತ್ತಿದ್ದಾರೆ ಎಂದು ವರದಿಯಾಗಿದೆ. 2014ರಲ್ಲಿ ಪಶ್ಚಿಮ ಬಂಗಾಳದ ಬಿರ್ ಬುಂ ಜಿಲ್ಲೆಯ ಖಗ್ರಾಗ್‌ನಲ್ಲಿ ನಡೆದಿರುವ ಸ್ಫೋಟದ ಕಾರಣದಿಂದಾಗಿ ಈ ಭಾಷೆಯನ್ನು ಅರಿಯುವ ಪ್ರಾಮುಖ್ಯತೆ ಅಧಿಕಾರಿಗಳಿಗೆ ಮನವರಿಕೆಯಾಯಿತು ಎನ್ನಲಾಗಿದೆ.
ಖಗ್ರಾಗಿನಲ್ಲಿ ನಡೆದ ಸ್ಫೋಟದ ಬಳಿಕ ಪ್ರದೇಶದಲ್ಲಿ ಉರ್ದು, ಪರ್ಶಿಯನ್ ಭಾಷೆಯ ಹಲವಾರು ಕರಪತ್ರಗಳು ಪತ್ತೆಯಾಗಿದ್ದವು. ಈ ಭಾಷೆ ತಿಳಿಯದ್ದರಿಂದ ಅವುಗಳಲ್ಲಿ ಏನು ಬರೆದಿದೆ ಎಂದು ಹೊರಗಿನ ಭಾಷಾ ತಜ್ಞರ ನೆರವನ್ನು ಪಡೆಯಬೇಕಾಗಿ ಬಂದಿತ್ತು. ಎನ್‌ಐಎ ಅಧಿಕಾರಿಗಳು ಅವರವರ ಮಾತೃಭಾಷೆ ಹೊರತಾಗಿ ಹಿಂದಿ ಮತ್ತು ಇಂಗ್ಲಿಷ್ ಭಾಷೆಯ ಜ್ಞಾನವನ್ನು ಮಾತ್ರ ಹೊಂದಿದ್ದಾರೆ. ಹೆಚ್ಚುವರಿಯಾಗಿ ಕಲಿಯುವ ಪ್ರತಿಯೊಂದು ಭಾಷೆಗಳಿಂದ ಭಯೋತ್ಪಾದನೆಯನ್ನು ತಡೆಯಲು ಸಾಧ್ಯವಿದೆ ಎಂದು ಭಾಷಾ ಕಲಿಕಾ ತರಗತಿಗಳನ್ನು ಅಧಿಕಾರಿಗಳಿಗಾಗಿ ಆರಂಭಿಸಲಾಗಿದೆ ಎಂದು ವರದಿ ತಿಳಿಸಿದೆ.