×
Ad

ಭಾರತದಲ್ಲಿ ಮಹಿಳಾ ಬ್ಯಾಂಕಿಂಗ್ ಯುಗ! ಆದರೆ..

Update: 2016-08-22 23:40 IST

ದೇಶದಲ್ಲಿ ಮಹಿಳಾ ಬ್ಯಾಂಕಿಂಗ್ ಯುಗ ಆರಂಭವಾಗಿದೆ. ಭಾರತದ ಒಟ್ಟು ಮಹಿಳೆಯರ ಪೈಕಿ ಶೇ.61ರಷ್ಟು ಅಂದರೆ 358 ದಶಲಕ್ಷ ಮಂದಿ ಬ್ಯಾಂಕ್ ಖಾತೆ ಹೊಂದಿದ್ದಾರೆ. 2014ರಲ್ಲಿ ಇದ್ದ ಶೇ.48ಕ್ಕೆ ಹೋಲಿಸಿದರೆ ಒಂದು ವರ್ಷದಲ್ಲಿ 77 ದಶಲಕ್ಷ ಮಹಿಳೆಯರು ಬ್ಯಾಂಕಿಂಗ್ ವ್ಯವಸ್ಥೆಗೆ ಸೇರಿದ್ದಾರೆ ಎಂದು ಇಂಟರ್ ಮೀಡಿಯಾ ಎಂಬ ಜಾಗತಿಕ ಸಲಹಾ ಸಂಸ್ಥೆಯ ವರದಿ ಹೇಳಿದೆ. ಎಂಟು ದಕ್ಷಿಣ ಏಷ್ಯಾ ಹಾಗೂ ಆಫ್ರಿಕನ್ ದೇಶಗಳ ಪೈಕಿ ಗರಿಷ್ಠ ಮಹಿಳೆಯರು ಬ್ಯಾಂಕಿಂಗ್ ವಲಯಕ್ಕೆ ಸೇರ್ಪಡೆಯಾದದ್ದು ಭಾರತದಲ್ಲಿ.

