ಡಿಸೆಂಬರ್ ನಲ್ಲಿ ಶೀತಗಾಳಿ: ಚಳಿಯಲ್ಲಿ ನಡುಗಿದ ಉತ್ತರ ಕರ್ನಾಟಕ
Photo Credit : PTI
ಕಳೆದ 48 ಗಂಟೆಗಳಲ್ಲಿ ಕನಿಷ್ಠ ಉಷ್ಣಾಂಶ ದಾಖಲಿಸಿದ ಬೀದರ್, ಧಾರವಾಡ, ಗದಗದಲ್ಲಿ ವಾಡಿಕೆಗಿಂತ ಹೆಚ್ಚೇ ಚಳಿ ಇರುವುದು ಕಂಡುಬಂದಿದೆ.
ಉತ್ತರ ಒಳನಾಡಿನ ಪ್ರಮುಖ ಜಿಲ್ಲೆಗಳಾದ ಬೀದರ್, ಕಲಬುರಗಿ ಮತ್ತು ವಿಜಯಪುರಗಳಲ್ಲಿ ಶೀತ ಗಾಳಿಯ ತೀವ್ರತೆ ಮುಂದಿನ ಒಂದು ವಾರದವರೆಗೆ ಮುಂದುವರಿಯುವ ಸಂಭವವಿದೆ ಎಂದು ಮಂಗಳವಾರ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಎಚ್ಚರಿಕೆ ನೀಡಿದೆ.
ಕಳೆದ 48 ಗಂಟೆಗಳಲ್ಲಿ ಧಾರವಾಡ, ಬೀದರ್, ಗದಗ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಕನಿಷ್ಠ ಉಷ್ಣಾಂಶವು ದಾಖಲಾಗಿತ್ತು. ಧಾರವಾಡದಲ್ಲಿ ಉಷ್ಣಾಂಶ 9.5 ಡಿಗ್ರಿ ಸೆಲ್ಸಿಯಸ್ ಇಳಿಕೆಯಾದರೆ, ಬೀದರ್ ನಲ್ಲಿ 9.8 ಡಿಗ್ರಿ ಸೆಲ್ಸಿಯಸ್ ಮತ್ತು ವಿಜಯಪುರದಲ್ಲಿ 10.5 ಡಿಗ್ರಿ ಸೆಲ್ಸಿಯಸ್ ವರದಿಯಾಗಿದೆ. ಬೆಂಗಳೂರು ನಗರದಲ್ಲಿ ಕನಿಷ್ಠ ಉಷ್ಣಾಂಶ 16.4 ಡಿಗ್ರಿ ಸೆಲ್ಸಿಯಸ್ ನಷ್ಟಿತ್ತು. ಹೀಗಾಗಿ ಇದು ಅತಿ ತಂಪಾದ ಡಿಸೆಂಬರ್ ಎಂದು ದಾಖಲಾಗಿದೆ.
ಬೀದರ್ ಮತ್ತು ಕಲಬುರ್ಗಿಯಲ್ಲಿ ಚಳಿ
ಹವಾಮಾನ ಇಲಾಖೆ ಸಾಮಾಜಿಕ ಜಾಲತಾಣ ‘ಎಕ್ಸ್’ ನಲ್ಲಿ ಹಾಕಿರುವ ವಿವರಗಳನ್ನು ನೋಡಿದರೆ ಬೀದರ್ ಹೊರತುಪಡಿಸಿ ಉಳಿದ ಜಿಲ್ಲೆಗಳಲ್ಲಿ ಅತಿ ಶೀತಗಾಳಿಯ ಪರಿಸರ ಕಡಿಮೆಯಾಗುತ್ತಿದೆ. ಕಳೆದ ಇಪ್ಪತ್ತನಾಲ್ಕು ಗಂಟೆಗಳಿಗೆ ಸಂಬಂಧಿಸಿದಂತೆ ಡಿಸೆಂಬರ್ 17ರಂದು ಹವಾಮಾನ ಇಲಾಖೆ ನೀಡಿದ ವರದಿಯಲ್ಲಿ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಶೀತಗಾಳಿಯ ಪರಿಸರ ಕಡಿಮೆಯಾಗಿದೆ.
ಉಷ್ಣಾಂಶವು ಬೀದರ್ ನಲ್ಲಿ 8.4 ಡಿಗ್ರಿ ಸೆಲ್ಸಿಯಸ್ ಗೆ ಮುಂದುವರಿದರೆ, ಕಲಬುರಗಿ 10.5 ಡಿಗ್ರಿ ಸೆಲ್ಸಿಯಸ್, ವಿಜಯಪುರ 11.7 ಡಿಗ್ರಿ ಸೆಲ್ಸಿಯಸ್, ಕೊಪ್ಪಳ 12.2 ಡಿಗ್ರಿ ಸೆಲ್ಸಿಯಸ್, ಬೆಳಗಾವಿ 12.4 ಡಿಗ್ರಿ ಸೆಲ್ಸಿಯಸ್, ಬಾಗಲಕೋಟೆ 12.8 ಡಿಗ್ರಿ ಸೆಲ್ಸಿಯಸ್, ರಾಯಚೂರು 12.9 ಡಿಗ್ರಿ ಸೆಲ್ಸಿಯಸ್ ಗೆ ಏರಿದೆ. ಹಾಗಿದ್ದರೂ ಈ ಪ್ರದೇಶಗಳಿಗೆ ಇಡೀ ವಾರಕ್ಕೆ ಹಳದಿ ಅಲರ್ಟ್ ನೀಡಲಾಗಿದೆ.
