ಸಿಪಿಎಂ ಬಾಗಿಲಿಗೆ ಗುಪ್ತಚರರು!

Update: 2016-08-27 18:49 GMT

ಸಿಪಿಎಂ ಬಾಗಿಲಿಗೆ ಗುಪ್ತಚರರು!

ಭಾರತದ ಗುಪ್ತಚರ ವಿಭಾಗದ ಅಧಿಕಾರಿಯೊಬ್ಬರು ಇತ್ತೀಚೆಗೆ ಸಿಪಿಎಂ ಕಚೇರಿಗೆ ಭೇಟಿ ನೀಡಿದ್ದಾರೆ ಎನ್ನಲಾಗಿದೆ. ವಿಚಿತ್ರವೆಂದರೆ ಇಲ್ಲಿ ಈ ಅಧಿಕಾರಿಯೇ ಸಿಪಿಎಂ ಕಚೇರಿಯಿಂದ ಪ್ರಶ್ನೆಗಳನ್ನು ಎದುರಿಸಬೇಕಾಯಿತು. ಅಂತಿಮವಾಗಿ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಅವರನ್ನು ಭೇಟಿ ಮಾಡಿದಾಗಲಂತೂ ಕಠಿಣ ಪರಿಸ್ಥಿತಿ ಎದುರಾಯಿತು. ಅಧಿಕಾರಿ ಭೇಟಿಗೆ ಮೂಲ ಕಾರಣವೆಂದರೆ ದಿಲ್ಲಿಯಲ್ಲಿರುವ ಸಿಪಿಎಂ ಕೇಂದ್ರ ಕಚೇರಿಗೆ ಭದ್ರತಾ ವ್ಯವಸ್ಥೆ ಹೆಚ್ಚಿಸುವುದು. ಸಹಜವಾಗಿಯೇ ಅವರು ಎಲ್ಲ ಮಹಡಿಗೂ ಭೇಟಿ ನೀಡಲು ಬಯಸಿದರು. ಆದರೆ ಪ್ರತಿ ಹೆಜ್ಜೆಯಲ್ಲೂ ಸಂಚನ್ನು ಹುಡುಕುವುದು ಸಿಪಿಎಂಗೆ ಹೊಸದಲ್ಲ. ಹೆಚ್ಚುವರಿ ಗುಪ್ತಚರ ಸಿಬ್ಬಂದಿಯನ್ನು ಸಿಪಿಎಂ ಕಚೇರಿಗೆ ನಿಯೋಜಿಸುವ ಮೂಲಕ ಇಲ್ಲಿನ ಚಲನ ವಲನಗಳ ಮಾಹಿತಿಯನ್ನು ಪಡೆಯುವುದು ಕೇಂದ್ರದ ಹುನ್ನಾರ ಎನ್ನುವುದು ಥಟ್ಟನೆ ಹೊಳೆಯಿತು. ಆದರೆ ಈಗ ಇರುವುದಕ್ಕಿಂತ ಹೆಚ್ಚಿನ ಭದ್ರತೆ ಬೇಕಿಲ್ಲ ಎಂದು ಯೆಚೂರಿ ಅಧಿಕಾರಿಗೆ ಸ್ಪಷ್ಟಪಡಿಸಿದರು.

