×
Ad

ನನಸಾಗುವುದೇ ಚೋಮನ ಕನಸು?

Update: 2016-08-24 23:28 IST

 ‘ಅಡಿಕೆ ಕದ್ದರೆ ಕಳ್ಳ, ಭೂಮಿ ಕದ್ದರೆ ಅರಸ’ ಪ್ರಸಿದ್ಧ ಚೀನಾ ತತ್ವಶಾಸ್ತ್ರಜ್ಞನೊಬ್ಬನ ಸಾಲುಗಳಿವು. ಭಾರತಕ್ಕಂತೂ ಹೆಚ್ಚು ಒಪ್ಪುವ ಮಾತುಗಳು ಇವು. ಇಲ್ಲಿ ಸಣ್ಣ ಪುಟ್ಟ ಕಳ್ಳತನಗಳನ್ನು ಮಾಡಿದವರೆಲ್ಲ ಜೈಲಲ್ಲಿ ಕಂಬಿ ಎಣಿಸುತ್ತಿದ್ದಾರೆ. ಆದರೆ ಭೂಮಿಯನ್ನು ಕದ್ದವನು ಅರಸನಾಗಿ ರೈತರನ್ನು, ಬಡವರನ್ನು ತುಳಿಯುತ್ತಿದ್ದಾನೆ. ಅಂತಿಮವಾಗಿ ಭೂಮಿಯ ಹಕ್ಕು ಮನುಷ್ಯನ ಸ್ವಾತಂತ್ರಕ್ಕೆ ಅರ್ಥ ತುಂಬುತ್ತದೆ. ತಾನು ದುಡಿಯುವ ಭೂಮಿ ತನ್ನದು ಎನ್ನುವ ಅಭಿಮಾನವೇ ಸ್ವಾತಂತ್ರ. ಆ ಸ್ವಾತಂತ್ರ ಭಾರತಕ್ಕೆ ಇನ್ನೂ ಸಿಕ್ಕಿದೆ ಎನ್ನುವುದನ್ನು ನಾವು ಒಪ್ಪಿಕೊಳ್ಳುವುದು ಕಷ್ಟವಾಗಿದೆ. ಯಾಕೆಂದರೆ ಇಂದಿಗೂ ಈ ದೇಶದ ಭೂಮಿಯ ಬಹುಪಾಲು ಬೆರಳೆಣಿಕೆಯ ಜನರ ಕೈಯಲ್ಲಿದೆ. ಬಹುಸಂಖ್ಯೆಯ ಜನರು ಭೂಮಿಯಿಂದ ವಂಚಿತರಾಗಿದ್ದಾರೆ. ಅವರು ಇನ್ನೊಬ್ಬರ ಭೂಮಿಯ ಹಂಗಿನಲ್ಲಿದ್ದಾರೆ. ವಿಪರ್ಯಾಸದ ಸಂಗತಿಯೆಂದರೆ, ಸದ್ಯದ ಸಂದರ್ಭದಲ್ಲಿ ಅಳಿದುಳಿದ ಬಡವರ ಭೂಮಿಯ ಹಕ್ಕನ್ನೂ ಕಿತ್ತುಕೊಳ್ಳುವ ಸಂಚು ನಡೆಯುತ್ತಿದೆ. ಜಮೀನ್ದಾರರು ಸೂಟು ಬೂಟುಗಳ ವೇಷದಲ್ಲಿ ಬರುತ್ತಿದ್ದಾರೆ. ಶೋಷಣೆಯ ಜಾಗದಲ್ಲಿ ಅಭಿವೃದ್ಧಿ ಎನ್ನುವ ಪದವನ್ನು ಅಚ್ಚು ಹಾಕಿಸಲಾಗಿದೆ. ಬಹುಶಃ ಭಾರತದ ಸದ್ಯದ ಎಲ್ಲ ಸಮಸ್ಯೆಗಳ ಮೂಲವೂ ಭೂಮಿಯನ್ನು ಕೇಂದ್ರವಾಗಿಸಿಕೊಂಡಿದೆ. ಸಂಪನ್ಮೂಲಗಳು ವ್ಯವಸ್ಥಿತವಾಗಿ ಹಂಚಿ ಹೋಗದ ಕಾರಣಕ್ಕಾಗಿಯೇ ಇಲ್ಲಿನ ಜನಸಂಪನ್ಮೂಲ ನಮಗೆ ಭಾರವಾಗಿದೆ.