ಈ ಪ್ರಮಾಣ ಹಿಂದೆಂದಿಗಿಂತಲೂ ಅಧಿಕ. ಬ್ಯಾಂಕ್ ಖಾತೆ ವಿಚಾರದಲ್ಲಿ ಪುರುಷರು ಹಾಗೂ ಮಹಿಳೆಯರ ನಡುವಿನ ಅಂತರ ಈಗ ಶೇ.4ಕ್ಕೆ ಇಳಿದಿದೆ. ಇಷ್ಟು ಕ್ಷಿಪ್ರವಾಗಿ ಈ ಅಂತರ ಕುಸಿದಿರುವುದು ಕೂಡಾ ಭಾರತದ ವೈಶಿಷ್ಟ್ಯ. ಆದರೆ ವಿತ್ತೀಯ ಸೇರ್ಪಡೆಯ ಸೂಚಕಗಳ ಬಗೆಗಿನ ಅಂಕಿ ಅಂಶಗಳನ್ನು ಸರಕಾರ ಬಿಡುಗಡೆ ಮಾಡಿಲ್ಲವಾದ್ದರಿಂದ ಒಳನೋಟುಗಳು ಸಿಗುತ್ತಿಲ್ಲ.
ವೈರುದ್ಧ್ಯ ಭಾರತ ಹಾಗೂ ಬಾಂಗ್ಲಾದೇಶಗಳಲ್ಲಿ ವಿತ್ತೀಯ ಸೇರ್ಪಡೆ ಕಾರ್ಯಕ್ರಮದಲ್ಲಿ ಮಹಿಳೆಯರು ಬ್ಯಾಂಕ್ ಖಾತೆ ತೆರೆಯಲು ಹೆಚ್ಚು ಉತ್ತೇಜಿಸಿದರೆ, ತಾಂಝಾನಿಯಾದಲ್ಲಿ ಮಹಿಳೆಯರು ತಂತ್ರಜ್ಞಾನ ಸ್ನೇಹಿ ಕ್ರಮಕ್ಕೆ ಒತ್ತು ನೀಡಿದ್ದು, ಭಾರತ ಹಾಗೂ ಬಾಂಗ್ಲಾ ಮಹಿಳೆಯರಿಗಿಂತ ಹೆಚ್ಚಾಗಿ ಮೊಬೈಲ್ ಹಣಕ್ಕೆ ಹೆಚ್ಚಿನ ಒಲವು ತೋರಿದ್ದಾರೆ ಎಂದು ಇಂಟರ್‌ಮೀಡಿಯಾದ ಸಹ ನಿರ್ದೇಶಕ ನ್ಯಾಥನಲ್ ಕ್ರೆಟ್‌ಚನ್ ಹೇಳಿದ್ದಾರೆ. ಅವರ ಪ್ರಕಾರ ಇಂಥ ಪ್ರಗತಿಯ ಬಳಿಕವೂ ಲಿಂಗ ಅಂತರ ಮುಂದುವರಿದಿದೆ.
2014-15ರಲ್ಲಿ ಭಾರತ ಹಾಗೂ ತಾಂಝಾನಿಯಾ ಲಿಂಗ ಅಂತರವನ್ನು ಗಣನೀಯವಾಗಿ ಕಡಿಮೆ ಮಾಡಿಕೊಂಡಿವೆ. ಭಾರತದಲ್ಲಿ ಲಿಂಗ ಅಂತರ ಶೇ.12 ರಿಂದ 8ಕ್ಕೆ ಇಳಿದಿದ್ದರೆ, ತಾಂಝಾನಿಯಾದಲ್ಲಿ ಶೇ.11ರಿಂದ 9ಕ್ಕೆ ಇಳಿದಿದೆ. ಸಂಖ್ಯೆ ಆಧಾರದಲ್ಲಿ ಅತಿಹೆಚ್ಚು ಪ್ರಗತಿ ಬಾಂಗ್ಲಾದೇಶದಲ್ಲಿ ದಾಖಲಾಗಿದ್ದರೂ, ಅಂತರ ಶೇಕಡ 3 ರಿಂದ 10ಕ್ಕೆ ಹೆಚ್ಚಿದೆ.