ಶೀಲಾ ಸಂಕಟ

ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಶೀಲಾ ದೀಕ್ಷಿತ್ ಅವರನ್ನು ತೀರಾ ಮುಂಚಿತವಾಗಿಯೇ ಬಿಂಬಿಸಿದೆ. ಹಲವು ಮಂದಿ ರಾಜಕೀಯ ವಿಶ್ಲೇಷಕರು, ಶೀಲಾ ದೀಕ್ಷಿತ್ ಅವರನ್ನು ಹರಕೆಯ ಕುರಿಯಾಗಿ ಮಾಡಲಾಗಿದೆ ಎಂದೇ ಹೇಳುತ್ತಿದ್ದಾರೆ. ಇದೀಗ ಆರಂಭಿಕ ದಿನಗಳಲ್ಲೇ ಸಮಸ್ಯೆ ಶುರುವಾಗಿದೆ. ಅಲಹಾಬಾದ್‌ನಲ್ಲಿ ಪ್ರವಾಹ ಪರಿಸ್ಥಿತಿ ಉದ್ಭವಿಸಿದೆ ಎಂದರೆ, ಪಂಡಿತ್ ಜವಾಹರಲಾಲ್ ನೆಹರೂ ಅವರ ಜನ್ಮಸ್ಥಾನದಿಂದ ರಾಜ್ಯದ ಬ್ರಾಹ್ಮಣ ಸಮುದಾಯವನ್ನು ತಲುಪುವ ಅಭಿಯಾನಕ್ಕೆ ತೊಂದರೆ ಎದುರಾಗಿದೆ ಎಂಬ ಅರ್ಥ. ಸೆಪ್ಟ್ಟಂಬರ್ 2ರಂದು ಅಲಹಾಬಾದ್‌ನಲ್ಲಿ ಬ್ರಾಹ್ಮಣ ಸಮಾವೇಶ ಆಯೋಜಿಸಲು ಕಾಂಗ್ರೆಸ್ ನಿರ್ಧರಿಸಿತ್ತು. ನಗರದ ಬಹುತೇಕ ಪ್ರದೇಶಗಳು ಜಲಾವೃತವಾಗಿರುವುದರಿಂದ ಕಾಂಗ್ರೆಸ್ ಇದೀಗ ಸಮಾವೇಶ ಸ್ಥಳವನ್ನು ಬದಲಿಸಲು ನಿರ್ಧರಿಸಿದೆ. ಇದೀಗ ಪಕ್ಷ ಎರಡು ಬ್ರಾಹ್ಮಣ ಸಮಾವೇಶ ಆಯೋಜಿಸಲು ಮುಂದಾಗಿದೆ. ಸೆಪ್ಟ್ಟಂಬರ್ 2ರಂದು ಲಕ್ನೋ ಹಾಗೂ ಎರಡು ದಿನ ಬಳಿಕ ಕಾನ್ಪುರದಲ್ಲಿ. ಬ್ರಾಹ್ಮಣ ಅಭ್ಯರ್ಥಿಯನ್ನು ಸಿಎಂ ಹುದ್ದೆಗೆ ಬಿಂಬಿಸಿದ ಮುಖ್ಯ ಉದ್ದೇಶವೆಂದರೆ ಬಿಎಸ್ಪಿಹಾಗೂ ಬಿಜೆಪಿ ತೆಕ್ಕೆಯಿಂದ ಬ್ರಾಹ್ಮಣ ಮತಗಳನ್ನು ಸೆಳೆಯುವುದು. ಆದರೆ ಕೇವಲ ತಮ್ಮ ಉಮೇದುವಾರಿಕೆ ಮತಗಳನ್ನು ಸೆಳೆಯಲಾರದು ಎನ್ನುವುದು ಶೀಲಾ ದೀಕ್ಷಿತ್‌ಗೆ ಚೆನ್ನಾಗಿ ಗೊತ್ತಿದೆ. ಹೆಚ್ಚು ಹೆಚ್ಚು ಮಂದಿ ಬ್ರಾಹ್ಮಣ ಮುಖಂಡರು ಬಿಎಸ್ಪಿ ತೊರೆದು, ಬಿಜೆಪಿ ಸೇರುತ್ತಿರುವುದರಿಂದ ಚಿತ್ರಣ ಸ್ಪಷ್ಟವಾಗುತ್ತಿದೆ. ಇದು ಕಾಂಗ್ರೆಸ್‌ಗೆ ಒಳ್ಳೆಯ ಸೂಚನೆಯಲ್ಲ.

ದೋವಲ್ ನಿರ್ಗಮನ?