 ಕರ್ನಾಟಕವನ್ನೇ ತೆಗೆದುಕೊಳ್ಳೋಣ. ಇಲ್ಲೀಗ ಮಾಜಿ ಮುಖ್ಯಮಂತ್ರಿ ದಿ. ದೇವರಾಜ ಅರಸರ ವೈಭವೀಕರಣ ನಡೆಯುತ್ತಿದೆ. ಸರಕಾರದ ನೇತೃತ್ವದಲ್ಲೇ ಅರಸರ ಫೋಟೊವನ್ನು ಅಂಬಾರಿಯಲ್ಲಿಟ್ಟು ಮೆರವಣಿಗೆ ಮಾಡಲಾಗುತ್ತಿದೆ. ಆದರೆ ಇದೇ ಸಂದರ್ಭದಲ್ಲಿ ಅರಸರ ಕನಸು ನನಸು ಮಾಡುವ ಕುರಿತಂತೆ ಸರಕಾರಕ್ಕೆ ಯಾವ ಆಸಕ್ತಿಯೂ ಇಲ್ಲವಾಗಿದೆ. ದೇವರಾಜ ಅರಸರ ಕಾರಣದಿಂದಾಗಿಯೇ 50ರ ದಶಕದಲ್ಲಿ ಜಾರಿಗೆ ಬಂದ ಭೂಸುಧಾರಣೆ ಕಾಯ್ದೆ ಸ್ವಲ್ಪ ಮಟ್ಟಿಗೆ ರಾಜ್ಯದಲ್ಲಿ ಅನುಷ್ಠಾನಕ್ಕೆ ಬಂತು. ಆದರೆ ಅದು ಅರ್ಧದಲ್ಲೇ ನಿಂತು ಹೋಯಿತು. ಅಥವಾ ಭಾಗಶಃ ವಿಫಲವಾಯಿತು. ಇಂದು ಅವರ ಆ ಕನಸಿನ ಭಜನೆಯಷ್ಟೇ ನಡೆಯುತ್ತಿದೆ. ಅವುಗಳನ್ನು ಮತ್ತೆ ಕಾರ್ಯರೂಪಕ್ಕೆ ತರುವ ಕುರಿತ ಆಸಕ್ತಿ ಯಾರಿಗೂ ಇದ್ದಂತಿಲ್ಲ. ಹಿಂದಿನಕಾಲದ ಕೃಷಿಪದ್ಧತಿಯ ಪರಿಣಾಮವಾಗಿ ಕೃಷಿ ಉತ್ಪಾದನೆಗಳ ಮೇಲಾಗುತ್ತಿರುವ ತೊಡಕುಗಳನ್ನು ನಿವಾರಿಸುವ ಭಾಗವಾಗಿ ಮೂರನೇ ಪಂಚವಾರ್ಷಿಕ ಯೋಜನೆಯಲ್ಲಿ ಭೂಸುಧಾರಣೆಯನ್ನು ಪ್ರಸ್ತಾಪಿಸಲಾಯಿತು. ಇದರೊಂದಿಗೆ ಸಾಮಾಜಿಕ ಅನ್ಯಾಯ ಸೇರಿದಂತೆ ಎಲ್ಲಾ ರೀತಿಯ ಶೋಷಣೆಗಳನ್ನು ತೆಗೆದುಹಾಕುವ ಮತ್ತು ರೈತರಿಗೆ ಭದ್ರತೆಯನ್ನು ಒದಗಿಸುವ ಹಾಗೂ ಗ್ರಾಮೀಣ ಭಾಗದ ಎಲ್ಲಾ ಸಮುದಾಯದ ಜನರಿಗೆ ಸಮಾನ ಅವಕಾಶಗಳನ್ನು ಒದಗಿಸುವ ಬಗ್ಗೆ ಒತ್ತು ನೀಡಲಾಗಿತ್ತು. ಬಹುಮುಖ್ಯವಾಗಿ ಬ್ರಿಟಿಷರ ಕಾಲದಲ್ಲಿ ಹೇರಲಾದ ಮತ್ತು ದೇಶದ ಜನಸಂಖ್ಯೆಯಲ್ಲಿ ಬಹುಸಂಖ್ಯಾತರಾಗಿರುವ ರೈತರ ನಿರಂತರ ಶೋಷಣೆಗೆ ಮೂಲ ಕಾರಣವಾದ ಜಮೀನ್ದಾರಿ ವ್ಯವಸ್ಥೆಯನ್ನು ತೆಗೆದುಹಾಕುವ ಬಗ್ಗೆ ಒತ್ತು ನೀಡಲಾಗಿತ್ತು. ಜಮೀನ್ದಾರರ ಹಿಡಿತ ಭಾರತದಲ್ಲಿ ಎಷ್ಟು ಆಳವಾಗಿತ್ತು ಎಂದರೆ, ಕೇವಲ ದಿಲ್ಲಿಯಲ್ಲಾದ ಅಧಿಕಾರ ಹಸ್ತಾಂತರವನ್ನು ಸ್ವಾತಂತ್ರ ಎಂದು ಕರೆಯುವ ಸ್ಥಿತಿ ದೇಶದಲ್ಲಿ ಇದ್ದಿರಲಿಲ್ಲ.

