×
Ad

ಹೆಮ್ಮೆಯ ನನ್ನೂರು

Update: 2016-08-23 23:48 IST

ಇಂತಹ ಅನುಭವಗಳೇ ಸಿಹಿ. ಅವುಗಳ ನೆನಪಂತೂ ಮತ್ತೂ ಸಿಹಿಯಲ್ಲವೇ. ಸಂತೃಪ್ತ ಬದುಕಿಗೆ ಇವುಗಳು ಬುತ್ತಿ ಊಟವಲ್ಲವೇ?

ಬಿಜೈ ಎನ್ನುವುದು ನನ್ನೂರು ಆದುದು ನನ್ನ ಅಪ್ಪ ಇಲ್ಲಿ ತನ್ನ ಸಂಸಾರ ಪ್ರಾರಂಭಿಸಿದುದರಿಂದ. ಕೋಟೆಕಾರು ಗ್ರಾಮದ ಕೊಂಡಾಣದ ತನ್ನ ಅವಿಭಕ್ತ ಕುಟುಂಬದ ಕೊಂಡಾಣ ವಾಮನ ಓದಿಗಾಗಿ ಮಂಗಳೂರಿಗೆ ಬಂದವರು. ಇಲ್ಲಿನ ಜೈಲ್‌ಶಾಲೆ ಎಂದೇ ಖ್ಯಾತಿ ಪಡೆದ ಮಂಗಳೂರು ಜೈಲಿನ ಬಳಿಯಿರುವ ಶಿಕ್ಷಕರ ತರಬೇತಿಯಲ್ಲಿ ತರಬೇತಿ ಪಡೆಯುವಾಗ ಅವರು ಬಿಜೈಯಲ್ಲಿ ಬಾಳಿಗಾ ಸ್ಟೋರ್‌ನ ಎದುರುಗಡೆ ಜಿಲ್ಲಾಬಾಯಿ ಕಾಂಪೌಂಡ್‌ನಲ್ಲಿ ಮನೆಯೊಂದನ್ನು ಬಾಡಿಗೆಗೆ ಪಡೆದು ಓದು ಮುಗಿಸಿದರು. ಕೊಂಚಾಡಿ ಶ್ರೀ ರಾಮಾಶ್ರಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಧ್ಯಾಪಕ ರಾಗಿ 1946ರಲ್ಲಿ ಸೇವೆಗೆ ಸೇರಿದರು. ಕಾವೂರು ಕ್ರಾಸ್‌ನಲ್ಲೇ ಇಂದು ಇರುವ ಗಣೇಶ್ ಬೀಡಿ ಕಾಂಪೌಂಡ್‌ನ ತುತ್ತತುದಿಯ ಮನೆಯಲ್ಲಿ ವಾಸವಾಗಿದ್ದವರು ನನ್ನ ಅಮ್ಮನ ಮನೆಯವರು. ಕೊಡಿಯಾಲಬೈಲು ಪಾಂಡು ನನ್ನ ಅಜ್ಜ. ಸಂತ ಅಲೋಶಿಯಸ್ ಶಾಲೆಯಲ್ಲಿ ಓದಿದ ನನ್ನ ಅಜ್ಜ ಕೋರ್ಟ್‌ನಲ್ಲಿ ನೌಕರರಾಗಿದ್ದರು. ಅದ್ಯಾವುದೋ ಘಳಿಗೆಯಲ್ಲಿ ಅಸಮಾಧಾನದಿಂದ ಬ್ರಿಟಿಷರ ಅಂದಿನ ಆಡಳಿತವನ್ನು ಧಿಕ್ಕರಿಸಿ ರಾಜೀನಾಮೆ ನೀಡಿ ತನ್ನ ಕುಲ ಕಸುಬನ್ನು ಪ್ರಾರಂಭಿಸಿದವರು. 

