ನಗ್ನರಾಜಕೀಯ...!

Update: 2016-08-30 18:29 GMT

ಈ ದೇಶದಲ್ಲಿ ಎಲ್ಲರೂ ತಮ್ಮ ತಮ್ಮ ಧರ್ಮ ಶ್ರೇಷ್ಠವಾದುದು ಎಂದು ನಂಬಿಕೊಂಡೇ ಅದನ್ನು ಅನುಸರಿಸುತ್ತಾರೆ. ಧಾರ್ಮಿಕ ಹಕ್ಕನ್ನು ಈ ದೇಶದ ಸಂವಿಧಾನವೇ ಜನರಿಗೆ ಕೊಟ್ಟಿರುವುದರಿಂದ ಅದನ್ನು ಯಾರೂ ಪ್ರಶ್ನಿಸುವಂತಿಲ್ಲ. ಆದರೆ ಒಬ್ಬರ ಧಾರ್ಮಿಕ ನಂಬಿಕೆ ಇತರರ ಬದುಕುವ ಹಕ್ಕನ್ನು ಕಸಿದುಕೊಳ್ಳುವಂತಿರಬಾರದು ಅಷ್ಟೇ. ನಮ್ಮ ಧಾರ್ಮಿಕ ಮುಖಂಡರು, ನಮ್ಮ ಧಾರ್ಮಿಕ ಗ್ರಂಥ ಅದೆಷ್ಟೇ ಶ್ರೇಷ್ಠವಾದುದಾದರೂ ಪ್ರಜಾಸತ್ತಾತ್ಮಕ ವ್ಯವಸ್ಥೆಯ ತಳಹದಿಯಲ್ಲಿ ನಿಂತಿರುವ ಭಾರತದಲ್ಲಿ ಸಂವಿಧಾನವೇ ಎಲ್ಲರನ್ನೂ ಒಂದಾಗಿ ಬೆಸೆದಿದೆ. ಮುಸ್ಲಿಮ್, ಕ್ರೈಸ್ತ, ಜೈನ, ಬ್ರಾಹ್ಮಣರಿಗೆ ತಮ್ಮ ತಮ್ಮ ಶ್ರೇಷ್ಠಗ್ರಂಥಗಳಿದ್ದರೂ, ಭಾರತೀಯರಾಗಿ ಗುರುತಿಸಿಕೊಳ್ಳುವ ಸಂದರ್ಭದಲ್ಲಿ ಇವರೆಲ್ಲರಿಗೂ ಸಂವಿಧಾನವೇ ರಾಷ್ಟ್ರೀಯ ಗ್ರಂಥ. ಸಂವಿಧಾನದ ದೃಷ್ಟಿಯಲ್ಲಿ ಎಲ್ಲ ಧಾರ್ಮಿಕ ಗ್ರಂಥಗಳೂ ಒಂದೇ. ಈ ದೇಶದಲ್ಲಿ ಸಾವಿರಾರು ಸ್ವಾಮೀಜಿಗಳು, ಧಾರ್ಮಿಕ ಮುಖಂಡರು ಇದ್ದಾರೆ. ಅವರೆಲ್ಲ ತಮ್ಮ ತಮ್ಮ ಸಮುದಾಯಗಳನ್ನು ಪ್ರತಿನಿಧಿಸುತ್ತಾರೆಯೇ ಹೊರತು ಇಡೀ ಭಾರತವನ್ನು ಪ್ರತಿನಿಧಿಸಲಾರರು. ಕೆಲವೊಮ್ಮೆ ನಮ್ಮ ರಾಜಕೀಯ ನಾಯಕರ ಮೂರ್ಖತನದ ಕಾರಣದಿಂದಾಗಿ ತಮ್ಮ ಗೆರೆಗಳನ್ನು ಮೀರಿ ಸಂವಿಧಾನದ ಸ್ಥಾನಗಳನ್ನು ಆಕ್ರಮಿಸಿಕೊಳ್ಳಲು ಹವಣಿಸುತ್ತಾರೆ. ಇಂತಹ ಸಂದರ್ಭದಲ್ಲಿ ಇದನ್ನು ನಾವು ಒಕ್ಕೊರಲಲ್ಲಿ ಖಂಡಿಸದೇ ಇದ್ದರೆ ಮುಂದೊಂದು ದಿನ ಸಂವಿಧಾನವನ್ನು ಪಕ್ಕಕ್ಕೆ ಸರಿಸಿ, ಆ ಸ್ಥಾನದಲ್ಲಿ ತಮ್ಮ ನಂಬಿಕೆಗಳನ್ನು ತುರುಕಲು ಯತ್ನಿಸುತ್ತಾರೆ. ಅಂತಹದೊಂದು ಪ್ರಯತ್ನ ಕೆಲ ದಿನಗಳ ಹಿಂದೆ ಹರ್ಯಾಣದ ಸದನದಲ್ಲಿ ನಡೆದಿದೆ. ಸದನವೆನ್ನುವುದಕ್ಕೆ ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಅದರದೇ ಆದ ಘನತೆ, ಪಾವಿತ್ರ ಇದೆ. ಯಾರೋ ಬಂದು ಅಲ್ಲಿ ಕುಳಿತು ತಮಗೆ ತೋಚಿದ್ದನ್ನು ಮಾತನಾಡುವುದಕ್ಕೆ ಸಾಧ್ಯವಿಲ್ಲ. ಈ ನಾಡಿನ ಜನರ ಅಧಿಕೃತ ಪ್ರತಿನಿಧಿಗಳೇ ಅಲ್ಲಿ ಕುಳಿತು, ನಾಡಿನ ಏಳುಬೀಳಿನ ಕುರಿತಂತೆ ಚರ್ಚಿಸಬೇಕು. ಆ ಸ್ಥಳ, ಆ ಸಮಯ ಎಲ್ಲವೂ ಜನರ ಏಳಿಗೆಗೆ ಮೀಸಲಾದುದು. ಅವನು ಯಾವನೋ ಒಬ್ಬ ಧಾರ್ಮಿಕ ನಾಯಕ, ಆತ ಅದೆಷ್ಟೇ ದೊಡ್ಡ ವ್ಯಕ್ತಿಯಾಗಿರಲಿ, ಬಂದು ತನಗೆ ಪೂರಕವಾಗಿ ಬಳಸಿಕೊಳ್ಳುವಂತಿಲ್ಲ. ಆದರೆ ಹರ್ಯಾಣದಲ್ಲಿ ಸಂವಿಧಾನದ ಎಲ್ಲ ಆಶಯಗಳನ್ನು ಗಾಳಿಗೆ ತೂರಿ, ರಾಜಕಾರಣಿಗಳು ಒಬ್ಬ ಧಾರ್ಮಿಕ ನಾಯಕನನ್ನು ಸದನಕ್ಕೆ ಕರೆ ತಂದು ಅವರಿಂದ ಉಪದೇಶಗಳನ್ನು ಪಡೆದಿದ್ದಾರೆ. ಅತ್ಯಂತ ವಿಪರ್ಯಾಸದ ಸಂಗತಿಯೆಂದರೆ, ಸದನಕ್ಕೆ ಆಗಮಿಸಿದ ಧಾರ್ಮಿಕ ಮುಖಂಡರ ಮೈಮೇಲೆ ಒಂದು ನೂಲೆಳೆಯೂ ಇದ್ದಿರಲಿಲ್ಲ. ಈ ದೇಶದ ರಾಜಕಾರಣ ಹೇಗೆ ಹಂತಹಂತವಾಗಿ ಬೆತ್ತಲೆಯಾಗುತ್ತಾ ಹೋಗುತ್ತಿದೆ ಎನ್ನುವುದಕ್ಕೆ ಆ ಪ್ರಕರಣ ಒಂದು ರೂಪಕದಂತಿತ್ತು.
