×
Ad

ದಹಿಹಂಡಿಗೆ ನಿರ್ಬಂಧ: ಸುಪ್ರೀಂ ಆದೇಶಕ್ಕೆ ಶಿವಸೇನೆ ಕಿಡಿ

Update: 2016-08-20 19:43 IST

ಮುಂಬೈ,ಆ.20: ಮಹಾರಾಷ್ಟ್ರದಲ್ಲಿ ದಹಿ ಹಂಡಿ (ಮೊಸರುಕುಡಿಕೆ) ಉತ್ಸವಕ್ಕೆ ಸುಪ್ರೀಂಕೋರ್ಟ್ ನಿಯಂತ್ರಣಗಳನ್ನು ವಿಧಿಸಿರುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಶಿವಸೇನೆಯು, ಹಿಂದೂ ಉತ್ಸವಗಳ ಆಚರಣೆಗೆ ಅಡ್ಡಗಾಲು ಹಾಕುವ ಇಂತಹ ಪ್ರಯತ್ನಗಳನ್ನು ಜನತೆ ವಿಫಲಗೊಳಿಸಲಿದ್ದಾರೆಂದು ಕಿಡಿಕಾರಿದೆ.

   ‘‘ಗಣೇಶೋತ್ಸವ, ದಹಿಹಂಡಿ ಹಾಗೂನವರಾತ್ರಿ ಹಬ್ಬಗಳು ನಮ್ಮ ನಂಬಿಕೆಗಳ ಭಾಗಗಳಾಗಿವೆ. ನಮ್ಮನ್ನು ಆಳುವ ನ್ಯಾಯಾಲಯಗಳು ಕನಿಷ್ಠ ಪಕ್ಷ ಈ ವಿಷಯಗಲ್ಲಾದರೂ ತಮ್ಮ ಲಕ್ಷಣ ರೇಖೆಯನ್ನು ದಾಟಕೂಡದು ಎಂದು ಶಿವಸೇನೆಯ ತಿಳಿಸಿದೆ.

ಜನತೆ ತಮ್ಮ ಸರಕಾರವನ್ನು ಪ್ರಜಾತಾಂತ್ರಿಕ ರೀತಿಯಲ್ಲಿ ಆಯ್ಕೆ ಮಾಡಿದ್ದಾರೆ. ಸರಕಾರವು ಅದರ ಕೆಲಸವನ್ನು ಮಾಡಲಿ. ಸರಕಾರದ ಮುಖ್ಯಸ್ಥರಿಗೆ ಯಾವುದು ಸರಿ,ಯಾವುದು ತಪ್ಪು ಎಂಬುದು ಗೊತ್ತಿದೆ. ಒಂದು ವೇಳೆ ಸರಕಾರದ ತಲೆಯನ್ನು ಕತ್ತರಿಸುವ ಹಾಗೂ ಪ್ರಜಾಪ್ರಭುತ್ವವನ್ನು ಕೊಲೆ ಮಾಡುವ ಪ್ರಯತ್ನಗಳು ನಡೆದಲ್ಲಿ, ರಾಷ್ಟ್ರೀಯ ವ್ಯವಸ್ಥೆಯ ಎಲ್ಲಾ ಸ್ತರಗಳು ಕುಸಿದುಬೀಳಲಿವೆ’’ ಎಂದು ಅದು ಹೇಳಿದೆ.

  ‘‘ ಹಿಂದೂಗಳ ಹಬ್ಬ ಹಾಗೂ ಉತ್ಸವಗಳು ನಡೆಯಲಿವ.ಅವುಗಳನ್ನು ತಡೆಯುವ ಪ್ರಯತ್ನಗಳನ್ನು ಜನತೆ ವಿಫಲಗೊಳಿಸುವರು, ಈ ಪ್ರತಿಭಟನೆಯ ನೇತೃತ್ವವನ್ನು ಶಿವಸೇನೆ ವಹಿಸಿಕೊಳ್ಳಲಿದೆಯೆಂದು ಶಿವಸೇನೆಯು ಶನಿವಾರ ತನ್ನ ಮುಖವಾಣಿಯಾದ ಸಾಮ್ನಾದಲ್ಲಿ ಪ್ರಕಟವಾದ ಸಂಪಾದಕೀಯದಲ್ಲಿ ತಿಳಿಸಿದೆ. ಸರಕಾರದ ಪಾತ್ರವನ್ನು ನ್ಯಾಯಾಲಯಗಳು ಕೈಗೆತ್ತಿಕೊಂಡಾಗ, ಕೆಸರೆರೆಚಾಟವನ್ನು ಎದುರಿಸಲು ಅವು ಸಿದ್ಧವಾಗಿರಬೇಕು’’ ಎಂದು ಶಿವಸೇನೆ ಹೇಳಿದೆ.

