ವೈದ್ಯನ ಮನೆಯಲ್ಲಿ ಬೃಹತ್ ಶಸ್ತ್ರಾಗಾರ ಪತ್ತೆ

Update: 2016-08-31 05:06 GMT

ರಾಯಪುರ್, ಆ.31: ಛತ್ತೀಸಗಡ ರಾಜಧಾನಿ ರಾಯಪುರದ ಹೋಮಿಯೋಪತಿ ವೈದ್ಯನೊಬ್ಬನ ಮನೆಗೆ ದಾಳಿ ನಡೆಸಿದ ಪೊಲೀಸರು ಬೃಹತ್ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಪತ್ತೆ ಹಚ್ಚಿದ್ದು ವೈದ್ಯನನ್ನು ಬಂಧಿಸಿದ್ದಾರೆ.
ಬಂಧಿತ ವೈದ್ಯನನ್ನು ಅನಿರುದ್ಧ ಚಟರ್ಜಿ ಎಂದು ಗುರುತಿಸಲಾಗಿದೆ. ಆತನ ಮೂರು ಮಹಡಿಯ ಮನೆಯಲ್ಲಿ ಹಲವಾರು ರೈಫಲ್ ಗಳು, ರಿವಾಲ್ವರುಗಳು, ಕತ್ತಿ ಹಾಗೂ ಬಿಲ್ಲು ಬಾಣಗಳು ಪತ್ತೆಯಾಗಿವೆ. ಮಾವೋವಾದಿಗಳೊಂದಿಗೆ ಸಂಬಂಧವಿದೆಯೇ ಎಂದು ತಿಳಿಯುವ ಸಲುವಾಗಿ ವೈದ್ಯನನ್ನು ತೀವ್ರ ವಿಚಾರಣೆಗೆ ಗುರಿಪಡಿಸಲಾಗಿದೆ.
ವೈದ್ಯ ಆನ್ ಲೈನ್ ಮುಖಾಂತರ ಇಷ್ಟೊಂದು ಬೃಹತ್ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಪಡೆದಿರಬಹುದೇ ಎಂದು ತಿಳಿಯುವ ಪ್ರಯತ್ನ ಮಾಡಲಾಗುತ್ತಿದ್ದು, ಪ್ರಕರಣವನ್ನು ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಕ್ರಮ ಬಂದೂಕು ಹೊಂದಿದ್ದ ವ್ಯಕ್ತಿಯೊಬ್ಬನನ್ನು ಬಂಧಿಸಿ ಆತನ ವಿಚಾರಣೆಗೊಳಪಡಿಸಿದಾಗ ರಾಜೇಶ್ ಪೌಲ್ ಎಂಬ ಹೆಸರಿನ ಆವ್ಯಕ್ತಿ ತಾನು ತನ್ನ ‘ಸ್ನೇಹಿತ’ ಅನಿರುದ್ಧ ಚಟರ್ಜಿಯಿಂದ ಬಂದೂಕನ್ನು ಪಡೆದಿರುವುದಾಗಿ ಹೇಳಿದ್ದ. ಈ ಮಾಹಿತಿಯಾಧಾರದಲ್ಲಿ ಪೊಲೀಸರು ವೈದ್ಯನ ಮನೆಗೆ ದಾಳಿ ನಡೆಸಿದ್ದರು. ವೈದ್ಯನ ಮನೆಯ ಮೂರನೇ ಮಹಡಿಯನ್ನು ಫ್ಯಾಕ್ಟರಿ ರೀತಿಯಲ್ಲಿ ಮಾರ್ಪಾಟು ಮಾಡಲಾಗಿತ್ತು.
ರಾಜೇಶ್ ಪೌಲ್ ಹಾಗೂ ಡಾ. ಚಟರ್ಜಿಯನ್ನು ಈಗಾಗಲೇ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಅವರನ್ನು ಮೂರು ದಿನಗಳ ಪೊಲೀಸ್ ಕಸ್ಟಡಿಗೆ ವಹಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News