ಬಾಬಾ ರಾಮದೇವ್ ಚಮತ್ಕಾರ: ಟಾಪ್ 3ನೇ ಸ್ಥಾನಕ್ಕೆ ಹಾರಿದ ಪತಂಜಲಿ ಬ್ರ್ಯಾಂಡ್
ಹೊಸದಿಲ್ಲಿ: ಯೋಗಗುರು ಬಾಬಾ ರಾಮದೇವ್ ಚಮತ್ಕಾರದಿಂದಾಗಿ ಕೇವಲ ಹತ್ತೇ ತಿಂಗಳಲ್ಲಿ ಪತಂಜಲಿ ಆಯುರ್ವೇದ, ಫ್ಯೂಚರ್ ರೀಟೈಲ್ ಮಳಿಗೆಗಳಲ್ಲಿ ಮೂರನೇ ಅತಿದೊಡ್ಡ ಎಫ್‌ಎಂಜಿಸಿ ಉತ್ಪನ್ನಗಳ ಮಾರಾಟ ಬ್ರ್ಯಾಂಡ್ ಆಗಿ ಬೆಳೆದಿದೆ.
"ಫ್ಯೂಚರ್ ಚಿಲ್ಲರೆ ಮಳಿಗೆಗಳಲ್ಲಿ ಪತಂಜಲಿ ಉತ್ಪನ್ನಗಳು ಮಾರಾಟದಲ್ಲಿ ಮೂರನೇ ಸ್ಥಾನದಲ್ಲಿವೆ. ಹಿಂದೂಸ್ತಾನ್ ಯೂನಿಲಿವರ್ ಹಾಗೂ ಪ್ರಾಕ್ಟರ್ ಅಂಡ್ ಗ್ಯಾಂಬಲ್ ಮೊದಲ ಎರಡು ಸ್ಥಾನಗಳಲ್ಲಿವೆ" ಎಂದು ಫ್ಯೂಚರ್ ಸಿಇಓ ಕಿಶೋರ್ ಬಿಯಾನಿ ಪ್ರಕಟಿಸಿದ್ದಾರೆ.
ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಫ್ಯೂಚರ್ ಜತೆ ಸಖ್ಯ ಬೆಳೆಸಿದ್ದ ಪತಂಜಲಿ ಜಿಸಿಪಿಎಲ್, ಡಾಬರ್, ಇಮಾಮಿ ಬ್ರ್ಯಾಂಡ್‌ಗಳಿಗಿಂತ ಮುಂದಿವೆ. ಪ್ರತಿ ತಿಂಗಳೂ ಪತಂಜಲಿ ಉತ್ಪನ್ನಗಳ ಮಾರಾಟ ವೃದ್ಧಿಸುತ್ತಿದೆ. ಕಳೆದ ತಿಂಗಳಿನಿಂದ ಈ ತಿಂಗಳು ಈ ಪ್ರಮಾಣ ಶೇಕಡ 20ರಷ್ಟು ಹೆಚ್ಚಿದೆ ಎಂದು ಅವರು ಹೇಳುತ್ತಾರೆ. ಫ್ಯೂಚರ್ ಸಮೂಹವು ಇದರ ಜತೆಗೆ, ಶ್ರೀ ಶ್ರೀ ರವಿಶಂಕರ್ ಅವರ ಶ್ರೀ ಶ್ರೀ ಆಯುರ್ವೇದ ಉತ್ಪನ್ನಗಳ ಮಾರಾಟಕ್ಕೂ ಮಾತುಕತೆ ನಡೆಸುತ್ತಿದೆ. ಶ್ರೀ ಶ್ರೀ ಆಯುರ್ವೇದ ಕೆಲ ಉತ್ಪನ್ನಗಳನ್ನೂ ಪರಿಚಯಿಸುತ್ತಿದ್ದೇವೆ ಎಂದು ಕಿಶೋರ್ ಹೇಳಿದ್ದಾರೆ.
ಫ್ಯೂಚರ್ ಸಮೂಹದ ತೆಕ್ಕೆಯಲ್ಲಿ ಫ್ಯೂಚರ್ ರೀಟೈಲ್, ಫ್ಯೂಚರ್ ಲೈಫ್‌ಸ್ಟೈಲ್ ಫ್ಯಾಷನ್, ಫ್ಯೂಚರ್ ಕನ್ಸ್ಯೂಮರ್ ಎಂಟರ್‌ಪ್ರೈಸಸ್‌ನಂಥ ಹಲವು ಕಂಪೆನಿಗಳಿದ್ದು, ಸಮೂಹದ ವಾರ್ಷಿಕ ಆದಾಯ 26 ಸಾವಿರ ಕೋಟಿಯಿಂದ 27 ಸಾವಿರ ಕೋಟಿ ರೂಪಾಯಿ ಎಂದು ನಿರೀಕ್ಷಿಸಲಾಗಿದೆ. ಕಳೆದ ವರ್ಷ ಇದು 21 ಸಾವಿರ ಕೋಟಿ ಆಗಿತ್ತು.
ಕೃಪೆ: indiatimes.com