ಗ್ರಾಮೀಣ ಪ್ರದೇಶದಲ್ಲಿ ರೈತರು, ಬಡವರು ಶ್ರೀಮಂತರ ಭೂಮಿಯಲ್ಲಿ ದುಡಿಯಬೇಕಾಗಿತ್ತು. ಜೀತ, ಅನಕ್ಷರತೆ, ಬಡತನ ಇವೆಲ್ಲದರ ಮೂಲವೂ ಈ ಜಮೀನ್ದಾರಿ ಪದ್ಧತಿಯೇ ಆಗಿತ್ತು. ಅವರ ಬಿಡುಗಡೆಯೆಂದರೆ ಈ ದೇಶದ ಕೃಷಿ ವಲಯದ ಸುಧಾರಣೆಯೂ ಹೌದು. ಈ ಮಹತ್ತ ಉದ್ದೇಶವನ್ನು ಇಟ್ಟುಕೊಂಡು ಭೂಸುಧಾರಣೆ ಕಾಯ್ದೆ ಜಾರಿಗೆ ಬಂತು. ಭೂಸುಧಾರಣೆಯನ್ನು ರಾಜ್ಯಪಟ್ಟಿಯ ಏಳನೆ ಪರಿಚ್ಛೇದದ ಸಂಖ್ಯೆ 18ರಲ್ಲಿ ಉಲ್ಲೇಖಿಸಲಾಗಿದ್ದು ಜಮೀನು, ಅದರಲ್ಲಿ ಅಥವಾ ಅದರ ಮೇಲಿನ ಹಕ್ಕು, ಜಮೀನಿನ ಅಧಿಕಾರಾವಧಿ ಭೂಮಾಲಕ ಮತ್ತು ಹಿಡುವಳಿದಾರರ ನಡುವಿನ ಸಂಬಂಧವೂ ಸೇರಿ, ಬಾಡಿಗೆಯ ಸಂಗ್ರಹಣೆ, ವರ್ಗಾವಣೆ ಮತ್ತು ಕೃಷಿಭೂಮಿಯ ಹಸ್ತಾಂತರ; ಜಮೀನು ಅಭಿವೃದ್ಧಿ ಮತ್ತು ಕೃಷಿ ಸಾಲ ಇವೆಲ್ಲವೂ ಒಳಗೊಳ್ಳುತ್ತದೆ. ಆದರೆ ಅದು ತನ್ನ ಗುರಿಯನ್ನು  ತಲುಪುವಲ್ಲಿ ಮಾತ್ರ ಸಂಪೂರ್ಣ ವಿಫಲವಾಯಿತು. ಇಂದು ಭೂ ಹಂಚಿಕೆಯ ಪ್ರಶ್ನೆ ಪಕ್ಕಕ್ಕಿರಲಿ, ಇರುವ ಭೂಮಿಯನ್ನು ಮತ್ತೆ ಕಿತ್ತುಕೊಳ್ಳುವ ಸಂಚುಗಳು ನಡೆಯುತ್ತಿವೆ. ಕಳಪೆ ಭೂ ಕಾನೂನು ಈ ದೇಶದ ಕೃಷಿ ವ್ಯವಸ್ಥೆಯನ್ನು ಸರ್ವನಾಶಗೊಳಿಸುತ್ತಿದೆ. ಭೂಸುಧಾರಣೆ ಕಾಯ್ದೆ ತನ್ನ ಅನುಷ್ಠಾನದಲ್ಲಿ ವಿಫಲವಾಗುವುದಕ್ಕೆ ಏನು ಕಾರಣ? ಬೇರೇನೂ ಅಲ್ಲ. ಅನುಷ್ಠಾನಗೊಳಿಸಬೇಕಾದವರ ಸ್ಥಾನದಲ್ಲಿ ಬಹಳಷ್ಟು ಮಂದಿ ಜಮೀನ್ದಾರರೇ ಸೇರಿದ್ದರು. ಹಾಗೆಯೇ ಉತ್ತರ ಭಾರತ ಅದರಲ್ಲೂ ಬಿಹಾರ, ಉತ್ತರ ಪ್ರದೇಶ, ರಾಜಸ್ಥಾನ ಮೊದಲಾದ ರಾಜ್ಯಗಳು ಅಕ್ಷರಶಃ ಜಮೀನ್ದಾರರ ಹಿಡಿತದಲ್ಲಿತ್ತು. ಕರ್ನಾಟಕದಲ್ಲಿ ಉತ್ತರ ಕರ್ನಾಟಕವೂ ಇದಕ್ಕಿಂತ ಭಿನ್ನವಾಗಿಯೇನೂ ಇರಲಿಲ್ಲ. ಈ ಕಾರಣದಿಂದಲೇ ಕಾನೂನು ಜಾರಿಗೆ ಕೇಂದ್ರದ ಜೊತೆಗೆ ಬಹುಪಾಲು ರಾಜ್ಯಗಳು ಸಹಕರಿಸಲೇ ಇಲ್ಲ. ರಾಜ್ಯ ಮತ್ತು ಕೇಂದ್ರದ ನಡುವಿನ ಹೊಂದಾಣಿಕೆಯ ಕೊರತೆ, ಭೂಸುಧಾರಣೆ ಕಾಯ್ದೆ ಅನುಷ್ಠಾನಕ್ಕೆ ಬಹುದೊಡ್ಡ ಅಡ್ಡಿಯಾಯಿತು.

