ಶೋಷಿತರಲ್ಲಿ ಸ್ವಾಭಿಮಾನದ ಕಿಡಿ ಹೊತ್ತಿಸಿದ ಬಿ. ಶ್ಯಾಮಸುಂದರ್
ಇಂದು ಬಿ. ಶ್ಯಾಮಸುಂದರ್ ಜನ್ಮದಿನ
ಶೋಷಿತರು ಒಂದಾಗಬೇಕು, ಸಂಘಟಿತರಾಗಬೇಕು, ಸಾಮಾಜಿಕ, ಆರ್ಥಿಕ, ರಾಜಕೀಯ, ಧಾರ್ಮಿಕ ಮತ್ತು ಶೈಕ್ಷಣಿಕವಾಗಿ ಸಬಲರಾಗಿ ಆಳುವ ವರ್ಗವಾಗಬೇಕೆಂಬ ಕನಸು ಕಂಡು, ದಲಿತರ, ಕಾರ್ಮಿಕ, ಹಿಂದುಳಿದವರ ಏಳ್ಗೆ ಶಿಕ್ಷಣ ಸಂಘಟನೆ, ಹೋರಾಟದ ಅರಿವಿನಿಂದ ಮಾತ್ರ ಸಾಧ್ಯವೆಂದು ಸಾರಿ ಇದಕ್ಕಾಗಿ ಅವಿರತವಾಗಿ ಶ್ರಮಿಸಿದವರು ಬಿ. ಶ್ಯಾಮಸುಂದರ್.
ಬಿ. ಶ್ಯಾಮಸುಂದರ್ ಅವರು ಹುಟ್ಟಿದ್ದು ಮಹಾರಾಷ್ಟ್ರದ ಔರಂಗಾಬಾದ್ ಡಿಸೆಂಬರ್ 21, 1908ರಲ್ಲಿ. ಅವರ ತಂದೆ ಬದುಲಾ ಮಾಣಿಕ್ಯಂ, ತಾಯಿ ಸುಧಾಬಾಯಿ ಮಧ್ಯಮ ವರ್ಗದವರಾಗಿದ್ದು, ಅಸ್ಪಶ್ಯರೆನಿಸಿದ ಮಾಲಾ ಜಾತಿಗೆ ಸೇರಿದವರಾಗಿದ್ದರು. ಬಿ. ಶ್ಯಾಮಸುಂದರ್ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಕ್ರೈಸ್ತ ಮಿಷನರಿಯ ಸೆವೆನ್ ಫ್ಲವರ್ ಶಾಲೆಯಲ್ಲಿ, ಮಾಧ್ಯಮಿಕ ಶಿಕ್ಷಣವನ್ನು ಮುಸ್ಲಿಮ್ ಶಾಲೆಗಳಲ್ಲಿ ಪೂರ್ಣಗೊಳಿಸಿದರು. ಉನ್ನತ ವಿದ್ಯಾಭ್ಯಾಸ ಮಾಡಿ ಪ್ರಾಧ್ಯಾಪಕನಾಗಬೇಕೆಂಬ ಮಹತ್ವಾಕಾಂಕ್ಷೆ ಅವರದಾಗಿತ್ತು. ಜ್ಞಾನದ ಮೂಲಕ ಆತ್ಮಗೌರವ ಸಂಪಾದಿಸಬೇಕೆಂಬ ಹೆಬ್ಬಯಕೆಯಿಂದಾಗಿ ಚಿಕ್ಕಂದಿನಿಂದಲೇ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಿದರು. ಎಳೆಯ ವಯಸ್ಸಿನಲ್ಲಿಯೇ ಅಂಕುರಿಸಿದ ಈ ಭಾವನೆ, ಚಿಂತನೆಗಳಿಗೆ ಕ್ರೈಸ್ತ ಮಿಷನರಿ ಹಾಗೂ ಮುಸ್ಲಿಮ್ ಶಾಲೆಗಳು ನೀರೆರೆದವು. ಅವರ ತಂದೆ ಕೇಂದ್ರ ಸರಕಾರದ ರೈಲ್ವೆ ಇಲಾಖೆಯಲ್ಲಿ ಇದ್ದುದರಿಂದ ಔರಂಗಾಬಾದ್‌ನಿಂದ ಹೈದರಾಬಾದ್‌ಗೆ ವರ್ಗಾವಣೆಗೊಂಡರು. ಶ್ಯಾಮಸುಂದರ್ ತಂದೆಯೊಂದಿಗೆ ಹೈದರಾಬಾದಿಗೆ ಬಂದು ತಮ್ಮ ಉನ್ನತ ವ್ಯಾಸಂಗವನ್ನು ಮುಂದುವರಿಸಿದರು. ಪ್ರತಿಭಾವಂತರಾದ ಬಿ. ಶ್ಯಾಮಸುಂದರ್ ಅವರು ಉಸ್ಮಾನಿಯಾ ವಿಶ್ವವಿದ್ಯಾನಿಲಯದಿಂದ ಅರ್ಥಶಾಸ್ತ್ರದಲ್ಲಿ ಬಿ.ಎ. ಪದವಿಯನ್ನು ರ್ಯಾಂಕ್ ಸಮೇತ ತೇರ್ಗಡೆ ಹೊಂದಿದರು (1924). ಇದರಿಂದಾಗಿ ಖುಸ್ರು-ಎ-ದಖ್ಖನ್ ಎಂಬ ಬಿರುದು ಮತ್ತು ಚಿನ್ನದ ಪದಕ ಪಡೆದರು. ನಂತರ ಕಾನೂನು ಪದವಿಯನ್ನು ಕೂಡ ಪೂರ್ಣಗೊಳಿಸಿದರು. ಪ್ರೌಢಾವಸ್ಥೆಯಲ್ಲಿಯೇ ನಾಯಕತ್ವದ ಎಲ್ಲ ಲಕ್ಷಣಗಳನ್ನು ಹೊಂದಿದ್ದರಿಂದ, 1939ರಲ್ಲಿ ಸರೋಜಿನಿ ನಾಯ್ಡು ಅವರ ಅಧ್ಯಕ್ಷತೆಯಲ್ಲಿ ಹೈದರಾಬಾದ್‌ನಲ್ಲಿ ಜರುಗಿದ ಪದವೀಧರರ ಸಮಾವೇಶದ ಕಾರ್ಯದರ್ಶಿಯಾಗಿ ಸಕ್ರಿಯವಾಗಿ ತೊಡಗಿಸಿಕೊಂಡರು. 1944ರಲ್ಲಿ ಉಸ್ಮಾನಿಯಾ ವಿಶ್ವವಿದ್ಯಾನಿಲಯದ ಸೆನೆಟ್ ಸದಸ್ಯರಾಗಿ, 1946ರಲ್ಲಿ ನಿಜಾಮ್ ಸ್ಟೇಟ್ ರೈಲ್ವೆ ನೌಕರರ ಸಂಘದ ಅಧ್ಯಕ್ಷರಾಗಿ, ಹೈದರಾಬಾದ್ ನಿಜಾಮ ಸ್ಥಾಪಿಸಿದ ಶಿಕ್ಷಣ ಕ್ಷೇತ್ರದ ಶಾಸನಾಧಿಕಾರಗಳ ಸಮಿತಿಯ ಅಧ್ಯಕ್ಷರಾಗಿ ಶ್ರಮಿಸಿದ್ದಾರೆ. ಕ್ರಿಯಾಶೀಲ ಮನೋಭಾವ, ಚಿಂತನಶೀಲ ಗುಣಗಳಿಂದಾಗಿ ಹಲವಾರು ಜವಾಬ್ದಾರಿಗಳು ಹುಡುಕಿಕೊಂಡು ಬಂದವು. ಹೀಗೆ ಸಾಮಾಜ ಸೇವೆಯಲ್ಲಿ ತೊಡಗಿಸಿಕೊಂಡ ಬಿ. ಶ್ಯಾಮಸುಂದರ್ ಅವರು ತಮ್ಮ ಜನರಿಗಾಗುತ್ತಿರುವ ಅನ್ಯಾಯ, ಅವಮಾನ, ಅಸಮಾನತೆ, ಶೋಷಣೆ ವಿರುದ್ಧ ವೈಚಾರಿಕ, ವೈಜ್ಞಾನಿಕ ನೆಲೆಯಲ್ಲಿ ಸಂಘಟನಾತ್ಮಕವಾಗಿ ಪ್ರತಿಭಟಿಸಿದರು. ದೀನದಲಿತರ, ಹಿಂದುಳಿದವರ, ಅಲ್ಪಸಂಖ್ಯಾತರ ಏಳ್ಗೆಗಾಗಿ ಸರ್ವಸ್ವವನ್ನೇ ತ್ಯಾಗಮಾಡಿದರು. ಅಸ್ಪಶ್ಯತೆ, ಅವಮಾನ, ಶೋಷಣೆ ಬಾಲ್ಯದಿಂದಲೇ ಸ್ವತಃ ಅನುಭವಿಸಿದ್ದರಿಂದಾಗಿ ಯುವಕರ ಸಮಾವೇಶಗಳನ್ನು ಸಂಘಟಿಸಿ ದಾಸ್ಯದ ಶೃಂಖಲೆಗಳನ್ನು ಕಿತ್ತೆಸೆಯಲು ಪ್ರೇರೇಪಿಸಿದರು.
ಬಿ.ಶ್ಯಾಮಸುಂದರ್ ಕಾನೂನು ಪದವಿಯನ್ನು ಪಡೆದು ವಕೀಲಿ ವೃತ್ತಿಯಲ್ಲಿದ್ದರು. ಸಾಮಾಜಿಕ ಹೋರಾಟಕ್ಕಾಗಿ ವೃತ್ತಿಯನ್ನೇ ತ್ಯಜಿಸಿದರು. ಅವರು ಮನಸ್ಸು ಮಾಡಿದರೆ ಉನ್ನತ ದರ್ಜೆಯ ಅಧಿಕಾರಿಯಾಗಬಹುದಾಗಿತ್ತು. ಅದಾವುದಕ್ಕೂ ಎಡೆಮಾಡಿಕೊಡದೆ ನೌಕರಿಯೆಂಬ ಜೀತ ತೊರೆದು ತನ್ನ ಜನಸಮುದಾಯದ ಜೀತ ವಿಮೋಚನೆಗಾಗಿ ಸಮರ್ಪಿಸಿಕೊಂಡ ಅಪ್ರತಿಮ ಮೇಧಾವಿ. ಅಂದು ಶಿಕ್ಷಣ ಉಳ್ಳವರ ಸೊತ್ತಾಗಿತ್ತು. ಅದನ್ನರಿತ ಬಿ. ಶ್ಯಾಮಸುಂದರ್ ಅವರು ನಿಜಾಮ ಸಂಸ್ಥಾನದಲ್ಲಿರುವ 40 ಲಕ್ಷಕ್ಕೂ ಹೆಚ್ಚಿರುವ ಅಸ್ಪಶ್ಯರನ್ನು ವಿಮೋಚನೆಗೊಳಿಸಲು ಹತ್ತು ಹಲವು ವೌಲಿಕ ಕಾರ್ಯಕ್ರಮಗಳನ್ನು ರೂಪಿಸುವಂತೆ ಸಂಸ್ಥಾನದ ದೊರೆಯನ್ನು ಪ್ರೇರೇಪಿಸಿದರು. ನಿಜಾಮ ಇವರ ಬೇಡಿಕೆ, ಚಿಂತನೆಗಳಿಗೆ ಪ್ರಭಾವಿತರಾಗಿ ಹೋರಾಟಗಳನ್ನು ಮನ್ನಿಸಿ ಸಂಸ್ಥಾನದಲ್ಲಿರುವ ಅಸ್ಪಶ್ಯರ ಸರ್ವತೋಮುಖ ಅಭಿವೃದ್ಧಿಯಾಗಬೇಕೆಂದರೆ ಶಿಕ್ಷಣವೆಂಬ ಬಂಗಾರದ ಕೀಲಿ ಕೈಯನ್ನು ಕಲ್ಪಿಸಿಕೊಡುವುದು ಸೂಕ್ತವೆಂದು ಭಾವಿಸಿ ಒಂದು ಕೋಟಿ ರೂಪಾಯಿ ನಿಧಿಯನ್ನು ಸ್ಥಾಪಿಸಿ ಅದಕ್ಕೊಂದು ಟ್ರಸ್ಟ್ ಮಾಡಿ ಬಿ. ಶ್ಯಾಮಸುಂದರ್ ಅವರನ್ನು ಟ್ರಸ್ಟ್‌ನ ಅಧ್ಯಕ್ಷರನ್ನಾಗಿ ನೇಮಿಸಿದರು. 1942ರಲ್ಲಿ ಆ ನಿಧಿಯಿಂದ ನಿಜಾಮ ಸಂಸ್ಥಾನದ ವ್ಯಾಪ್ತಿಯಲ್ಲಿ ಸುಮಾರು 28 ವಸತಿ ಶಾಲೆಗಳನ್ನು ಪ್ರಾರಂಭಿಸಿದರು. ಔರಂಗಾಬಾದ್‌ನಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಅವರು ಸ್ಥಾಪಿಸಿದ ಜನತಾ ಶಿಕ್ಷಣ ಸಂಸ್ಥೆಗೆ (Peoples Education SocietyMadrasa-E-Akwam ) 12 ಲಕ್ಷ ರೂಪಾಯಿ ಧನಸಹಾಯ ನೀಡಿದರು. ಎಂಬ ಹೆಸರಿನಲ್ಲಿ ಅಸ್ಪಶ್ಯ ಮಕ್ಕಳಿಗಾಗಿ ವಸತಿ ಶಾಲೆಗಳನ್ನು ಸಹ ಪ್ರಾರಂಭಿಸಿದರು. ಅಲ್ಲಿನ ವಿದ್ಯಾರ್ಥಿಗಳಿಗೆ ವಾರ್ಷಿಕವಾಗಿ 4, 6 ಮತ್ತು 8 ರೂಪಾಯಿಗಳಂತೆ ವಿದ್ಯಾರ್ಥಿ ವೇತನ ನಿಗದಿಗೊಳಿಸಿ ಮಂಜೂರು ಮಾಡಲಾಗುತ್ತಿತ್ತು.
