ಗ್ರೀನ್ ಟೀ ಸೇವನೆಯಿಂದ ಕ್ಯಾಟರಾಕ್ಟ್ ಸಮಸ್ಯೆ ನಿಯಂತ್ರಣ
ಹೊಸದಿಲ್ಲಿ, ಆ.26: ಗ್ರೀನ್ ಟೀ ಸೇವನೆಯಿಂದ ಕ್ಯಾಟರಾಕ್ಟ್ ಸಮಸ್ಯೆಯನ್ನು ನಿಯಂತ್ರಣದಲ್ಲಿಡಬಹುದೆಂದು ಐಐಟಿ ಖರಗಪುರದ ತಜ್ಞರು ನಡೆಸಿರುವ ಸಂಶೋಧನೆಯೊಂದರಿಂದ ತಿಳಿದು ಬಂದಿದೆ. ಈ ಸಂಶೋಧನಾ ವರದಿಯನ್ನು ರಾಯಲ್ ಸೊಸೈಟಿ ಆಫ್ ಕೆಮಿಸ್ಟ್ರಿ ಜರ್ನಲ್, ಮೋಲಿಕ್ಯುಲರ್ ಬಯೋ ಸಿಸ್ಟಮ್ಸ್‌ನಲ್ಲಿ ಪ್ರಕಟಿಸಲಾಗಿದೆ.
ಪ್ರೊ.ಸ್ವಾಗತಾ ದಾಸಗುಪ್ತಾ ಮತ್ತವರಸಂಶೋಧನಾ ತಂಡವು ಸಂಶೋಧನಾ ವಿದ್ಯಾರ್ಥಿ ಸುಸ್ಮಿತ್ ನಾರಾಯಣ್ ಚೌಧುರಿಯವರ ನೇತೃತ್ವದಲ್ಲಿಸಿದ್ಧಪಡಿಸರುವ ಈ ವರದಿಯಲ್ಲಿ ತಿಳಿಸಿರುವಂತೆ ಗ್ರೀನ್ ಟೀಯಲ್ಲಿರುವ ಆ್ಯಂಟಿ ಓಕ್ಸಿಡೆಂಟ್‌ಗಳಿಂದಾಗಿ ಅವುಗಳು ಕಣ್ಣುಗಳನ್ನು ಹಾನಿಕಾರಕ ಅಲ್ಟ್ರಾ ವಾಯಿಲೆಟ್ ಕಿರಣಗಳಿಂದ ರಕ್ಷಿಸುತ್ತವೆ. ಈ ಕಿರಣಗಳಿಂದುಂಟಾಗುವ ಹಾನಿಯಿಂದಲೇ ವಯಸ್ಕರ ಕಣ್ಣುಗಳಲ್ಲಿ ಕ್ಯಾಟರಾಕ್ಟ್ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಗ್ರೀನ್ ಟೀಯಲ್ಲಿ ಕಾಣಸಿಗುವ ಇಸಿಜಿಸಿ ಎಂಬ ಕೆಮಿಕಲ್ ಕಂಪೌಂಡ್‌ಕಣ್ಣುಗಳನ್ನು ರಕ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಗ್ರೀನ್ ಟೀಯಲ್ಲಿ ಪೋಲಿಫಿನೋಲ್ ಆ್ಯಂಟಿ-ಓಕ್ಸಿಡೆಂಟುಗಳಿದ್ದು, ಸಾಮಾನ್ಯ ಟೀ ಸಂಸ್ಕರಣಾ ಪ್ರಕ್ರಿಯೆಯಲ್ಲಿ ಅದರ ಶಕ್ತಿ ಕುಂಠಿತವಾಗುವುದಾದರೂ, ಗ್ರೀನ್ ಟೀಯಲ್ಲಿಸಾಮಾನ್ಯ ಟೀ ಮಾಡುವಷ್ಟು ಕ್ಲಿಷ್ಟ ಸಂಸ್ಕರಣೆ ಅಗತ್ಯವಿಲ್ಲದಿರುವುದರಿಂದ ಅದು ಕ್ಯಾಟರಾಕ್ಟ್ ನಿಯಂತ್ರಿಸುವಲ್ಲಿ ಸಹಕಾರಿ ಎಂದು ಪ್ರೊ.ದಾಸಗುಪ್ತಾ ಹೇಳುತ್ತಾರೆ.
ನಲ್ವತ್ತರ ಮೇಲಿನ ವಯಸ್ಸಿನವರಲ್ಲಿ ಕ್ಯಾಟರಾಕ್ಟ್ ಸಮಸ್ಯೆ ಸಾಮಾನ್ಯವಾಗಿದ್ದು ವಿಶ್ವದಾದ್ಯಂತ ಕ್ಯಾಟರಾಕ್ಟ್ ಅಂಧತ್ವಕ್ಕೆ ಒಂದು ಪ್ರಮುಖಕಾರಣವಾಗಿದೆ. ಪ್ರಸಕ್ತ ಕ್ಯಾಟರಾಕ್ಟ್ ಸಮಸ್ಯೆಗೆ ಶಸ್ತ್ರಕ್ರಿಯೆಯಲ್ಲದೆ ಬೇರೆ ಯಾವುದೇ ಪರಿಹಾರವಿಲ್ಲವಾಗಿದೆ.