ಬೀದರ್ ನಿವಾಸಿ ಶಶಿಕಾಂತ್ ಹೇಳುವ ಪ್ರಕಾರ, “ಬೀದರ್ ಕಲಬುರಗಿ ಗೆ ನೆರೆಯ ಜಿಲ್ಲೆಯಾಗಿದ್ದರೂ ಸಮುದ್ರ ಮಟ್ಟದಿಂದ 2600 ಅಡಿ ಎತ್ತರದಲ್ಲಿದೆ. ಹೀಗಾಗಿ ಇಲ್ಲಿ ಸಾಮಾನ್ಯವಾಗಿ ಚಳಿಗಾಲದಲ್ಲಿ ಚಳಿ ಹೆಚ್ಚಿರುತ್ತದೆ. ಬೇಸಗೆಯಲ್ಲೂ ಹವಾಮಾನ 36-37 ಡಿಗ್ರಿಯನ್ನು ಮೀರಿ ಹೋಗುವುದಿಲ್ಲ. ಇಲ್ಲಿನ ಪರಿಸರ ಕಲ್ಲು, ಮಣ್ಣು ಎಲ್ಲವೂ ವ್ಯತ್ಯಾಸವಿದೆ. ಇಲ್ಲಿಗೂ ಶೀತಗಾಳಿಯ ಯೆಲ್ಲೋ ಅಲರ್ಟ್ ನೀಡಿದ್ದಾರೆ. ಈ ಬಾರಿ ಕನಿಷ್ಠ ಮಟ್ಟ 8 ಡಿಗ್ರಿಗೆ ಇಳಿದಿದೆ. ಆದರೆ ಪ್ರತಿ ವರ್ಷ ಚಳಿಗಾಲದಲ್ಲೂ ಸಾಮಾನ್ಯವಾಗಿ ಬೀದರ್ ಹೆಚ್ಚು ಕಡಿಮೆ 7-9ರವರೆಗೆ ಕನಿಷ್ಠ ಮಟ್ಟವನ್ನು ದಾಖಲಿಸುತ್ತದೆ.”
ಆದರೆ ಕಲಬುರ್ಗಿಯಲ್ಲಿ ಈ ಬಾರಿ ವಾಡಿಕೆಗಿಂತ ಹೆಚ್ಚೇ ಚಳಿ ಇದೆ. ಕಳೆದೊಂದು ದಶಕದಿಂದ ಕಲಬುರ್ಗಿಯಲ್ಲಿ ನೆಲೆಸಿರುವ ಕುಮಾರ್ ಅವರು ಹೇಳುವ ಪ್ರಕಾರ, “2 ದಿನಗಳ ಹಿಂದೆ ಶೀತಗಾಳಿಯ ಬಗ್ಗೆ ಆರೆಂಜ್ ಅಲರ್ಟ್ ಬಂದಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಚಳಿ ಹೆಚ್ಚಿದೆ. ಜನರಿಗೆ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.”
ಒಣಗಾಳಿ ಉಷ್ಣಾಂಶ ಇಳಿಕೆಗೆ ಕಾರಣ
ಹವಾಮಾನ ಇಲಾಖೆಯ ವರದಿಯ ಪ್ರಕಾರ, ಸ್ವಚ್ಛ ಆಗಸ, ಒಣ ಗಾಳಿ ಮತ್ತು ಮೋಡಕವಿದ ವಾತಾವರಣ ಕಡಿಮೆ ಇರುವುದು ಈಗಿನ ಚಳಿಯ ಪರಿಸರಕ್ಕೆ ಮುಖ್ಯ ಕಾರಣವಾಗಿದೆ. ಇಂತಹ ಪರಿಸರದಲ್ಲಿ ಸೂರ್ಯಾಸ್ತವಾಗುತ್ತಲೇ ತ್ವರಿತವಾಗಿ ಉಷ್ಣಾಂಶ ಕಡಿಮೆಯಾಗಲು ಆರಂಭವಾಗುತ್ತದೆ. ಅನೇಕ ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನ 10ರಿಂದ 14 ಡಿಗ್ರಿ ಸೆಲ್ಸಿಯಸ್ಗೆ ಇಳಿದಿದೆ. ಹೀಗಾಗಿ ಉತ್ತರ ಒಳನಾಡಿಗೆ ಇದು ಅತಿ ತಂಪಾದ ಡಿಸೆಂಬರ್ ಆಗಿದೆ.
ಡಿಸೆಂಬರ್ 17ರ ನಂತರ ಏರಲಿದೆ ಉಷ್ಣಾಂಶ
ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ ಡಿಸೆಂಬರ್ 17ರ ನಂತರ 2-3 ಡಿಗ್ರಿಗಳಷ್ಟು ಹವಾಮಾನದಲ್ಲಿ ಏರಿಕೆಯಾಗುವ ಸಾಧ್ಯತೆಯಿದೆ. ಆದರೆ ಬೆಳಗಿನ ಜಾವ ಮತ್ತು ಮಧ್ಯರಾತ್ರಿ ಹೆಚ್ಚು ಚಳಿ ಇರುವ ಸಾಧ್ಯತೆಯಿದೆ. ಮಳೆ ಬರುವ ಸಾಧ್ಯತೆ ಕಡಿಮೆ ಇದೆ. ಒಣ ಗಾಳಿ ಮುಂದಿನ ಕೆಲವು ದಿನಗಳ ಕಾಲ ಮುಂದುವರಿಯಲಿದೆ.