ನನ್ನ ಅಮ್ಮ ಬಿಜೈ ಚರ್ಚ್ ಶಾಲೆಯ ವಿದ್ಯಾರ್ಥಿನಿ. ಕುಟುಂಬದಲ್ಲಿ ಓದು ಪಡೆದ ಮೊದಲ ಹುಡುಗಿ. ಈ ಓದಿದ ಹುಡುಗಿಯನ್ನು ನಮ್ಮ ತಂದೆಗೆ ಮದುವೆ ಮಾಡಿ ಕೊಡಬೇಕೆಂಬ ಹಂಬಲ ಈಡೇರಿದರೂ ಮದುವೆಯ ವೇಳೆಗೆ ಅಜ್ಜ ಬದುಕಿರಲಿಲ್ಲ. ಊರಿನ ಗಣ್ಯ ವ್ಯಕ್ತಿಯಾಗಿದ್ದ ಅವರ ಮನೆಯಲ್ಲಿ ನೂರಕ್ಕೂ ಹೆಚ್ಚು ಕೆಲಸಗಾರರಿದ್ದರೆಂದು ಅಮ್ಮ ಹೇಳುತ್ತಿದ್ದರು. 1948ರಲ್ಲಿ ನನ್ನ ಅಮ್ಮ ಅಪ್ಪನ ವಿವಾಹ ನಡೆದು ಸಂಸಾರ ಪ್ರಾರಂಭಿಸಲು ಪ್ರತ್ಯೇಕವಾದ ಮನೆ ಬೇಕಿತ್ತು. ಇದ್ದ ಮನೆಯಲ್ಲಿ ಓದುತ್ತಿರುವ ಇತರ ಸಂಬಂಧಿ ಯುವಕರು ಇದ್ದರು. ಈ ಹೊತ್ತಿನಲ್ಲಿ ನನ್ನ ಅಜ್ಜನ ಸ್ನೇಹಿತ ಊರಿನ ಇನ್ನೊಬ್ಬ ಖ್ಯಾತ ಮೇಸ್ತ್ರಿಯಾಗಿದ್ದ ಆನೆಗುಂಡಿಯ ರಾಮಪ್ಪ ಮೇಸ್ತ್ರಿಗಳು ಪ್ರೀತಿ ಗೌರವದಿಂದ ಕಾಣುತ್ತಿದ್ದ ಅಪ್ಪನಿಗೆ ತನ್ನ ಅನೇಕ ಮನೆಗಳಲ್ಲಿ ಒಂದನ್ನು ಬಿಡಾರವಾಗಿ ನೀಡಿದರು. ಅದು ಹುಲ್ಲಿನ ಚಾವಣಿಯ ಮನೆ. ಪೇಟೆ ಎಂದೇ ಅನ್ನಿಸಿಕೊಂಡಿದ್ದ ಬಿಜೈಯಲ್ಲಿ ಹೆಂಚಿನ ಮನೆಗಳು ದಾರಿಯುದ್ದಕ್ಕೂ ಇದ್ದಂತೆಯೇ ಒಳಪ್ರದೇಶಗಳಲ್ಲಿ ಹುಲ್ಲಿನ ಮನೆಗಳು ತನ್ನ ಹಿಂದಿನ ಕಾಲವನ್ನು ನೆನಪಿಸುವಂತಿದ್ದುವು. ಹೆಂಚಿನ ಮನೆಯಲ್ಲಿ ಹುಟ್ಟಿ ಬೆಳೆದ ಸ್ನೇಹಿತನ ಮಗಳ ಮೇಲೆ ವಾತ್ಸಲ್ಯವಿದ್ದ ನನ್ನ ಅಮ್ಮನಲ್ಲಿ ಹೊಸ ಮನೆ ಕಟ್ಟಿಸಿಕೊಡುತ್ತೇನೆ ಎಂದಿದ್ದರಂತೆ. ಅದು ಸಾಧ್ಯವಾಗಲಿಲ್ಲ. ನಾನು ಈ ಹುಲ್ಲಿನ ಮನೆಯಲ್ಲೇ ಹುಟ್ಟಿದೆ. ಪಕ್ಕದ ಮನೆಯ ಅಜ್ಜಿಯೇ ಮನೆಯಲ್ಲೇ ಅಮ್ಮನ ಹೆರಿಗೆ ಮಾಡಿಸಿದರು. ಇಂದು ಲಕ್ಷಗಟ್ಟಲೆ ಕೊಟ್ಟು ಆತಂಕಪಡುತ್ತಾ ನಡೆಯುವ ಹೆರಿಗೆಗಳನ್ನು ನೋಡಿದರೆ ಖರ್ಚಿಲ್ಲದೆ ನಡೆದ ಹೆರಿಗೆ ಮಾಡಿದ ಆ ಮಹಿಳೆಯರನ್ನು ಏನೆಂದು ಕರೆಯಬೇಕು. ನನ್ನನ್ನು ಭೂಮಿಗೆ ತಂದ ಆ ಅಜ್ಜಿ ನನ್ನನ್ನು ಎತ್ತಿ ಆಡಿಸಿದರೂ ನನ್ನ ಬುದ್ಧಿ ತಿಳಿಯುವಾಗ ನೋಡಲು ಇರಲಿಲ್ಲ. ಅಂತಹ ಅನೇಕ ಅಜ್ಜಿಯಂದಿರ ಕೌಶಲ್ಯಕ್ಕೆ, ಸಾಮರ್ಥ್ಯಕ್ಕೆ ಇಂದು ಓದು ಬರಹ ಕಲಿತು ಸ್ವಾರ್ಥಿಗಳಾಗಿ ಬದುಕುತ್ತಿರುವ ತಮ್ಮ ಕಲಿಕೆಯ ಬಗೆಗೆ ಅಹಂಕಾರಪಡುವ ಮಂದಿಗೆ ಏನೆನ್ನಬೇಕು. ಅಂದು ಇದು ವೃತ್ತಿಯಾಗಿರಲಿಲ್ಲ. ಕರ್ತವ್ಯವಾಗಿತ್ತು. ನನ್ನ ಅಮ್ಮ ಮನೆಯಲ್ಲಿ ಒಬ್ಬರೇ ಇದ್ದಾಗ ಅವರ ನೆರವಿಗೆ ಪಕ್ಕದ ಮನೆಯ ಲಕ್ಷ್ಮೀಯಕ್ಕ, ಸರಸಕ್ಕ, ಅವರ ಮಕ್ಕಳು ಸದಾ ಸಿದ್ಧರು. ಅವರೆಲ್ಲ ಎತ್ತಿ ಆಡಿಸಿದ ಮಗು ನಾನು ಎಂಬುದು ಅವರಿಗೆ ಹೆಮ್ಮೆ. ಅವರ ಮಕ್ಕಳಲ್ಲಿ ನನಗಿಂತ ಹಿರಿಯರು ನನ್ನನ್ನು ಪ್ರೀತಿಯಿಂದ ಕಂಡವರು. ಚಿಕ್ಕವರು ನನ್ನಲ್ಲಿ ವಿಶ್ವಾಸವಿರಿಸಿಕೊಂಡವರು. ಇಂದು ಕೂಡಾ ಸಿಕ್ಕಿದಾಗ ಆ ಆತ್ಮೀಯತೆಯ ಮಾತುಗಳು ಬದುಕಿನ ಸಂಭ್ರಮವನ್ನು ಹೆಚ್ಚಿಸುತ್ತವೆ. ಇಲ್ಲಿ ಕೊಟ್ಟುಕೊಳ್ಳು ವುದಕ್ಕೆ ಯಾವ ವಸ್ತುಗಳೂ ಬೇಕಾಗಿಲ್ಲ. ಕೇವಲ ಮನುಷ್ಯ ಪ್ರೀತಿ.

ಈ ಮನೆಯ ಪಕ್ಕದಲ್ಲೇ ಅಮ್ಮನ ಸಹಪಾಠಿ ಕರ್ಮಿನ್ ಎಂಬವರ ಮನೆ. ತೆಂಗು ಕಂಗುಗಳ ನಡುವೆ ವೀಳ್ಯದೆಲೆಗಳ ಬಳ್ಳಿಗಳ ತೋಟ. ಅವರ ಅಮ್ಮ ದುಲ್ಸಿನ್‌ಬಾಯಿಯವರನ್ನು ‘ಬಚ್ಚಿರೆದ ಬಾಯಮ್ಮ’ ಎಂದೇ ಕರೆಯುತ್ತಿದ್ದರು. ಕರ್ಮಿನ್ ಅವರು ಪ್ರಾಥಮಿಕ ಶಾಲೆಯ ಅಧ್ಯಾಪಿಕೆಯಾಗಿದ್ದರು. ನಿವೃತ್ತಿಯ ಜೀವನ ನಡೆಸುತ್ತಿದ್ದ ಅವರು ನಮ್ಮ ಮನೆಗೆ ಯಾವಾಗಲೂ ಬಂದು ಹೋಗುತ್ತಿದ್ದವರು. ಅವರಿಬ್ಬರ ಸ್ನೇಹ ಆತ್ಮೀಯತೆಯನ್ನು ಅವರ ಮಗಳು ಮತ್ತು ನಾನು ಈಗಲೂ ಹಂಚಿಕೊಳ್ಳುತ್ತಿದ್ದೇವೆ. ಆಕೆ ನನಗೆ ಮಹಿಳಾ ಸಂಬಂಧಿತ ಕಾರ್ಯಕ್ರಮಗಳಲ್ಲಿ ಭೇಟಿಯಾಗುತ್ತಿರುತ್ತಾರೆ. ಇಂತಹ ಸ್ನೇಹದ ನಡುವೆ ಧರ್ಮ ಅಡ್ಡವಾಗುತ್ತದೆ ಎಂಬ ಹಲವರ ಅಭಿಪ್ರಾಯಗಳು ನನಗೆಂದೂ ನಿಜ ಅನ್ನಿಸಲೇ ಇಲ್ಲ. ಹಿರಿಯರ ನಡುವಿನ ಆ ವಿಶ್ವಾಸಕ್ಕೆ ಎಲ್ಲಿ ಧಕ್ಕೆ ಬರುತ್ತದೆ? ಒಂದೋ ಆಸ್ತಿಯ ವಿವಾದ, ಹಣಕಾಸಿನ ವ್ಯವಹಾರಗಳು ಮೂಗು ತೂರಿಸಿದರೆ ಅವಿಶ್ವಾಸ ಉಂಟಾಗುವುದು ಸಹಜ ಅನ್ನುವುದು ಕೂಡಾ ಸ್ವಾರ್ಥಪರರಲ್ಲಿ ಮತ್ತು ಅಸೂಯಾಪರರಲ್ಲಿ ಮಾತ್ರವೇ ಹೊರತು, ಉಳಿದವರಲ್ಲಿ ಅಲ್ಲ. ಇದು ವೈಯಕ್ತಿಕ ವಾದ ಸ್ವಭಾವಗಳಿಗನುಗುಣವಾದುದೇ ಹೊರತು ಜಾತಿ ಅಥವಾ ಧರ್ಮದ ಸ್ವಭಾವಗಳಲ್ಲವಲ್ಲಾ?