ಮೋದಿ ಸಂಪುಟದ ಹಿರಿಯ ಸಚಿವರು ಅಜಿತ್ ದೋವಲ್ ಅವರ ಪದಚ್ಯುತಿಗೆ ಪ್ರಧಾನಿ ಮೇಲೆ ಒತ್ತಡ ತರುತ್ತಿದ್ದಾರೆ ಎಂಬ ವದಂತಿ ಕೇಳಿಬರುತ್ತಿದೆ. ಇತ್ತೀಚೆಗೆ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದ ಅವಧಿಯಲ್ಲಿ ತಮಗೆ ಆಗಿರುವ ಅವಮಾನದಿಂದ ರಾಜನಾಥ್ ಸಿಂಗ್ ಭುಸುಗುಡುತ್ತಿದ್ದಾರೆ. ಕಾಶ್ಮೀರದ ಅರಾಜಕತೆಗೆ ಹಾಗೂ ನೇಪಾಳ ಭಾರತದಿಂದ ದೂರ ಸರಿಯಲು ದೋವಲ್ ಅವರೇ ಕಾರಣ ಎಂಬ ಅಭಿಪ್ರಾಯಕ್ಕೆ ಕೆಲ ಮುಖಂಡರು ಬಂದಿದ್ದಾರೆ. ಪಾಕಿಸ್ತಾನ ತಂಡ ಪಠಾಣ್‌ಕೋಟ್‌ನಂಥ ಸೂಕ್ಷ್ಮ ರಕ್ಷಣಾ ವಲಯಕ್ಕೆ ಭೇಟಿ ನೀಡಲು ಅವಕಾಶ ನೀಡಿದ ರಾಷ್ಟ್ರೀಯ ಭದ್ರತಾ ಸಲಹೆಗಾರರ ಕ್ರಮಕ್ಕೆ ವಿದೇಶಾಂಗ ಸಚಿವಾಲಯ ಕೂಡಾ ಗರಂ ಆಗಿದೆ. ಇಷ್ಟರಲ್ಲೇ ಅಧಿಕಾರಾವಧಿ ಪೂರ್ಣಗೊಳಿಸುವ ವಿದೇಶಾಂಗ ಕಾರ್ಯದರ್ಶಿ ಎಸ್.ಜೈಶಂಕರ್ ಅವರು ಈ ಹುದ್ದೆಯ ಮೇಲೆ ಕಣ್ಣಿಟ್ಟಿದ್ದಾರೆ. ಆದರೆ ಇವೆಲ್ಲವೂ ಕೇವಲ ವದಂತಿಗಳು. ದೋವಲ್ ಅತ್ಯಂತ ಘನತೆ ಕಾಪಾಡಿಕೊಂಡಿರುವ ಗುಪ್ತಚರ ಅಧಿಕಾರಿ. ಮೋದಿ ಕೂಡಾ ಅವರನ್ನು ಅತಿಯಾಗಿ ಗೌರವಿಸುತ್ತಾರೆ.

ಜಾವಡೇಕರ್ ರಾಜನೀತಿ

ರಾಜಕೀಯ ಅಥವಾ ರಾಜನೀತಿ ಎನ್ನುವುದು ಕುಶಲ ಕಲೆ. ಇದನ್ನು ಕೆಲವರಷ್ಟೇ ಕರಗತ ಮಾಡಿಕೊಳ್ಳಬಲ್ಲರು. ಹೊಸ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವಡೇಕರ್‌ಅಂಥವರಲ್ಲೊಬ್ಬರು. ಸ್ಮತಿ ಇರಾನಿಯವರಿಂದ ಅಧಿಕಾರ ವಹಿಸಿಕೊಂಡ ತಕ್ಷಣ ಜಾವಡೇಕರ್, ಮುಂದೆ ಇರಾನಿಯವರಿಂದ ಮಾತ್ರವಲ್ಲ; ವಾಜಪೇಯಿ ಸಂಪುಟದಲ್ಲಿ ಎಚ್‌ಆರ್‌ಡಿ ಸಚಿವರಾಗಿದ್ದ ಮುರಳಿ ಮನೋಹರ ಜೋಶಿಯವರಿಂದಲೂ ಮಾರ್ಗದರ್ಶನ ಪಡೆಯುತ್ತೇನೆ ಎಂದು ಹೇಳಿದ್ದಾರೆ ಎನ್ನಲಾಗಿದೆ. ಇರಾನಿ ಹಾಗೂ ಜೋಶಿಯವರನ್ನು ಭೇಟಿ ಮಾಡಿ, ಜಾವಡೇಕರ್ ಮಾತು ಉಳಿಸಿಕೊಂಡಿದ್ದಾರೆ. ಆದರೆ ಎಚ್‌ಆರ್‌ಡಿ ಸಚಿವಾಲಯ ಇರುವ ಶಾಸ್ತ್ರಿಭವನ ಮಾತ್ರ ಭಿನ್ನ ಕಥೆ ಹೇಳುತ್ತದೆ. ಸಚಿವಾಲಯ ಈಗಾಗಲೇ ಇರಾನಿ ಅಧಿಕಾರಾವಧಿಯಲ್ಲಿ ತೆಗೆದುಕೊಂಡಿದ್ದ ನಿರ್ಧಾರಗಳ ಪರಾಮರ್ಶೆ ನಡೆಸುತ್ತಿರುವುದು ಮಾತ್ರವಲ್ಲದೇ, ಅದಕ್ಕೆ ತದ್ವಿರುದ್ಧ ನಿರ್ಧಾರಗಳನ್ನು ಕೈಗೊಳ್ಳುತ್ತಿದೆ. ಕೇವಲ ಇರಾನಿ ಅವಧಿಯದ್ದಲ್ಲ; ಜೋಶಿ ಅವಧಿಯ ನಿರ್ಧಾರಗಳ ಬಗ್ಗೆ ಕೂಡಾ.