   ಈ ಕಾರಣದಿಂದಾಗಿಯೇ ಇತ್ತೀಚಿನ ದಿನಗಳಲ್ಲಿ ಸರಕಾರವು ಕೈಗೊಳ್ಳುವುದೆಂದು ನಿರೀಕ್ಷಿಸಲಾಗಿದ್ದ ಎಲ್ಲಾ ನಿರ್ಧಾರಗಳನ್ನು ನ್ಯಾಯಾಲಯಗಳು ತೆಗೆದುಕೊಳ್ಳುತ್ತಿವೆ ಎಂದು ಅದು ಆಕ್ಷೇಪ ವ್ಯಕ್ತಪಡಿಸಿದೆ. ಉತ್ಸವಗಳ ಬಗ್ಗೆ ಕೋರ್ಟ್‌ಗಳು ಹೊರಡಿಸುವ ‘ಫತ್ವಾ ’(ಆದೇಶ)ಗಳ ಬಗ್ಗೆಯೂ ಜನತೆಯಲ್ಲಿ ತೀವ್ರ ಆಕ್ರೋಶವಿದೆಯೆಂದು ಅದು ಹೇಳಿದೆ.

   ದಹಿಹಂಡಿ ಉತ್ಸವಕ್ಕೆ ಸಂಬಂಧಿಸಿ ಸುಪ್ರೀಂಕೋರ್ಟ್‌ನ ಮುಂದಿನ ಆಲಿಕೆಯ ವೇಳೆ ಮಹಾರಾಷ್ಟ್ರ ಸರಕಾರದ ಅಡ್ವೋಕೇಟ್ ಜನರಲ್ ರಾಜ್ಯ ಸರಕಾರವನ್ನು ಪ್ರತಿನಿಧಿಸಲಿದ್ದಾರೆಂದು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ದಹಿಹಂಡಿ ಸಮನ್ವಯ ಸಮಿತಿಯ ಸದಸ್ಯರಿಗೆ ಭರವಸೆ ನೀಡಿದ ಒಂದು ದಿನಗ ಬಳಿಕ ಶಿವಸೇನೆಯಿಂದ ಈ ಪ್ರತಿಕ್ರಿಯೆ ಹೊರಬಿದ್ದಿದೆ.

    ಶ್ರೀಕೃಷ್ಣ ಜನ್ಮಾಷ್ಟಮಿ ಸಂದರ್ಭದಲ್ಲಿ ಆಯೋಜಿಸಲಾಗುವ ದಹಿಹಂಡಿ (ಮೊಸರುಕುಡಿಕೆ)ಯ ಎತ್ತರನ್ನು 20 ಅಡಿಗೆ ಸೀಮಿತಗೊಳಿಸಲು ಹಾಗೂ ದಹಿಹಂಡಿಯನ್ನು ಒಡೆಯಲು ರಚಿಸಲಾಗುವ ಮಾನವಪಿರಾಮಿಡ್‌ನಲಿ ಭಾಗವಹಿಸಲು 18 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಸಿನವರಿಗೆ ಮಾತ್ರ ಭಾಗವಹಿಸಲು ಅವಕಾಶ ನೀಡಬೇಕೆಂದು ಸುಪ್ರೀಂಕೋರ್ಟ್ ಬುಧವಾರ ಆದೇಶ ನೀಡಿತ್ತು.

  ಸರ್ವೋಚ್ಚ ನ್ಯಾಯಾಲಯದ ಆದೇಶಕ್ಕೆ ದಹಿಹಂಡಿ ಮಂಡಲಗಳು ವಿರೋಧ ವ್ಯಕ್ತಪಡಿಸಿದ್ದವು. ಮಹಾರಾಷ್ಟ್ರ ನವನಿರ್ಮಾಣ್ ಸೇನಾದ ಅಧ್ಯಕ್ಷ ರಾಜ್‌ಠಾಕ್ರೆ ಕೂಡಾ ಸುಪ್ರೀಂಕೋರ್ಟ್ ಆದೇಶವನ್ನು ವಿರೋಧಿಸಿದ್ದರು ಹಾಗೂ ಈ ವಿಷಯದಲ್ಲಿ ರಾಜ್ಯ ಸರಕಾರವು ನ್ಯಾಯಾಲಯದೆದುರು ತನ್ನ ವಾದವನ್ನು ಪರಿಣಾಮಕಾರಿಯಾಗಿ ಮಂಡಿಸಿರಲಿಲ್ಲವೆಂದು ಅವರು ಟೀಕಿಸಿದ್ದರು.

 ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ತನ್ನನ್ನು ಭೇಟಿಯಾದ ದಹಿಹಂಡಿ ಮಂಡಲಗಳ ಪ್ರತಿನಿಧಿಗಳಿಗೆ ನ್ಯಾಯಾಲಯದ ಆದೇಶಳಿಗೆ ಅನುಸಾರವಾಗಿಯೇ ಹಬ್ಬವನ್ನು ಆಚರಿಸುವಂತೆ ಮನವಿ ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News