ಸರಕಾರಿ ಉದ್ಯೋಗ ಬಿಟ್ಟು ರೈತನಾದ, ಬಳಿಕ ಕೋಟ್ಯಾಧೀಶ್ವರನಾದ!

Update: 2016-08-21 16:30 GMT

ಕೃಷಿಯನ್ನು ಉದ್ಯೋಗವನ್ನಾಗಿ ಸ್ವೀಕರಿಸುವವರ ಸಂಖ್ಯೆ ಭಾರತದಲ್ಲಿ ಕಡಿಮೆಯಾಗುತ್ತಿರುವ ಸಮಯದಲ್ಲಿ ಇಂಜಿನಿಯರ್ ಒಬ್ಬ ರೈತನಾಗಿ ಬದಲಾಗಿ ಕೃಷಿಯಲ್ಲಿ ಉದ್ಯೋಗ ಕಂಡುಕೊಳ್ಳಲು ಬಯಸುತ್ತಿರುವ ಹಲವಾರು ಯುವ ಪದವೀದರರಿಗೆ ಮಾದರಿಯಾಗಿದ್ದಾರೆ.

 2011ರ ಜನಗಣತಿಯ ಪ್ರಕಾರ ಭಾರತದಲ್ಲಿ ಕೃಷಿಯನ್ನೇ ಮುಖ್ಯ ಉದ್ಯೋಗವನ್ನಾಗಿ ಮಾಡಿಕೊಂಡವರು 127.6 ಮಿಲಿಯ ಮಂದಿ ಇದ್ದಾರೆ. ಇವರು ಭಾರತದ ಒಟ್ಟು ಜನಸಂಖ್ಯೆಯ ಕೇವಲ ಶೇ. 10 ಮಾತ್ರ. 1991ಕ್ಕೆ ಹೋಲಿಸಿದಲ್ಲಿ ಈಗ 15 ಮಿಲಿಯ ರೈತರು (ಬೇಸಾಯವೇ ಮುಖ್ಯ ಉದ್ಯೋಗ) ಕಡಿಮೆಯಾಗಿದ್ದಾರೆ. 2001ರಿಂದೀಚೆಗೆ 7.7 ಮಿಲಿಯ ಮಂದಿ ರೈತರು ಕಡಿಮೆಯಾಗಿದ್ದಾರೆ. ಕಳೆದ 20 ವರ್ಷಗಳಲ್ಲಿ ಪ್ರತೀದಿನ 2,035 ಮಂದಿ ರೈತರು ಕೃಷಿಯನ್ನು ತೊರೆದು ಬೇರೆ ವೃತ್ತಿಯನ್ನು ಆಶ್ರಯಿಸುತ್ತಿದ್ದಾರೆ.

2007ರಲ್ಲಿ ಅರ್ಜುನ ಸೇನಗುಪ್ತಾ ಆಯೋಗವು ಸಣ್ಣ ರೈತರ ಸ್ಥಿತಿಗತಿ ಬಗ್ಗೆ ಸಲ್ಲಿಸಿರುವ ವರದಿಯ ಪ್ರಕಾರ, ಬೆಲೆ ಏರಿಳಿತ ಮತ್ತು ಕಡಿಮೆ ಆದಾಯದಿಂದಾಗಿ ರೈತರು ಬೇಸಾಯವನ್ನು ತೊರೆದು ಗ್ರಾಮೀಣ ಪ್ರದೇಶಗಳಿಂದ ವಲಸೆ ಹೋಗುತ್ತಿದ್ದಾರೆ. ಕೃಷಿ ಈಗ ಲಾಭವಿಲ್ಲದ ಉದ್ಯೋಗವಾಗಿ ಬದಲಾಗಿದೆ. ಮತ್ತೊಂದೆಡೆ 1.5 ಮಿಲಿಯ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಭಾರತದಲ್ಲಿ ಪ್ರತೀ ವರ್ಷ ತಯಾರಾಗುತ್ತಿದ್ದಾರೆ. ಅವರಲ್ಲಿ ಶೇ. 80ರಷ್ಟು ಮಂದಿ ನಿರುದ್ಯೋಗಿಗಳಾಗಿಯೇ ಇರುತ್ತಾರೆ ಎಂದೂ ವರದಿ ಹೇಳಿದೆ. ಹಾಗಿದ್ದರೂ ನಮ್ಮ ದೇಶದ ಯುವಕರು ಕೃಷಿಯನ್ನೇ ಮುಖ್ಯ ವೃತ್ತಿ ಆಯ್ಕೆಯಾಗಿ ತೆಗೆದುಕೊಳ್ಳುತ್ತಿಲ್ಲ. ಆದರೆ ಹರೀಶ್ ಧನ್‌ದೇವ್ ಸರ್ಕಾರಿ ನೌಕರಿಯನ್ನು ಬಿಟ್ಟು ಬೇಸಾಯಕ್ಕೆ ಇಳಿದವರು. ಇಂದು ಅವರ ವಾರ್ಷಿಕ ಕೃಷಿ ಆದಾಯ ರೂ. 1.5 ಕೋಟಿಯಿಂದ ರೂ. 2 ಕೋಟಿಗಳಷ್ಟಿದೆ.

