ಪತ್ನಿಯ ಶವವನ್ನು ಹೆಗಲಲ್ಲೇ ಹೊತ್ತೊಯ್ದ ಆಧುನಿಕ ತ್ರಿವಿಕ್ರಮ

Update: 2016-08-25 06:28 GMT

ಕಾಳಹಂದಿ,ಆ.25: ರಾಜಾ ತ್ರಿವಿಕ್ರಮನು ಎಂದಿನಂತೆ ಮರದಲ್ಲಿ ನೇತಾಡುತ್ತಿದ್ದ ಶವವನ್ನು ಹೆಗಲಿಗೇರಿಸಿಕೊಂಡು ಹೊರಟಾಗ ಶವದೊಳಗಿದ್ದ ಬೇತಾಳನು ಮಾತನಾಡತೊಡಗಿತು ಎಂದು ಆರಂಭವಾಗುತ್ತಿದ್ದ ಚಂದಮಾಮದ ಬೇತಾಳ ಕಥೆಗಳನ್ನು ಓದಿದ್ದೀರಾ? ಇಲ್ಲಿದೆ ನೋಡಿ ಮತ್ತೊಂದು ಆಧುನಿಕ ಬೇತಾಳ ಕಥೆ!

ಶವಸಾಗಾಟ ವಾಹನ ನೀಡಲು ನಿರಾಕರಿಸಿದ್ದಕ್ಕಾಗಿ ದಾನಾ ಮಾಂಝಿ ಎಂಬ ವ್ಯಕ್ತಿ ತನ್ನ ಪತ್ನಿಯ ಶವವನ್ನು ಹೆಗಲಲ್ಲೇ ಹೊತ್ತೊಯ್ಯಬೇಕಾಗಿ ಬಂದ ನೈಜ ಕಥೆ ಇದು. ನಮ್ಮ ಸರ್ಕಾರಿ ವ್ಯವಸ್ಥೆಗೆ ಕನ್ನಡಿ ಹಿಡಿಯುವಂಥದ್ದು.

ಘಟನೆ ವಿವರ ಇಷ್ಟೇ. ಒಡಿಶಾದ ಕಾಳಹಂದಿ ಜಿಲ್ಲೆಯ ಭವಾನಿಪಟ್ಣದ 42 ವರ್ಷದ ಮಹಿಳೆ ಅಮಂಗ್ ದೇವಿ ಎಂಬಾಕೆಯನ್ನು ಕ್ಷಯ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ಸೇರಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಆಕೆ ಮೃತಪಟ್ಟಾಗ, ಶವ ಸಾಗಿಸಲು ಮಾಂಝಿ ಆಸ್ಪತ್ರೆ ಅಧಿಕಾರಿಗಳಲ್ಲಿ ಶವ ಸಾಗಾಟ ವಾಹನ ನೀಡುವಂತೆ ಕೋರಿದರು. ಅದಕ್ಕೆ ನಿರಾಕರಿಸಿದಾಗ, 12 ವರ್ಷದ ಮಗಳನ್ನೂ ಜತೆಯಲ್ಲಿ ಕರೆದೊಯ್ದು, ಪತ್ನಿಯ ಶವವನ್ನು ಹೆಗಲಲ್ಲೇ ಹೊತ್ತೊಯ್ದರು.

"ನಾನು ಬಡವ. ವಾಹನ ಬಾಡಿಗೆಗೆ ಪಡೆದು ಶವ ಸಾಗಿಸುವಷ್ಟು ಚೈತನ್ಯ ಇಲ್ಲ. ಆದರೆ ಆಸ್ಪತ್ರೆ ಅಧಿಕಾರಿಗಳು ವಾಹನ ಇಲ್ಲ ಎಂದು ಹೇಳಿದರು. ಪದೇ ಪದೇ ಗೋಗರೆದರೂ ನನ್ನ ನೆರವಿಗೆ ಬರಲಿಲ್ಲ" ಎಂದು ಮಾಂಝಿ ಹೇಳಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಯವರನ್ನು ಕೇಳಿದಾಗ, ಇದು ದುರದೃಷ್ಟಕರ ಘಟನೆ. ತಕ್ಷಣ ಮಾಂಝಿ ಕುಟುಂಬಕ್ಕೆ ಹರಿಶ್ಚಂದ್ರ ಯೋಜನೆಯಡಿ ಎರಡು ಸಾವಿರ ರೂಪಾಯಿಯನ್ನು ನೀಡಲಾಗುವುದು. ಜತೆಗೆ 10 ಸಾವಿರ ರೂಪಾಯಿಗಳ ನೆರವನ್ನು ರೆಡ್‌ಕ್ರಾಸ್ ನಿಧಿಯಿಂದಲೂ ನೀಡಲಾಗುವುದು ಎಂದು ಪ್ರತಿಕ್ರಿಯಿಸಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News