×
Ad

ಕೃಷಿ ಉತ್ಪನ್ನ ನಷ್ಟದ ಪ್ರಮಾಣ ಕೃಷಿ ಬಜೆಟ್ನ ಮೂರು ಪಟ್ಟು

Update: 2016-08-17 23:12 IST

ಭಾರತದ ಪ್ರಮುಖ ಕೃಷಿ ಉತ್ಪನ್ನಗಳ ಕೊಯ್ಲು ಮತ್ತು ಕೊಯ್ಲೋತ್ತರ ಹಂತದಲ್ಲಿ ಪ್ರತಿ ವರ್ಷ ನಷ್ಟವಾಗುವ ಪ್ರಮಾಣದ ಮೌಲ್ಯ ಎಷ್ಟು ಗೊತ್ತೇ? ಬರೋಬ್ಬರಿ 92,651 ಕೋಟಿ ರೂಪಾಯಿ. ಇದು ಕೂಡಾ ಯಾವುದೋ ಸಂಘ ಸಂಸ್ಥೆಗಳ ಅಂದಾಜು ಅಥವಾ ಅತಿ ರಂಜಿತ ಅಂಕಿ ಅಂಶವಲ್ಲ. ಸರಕಾರದ ಕೃಷಿ ಸಂಸ್ಕರಣೆ ಕೈಗಾರಿಕೆಗಳ ಸಚಿವಾಲಯ ಇತ್ತೀಚೆಗೆ ಬಿಡುಗಡೆ ಮಾಡಿದ ಅಧಿಕೃತ ಮಾಹಿತಿ.

ದೇಶದ ಪ್ರಸಕ್ತ ಬಜೆಟ್‌ನಲ್ಲಿ ಕೃಷಿ ಕ್ಷೇತ್ರಕ್ಕೆ ನಿಗದಿ ಪಡಿಸುವ ಮೊತ್ತದ ಮೂರು ಪಟ್ಟು ಮೌಲ್ಯದ ಆಹಾರಧಾನ್ಯ ಯಾರ ಬಳಕೆಗೂ ಇಲ್ಲದೇ ಮಣ್ಣುಪಾಲಾಗುತ್ತಿವೆ. 2015-16ನೇ ಹಣಕಾಸು ವರ್ಷದಲ್ಲಿ 24,909 ಕೋಟಿ ರೂಪಾಯಿ ಇದ್ದ ಕೃಷಿ ವಲಯ ಬಜೆಟ್, 2016-17ರಲ್ಲಿ 35,984 ಕೋಟಿ ರೂ.ಗೆ ಹೆಚ್ಚಿದ್ದು, ಇದರ ಮೂರು ಪಟ್ಟು ಮೌಲ್ಯದ ಕೃಷಿ ಉತ್ಪನ್ನಗಳು ವ್ಯರ್ಥವಾಗುತ್ತಿವೆ.

ದೇಶದಲ್ಲಿ ಪ್ರತಿ ವರ್ಷ ಸುಮಾರು 41,811 ಕೋಟಿ ರೂಪಾಯಿ ಮೌಲ್ಯದ ಅಂದರೆ ದೇಶದಲ್ಲಿ ಬೆಳೆಯುವ ಹಣ್ಣು ಮತ್ತು ತರಕಾರಿಯ ಒಟ್ಟು ಪ್ರಮಾಣದ ಶೇ. 16ರಷ್ಟು ಹೀಗೆ ನಷ್ಟವಾಗುತ್ತಿವೆ. 2012ರಿಂದ 2014ರವರೆಗಿನ ಹಣ್ಣು-ತರಕಾರಿ ಉತ್ಪಾದನೆ ಅಂಕಿ ಅಂಶಗಳ ಆಧಾರದಲ್ಲಿ ಈ ಪ್ರಮಾಣವನ್ನು ಅಂದಾಜು ಮಾಡಲಾಗಿದ್ದು, ಸಗಟು ಬೆಲೆಯ ಆಧಾರದಲ್ಲಿ ಲೆಕ್ಕ ಹಾಕಿದರೆ 40,811 ಕೋಟಿ ರೂಪಾಯಿ ನಷ್ಟವಾಗುತ್ತಿದೆ. ಪಂಜಾಬ್‌ನ ಲೂಧಿಯಾನಾದಲ್ಲಿರುವ ಸೆಂಟ್ರಲ್ ಇನ್‌ಸ್ಟಿಟ್ಯೂಟ್ ಆಫ್ ಪೋಸ್ಟ್ ಹಾರ್ವೆಸ್ಟ್ ಇಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿ ಈ ಅಂದಾಜು ಮಾಡಿದೆ.