ಹರೀಶರಿಗೆ ರಾಜಸ್ಥಾನದ ಜೈಸಲ್ಮೇರ್‌ನಲ್ಲಿ 80 ಎಕರೆಗಳಷ್ಟು ಪೂರ್ವಜರಿಂದ ಬಳುವಳಿಯಾಗಿ ಬಂದ ಭೂಮಿಯಿತ್ತು. ಅವರ ತಂದೆ ರೂಪ ರಾಂ ಧನ್‌ದೇವ್ ಕೂಡ ಕೃಷಿಯ ಬಗ್ಗೆ ಸಾಕಷ್ಟು ಉತ್ಸಾಹಿಗಳಾಗಿದ್ದರೂ, ಇಂಜಿನಿಯರ್ ಆಗಿ ಸರ್ಕಾರಿ ಉದ್ಯೋಗದಿಂದಾಗಿ ಕೃಷಿಯ ಕಡೆಗೆ ಹೆಚ್ಚು ಗಮನಕೊಡಲು ಸಾಧ್ಯವಾಗುತ್ತಿರಲಿಲ್ಲ. ಜೈಸಲ್ಮೇರ್ ಆರ್ಯ ಕಾಲೇಜಿನಿಂದ ಸಿವಿಲ್ ಇಂಜಿನಿಯರ್ ಪದವಿ ಪಡೆದ ಹರೀಶ್ 2013ರಲ್ಲಿ ಪಾಲಿಕೆಯಲ್ಲಿ ಕಿರಿಯ ಇಂಜಿನಿಯರ್ ಆಗಿ ಕೆಲಸ ಆರಂಭಿಸಿದರು. ಅವರನ್ನು ಜೈಸಲ್ಮೇರ್‌ನಲ್ಲೇ ಕೆಲಸಕ್ಕೆ ನೇಮಿಸಲಾಗಿತ್ತು. ಈ ನಡುವೆ ತಂದೆಯೂ ನಿವೃತ್ತಿಯಾಗಿ ಕೃಷಿಯ ಕಡೆಗೆ ಗಮನಹರಿಸಿದರು. ಹೀಗಾಗಿ ಹರೀಶ್ ಕೂಡ ಕೆಲವು ಕೃಷಿ ಕೆಲಸದತ್ತ ಗಮನಹರಿಸಿದರು. ಆದರೆ ಪೂರ್ಣ ಪ್ರಮಾಣದ ರೈತರಾಗುವ ಉದ್ದೇಶವೇನೂ ಅವರಿಗೆ ಇರಲಿಲ್ಲ. ಆದರೆ ಬಹಳಷ್ಟು ರೈತರು ಕಠಿಣ ಶ್ರಮ ಹಾಕಿದರೂ ಜಾಣ್ಮೆ ತೋರದೆ ಇರುವ ಕಾರಣ ಲಾಭಗಳಿಸಲು ಸಾಧ್ಯವಾಗುತ್ತಿಲ್ಲ ಎನ್ನುವುದನ್ನು ಅವರು ಕಂಡುಕೊಂಡರು.