ಇಲ್ಲಿ ಹರ್ಯಾಣ ಅಸೆಂಬ್ಲಿಗೆ ಬೆತ್ತಲೆಯಾಗಿ ಪ್ರವೇಶಿಸಿ, ರಾಜ್ಯಪಾಲರು ಕುಳಿತುಕೊಳ್ಳುವ ಆಸನಕ್ಕಿಂತಲೂ ಎತ್ತರವಾದ ಸ್ಥಾನದಲ್ಲಿ ಕುಳಿತು ಸದನ ಮತ್ತು ಸಂವಿಧಾನವನ್ನು ಅಗೌರವಿಸಿದ ಜೈನಮುನಿ ತರುಣ್ ಸಾಗರ್ ಅವರನ್ನು ನಾವು ಟೀಕಿಸುವಂತಿಲ್ಲ. ಯಾಕೆಂದರೆ ಅವರು ತಾನಾಗಿ ಅಲ್ಲಿಗೆ ಪ್ರವೇಶಿಸಿ ಭಾಷಣವನ್ನು ನೀಡಿಲ್ಲ. ಬದಲಿಗೆ ಜನರಿಂದ ಆಯ್ಕೆಯಾದ ಜನಪ್ರತಿನಿಧಿಗಳು ಅವರನ್ನು ಅಲ್ಲಿಗೆ ಆಹ್ವಾನಿಸಿದ್ದರು. ಮೈಮೇಲೆ ಚೂರು ಬಟ್ಟೆಯೂ ಇಲ್ಲದೆ ಬೆತ್ತಲೆಯಾಗಿ ಓಡಾಡುವುದರ ಹಿಂದೆ ಜೈನಧರ್ಮೀಯರಿಗೆ ಅವರದೇ ಆದ ಆಧ್ಯಾತ್ಮಿಕ ನಂಬಿಕೆಯಿದೆ. ಆ ನಂಬಿಕೆಯನ್ನು ಸಂವಿಧಾನವೂ ಗೌರವಿಸುತ್ತದೆ. ಆದರೆ ಆ ನಂಬಿಕೆಯನ್ನು ಈ ದೇಶದ ಜನರೆಲ್ಲರೂ ಒಪ್ಪಬೇಕು ಎಂದಿಲ್ಲ. ತರುಣ್ ಸಾಗರ್ ಅವರು ಸಾರ್ವಜನಿಕವಾಗಿ, ತಮ್ಮ ಜನರ ನಡುವೆ, ತಮ್ಮದೇ ಧರ್ಮೀಯರ ಸಮಾವೇಶದಲ್ಲಿ ಈ ಸ್ಥಿತಿಯಲ್ಲಿ ಉಪನ್ಯಾಸ ಮಾಡುವುದನ್ನು ಯಾರೂ ಆಕ್ಷೇಪಿಸುವುದಿಲ್ಲ. ಜೊತೆಗೇ, ಅವರ ತೀಕ್ಷ್ಣವಾದ ಮಾತುಗಳಿಗೆ ಅವರದೇ ಅಭಿಮಾನಿಗಳೂ ಇದ್ದಾರೆ. ಇಷ್ಟಿದ್ದರೂ ಅವರು ತಮ್ಮ ಧರ್ಮೀಯರನ್ನಷ್ಟೇ ಪ್ರತಿನಿಧಿಸುತ್ತಾರೆಯೇ ಹೊರತು ಈ ದೇಶದ ಎಲ್ಲ ಸಮುದಾಯಗಳ ಜನರನ್ನಲ್ಲ. ಬಟ್ಟೆಯನ್ನೇ ತೊಡದೆ ಓಡಾಡುವ ಅವರ ಸ್ಥಿತಿಯನ್ನು ಒಪ್ಪದ ಕೋಟ್ಯಂತರ ಜನರೂ ಈ ದೇಶದಲ್ಲೇ ಇದ್ದಾರೆ. ಬಟ್ಟೆಯನ್ನು ಆತ್ಮ ಗೌರವದ, ಘನತೆಯ ಸಂಕೇತವಾಗಿ ಪರಿಗಣಿಸುವ ದೊಡ್ಡ ವರ್ಗ ಇಲ್ಲಿದೆ. ಸಂಸ್ಕೃತಿಯ ವಕ್ತಾರರೆಂದು ಕರೆಸಿಕೊಳ್ಳುವ ಬಿಜೆಪಿ ನಾಯಕರು, ಸಂಘಪರಿವಾರದ ಮುಖಂಡರು ಆಗಾಗ ಈ ನಗ್ನತೆಯ ವಿರುದ್ಧ ತಮ್ಮ ಕಟುಟೀಕೆಯನ್ನೂ ವ್ಯಕ್ತಪಡಿಸುತ್ತಾ ಬರುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಹರ್ಯಾಣದ ರಾಜಕಾರಣಿಗಳು ಒಂದು ನಿರ್ದಿಷ್ಟ ಧರ್ಮವನ್ನು