ತುರ್ತು ಪರಿಸ್ಥಿತಿಯ ಕುರಿತಂತೆ ಆಕ್ಷೇಪಣೆಗಳೇನೇ ಇದ್ದರೂ ದೇವರಾಜ ಅರಸರು ಆ ಸಂದರ್ಭವನ್ನು ರೈತರಿಗೆ ಪೂರಕವಾಗಿ ಬಳಸಿಕೊಂಡರು. ಭೂಸುಧಾರಣೆ ಕಾಯ್ದೆಯನ್ನು ಯಾವುದೇ ರಾಜಿಯಿಲ್ಲದೆ ಅನುಷ್ಠಾನಕ್ಕೆ ತರಲು ತುರ್ತು ಪರಿಸ್ಥಿತಿಯ ಸರ್ವಾಧಿಕಾರ ನೆರವು ನೀಡಿತು. ಆದರೆ ಉಳಿದ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಕಾಯ್ದೆ ಜಾರಿಗೊಳ್ಳುವುದೇ ಬೇಕಾಗಿರಲಿಲ್ಲ. ಇದೇ ಸಂದರ್ಭದಲ್ಲಿ ಕೃಷಿ ಕ್ರಾಂತಿ ಜಮೀನ್ದಾರರನ್ನು ಇನ್ನಷ್ಟು ಶ್ರೀಮಂತರನ್ನಾಗಿಸಿತೇ ಹೊರತು ಭೂಮಿಯಿಲ್ಲದ ರೈತರಿಗೆ ಅದು ಒಳಿತನ್ನು ಮಾಡಲಿಲ್ಲ. ಭೂಮಿಯಲ್ಲಿ ನಿಜಕ್ಕೂ ದುಡಿಯುವ ಮಂದಿಯನ್ನು ಮೇಲೇಳದಂತೆ ಹಿಡಿದಿಟ್ಟಿತು. ಇಂದು ಭೂಮಿಯ ಹಕ್ಕು ದುಡಿಯುವ ಕೈಗಳಿಂದ ಇನ್ನಷ್ಟು ದೂರವಾಗುತ್ತಿದೆ. ಜಮೀನ್ದಾರರು ಬೇರೆ ಬೇರೆ ವೇಷಗಳಲ್ಲಿ ಬರುತ್ತಿದ್ದಾರೆ. ಇರುವ ಭೂಮಿಯೇ ಕೈ ತಪ್ಪುತ್ತಿರುವ ಸಂದರ್ಭದಲ್ಲಿ ಸಣ್ಣ ಪುಟ್ಟ ರೈತರ ಭೂಮಿಯ ಕನಸು ಕನಸಾಗಿಯೇ ಉಳಿಯುವ ಸಾಧ್ಯತೆಗಳಿವೆ. ಸದ್ಯ ಸರಕಾರ ಬೃಹತ್ ಉದ್ಯಮಿಗಳಿಗಾಗಿ ಭೂ ಒತ್ತುವರಿ ಕಾಯ್ದೆಯನ್ನು ಇನ್ನಷ್ಟು ಸುಲಭಗೊಳಿಸಿದೆ. ಇದರಿಂದಾಗಿ ಕೈಗಾರಿಕೆಗಳ ಮುಖವಾಡದಲ್ಲೇ ಉದ್ಯಮಿಗಳು ರಿಯಲ್ ಎಸ್ಟೇಟ್ ವ್ಯವಹಾರಗಳನ್ನು ನಡೆಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News