ಈ ನೆಲದ ಅಸ್ಪಶ್ಯರು ಹೊಸ ಬಟ್ಟೆ ಧರಿಸುವಂತಿರಲಿಲ್ಲ. ಮುಖದ ಮೇಲೆ ಮೀಸೆ ಬೆಳೆಸುವಂತಿರಲಿಲ್ಲ, ಕಾಲಲ್ಲಿ ಚಪ್ಪಲಿ (ಚಡಾವು) ಧರಿಸುವಂತಿರಲಿಲ್ಲ. ಕೈಯಲ್ಲಿ ಕೋಲು (ಬಡಿಗೆ) ಹಿಡಿಯುವಂತಿರಲಿಲ್ಲ ಎಂಬ ಅನಾಗರಿಕ ಪದ್ಧತಿಗಳನ್ನು ವಿರೋಧಿಸಿ 1946ರಲ್ಲಿ ಮಹಾರಾಷ್ಟ್ರದ ನಾಂದೇಡದಲ್ಲಿ ಸಮ್ಮೇಳನ ಒಂದನ್ನು ಏರ್ಪಡಿಸಿ ಸಮ್ಮೇಳನಕ್ಕೆ ಬರುವ ದಲಿತ ಯುವಕರು ಮುಖ್ಯವಾಗಿ ಮೂರು ನಿಯಮಗಳನ್ನು ಪಾಲಿಸಬೇಕೆಂದು ತಿಳಿಸಿದರು. ಮುಖದ ಮೇಲೆ ಮೀಸೆ ಬೆಳೆಸಿರಬೇಕು, ಹೊಸಬಟ್ಟೆ ಧರಿಸಿರಬೇಕು, ಕಾಲಲ್ಲಿ ಚಪ್ಪಲಿ ಹಾಕಿರಬೇಕು, ಕೈಯಲ್ಲಿ ಕೋಲು (ಬಡಿಗೆ) ಹಿಡಿದು ಸಮ್ಮೇಳನದಲ್ಲಿ ಭಾಗವಹಿಸಬೇಕೆಂದು ಸಲಹೆ ನೀಡಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ, ಸಾಮಾಜಿಕ ಬದಲಾವಣೆಯತ್ತ ಸಾಗಿದರು. ಅಸ್ಪಶ್ಯರು ಉದ್ಧಾರವಾಗಬೇಕಾದರೆ ಶಿಕ್ಷಣದಷ್ಟೇ ಮಹತ್ವದ್ದು ಭೂ ಒಡೆತನವೂ ಒಂದಾಗಿದೆ. ಸಾಮಾಜಿಕ, ಆರ್ಥಿಕವಾಗಿ ಬೆಳವಣಿಗೆ ಹೊಂದಬೇಕಾದರೆ ಭೂಮಿ ಹಂಚಿಕೆಯಾಗಬೇಕೆಂಬುದು ಬಿ. ಶ್ಯಾಮಸುಂದರ್ ಅವರ ನಿಲುವಾಗಿತ್ತು. ಪ್ರಬಲ ಜಾತಿಯ ಒಡೆತನದಲ್ಲಿರುವ ಭೂಮಿ ಹಂಚಿಕೆಯಾಗಿ ‘ಉಳುವವನೇ ಭೂಮಿಯ ಒಡೆಯ’ ನಿಯಮ ತರಬೇಕೆಂದು ಬಯಸಿ ಸಂಸ್ಥಾನದಲ್ಲಿ ಕಾನೂನಾತ್ಮಕವಾಗಿ ಜಾರಿಗೆ ತಂದರು. ಹಾಗೆಯೇ ಸರಕಾರದ ಅನಾಮತ್ತಾದ ಜಮೀನಿದ್ದರೂ ಅದನ್ನು ಭೂಹೀನರಿಗೆ ಹಂಚುವ ಕಾರ್ಯಕ್ರಮ ರೂಪಿಸಿ, ಗೈರಾಣಿ ಭೂಮಿಯನ್ನು ಸಾವಿರಾರು ಅಸ್ಪಶ್ಯರಿಗೆ ಹಂಚಿದ ಧೀರ ಚಿಂತಕ. ಹಳ್ಳಿ ಹಳ್ಳಿಗಳಿಗೆ ತಿರುಗಿ ಜನತಾ ಸಭೆ ನಡೆಸಿದರು. ದಲಿತರ ಕಷ್ಟ, ನೋವು ಅರಿತು ಬೇನಾಮಿ ಜಮೀನಿದ್ದರೆ ಆಕ್ರಮಿಸಿ ಉಳುಮೆ ಮಾಡಿಕೊಳ್ಳಲು ಬಹಿರಂಗವಾಗಿ ಕರೆ ನೀಡಿದರು. ಇಂತಹ ಹತ್ತಾರು ಜನಪರ, ಪ್ರಗತಿಪರ ಯೋಜನೆಗಳು ಜಾರಿಗೆ ತಂದು ಸ್ವಾಭಿಮಾನದ ಕಿಡಿಯನ್ನು ಹೊತ್ತಿಸಿದರು.