ಆನೆಗುಂಡಿಯ ಈ ಮನೆಯಿಂದ ಅದರ ಎದುರುಗಡೆಯ ಗುಡ್ಡದಲ್ಲಿರುವ ಮನೆಗೆ ಭಡ್ತಿ ಸಿಕ್ಕಿತು. ಕಾರಣ ಅಪ್ಪನಿಗೆ ಉರ್ವ ಚರ್ಚ್ ಶಾಲೆಯಲ್ಲಿ ಖಾಯಂ ಕೆಲಸ ದೊರಕಿತು. ಜತೆಗೆ ಮನೆಯಲ್ಲಿ ಚಿಕ್ಕಪ್ಪ, ಅಜ್ಜಿ, ಅತ್ತಿಗೆ ಎಲ್ಲರೂ ನಮ್ಮಿಂದಿಗೆ ಇರಲು ಬಂದಿದ್ದರು. ಈ ಹಂಚಿನ ಮನೆ ಕಾಪಿಕಾಡು ರಸ್ತೆಯಲ್ಲಿ ಆನೆಗುಂಡಿಯ ರಸ್ತೆಯ ತಿರುವಿನಲ್ಲಿರುವ ಫೆರ್ನಾಂಡಿಸರದ್ದು. ಜುಜೆಫಿನ್ ಫೆರ್ನಾಂಡಿಸ್ ತಮ್ಮ ಸೊಸೆ ಹಾಗೂ ಮೊಮ್ಮಕ್ಕಳೊಂದಿಗೆ ತಮ್ಮ ಬಾಡಿಗೆ ಮನೆಯ, ಮಲ್ಲಿಗೆ ತೋಟದ, ತೆಂಗಿನ ತೋಟದ ವ್ಯವಹಾರ ನಡೆಸುತ್ತಿದ್ದರು. ಇವರು ನಮ್ಮ ಕೇಂದ್ರ ಸಚಿವರಾಗಿದ್ದ ಜಾರ್ಜ್ ಫೆರ್ನಾಂಡಿಸರ ತಂದೆಯ ಸಹೋದರನ ಹೆಂಡತಿ. ಬಹಳ ಕಟ್ಟುನಿಟ್ಟಿನ ಶಿಸ್ತಿನ ಮಹಿಳೆ. ಸ್ವಂತ ಮನೆಯಿಂದ ದೂರದಲ್ಲಿರುವ ಪಾಸ್ ಗುಡ್ಡೆಯೆನ್ನುವ ಪದವಿನ ಬುಡದಲ್ಲಿರುವ ಗುಡ್ಡೆ. ಆ ಗುಡ್ಡೆಯ ಬುಡದಲ್ಲಿರುವ ಮನೆ ಎರಡೂ ವಿಶಾಲವಾದುದು. ಬಾಡಿಗೆ ಕೊಟ್ಟುದಕ್ಕೆ ಪಡೆದುದಕ್ಕೆ ದಾಖಲೆಯಾಗಿರುವ ಒಂದು ಸಣ್ಣ ನೋಟ್ ಬುಕ್. ಪ್ರತಿ ತಿಂಗಳೂ ಅವರ ಮನೆಗೆ ಬಾಡಿಗೆ ಕೊಡಹೋದಾಗ ಕಾಫಿ ಕುಡಿಸಿ ಕಳುಹಿಸುವ ಆತಿಥ್ಯ ಅವರದು. ಪ್ರಾರಂಭದಲ್ಲಿ ಅಪ್ಪನೇ ಹೋಗುತ್ತಿದ್ದರೆ, ಅಪರೂಪದಲ್ಲಿ ಅಮ್ಮನ ಜತೆ ನಾನು ಹೋಗುತ್ತಿದ್ದೆ. ಮುಂದೆ ಹೆಚ್ಚಿನ ವರ್ಷಗಳವರೆಗೆ ನಾನೇ ಹೋಗಿ ಬರುತ್ತಿದ್ದೆ. ಅಲ್ಲಿ ಅಜ್ಜಿ, ಅವರ ಸೊಸೆಯನ್ನು ಬಿಟ್ಟರೆ ಮೂವರು ಗಂಡು ಮಕ್ಕಳೇ. ಇಬ್ಬರು ನನಗಿಂತ ತುಂಬಾ ಹಿರಿಯರು. ಕೊನೆಯವನು ನನ್ನ ವಯಸ್ಸಿನವನು. ಹೆಣ್ಣು ಮಕ್ಕಳಿಲ್ಲದ ಮನೆಯ ಅವರಿಗೆ ನಾನು ಹೋದಾಗ ಬಹಳ ಖುಷಿ. ಆ ಅಣ್ಣಂದಿರು ಮಾತನಾಡುತ್ತಿದ್ದರೆ ಅಣ್ಣಂದಿರಿಲ್ಲದ ನನಗೂ ಖುಷಿಯೇ. ಇಂತಹ ಪ್ರೀತಿಯ ಅವಕಾಶಗಳು ಮನೆಯ ಹಿರಿಯ ಮಗಳಾದ ನನಗೇ ಹೆಚ್ಚು ಸಿಕ್ಕಿರುವುದು ಎಂದರೆ ಅದು ನನ್ನ ವೈಯಕ್ತಿಕವಾದ ಲಾಭ. ಚಿನಕುರಳಿಯಂತೆ ಮಾತನಾಡುತ್ತಿದ್ದ ನನ್ನ ಪಾಲಿಗೆ ಆತ್ಮೀಯತೆಯ ಮಾತುಗಳು ನನ್ನ ಮನೆಯವರಂತೆಯೇ ಹೀಗೆ ದೊರೆತ ಅಣ್ಣ ತಮ್ಮಂದಿರಿಂದ, ಅಕ್ಕ ತಂಗಿಯಂದಿರಿಂದ ಸಿಕ್ಕಿವೆ. ‘ಮಾತುಬೆಳ್ಳಿ ವೌನ ಬಂಗಾರ’ ಎಂಬ ಗಾದೆ ಮನುಷ್ಯ ಪ್ರೀತಿಯ ಸಂದರ್ಭದಲ್ಲಿ ಪೂರ್ಣ ಸತ್ಯವಲ್ಲ. ಮನೆ ಬದಲಾದರೂ ಊರು ಕೇರಿ ಬದಲಾಗಲಿಲ್ಲ. ವ್ಯವಹಾರ ಸಂಬಂಧಗಳೂ ಬದಲಾಗಲಿಲ್ಲ.

 ಬಿಜೈ ಎನ್ನುವ ಊರು ಆರೂವರೆ ದಶಕಗಳ ಹಿಂದೆಯೇ ಅನೇಕ ಗಣ್ಯರಿಂದ ಕೂಡಿತ್ತು ಎನ್ನುವುದು ಗಮನಾರ್ಹ. ಒಟ್ಟು ಊರಿನ ಜನರಲ್ಲಿ ಅನಕ್ಷರಸ್ಥರ ಸಂಖ್ಯೆ ಕಡಿಮೆಯೇ ಎಂದು ನನ್ನ ಭಾವನೆ. ಇನ್ನು ವಿದ್ಯಾವಂತ ರನ್ನು ಗಮನಿಸಿದರೆ, ವೈದ್ಯರು, ವಕೀಲರು, ಅಧ್ಯಾಪಕ, ಅಧ್ಯಾಪಿಕೆಯರು ನಮ್ಮೂರಲ್ಲಿ ಇದ್ದರು. ಇಂದು ಕಾಪಿಕಾಡು ರಸ್ತೆಗೆ ನಾಮಕರಣಗೊಂಡಿರುವ ವ್ಯಕ್ತಿ ಡಾ. ಕಾಶ್ಮೀರ್ ಮಥಾಯಸ್ ವಾರ್ಡ್ ಕೌನ್ಸಿಲರ್ ಆಗಿದ್ದವರು. ಇವರು ಬಡವರಿಗೆ ಉಚಿತವಾಗಿ ಔಷಧ ನೀಡುತ್ತಿದ್ದರು. ವಾರ್ಡ್ ಕೌನ್ಸಿಲರಾಗಿ ಊರಿನ ಏಳಿಗೆಯಲ್ಲಿ ಪಾಲ್ಗೊಂಡವರು. ಅವರ ಮನೆ ದೀನ ದುರ್ಬಲರಿಗೆ ಧರ್ಮ ಛತ್ರದಂತಿತ್ತು ಎಂದರೆ ತಪ್ಪಲ್ಲ. ನಮ್ಮ ತಂದೆ ವಾರ್ಡ್ ಕೌನ್ಸಿಲ್‌ನ ಗೌರವ ಕಾರ್ಯದರ್ಶಿಯಾಗಿ ಡಾ. ಮಥಾಯಸ್‌ರಿಗೆ ಆತ್ಮೀಯರಾಗಿದ್ದರು. ಈ ಕಾರಣದಿಂದ ಒಮ್ಮಿಮ್ಮೆ ಅವರ ಮನೆಗೆ ನಮ್ಮನ್ನು ಕಾರ್ಯ ನಿಮಿತ್ತ ಕಳುಹಿಸುತ್ತಿದ್ದರು. ಹಾಗೆ ಹೋದಾಗ ಮಾವಿನ ತೋಟದ ಆ ಮನೆಯಿಂದ ಸಿಹಿ ಸಿಹಿ ಮಾವಿನ ಹಣ್ಣುಗಳನ್ನು ತಿಂದ ನೆನಪು ನನ್ನದು. ಇನ್ನೊಂದು