ಮುಸ್ಲಿಂ ಯುವಕರ ’ಅಕ್ರಮ ಬಂಧನ’ ರಾಷ್ಟ್ರೀಯ ಚರ್ಚೆಯಾಗಲಿ: ಶರದ್ ಪವಾರ್

Update: 2016-08-31 04:16 GMT

ಮುಂಬೈ, ಆ.31: ಮುಸ್ಲಿಂ ಯುವಕರ ’ಅಕ್ರಮ ಬಂಧನ’ ವಿಚಾರವನ್ನು ಜಾತ್ಯತೀತ ಪಕ್ಷಗಳ ಮುಖಂಡರ ಜತೆ ಚರ್ಚಿಸಿ ಪ್ರಧಾನಿ ನರೇಂದ್ರ ಮೋದಿಯವರ ಗಮನಕ್ಕೆ ತರಲು ಚಿಂತನೆ ನಡೆಸಿದ್ದಾಗಿ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ಮುಖಂಡ ಶರದ್ ಪವಾರ್ ಪ್ರಕಟಿಸಿದ್ದಾರೆ.
ಈ ವಿಷಯವನ್ನು ರಾಜಕೀಯಗೊಳಿಸುವ ಅಗತ್ಯವಿಲ್ಲ. ಆದರೆ ಈ ವಿಷಯ ರಾಷ್ಟ್ರೀಯ ಚರ್ಚೆಯಾಗಬೇಕಾದ ವಿಚಾರ ಎಂದು ಅವರು ತಮ್ಮನ್ನು ಔರಂಗಾಬಾದ್‌ನಲ್ಲಿ ಭೇಟಿಯಾದ 28 ರಾಜಕೀಯೇತರ ಮುಸ್ಲಿಂ ಸಂಘಟನೆಗಳಿಗೆ ತಿಳಿಸಿದರು. ''ಈ ವಿಷಯವನ್ನು ಎಲ್ಲ ಪಕ್ಷಗಳ ಜತೆ, ಅದರಲ್ಲೂ ಪ್ರಮುಖವಾಗಿ ಜಾತ್ಯತೀತ ಪಕ್ಷಗಳ ಜತೆ ಚರ್ಚಿಸಿ, ಪ್ರಧಾನಿ ಗಮನಕ್ಕೆ ತರುತ್ತೇನೆ. ಇದು ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗಬೇಕು" ಎಂದು ಪವಾರ್ ಹೇಳಿದರು.
ಮಹಾರಾಷ್ಟ್ರದ ಭಯೋತ್ಪಾದಕ ವಿರೋಧಿ ಪಡೆ, ಐಸಿಸ್ ಕಾರ್ಯಕರ್ತರೆಂಬ ಅನುಮಾನದಿಂದ ಅಕ್ರಮವಾಗಿ ಬಂಧಿಸಿರುವ ಯುವಕರ ಬಗ್ಗೆ ಮುಸ್ಲಿಂ ಮುಖಂಡರು ನಿರ್ದಿಷ್ಟವಾಗಿ ವಿವರಗಳನ್ನು ನೀಡಿದ್ದಾರೆ ಎಂದು ಪವಾರ್ ಸ್ಪಷ್ಟಪಡಿಸಿದರು. ಹಲವು ಪ್ರಕರಣಗಳಲ್ಲಿ ಎಟಿಎಸ್ ಅಧಿಕಾರಿಗಳು ಮುಸ್ಲಿಂ ಯುವಕರನ್ನು ಕರೆದೊಯ್ದು ಅವರ ಮೇಲೆ ಪ್ರಕರಣವನ್ನೂ ದಾಖಲಿಸಿಲ್ಲ; ಹಾಗೂ ಕೋರ್ಟ್‌ಗೂ ಹಾಜರುಪಡಿಸಿಲ್ಲ ಎಂದು ವಿವರಿಸಿದರು. ಬಂಧಿತರನ್ನು 24 ಗಂಟೆಗಳ ಒಳಗಾಗಿ ನ್ಯಾಯಾಲಯಕ್ಕೆ ಹಾಜರುಪಡಿಸುವುದು ಕಡ್ಡಾಯ ಎಂದು ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News