ಸ್ವಾತಂತ್ರ್ಯದ ನಂತರ 1957ರಲ್ಲಿ ಮೈಸೂರು ವಿಧಾನಸಭೆಗೆ ಬೀದರ್ ಜಿಲ್ಲೆಯ ಭಾಲ್ಕಿ ಕ್ಷೇತ್ರದಿಂದ ಆಯ್ಕೆಗೊಂಡು 1962ರವರೆಗೆ ಶಾಸಕರಾಗಿ ಜನಪರ ಕೆಲಸಗಳನ್ನು ಮಾಡಿದ್ದಾರೆ. ಅಪಾರ ಅನುಭವ, ಅಧ್ಯಯನಶೀಲತೆ, ವಿದ್ವತ್ತು, ವಾಕ್‌ಚಾತುರ್ಯ, ರಾಜಕೀಯ ಪ್ರೌಢಿಮೆಯಿಂದಾಗಿ ವಿಧಾನ ಸಭೆಯಲ್ಲೂ ಕೂಡ ಎತ್ತರದ ಸ್ಥಾನ ಪಡೆದುಕೊಂಡರು. ಸಾಮಾಜಿಕ ಹಿತಕ್ಕಾಗಿ ವಿಧಾನ ಸಭೆಯ ಒಳಗೂ ಮತ್ತು ಹೊರಗೂ ಧ್ವನಿಯೆತ್ತಿದರು. ರಾಜ್ಯದ ಗಡಿ ಪ್ರದೇಶದ ಆಳಂದ ತಾಲೂಕಿನ ಚಿಂಚನಸೂರ ಮಹಾಪೂರ ತಾಯಿ, ಹಡಲಗಿಯ ಯಲ್ಲಮ್ಮ ದೇವತೆಗಳ ಪೂಜೆಯ ಹೆಸರಿನಲ್ಲಿ ನಡೆಯುತ್ತಿರುವ ಅಮಾನವೀಯ ಬೆತ್ತಲೆ ಸೇವೆಯನ್ನು ಸದನದ ಗಮನಕ್ಕೆ ತಂದು ತಡೆಗಟ್ಟುವಂತೆ ಒತ್ತಡ ಹೇರಿದರು. ಭಾರತೀಯ ಸಮಾಜದಲ್ಲಿ ಜಾತಿ ವ್ಯವಸ್ಥೆ, ಅಸ್ಪಶ್ಯತೆಯನ್ನು ತಾರ್ಕಿಕ ನೆಲೆಯಲ್ಲಿ ಖಂಡಿಸುತ್ತಾWe are Mool Bharatis, Original Sons of the Soil (ನಾವು ಮೂಲ ಭಾರತೀಯರು, ಈ ಮಣ್ಣಿನ ಮಕ್ಕಳು) ಎಂದು ದಲಿತರನ್ನು ಬಡಿದೆಚ್ಚರಿಸಿದರು. ಅವರ ರಾಜಕೀಯ ಘೋಷಣೆ ಎಷ್ಟು ಸ್ಪಷ್ಟ ಮತ್ತು ಗಂಭೀರವಾಗಿತ್ತೆಂದರೆ ‘ಖೊಯಾ ಹೂವಾ ರಾಜ್ ಮಾಂಗನೇಸೆ ನಹಿ ಮಿಲ್ತಾ ಉಸೆ ಛೀನಾ ಜಾತಾಹೈ’ (ಕಳೆದು ಹೋದ ರಾಜ್ಯಾಧಿಕಾರ ಬೇಡುವುದರಿಂದ ಕೈಗೆಟುಕುವುದಿಲ್ಲ, ಬದಲಿಗೆ ಅದನ್ನು ಆಳುವ ವರ್ಗದ ಕೈಯಿಂದ ಕಿತ್ತುಕೊಳ್ಳಬೇಕು) ಎಂದು ಸಾರಿದರು.