ಕಾಲ ಸನ್ನಿಹಿತ

ಭಾರತ ರಾಷ್ಟ್ರೀಯ ಕಾಂಗ್ರೆಸ್‌ನ ಅಧ್ಯಕ್ಷರಾಗಿ ರಾಹುಲ್‌ಗಾಂಧಿಗೆ ಪಟ್ಟ ಕಟ್ಟಲು ಕಾಲ ಸನ್ನಿಹಿತವಾದಂತಿದೆ. ಸ್ವಾತಂತ್ರ್ಯ ದಿನದಂದು ಪಕ್ಷದ ಕಚೇರಿಯಲ್ಲಿ ತಾಯಿಯ ಅನುಪಸ್ಥಿತಿಯಲ್ಲಿ ಯುವರಾಜ ತ್ರಿವರ್ಣಧ್ವಜ ಹಾರಿಸಿದ್ದರಿಂದ ಇದು ಸುಸ್ಪಷ್ಟ. ಸಾಮಾನ್ಯವಾಗಿ ಪಕ್ಷದ ಹಿರಿಯ ಮುಖಂಡರಿಗೆ ಈ ಗೌರವ ಸಲ್ಲಿಸಲಾಗುತ್ತದೆ. ಹಿಂದಿನ ಬಾರಿ ಸೋನಿಯಾ ಇಲ್ಲದಿದ್ದಾಗ, ಧ್ವಜಾರೋಹಣದ ಗೌರವ ಮೋತಿಲಾಲ್ ವೋರಾ ಅವರಿಗೆ ಸಿಕ್ಕಿತ್ತು. ಈ ಬಾರಿ ಪರಿಸ್ಥಿತಿ ತೀರಾ ಭಿನ್ನ. ಪಕ್ಷವನ್ನು ಮುನ್ನಡೆಸುವ ರಾಹುಲ್ ಸಾಮರ್ಥ್ಯದ ಬಗ್ಗೆ ಹಲವು ಮಂದಿಯಲ್ಲಿ ಇನ್ನೂ ಸಂಶಯಗಳಿವೆ. ಆದರೆ ನಿಧಾನವಾಗಿ ಎಲ್ಲರೂ ದಾರಿಗೆ ಬರುತ್ತಿದ್ದಾರೆ. ಆಗಸ್ಟ್ 15ರಂದು ಸೋನಿಯಾ ಗಾಂಧಿಯವರ ರಾಜಕೀಯ ಕಾರ್ಯದರ್ಶಿ ಅಹ್ಮದ್ ಪಟೇಲ್, 10 ಜನಪಥ್‌ನಿಂದ ಆಗಮಿಸುವಾಗ ರಾಹುಲ್‌ಗೆ ಜತೆಯಾಗಿದ್ದರು. ರಾಹುಲ್ ಗಾಂಧಿ ಧ್ವಜಾರೋಹಣ ನೆರವೇರಿ ಸಿದಾಗ, ರಾಹುಲ್ ಅವರನ್ನು ಟೀಕಿಸುತ್ತಿದ್ದ ವೋರಾ ಹಾಗೂ ಜನಾರ್ದನ್ ದ್ವಿವೇದಿ, ಕಾಂಗ್ರೆಸ್ ಉಪಾಧ್ಯಕ್ಷನ ಹಿಂದಿದ್ದರು. ಮನಮೋಹನ ಸಿಂಗ್ ಕೂಡಾ ಇದನ್ನು ಅನುಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News