ನನಗೆ ತಂದೆಯೊಬ್ಬ ಮೂವರು ಮಕ್ಕಳಿಗೆ ಕೊಡಲಿ ಕೊಟ್ಟು ಮೂರು ಗಂಟೆಗಳಲ್ಲಿ ಮರ ಕಡಿಯುವಂತೆ ಹೇಳಿದ್ದು ನೆನಪಾಗುತ್ತದೆ. ಅವರಲ್ಲಿ ಇಬ್ಬರು ಕೊಡಲಿ ಸಿಕ್ಕಾ ಕ್ಷಣ ಮರ ಕಡಿಯಲು ಆರಂಭಿಸಿದ್ದರು. ಆದರೆ ಸವಾಲನ್ನು ಗೆದ್ದ ಮಗ ಎರಡು ಗಂಟೆಗಳ ಕಾಲ ಕೊಡಲಿಯನ್ನು ಚೂಪು ಮಾಡಿ ನಂತರ ಮರವನ್ನು ಕಡಿದಿದ್ದ. ಕೆಲಸದ ಯೋಜನೆ ರಚಿಸಿ ಆದ್ಯತೆ ಪ್ರಕಾರ ಹೋದರೆ ಅತ್ಯುತ್ತಮ ಫಲಿತಾಂಶ ಸಿಗುತ್ತದೆ. ನಾನು ನೋಡಿದ ರೈತರ ಬಳಿ ಕೌಶಲ್ಯಗಳಿರಲಿಲ್ಲ ಎನ್ನುತ್ತಾರೆ ಹರೀಶ್. ನಿಧಾನವಾಗಿ ಹರೀಶ್‌ರಿಗೆ ಇಂಜಿನಿಯರಿಂಗ್‌ನಲ್ಲಿ ಕಲಿತಿರುವುದನ್ನು ಬೇಸಾಯದಲ್ಲಿ ಅನುಷ್ಠಾನ ಮಾಡಬಹುದು ಎಂದು ಅನಿಸಿತ್ತು. ಆದರೆ ಉತ್ತಮ ವೇತನ ಸಿಗುವ ಉದ್ಯೋಗ ಬಿಟ್ಟು ತಿಳಿಯದ ಕ್ಷೇತ್ರಕ್ಕೆ ಇಳಿಯುವ ಭಯವೂ ಅವರಿಗಿತ್ತು. ಈ ನಿರ್ಣಾಯಕ ಸಂದರ್ಭದಲ್ಲಿ ಅವರಿಗೆ ತಮ್ಮ ಹಿರಿಯ ಸಹೋದರಿ ಅಂಜನಾ ಮೇಘವಾಲ್ ಪ್ರೇರಣೆಯಾದರು. ಎರಡು ಮಕ್ಕಳ ತಾಯಿಯಾದ ಅಂಜನಾ 2011ರಲ್ಲಿ ಕಾರು ಅಪಘಾತದಲ್ಲಿ ಪತಿಯನ್ನು ಕಳೆದುಕೊಂಡಿದ್ದರು. ಸ್ವತಃ 9 ತಿಂಗಳ ಕಾಲ ಆಸ್ಪತ್ರೆಯಲ್ಲಿದ್ದು ಗಾಯಗಳಿಂದ ಚೇತರಿಸಿಕೊಂಡಿದ್ದರು. ಅವರು ಹೊಸ ಜೀವನ ಆರಂಭಿಸಿ ಈಗ ಜೈಸಲ್ಮೇರ್‌ನ ಮೇಯರ್ ಆಗಿದ್ದಾರೆ. ನನ್ನ ಸಹೋದರಿ ನನಗೆ ದೊಡ್ಡ ಪ್ರೇರಣೆ. ಅವಕಾಶಗಳನ್ನು ಬಳಸಿಕೊಂಡು ಬದ್ಧತೆಯಿಂದ ಕೆಲಸ ಮಾಡಿದರೆ ಯಶಸ್ಸು ಖಚಿತ ಎನ್ನುವುದನ್ನು ಆಕೆಯಿಂದಲೇ ಕಲಿತೆ ಎನ್ನುತ್ತಾರೆ ಹರೀಶ್. ಹೀಗಾಗಿ 2013ರಲ್ಲಿ ಸರ್ಕಾರಿ ಉದ್ಯೋಗವನ್ನು ತೊರೆದ ಹರೀಶ್ ಪೂರ್ಣಪ್ರಮಾಣದ ರೈತರಾದರು.