ಭಾರತೀಯ ಮಹಿಳೆಯರಿಗೆ ಹಿಂದಿನ ದಿನಗಳಿಗೆ ಹೋಲಿಸಿದರೆ ಹಣಕಾಸು ಸೇವೆ ಕೈಗೆಟುಕುವಂತಿದ್ದರೂ, ತಾಂಝಾನಿಯಾ ಅಥವಾ ಬಾಂಗ್ಲಾದೇಶಕ್ಕೆ ಹೋಲಿಸಿದರೆ, ಭಾರತದ ಮಹಿಳೆಯರ ವಹಿವಾಟು ತೀರಾ ಕಡಿಮೆ. ಅಂದರೆ ಭಾರತೀಯ ಮಹಿಳೆಯರು ಹಣಕಾಸು ಸೌಲಭ್ಯ ಕೈಗೆಟುಕುವಂತಿದ್ದರೂ, ಇದರ ಪ್ರಯೋಜನವನ್ನು ಸಮರ್ಪಕವಾಗಿ ಪಡೆಯುತ್ತಿಲ್ಲ. ತಮ್ಮ ಹಣಕಾಸು ಅಗತ್ಯಗಳನ್ನು ಪೂರೈಸಿಕೊಳ್ಳಲು ಅನೌಪಚಾರಿಕ ವಿಧಾನವನ್ನೇ ಅನುಸರಿಸುತ್ತಿದ್ದಾರೆ ಎಂದು ಕ್ರೆಟ್‌ಚನ್ ಹೇಳುತ್ತಾರೆ. ಅಂದರೆ ಲೇವಾದೇವಿದಾರರು, ಸ್ನೇಹಿತರು ಹಾಗೂ ಕಟುಂಬದಿಂದಲೇ ಹಣ ಪಡೆಯುವುದು ಅಧಿಕ. ಉದಾಹರಣೆಗೆ, ಕೃಷಿವಲಯಕ್ಕೆ ಸಾಲದ ಹರಿವು ಹೆಚ್ಚಿದ್ದರೂ, ಅಧಿಕೃತ ಸಂಸ್ಥೆಗಳಿಂದ ಮಂಜೂರಾದ ಸಣ್ಣ ಸಾಲದ ಮೊತ್ತ ಕಡಿಮೆ.
ಪ್ರಧಾನಮಂತ್ರಿ ಜನಧನ್ ಯೋಜನೆ ದೇಶದಲ್ಲಿ ವಿತ್ತೀಯ ಸೇರ್ಪಡೆ ಪ್ರಮಾಣ ಹೆಚ್ಚಲು ಪ್ರಮುಖ ಕಾರಣ. ಕಳೆದ 21 ತಿಂಗಳಲ್ಲಿ, ಜನಧನ್ ಅಥವಾ ಠೇವಣಿ ಪ್ರಮಾಣ ಶೇ.118ರಷ್ಟು ಹೆಚ್ಚಿದೆ. ಈ ಕಾರ್ಯಕ್ರಮ ಮಹಿಳೆಯರನ್ನು ಗುರಿಮಾಡಿದ ಕಾರ್ಯಕ್ರಮ ಅಲ್ಲದಿದ್ದರೂ, ಈ ಯೋಜನೆಯಡಿ ಮಹಿಳೆಯರ ಸೇರ್ಪಡೆ, ಪುರುಷರಿಗಿಂತ ಕ್ಷಿಪ್ರವಾಗಿ ಆಗಿರುವುದು ಆಸಕ್ತಿದಾಯಕ ಬೆಳವಣಿಗೆ ಎಂದು ಕೆಟ್‌ಚನ್ ಹೇಳುತ್ತಾರೆ.
ಇದಕ್ಕೆ ಮುಖ್ಯ ಕಾರಣವೆಂದರೆ ಜನಧನ್ ಯೋಜನೆ ಆರಂಭವಾಗುವ ಮುನ್ನ ಖಾತೆ ಹೊಂದಿದ್ದ ಮಹಿಳೆಯರ ಪ್ರಮಾಣ ಶೇ.30 ಮಾತ್ರ. ಪುರುಷರಲ್ಲಿ ಶೇ.55ರಷ್ಟು ಮಂದಿ ಬ್ಯಾಂಕ್ ಖಾತೆ ಹೊಂದಿದ್ದರು. ಆದ್ದರಿಂದ ಸಹಜವಾಗಿಯೇ ಮಹಿಳಾ ಖಾತೆ ಸಂಖ್ಯೆ ಹೆಚ್ಚಿದೆ ಎನ್ನುವುದು ಕ್ರೆಟ್‌ಚನ್ ಅವರ ಅಭಿಮತ. ಬ್ಯಾಂಕುಗಳು ಖಾತೆ ನೀಡುವುದು ಕಡ್ಡಾಯವಾಗಿದ್ದರಿಂದ ಹಾಗೂ ಖಾತೆಗಳ ಅಸ್ತಿತ್ವದ ವಿವರ ನೀಡಬೇಕಿದ್ದ ಕಾರಣದಿಂದ, ಮಹಿಳೆಯರು ಖಾತೆ ಹೊಂದಲು ಇದ್ದ ತಡೆಗಳು ಬಹುತೇಕ ನಿವಾರಣೆಯಾಗಿವೆ