ದೊಡ್ಡ ಪ್ರಮಾಣದಲ್ಲಿ ವ್ಯರ್ಥ

ಸರಕಾರ ಈ ಮೊದಲು ನಡೆಸಿದ ಅಧ್ಯಯನದ ಪ್ರಕಾರ, ದೇಶದಲ್ಲಿ ಬೆಳೆಯುವ ಹಣ್ಣು ಮತ್ತು ತರಕಾರಿಗಳ ಪೈಕಿ ಶೇ. 5ರಿಂದ 12ರಷ್ಟು ವ್ಯರ್ಥವಾಗುತ್ತಿವೆ ಎಂದು ಅಂದಾಜು ಮಾಡಲಾಗಿತ್ತು. ಆಹಾರ ಸಂಸ್ಕರಣಾ ಸಚಿವಾಲಯದ ಮಾಹಿತಿಯ ಪ್ರಕಾರ, 3,942 ಕೋಟಿ ರೂಪಾಯಿ ಮೌಲ್ಯದ ಅಂದರೆ ಒಟ್ಟು ಉತ್ಪಾದನೆಯ ಶೇಕಡ 7ರಷ್ಟು ಮಾಂಸ ನಷ್ಟವಾಗುತ್ತಿದೆ. ಅಂದರೆ ಈ ಪೈಕಿ ಶೇ. 60ರಷ್ಟು ದಾಸ್ತಾನಿನ ವೇಳೆ ಹಾಳಾಗುತ್ತದೆ.

2007ರಿಂದ 2014ರ ಅವಧಿಯಲ್ಲಿ ನಾಲ್ಕು ಕೇಂದ್ರ ಸರಕಾರಿ ಯೋಜನೆಗಳ ಅನ್ವಯ ನಿರ್ಮಿಸಿದ ಶೀತಲೀಕರಣ ಘಟಕಗಳ ಸಂಖ್ಯೆ ಏಳು ಸಾವಿರಕ್ಕೂ ಅಧಿಕ. ಸರಬರಾಜು ವೇಳೆ ಆಹಾರ ಉತ್ಪನ್ನಗಳು ನಾಶವಾಡುವುದನ್ನು ತಡೆಯಲು ಈ ವ್ಯವಸ್ಥೆ ಕಲ್ಪಿಸಲಾಗಿತ್ತು. ಈ ಯೋಜನೆಗಳ ಅಂದಾಜು ವೆಚ್ಚ 2,395 ಕೋಟಿ ರೂಪಾಯಿ. 2014 ರಿಂದ 2016ರ ಅವಧಿಯಲ್ಲಿ ಇಂಥ 609 ಯೋಜನೆಗಳನ್ನು ಮಂಜೂರು ಮಾಡಲಾಗಿದ್ದು, ಇದಕ್ಕೆ 660 ಕೋಟಿ ರೂಪಾಯಿಗಳ ಸಬ್ಸಿಡಿ ನೀಡಲಾಗಿದೆ.

ರಾಷ್ಟ್ರೀಯ ಶೀತಲೀಕರಣ ಘಟಕಗಳ ಅಭಿವೃದ್ಧಿ ಕೇಂದ್ರ ಎಂಬ ಸರಕಾರಿ ಸಂಸ್ಥೆ ಹೇಳಿರುವ ಪ್ರಕಾರ, ಶೀತಲೀಕರಣ ಘಟಕಗಳ ನಿರ್ಮಾಣಕ್ಕೆ ಭಾರಿ ಮೊತ್ತದ ಹಣ ವಿನಿಯೋಗಿಸಲಾಗಿದೆ.

ಐದು ಪ್ರಮುಖ ಅಂಶಗಳ ಪೈಕಿ ಮೂರು, ಪ್ಯಾಕ್ ಹೌಸ್, ಹಣ್ಣುಮಾಡುವ ಚೇಂಬರ್‌ಗಳು ಹಾಗೂ ಹಣ್ಣು ಸಾಗಾಟದ ವಾಹನಗಳನ್ನು ಯಾವುದೇ ಸರಕಾರಿ ನೆರವು ಇಲ್ಲದೆ ಅಭಿವೃದ್ಧಿಪಡಿಸಲಾಗಿದೆ ಎಂದು ಅಖಿಲ ಭಾರತ ಶೀತಲೀಕರಣ ಸರಣಿ ಮೂಲಸೌಕರ್ಯ ಸಾಮರ್ಥ್ಯ (ಸ್ಥಿತಿಗತಿಗಳ ಮೌಲ್ಯಮಾಪನ ಮತ್ತು ಅಂತರ) ಕುರಿತ ವರದಿ ಸ್ಪಷ್ಟಪಡಿಸುತ್ತದೆ.

ಕೃಪೆ: IndiaSpend

Writer - ಚಾರ್ಲಿ ಮೊಲೋನಿ

contributor

Editor - ಚಾರ್ಲಿ ಮೊಲೋನಿ

contributor

Similar News