►ಮಣ್ಣು ಪರೀಕ್ಷೆ

ರೈತರಾಗಿ ಮೊದಲ ಹೆಜ್ಜೆಯಾಗಿ ಹರೀಶ್ ಕೃಷಿ ಇಲಾಖೆಯನ್ನು ಸಂಪರ್ಕಿಸಿ ತಮ್ಮ ಭೂಮಿಯ ಮಣ್ಣನ್ನು ಪರೀಕ್ಷಿಸಿಕೊಂಡರು.

►ಮಣ್ಣು

“ಕೃಷಿ ಇಲಾಖೆ ನನಗೆ ಮುಸುಕಿನ ಜೋಳ, ಹೆಸರು ಮತ್ತು ಬಟಾಣಿ ಬೀನ್ಸ್ ಮೊದಲಾಗಿ ಕಡಿಮೆ ನೀರಿನ ಅಗತ್ಯವಿರುವ ಬೆಳೆಗಳನ್ನು ಬೆಳೆಯಲು ಹೇಳಿದರು. ನಾವು ಈಗಾಗಲೇ ಅಲೋವೇರಾವನ್ನು ಬೆಳೆಯುತ್ತಿದ್ದರೂ, ಅದಕ್ಕೆ ಜೈಸಲ್ಮೇರ್‌ನಲ್ಲಿ ಹೆಚ್ಚು ಮಾರುಕಟ್ಟೆ ಇಲ್ಲದ ಕಾರಣ ಬೆಳೆಯಲು ಸಲಹೆ ನೀಡಲಿಲ್ಲ” ಎನ್ನುತ್ತಾರೆ ಹರೀಶ್. ಆದರೆ ಹರೀಶ್ ಸ್ವಲ್ಪ ಸಂಶೋಧನೆ ಮಾಡಿ ಸ್ವಲ್ಪ ದೂರ ಪ್ರಯತ್ನ ಮಾಡಿದಲ್ಲಿ ತಮ್ಮ ಬೆಳೆಯನ್ನು ಮಾರುವ ಉತ್ತಮ ಅವಕಾಶಗಳನ್ನು ಕಂಡರು. ಆನ್ ಲೈನ್ ತಾಣಗಳಾದ ಇಂಡಿಯಾಮಾರ್ಟ್ ಮೂಲಕ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಗಳನ್ನು ಪಡೆಯಬಹುದು ಎಂದು ಅವರು ಕಂಡುಕೊಂಡರು.

►ಸಸಿ ನೆಡುವುದು

ಅಲೋವೇರವನ್ನು ಹರೀಶ್ 15ರಿಂದ 20 ಎಕರೆಗಳ ಭೂಮಿಯಲ್ಲಿ ಬೆಳೆದರು. ಆರಂಭಿಕ ಹೂಡಿಕೆ ಅಧಿಕವಾಗಿತ್ತು. ಅಲೋವೇರ ಸಸಿಗಳನ್ನು ಖರೀದಿಸಬೇಕಾಗಿದ್ದೇ ಇದಕ್ಕೆ ಕಾರಣ. ಆದರೆ ಸಸಿ ಬೇಗನೇ ಬೆಳೆದು ತನ್ನ ಸುತ್ತ ಸಣ್ಣ ಸಸಿಗಳನ್ನು ಸೃಷ್ಟಿಸಿತು. ಹೀಗಾಗಿ ಹರೀಶ್ ಬಳಿ ಆರಂಭದಲ್ಲಿದ್ದ 80,000 ಸಸಿಗಳು ಬೇಗನೇ 7 ಲಕ್ಷಕ್ಕೆ ಬೆಳೆಯಿತು.