ಮುಕ್ತ ಮಾಹಿತಿ ಇಲ್ಲ

ಆದರೆ ಪ್ರಧಾನಮಂತ್ರಿ ಜನಧನ್ ಯೋಜನೆಯು ಹಣಕಾಸು ವ್ಯವಸ್ಥೆಯ ಒಂದು ಭಾಗ ಮಾತ್ರ. ವಿತ್ತೀಯ ಸೇರ್ಪಡೆಯನ್ನು ಅಳೆಯಲು ವಾಸ್ತವವಾಗಿ ಇತರ ಸೂಚಕಗಳನ್ನೂ ಪರಿಗಣಿಸಬೇಕಾದ್ದು ಅಗತ್ಯ.
ಇಲ್ಲಿ ನಿಜಕ್ಕೂ ಆತಂಕಕಾರಿ ವಿಚಾರವೆಂದರೆ, ಪ್ರಧಾನಮಂತ್ರಿ ಜನಧನ್ ಯೋಜನೆಯ ಅಂಶವನ್ನು ಕೇವಲ ಖಾತೆಗಳ ಸಂಖ್ಯೆಯ ಮಾನದಂಡದಿಂದ ಮಾತ್ರ ವೌಲ್ಯಮಾಪನ ಮಾಡಲಾಗಿದೆ ಎಂದು ದಿಲ್ಲಿ ಮೂಲದ ಇಂಡಿಕಸ್ ಅನಾಲಿಸ್ಟಿಕ್ಸ್ ಸಂಸ್ಥೆಯ ಮುಖ್ಯ ಅರ್ಥಶಾಸ್ತ್ರಜ್ಞರಾದ ಸುಮಿತಾ ಕಾಳೆ 2016ರ ಮೇ ತಿಂಗಳಲ್ಲಿ ಬ್ಯುಸಿನೆಸ್ ಸ್ಟ್ಯಾಂಡರ್ಡ್ ಪತ್ರಿಕೆಯಲ್ಲಿ ಬರೆದ ಲೇಖನದಲ್ಲಿ ವಿವರಿಸಿದ್ದರು.
ಈ ಸೂಚಕದಲ್ಲಿ ಬ್ಯಾಂಕ್ ಖಾತೆಗಳನ್ನು ಆಧಾರ್ ಜತೆ ಸಂಪರ್ಕಿಸುವುದು ಕೂಡಾ ಅಗತ್ಯ. ಈಗಾಗಲೇ 1038 ದಶಲಕ್ಷ ಆಧಾರ್ ಕಾರ್ಡ್ ವಿತರಿಸಲಾಗಿದ್ದು, ಅವುಗಳನ್ನು ಬ್ಯಾಂಕ್ ಖಾತೆಗೆ ಸಂಪರ್ಕಿಸುವ ಕಾರ್ಯ ಆಗಬೇಕು. ಅಂತೆಯೇ ರುಪೇ ಕಾರ್ಡ್‌ಗಳನ್ನು ಎಷ್ಟು ವಿತರಿಸಲಾಗಿದೆ ಎಂಬ ಸೂಚಕ ಕೂಡಾ ಪ್ರಮುಖ. ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಡಿ ಎಷ್ಟು ಮಹಿಳೆಯರು ಓವರ್ ಡ್ರಾಫ್ಟ್ ಸೌಲಭ್ಯ ಪಡೆದುಕೊಂಡಿದ್ದಾರೆ ಎಂದು ಪರಿಶೀಲಿಸುವುದೂ ಅಗತ್ಯ. ಎಷ್ಟು ಹಣವನ್ನು ಈ ಖಾತೆಗಳ ಮೂಲಕ ಪಾವತಿಸಲಾಗಿದೆ, ಬ್ಯಾಂಕ್ ಮಿತ್ರ ಯೋಜನೆಗಳಿಗೆ ಎಷ್ಟರಮಟ್ಟಿಗೆ ತಾಂತ್ರಿಕವಾಗಿ ಸನ್ನದ್ಧರಾಗಿದ್ದಾರೆ ಎಂಬ ಅಂಶಗಳನ್ನೂ ತಿಳಿದುಕೊಳ್ಳಬೇಕಿದೆ. ಈ ಬಗೆಗಿನ ಲಿಂಗ ಆಧರಿತ ಮಾಹಿತಿಗಳನ್ನು ಸರಕಾರ ಇದುವರೆಗೆ ಬಿಡುಗಡೆ ಮಾಡಿಲ್ಲ.
ಈ ಯೋಜನೆಯ ಬಗೆಗಿನ ಪರಿಣಾಮದ ಏಕೈಕ ಮಾಹಿತಿ ಮೂಲವೆಂದರೆ, ಇಂಟರ್‌ಮೀಡಿಯಾದಂಥ ಸ್ವತಂತ್ರ ಸಂಸ್ಥೆಗಳು ಮಹಿಳಾ ಯೋಜನೆಗಳ ಬಗ್ಗೆ ನಡೆಸಿದ ಸಮೀಕ್ಷೆಗಳು.