ವಿಶೇಷ ಅಂದರೆ ಸ್ವಾತಂತ್ರೋತ್ಸವದ ದಿನ ನಮ್ಮ ಕಾಪಿಕಾಡು ಶಾಲೆಯಿಂದ ಧ್ವಜಾರೋಹಣದ ಮೊದಲು ಇವರ ಮನೆಗೆ ಪ್ರಭಾತ ಫೇರಿಯಾಗಿ ಮೆರವಣಿಗೆಯಲ್ಲಿ ಬಂದು ಇಲ್ಲಿ ಧ್ವಜಾರೋಹಣ ಮಾಡಿ, ಸಿಹಿಯಾದ ಮಿಠಾಯಿ ತಿಂದು ಪುನಃ ಶಾಲೆಗೆ ಮರಳಿ ಅಲ್ಲಿ ಧ್ವಜಾರೋಹಣದ ಕಾರ್ಯಕ್ರಮ ನಡೆಯುತ್ತಿತ್ತು. ಅವರ ನಿಧನದ ವೇಳೆ ಊರಿಗೆ ಊರೇ ಸೇರಿ ಅಂತಿಮದರ್ಶನ ಪಡೆದ ಸಂದರ್ಭ, ‘ಸ್ಮಶಾನವೌನ’ ಎಂಬುದರ ಪ್ರತ್ಯಕ್ಷ ಅನುಭವ ಹಾಗೂ ವೌನದ ಹಿಂದೆ ಗಾಢವಾದ ನೋವಿನೊಂದಿಗೆ ಗೌರವ ಇರುತ್ತದೆ ಎಂಬ ಅರಿವು ಸಾಧ್ಯವಾಯಿತು. ಡಾ. ರಾಮಕೃಷ್ಣರಾಯರು ಊರಿಗೇ ಇದ್ದ ಇನ್ನೊಬ್ಬ ಪ್ರಮುಖರು. ಮುನ್ಸಿಪಲ್ ಆಸ್ಪತ್ರೆಯಲ್ಲಿದ್ದ ಅವರು ಕೂಡ ಒಳ್ಳೆಯ ಕೈಗುಣದ ಡಾಕ್ಟರರೆಂದು ಜನಪ್ರಿಯರು. ಧರ್ಮಾರ್ಥವಾಗಿದ್ದ ಈ ಆಸ್ಪತ್ರೆಗೆ ಓಡಾಟ ಮಾಡಿದವಳು ನಾನು. ನಮಗೆ ಚಿಕ್ಕಮಕ್ಕಳಿಗೆ ಯಾವಾಗಲೂ ಕಾಡುತ್ತಿದ್ದ ಶೀತ ಕೆಮ್ಮುಗಳಿಗೆ ರಾಮಬಾಣದಂತಹ ಔಷಧಿಯೊಂದು ಅಲ್ಲಿತ್ತು. ಕೆಂಪಿನ ಮಾತ್ರೆಗಳನ್ನು ತುಳಸಿರಸ, ಶುಂಠಿರಸ, ಇಲ್ಲ ಸಂಚಾರಪತ್ರೆಯ ರಸದಲ್ಲಿ ತೇದು ಜೇನು ಸೇರಿಸಿ ಎರಡು ದಿನ ನೆಕ್ಕಿದರೆ ಶೀತ ಊರುಬಿಟ್ಟೇ ಓಡಿ ದಂತೆ ಎನ್ನಿಸುತ್ತಿತ್ತು. ಡಾ. ಎಂ. ಕೇಶವ ಪೈಗಳು ವೆನ್ಲಾಕ್‌ನ ಪ್ರಸಿದ್ಧ ವೈದ್ಯರು, ಅವರು ನಮ್ಮ ಧಣಿಗಳ ಬಿಡಾರದಲ್ಲೇ ಇದ್ದರು. ಆಗ ಸರಕಾರಿ ಆಸ್ಪತ್ರೆ ಗಳಲ್ಲಿನ ವೈದ್ಯರುಗಳು ಖಾಸಗಿಯಾಗಿ ಕ್ಲಿನಿಕ್ ಇಟ್ಟುಕೊಳ್ಳುವಂತಿಲ್ಲ ಎಂಬ ನಿಯಮ ಇದ್ದಂತೆ ಇತ್ತು. ದೊಡ್ಡ ದೊಡ್ಡ ಕಾಯಿಲೆಗಳು ಬಂದಾಗ ವೆನ್ಲಾಕ್ ಆಸ್ಪತ್ರೆಗೆ ಅವರ ಬಳಿಗೆ ಹೋಗುತ್ತಿದ್ದರು ಎಂದು ಕೇಳಿದ್ದೇನೆ. ಡಾ. ಕೇಶವ ಪೈಗಳು ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈಗಳ ತಮ್ಮ ನಾರಾಯಣ ಪೈಗಳ ಮಗ. ಆದ್ದರಿಂದಲೇ ಗೋವಿಂದಪೈಗಳು ಇವರ ಮನೆಯಲ್ಲಿ ತನ್ನ ವೃದ್ಧಾಪ್ಯದಲ್ಲಿ ಇದ್ದರು. ದಿನಾ ಶಾಲೆಗೆ ಹೋಗುತ್ತಿದ್ದ ನಾನು ಈ ‘‘ಬೆಳ್ಳಿ ಮೀಸೆಯ ಮಗು’’ವನ್ನು ದೂರದಿಂದಲೇ ನೋಡುತ್ತಿದ್ದೆ. ನಾನು ಹಾಡುತ್ತಿದ್ದ ಕವಿತೆಯ ಕವಿಯನ್ನು ನೋಡಿದ ಸಂಭ್ರಮ. ನಾನು ಮೊದಲಿಗೆ ನೋಡಿದ ಕವಿ, ಸಾಹಿತಿಯೆಂದರೆ ಅವರೇ. ಇನ್ನೊಬ್ಬ ಡಾಕ್ಟರ್ ಬೈಲೂರು ಎಂದು ಪ್ರಸಿದ್ಧರಾದವರು. ಇವರು ಕೂಡಾ ದೊಡ್ಡ ವೈದ್ಯರು ಎಂದೇ ಪ್ರಸಿದ್ಧರು. ಚಿಕ್ಕ ಪುಟ್ಟ ಕಾಯಿಲೆಗಳಿಗೆ ಈ ಡಾಕ್ಟರುಗಳನ್ನು ಕಾಣುವ ಅಗತ್ಯವಿರುತ್ತಿರಲಿಲ್ಲ. ಇವರು ಕೂಡಾ ಆನೆಗುಂಡಿ ರಸ್ತೆಯಲ್ಲಿ ನೆಲೆಸಿದ್ದರು.

 ಈ ಊರಿಗೆ ಹೊಸದಾಗಿ ಬಂದು ಖಾಸಗಿ ಕ್ಲಿನಿಕ್ ತೆರೆದು ಬಹಳಷ್ಟು ವರ್ಷ ಜನಪ್ರಿಯರಾದವರು ಡಾ. ಎಚ್.ಡಿ. ಅಡ್ಯಂತಾಯರು. ನಮ್ಮ ಮನೆ ಡಾಕ್ಟರರಾದರು. ಅಪ್ಪನ ಸ್ನೇಹಿತರಾದರು. ಅಗತ್ಯಬಿದ್ದಾಗ ರೋಗಿಗಳನ್ನು ಕಾಣಲು ಅವರ ಮನೆಗೆ ಹೋಗುವ ರೂಢಿ ಇಟ್ಟುಕೊಂಡಿದ್ದರು. ನನ್ನ ಪಾಲಿಗೆ ಡಾಕ್ಟರ್‌ಮಾಮ ಆಗಿದ್ದ ಇವರಲ್ಲಿ ನಾನು ಸಂಜೆಯ ವೇಳೆಗೆ ಔಷಧಿಗೆ ಹೋದರೆ ಅವರು ರಾತ್ರಿ ಕ್ಲಿನಿಕ್ ಮುಚ್ಚುವವರೆಗೆ ಕುಳಿತು ಆಟವಾಡುತ್ತಿದ್ದೆ. ರಾತ್ರಿ ಅಪ್ಪ ಬಂದು ನನ್ನನ್ನು ಕರೆದೊಯ್ಯುತ್ತಿದ್ದರು. ಅವರೊಂದಿಗಿನ ತಮಾಷೆಯ ಮಾತುಗಳಲ್ಲಿ ಒಂದು ನೆನಪಿರುವಂತಹುದು ಎಂದರೆ ನನ್ನ ಹೆಸರು ಚೆನ್ನಾಗಿಲ್ಲ. ನನಗೆ ಬೇರೆ ಹೆಸರು ಬೇಕು ಎಂದು ಹೇಳುತ್ತಿದ್ದೆನಂತೆ. ಅದಕ್ಕೆ ಅವರು ನನಗೆ ತುಳುವಿನ ಅಡ್ಡಹೆಸರೊಂದನ್ನಿಟ್ಟು ತಮಾಷೆ ಮಾಡುತ್ತಿದ್ದರು. ಅವರಲ್ಲಿ ನನಗೆ ಗೊತ್ತಿದ್ದಂತೆ ಮೂರು ಮಂದಿ ಕಾಂಪೌಂಡರುಗಳು ಒಬ್ಬರಾದ ಮೇಲೆ ಒಬ್ಬರಿದ್ದರು. ಅವರಲ್ಲಿ ಒಬ್ಬ ಚಿಕ್ಕ ಪ್ರಾಯದ ಯುವಕನಿದ್ದ. ಅವನಿಗೆ ಸಿಟ್ಟು ಬಂದು ವೌನಿಯಾದರೆ ಅವನಿಗೆ ಇವತ್ತು ‘ಸಿಡಿಲು ಹೊಡೆದಿದೆ’ ಎಂದು ತಮಾಷೆ ಮಾಡುತ್ತಿದ್ದರು. ಸ್ನೇಹಶೀಲರಾಗಿದ್ದ ಡಾಕ್ಟರರ ಬಳಿ ಸಂಜೆಯ ಹೊತ್ತು ಕ್ಲಿನಿಕ್ ವೇಳೆಯ ಬಳಿಕ ನನ್ನ ಅಪ್ಪನೂ ಸೇರಿದಂತೆ ಇನ್ನು ಕೆಲವರು ಸ್ನೇಹಿತರು ಮಾತನಾಡುತ್ತಾ ಕಾಲ ಕಳೆಯುತ್ತಿದ್ದರು. ಇವರ ಜತೆಗೆ ಡಾ. ಲಲಿತಾ ಶೆಟ್ಟಿ ಎನ್ನುವವರು ವಾರದಲ್ಲಿ ಎರಡು ಬಾರಿ ಬರುತ್ತಿದ್ದರು. ಸರಳವಾದ ಉಡುಗೆಯೊಂದಿಗೆ ನಿರಾಭರಣ ಸುಂದರಿ ಆ ಮಹಿಳಾ ವೈದ್ಯೆ. ಉದ್ದ ಕೂದಲಿನ ಅವರ ಕೇಶ ವಿನ್ಯಾಸದ ಸೂಡಿ ಆ ಕಾಲಕ್ಕೆ ಸಿನೆಮಾದ ತಾರೆಯರಂತೆ ಎಂದನ್ನಿಸುತ್ತಿತ್ತು. ನಮ್ಮ ಊರಿನ ಮಹಿಳೆಯರು ಈಗ ಸ್ವತಃ ತಾವೇ ಈ ವೈದ್ಯೆಯ ಬಳಿಗೇ ಹೋಗಿ ರೋಗ ತಪಾಸಣೆ ಮಾಡಿಕೊಳ್ಳಲು ಸಾಧ್ಯವಾಯಿತು. ಇವರಿಬ್ಬರೂ ಬಿಜೈಯ ಊರಿನಲ್ಲಿ ಪಡೆದ ಜನಪ್ರಿಯತೆ ಅಪಾರ. ಡಾ. ಅಡ್ಯಂತಾಯರು ರೋಟರಿ ಸಂಸ್ಥೆಯ ಸದಸ್ಯರಾಗಿದ್ದರು. ನನಗೆ ರೋಟರಿ ಸಂಸ್ಥೆಯ ಬಗೆಗಿನ ಪರಿಚಯ ಅವರಿಂದಲೇ ಆಯಿತು. ಮುಂದೆ ನಾನು ಅನೇಕ ರೋಟರಿ ಸಂಸ್ಥೆಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ರೊಟೇರಿಯನ್ ಡಾಕ್ಟರ್ ಮಾಮನ ಬಗ್ಗೆ ನೆನಪಿಸಿಕೊಳ್ಳುತ್ತಾ ನನ್ನ ಬಾಲ್ಯದಲ್ಲಿ ಅವರು ತೋರಿದ ವಾತ್ಸಲ್ಯವನ್ನು ಅನುಭವಿಸುತ್ತಾ ಬಂದಿದ್ದೇನೆ. ಇಂತಹ ಅನುಭವಗಳೇ ಸಿಹಿ. ಅವುಗಳ ನೆನಪಂತೂ ಮತ್ತೂ ಸಿಹಿಯಲ್ಲವೇ. ಸಂತೃಪ್ತ ಬದುಕಿಗೆ ಇವುಗಳು ಬುತ್ತಿ ಊಟವಲ್ಲವೇ?

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News