►ಹೊಲ

ಅವರ ಹೊಲದಲ್ಲಿ ಈಗ 7 ಲಕ್ಷ ಅಲೋವೇರ ಸಸಿಗಳಿವೆ. “ರೈತರು ತಮ್ಮ ಹಿತಕರ ವಲಯದಿಂದ ಹೊರಗೆ ಬರಲು ಬಯಸುವುದಿಲ್ಲ. ಹೀಗಾಗಿ ಅವರು ಹಿಂದಿನ ತಲೆಮಾರು ನೆಟ್ಟ ಅದೇ ಬೆಳೆಗಳನ್ನೇ ಮುಂದುವರಿಸುತ್ತಾರೆ. ಆದರೆ ಮೊದಲನೆಯದಾಗಿ ಮಣ್ಣನ್ನು ಪ್ರತೀ ವರ್ಷ ಪರೀಕ್ಷೆ ಮಾಡಬೇಕು ಮತ್ತು ಬೆಳೆಯುವ ವಿಧಾನವನ್ನು ಅದಕ್ಕೆ ತಕ್ಕಂತೆ ಬದಲಿಸಬೇಕು” ಎನ್ನುತ್ತಾರೆ ಹರೀಶ್.

►ಗೊಬ್ಬರ

ಹರೀಶ್ ಯಾವುದೇ ರಾಸಾಯನಿಕ ಗೊಬ್ಬರ ಅಥವಾ ಕೀಟನಾಶಕವನ್ನು ತಮ್ಮ ಹೊಲಕ್ಕೆ ಹಾಕುವುದಿಲ್ಲ. ಸಾವಯವ ಮತ್ತು ಸೆಗಣಿ, ಗೋ ಮೂತ್ರ ಬಳಸುತ್ತಾರೆ.

►ದನ

ಹರೀಶ್ ತಮ್ಮ ಗೊಬ್ಬರವನ್ನು ತಾವು ಸಾಕಿದ 20 ದನಗಳಿಂದ ಮತ್ತು ನೆರೆಯವರಿಂದ ಪಡೆಯುತ್ತಾರೆ. ಅವರ ಹೊಲಕ್ಕೆ ರಾಜಸ್ಥಾನ ಸಾವಯವ ಪ್ರಾಮಾಣೀಕೃತ ಏಜೆನ್ಸಿಯ ಪ್ರಮಾಣಪತ್ರವೂ ಇದೆ.

ಆರೇ ತಿಂಗಳಲ್ಲಿ ಹರೀಶ್ ತಮ್ಮ ಆಲೋವೇರಾ ಎಲೆಗಳಿಗೆ 10 ಗ್ರಾಹಕರನ್ನು ರಾಜಸ್ಥಾನದಲ್ಲೇ ಪಡೆದುಕೊಂಡರು. ಆದರೆ ಅವರು ತೆಗೆದ ರಸವನ್ನು ಮಾರುಕಟ್ಟೆಯಲ್ಲಿ ಅಧಿಕ ಬೆಲೆಗೆ ಮಾರುವುದು ಕಂಡರು. ಹೀಗಾಗಿ ಅವರು ರಸವನ್ನು ತೆಗೆಯುವ ವಿಧಾನವನ್ನು ಹುಡುಕಿದರು. “ರಸ ತೆಗೆಯುವುದು ಬಹಳ ಸುಲಭ. ಕೈಯಿಂದಲೇ ಅದನ್ನು ಮಾಡಬಹುದು. ಯಂತ್ರ ಬೇಕಾಗಿಲ್ಲ. ಆದರೆ ರಸ ತೆಗೆಯುವಾಗ ಶುದ್ಧವಾಗಿರುವಂತೆ ಗಮನಿಸಬೇಕು” ಎನ್ನುತ್ತಾರೆ ಹರೀಶ್.