ಪ್ರತಿ ನಗದು ವರ್ಗಾವಣೆಗೆ, ಮಹಿಳಾ ಫಲಾನುಭವಿಗಳ ಪಟ್ಟಿ ಸರಕಾರದ ಬಳಿ ಇದೆ. ಅಲ್ಲಿಂದ ಸರಕಾರ ಕೆಲಸ ಆರಂಭಿಸಬಹುದು. ಭಾರತದ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ-2013ರ ಅನ್ವಯ, ಪಡಿತರ ಚೀಟಿಗಳಲ್ಲಿ ಮಹಿಳೆಯರನ್ನು ಕುಟುಂಬದ ಮುಖ್ಯಸ್ಥರಾಗಿ ಹೆಸರಿಸಬೇಕು. ಇದನ್ನು ಈಗ ಬ್ಯಾಂಕ್ ಖಾತೆಗಳಿಗೂ ಸಂಪರ್ಕಿಸಲಾಗುತ್ತದೆ ಎಂದು ಕಾಳೆ ವಿವರಿಸುತ್ತಾರೆ.
ಪಲಾನುಭವಿ ಖಾತೆಗಳ ಡಿಜಿಟಲೀಕರಣ ಮತ್ತೊಂದು ಪ್ರಮುಖ ಹೆಜ್ಜೆ. ಪ್ರಸಕ್ತ ಪಲಾನುಭವಿ ಪೀಳಿಗೆ ತಂತ್ರಜ್ಞಾನವನ್ನು ಸೂಕ್ತವಾಗಿ ಬಳಸಿಕೊಳ್ಳಲು ಸಾಧ್ಯವಾಗದಿದ್ದರೆ, ಭವಿಷ್ಯದ ಪೀಳಿಗೆ ಇದನ್ನು ಬಳಸಿಕೊಳ್ಳಬಹುದು. ಆದರೆ ಸಮಸ್ಯೆಗಳನ್ನು ಹುಟ್ಟುಹಾಕುತ್ತಿರುವುದು ನಮ್ಮ ಇಂದಿನ ಸಮಸ್ಯೆ.
ಭಾರತದಲ್ಲಿ ಶೇ.44ರಷ್ಟು ಮಹಿಳೆಯರಿಗೆ ಮೊಬೈಲ್ ಫೋನ್‌ಗಳಿವೆ. ಶೇ.87ರಷ್ಟು ಮಹಿಳೆಯರಿಗೆ ಕುಟುಂಬ ಅಥವಾ ಸಮುದಾಯದ ಮೂಲಕ ಮೊಬೈಲ್ ಸೌಕರ್ಯ ಇದೆ ಎಂದು ಇಂಟರ್‌ಮೀಡಿಯಾ ಸಮೀಕ್ಷೆ ಹೇಳುತ್ತದೆ. ಆದರೆ ಶೇ.29ರಷ್ಟು ಭಾರತೀಯ ಮಹಿಳೆಯರು ಎಂದೂ ಎಸ್ಸೆಮ್ಮೆಸ್ ಸಂದೇಶ ಕಳುಹಿಸಲ್ಲ ಅಥವಾ ಸ್ವೀಕರಿಸಿಲ್ಲ.
ಕೃಪೆ: scroll.in

Writer - ಸೌಮ್ಯ ತಿವಾರಿ

contributor

Editor - ಸೌಮ್ಯ ತಿವಾರಿ

contributor

Similar News