ಪ್ರತಿನಿಧಿಸುವ ಸ್ವಾಮೀಜಿಯನ್ನು ನಗ್ನಾವಸ್ಥೆಯಲ್ಲಿ ಸದನಕ್ಕೆ ಕರೆಸಿ, ಅವರನ್ನು ಅತಿ ಎತ್ತರದ ಸ್ಥಾನದಲ್ಲಿ ಕುಳ್ಳಿರಿಸಿ ಅವರಿಂದ ಆಶೀರ್ವಚನ ನೀಡಿಸಿರುವುದು ಅಪ್ಪಟ ಸಂವಿಧಾನ ವಿರೋಧಿ ನಿಲುವಾಗಿದೆ. ಒಂದು ರೀತಿಯಲ್ಲಿ ಅಂದು ಹರ್ಯಾಣದ ಸದನದಲ್ಲಿ ನಗ್ನರಾಗಿದ್ದು ಅವರನ್ನು ಅಲ್ಲಿಗೆ ಕರೆಸಿ ಸಂವಿಧಾನದ ಆಶಯವನ್ನೇ ಧೂಳೀಪಟ ಮಾಡಿದ ರಾಜಕಾರಣಿಗಳು. ಈ ಪ್ರಕರಣವನ್ನು ನಾಡಿನ ಪ್ರಜ್ಞಾವಂತರೆಲ್ಲರೂ ಒಕ್ಕೊರಲಲ್ಲಿ ಖಂಡಿಸಬೇಕಾಗಿತ್ತು. ಆದರೆ ದುರದೃಷ್ಟವಶಾತ್ ಪ್ರಜಾಸತ್ತೆ ತನ್ನ ಬಾಯಿಗೆ ಬೀಗ ಜಡಿದು ಕೂತಿದೆ.
 ಈ ಪ್ರಕರಣದಲ್ಲಿ ಹಲವು ರಾಜಕೀಯ ನಾಯಕರ ಮುಖವಾಡ ಕಳಚಿಬಿದ್ದಿದ್ದು, ಅವರೂ ದೇಶದ ಮುಂದೆ ನಗ್ನರಾಗಿದ್ದಾರೆ. ಪದೇ ಪದೇ ಪ್ರಜಾಸತ್ತೆಯ ಅಳಿವು ಉಳಿವಿನ ಬಗ್ಗೆ ಮಾತನಾಡುವ ದಿಲ್ಲಿಯ ಮುಖ್ಯಮಂತ್ರಿ ಕೇಜ್ರಿವಾಲ್ ಅವರು ತರುಣ್‌ಸಾಗರ್ ಅವರ ನಗ್ನದೇಹದ ಮುಂದೆ ಉದ್ದಂಡ ಬಿದ್ದಿದ್ದಾರೆ. ಇವರ ಪಕ್ಷದ ಮುಖಂಡರಲ್ಲೊಬ್ಬರಾದ, ಸಂಗೀತ ನಿರ್ದೇಶಕರೂ ಆಗಿರುವ ವಿಶಾಲ್ ದದ್ಲಾನಿಯವರು ಈ ಘಟನೆಯನ್ನು ಖಂಡಿಸಿದ್ದರು. ಆದರೆ ತಕ್ಷಣ ಕೇಜ್ರಿವಾಲ್ ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿ ತರುಣ್ ಸಾಗರ್ ಅವರ ಕ್ಷಮೆ ಯಾಚಿಸಿದ್ದಾರೆ. ಇಲ್ಲಿ ನಿಜಕ್ಕೂ ಕ್ಷಮೆಯಾಚಿಸಬೇಕಾದವರು ಯಾರು? ತರುಣ್‌ಸಾಗರ್ ಮುಂದೆ ಕೇಜ್ರಿವಾಲ್ ಯಾಕೆ ಮಂಡಿಯೂರಬೇಕು? ಬನಿಯಾ ವರ್ಗದಿಂದ ಬಂದಿರುವ ಕೇಜ್ರಿವಾಲ್‌ಗೆ ತರುಣ್‌ಸಾಗರ್ ಜೊತೆಗಿರುವ ಒಳ ಸಂಬಂಧವೊಂದು ಈ ಪ್ರಕರಣದಿಂದ ಬೆಳಕಿಗೆ ಬರುತ್ತದೆ. ತನ್ನ ನಾಯಕರ ನಗ್ನ ರಾಜಕೀಯಕ್ಕೆ ಅಸಹ್ಯಪಟ್ಟು, ವಿಶಾಲ್ ದದ್ಲಾನಿಯವರು ರಾಜಕೀಯಕ್ಕೇ ನಿವೃತ್ತಿಯನ್ನು ಘೋಷಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News