►ರಸ ತೆಗೆಯುವ ವಿಧಾನ

ಕೆಲವೇ ದಿನಗಳಲ್ಲಿ ಹರೀಶ್ ಗ್ರಾಹಕರಿಗೆ ಎಲೆ ಕೊಡುವುದು ಬಿಟ್ಟರು. ತಮ್ಮದೇ ಹೊಲದ ಕಾರ್ಮಿಕರಿಗೆ ರಸ ತೆಗೆಯುವುದು ಹೇಳಿಕೊಟ್ಟರು. ಇದರಿಂದ ಕಾರ್ಮಿಕರಿಗೆ ಹೆಚ್ಚುವರಿ ಆದಾಯವೂ ಸಿಕ್ಕಿದೆ. ನಂತರದ ವರ್ಷಗಳಲ್ಲಿ ಹರೀಶ್ ಇನ್ನೂ ಅಧಿಕ ಭೂಮಿ ಖರೀದಿಸಿದರು ಮತ್ತು ಈಗ 100 ಎಕರೆಗಳಲ್ಲಿ ಅಲೋವೇರ ಬೆಳೆಯುತ್ತಾರೆ. ಅವರು ದಾಳಿಂಬೆ, ನೆಲ್ಲಿಕಾಯಿ ಮತ್ತು ಗುಂಬಾಗಳನ್ನೂ ಹೊಸ ಭೂಮಿಯ ಒಂದು ಭಾಗದಲ್ಲಿ ಹಾಕಿದ್ದಾರೆ.

►ಇತರ ಸಸಿಗಳು

ಅವರ ಧನ್‌ದೇವ್ ಗ್ಲೋಬಲ್ ಗ್ರೂಪ್ ರಾಜಸ್ಥಾನದ ಜೈಸಲ್ಮೇರ್‌ನಿಂದ 45 ಕಿಮೀ ದೂರದ ಧೈಸರ್‌ನಲ್ಲಿದೆ. ಅವರು ರು. 1.5 ಕೋಟಿಯಿಂದ 2 ಕೋಟಿ ವಾರ್ಷಿಕ ಆದಾಯ ಪಡೆಯುತ್ತಾರೆ. ಧನ್‌ದೇವ್ ಗ್ರೂಪ್‌ನ ಅಲೋವೇರ ಉತ್ಪನ್ನಗಳನ್ನು ನೇಚುರಲೋಎನ್ನುವ ಬ್ರಾಂಡ್ ಹೆಸರಲ್ಲಿ ಮಾರಲಾಗುತ್ತದೆ. ಅವುಗಳನ್ನು ಅಂತರರಾಷ್ಟ್ರೀಯ ಮಟ್ಟದಲ್ಲೂ ಮಾರುವ ಉದ್ದೇಶ ಹೊಂದಿದ್ದಾರೆ. ಹರೀಶ್ ಪ್ರಕಾರ ಯಶಸ್ಸಿಗೆ ಜ್ಞಾನ ಅತ್ಯಗತ್ಯ. ಅವರು ಜೈಸಲ್ಮೇರಿನ ಇತರ ರೈತರಿಗೂ ಇಂಟರ್ನೆಟ್‌ನಲ್ಲಿ ಲಭ್ಯವಿರುವ ಸಂಪನ್ಮೂಲಗಳ ಮೂಲಕ ಮಾರ್ಗದರ್ಶನ ನೀಡುತ್ತಾರೆ. ಸರ್ಕಾರದ ವಿವಿಧ ಸಾಲ ಯೋಜನೆಗಳ ಕರಪತ್ರಗಳು ಮತ್ತು ಇತರ ದಾಖಲೆಗಳನ್ನು ಇಂಟರ್ನೆಟ್‌ನಿಂದ ಪಡೆದುಕೊಂಡು ತಂತ್ರಜ್ಞಾನದ ಬಗ್ಗೆ ಹೆಚ್ಚು ವಿವರವಿಲ್ಲದ ರೈತರಿಗೆ ಕೊಡುತ್ತಾರೆ. ಹೊಸ ಸಂಪನ್ಮೂಲಗಳನ್ನು ತಿಳಿದುಕೊಳ್ಳುವುದು, ಯೋಜನೆ ಮತ್ತು ಅನುಷ್ಠಾನ ಅಗತ್ಯ. ಇವೇ ನನಗೆ ನೆರವಾಗಿದೆ. ಪ್ರತೀ ರೈತನೂ ಇಂತಹ ಜ್ಞಾನದಿಂದ ನೆರವು ಪಡೆದುಕೊಳ್ಳಬಹುದು. ಆದರೆ ರೈತರು ಭಯವನ್ನು ಬಿಡಬೇಕು ಮತ್ತು ಹಿತಕರ ವಲಯದಿಂದ ಹೊರ ಬರಬೇಕು ಎನ್ನುತ್ತಾರೆ ಹರೀಶ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News