ಡಾ. ಬಿ.ಆರ್. ಅಂಬೇಡ್ಕರ್ ಅವರ ಸಪರೇಟ್ ಎಲೆಕ್ಟೊರೇಟ್ ಬೇಡಿಕೆಯ ಮುಂದುವರಿಕೆ ಎಂಬಂತೆ ಬಿ. ಶ್ಯಾಮಸುಂದರ್, ಈ ದೇಶದ ದಲಿತ-ದಮನಿತರಿಗೆ ಪ್ರತ್ಯೇಕ ಹಳ್ಳಿಗಳು, ಅವರ ಶಿಕ್ಷಣಕ್ಕಾಗಿ ಪ್ರತ್ಯೇಕ ವಿಶ್ವವಿದ್ಯಾನಿಲಯಗಳು ಬೇಕು ಎಂಬುದನ್ನು ಪ್ರತಿಪಾದಿಸಿದ್ದರು. ಹೀಗಾದಾಗ ಮಾತ್ರ ಶತಮಾನಗಳಿಂದ ಶೋಷಣೆಗೊಳಗಾದವರಿಗೆ ಸರಿಯಾದ ಶಿಕ್ಷಣ ದೊರೆಯಲು ಸಾಧ್ಯ ಎಂದು ಮನಗಂಡಿದ್ದರು. ಸ್ವಾತಂತ್ರ್ಯಾನಂತರದಲ್ಲಿ ದಲಿತರನ್ನು ಸಂಘಟಿಸಿ ಅನೇಕ ಅರಿವಿನ ಕಾರ್ಯಕ್ರಮಗಳನ್ನು ರೂಪಿಸಿದರು. ಹಲವಾರು ಚಿಂತನಾಪರ ಕೃತಿಗಳನ್ನು ರಚಿಸಿದರು. ಈಗಿನ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ದಲಿತ ಚಳವಳಿಗೆ ನಾಂದಿ ಹಾಡಿದರು. ಆ ಕಾರಣಕ್ಕಾಗಿಯೇ ಡಾ. ಬಿ.ಆರ್. ಅಂಬೇಡ್ಕರ್ ಅವರ 77ನೇ ಹುಟ್ಟು ಹಬ್ಬದ ಪ್ರಯುಕ್ತ (29.04.1968) ಭಾರತೀಯ ಭೀಮಸೇನೆ ಎಂಬ ಸಂಘಟನೆಯನ್ನು ಕಟ್ಟಿ, ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ವೈಚಾರಿಕ, ಪ್ರಗತಿಪರ ಚಿಂತನೆಯ ಕಿಚ್ಚು ಹೊತ್ತಿಸಿ ಅಜರಾಮರರಾದ ಬಿ. ಶ್ಯಾಮಸುಂದರ್ ಅವರ ಕೊಡುಗೆ ಅನನ್ಯ. ತಮ್ಮ ಜೀವಿತದ ಉದ್ದಕ್ಕೂ ಜನಹಿತ, ಸಮಾಜದ ಹಿತ ರಕ್ಷಣೆಗಾಗಿಯೇ ತಮ್ಮನ್ನು ಸಮರ್ಪಿಸಿಕೊಂಡ ಅಪರೂಪದ ತ್ಯಾಗಮಯಿ ಹೋರಾಟಗಾರ ಬಿ. ಶ್ಯಾಮಸುಂದರ್ ಅವರನ್ನು ಮರೆಯುವಂತಿಲ್ಲ. 19 ಮೇ, 1975ರಂದು ತಮ್ಮ 66ನೇ ವಯಸ್ಸಿನಲ್ಲಿ ನಿಧನ ಹೊಂದಿದರು.