ಮತೀಯ, ರಾಜಕೀಯ ಹಿಂಸೆ : ಕರ್ನಾಟಕ ದೇಶದಲ್ಲೇ ದ್ವಿತೀಯ ಸ್ಥಾನಿ
ಬೆಂಗಳೂರು, ಆ.31: ಮತೀಯ ಹಾಗೂ ರಾಜಕೀಯ ಸಂಬಂಧಿತ ಹಿಂಸೆಗಳಲ್ಲಿ ಕರ್ನಾಟಕವು ದೇಶದಲ್ಲೇ ಎರಡನೇ ಸ್ಥಾನ ಪಡೆದಿದೆ. ಆದರೆ ಇದರರ್ಥ ರಾಜ್ಯದ ಕಾನೂನು ಹಾಗೂ ಸುವ್ಯವಸ್ಥೆ ಹದಗೆಟ್ಟಿದೆಯೆಂದಲ್ಲ, ವಾಸ್ತವವಾಗಿ ರಾಜ್ಯದಲ್ಲಿ ಹೆಚ್ಚಿನ ಪ್ರಕರಣಗಳ ಬಗ್ಗೆ ದೂರು ದಾಖಲಾಗುವುದೇ ಈ ಸಂಖ್ಯೆಯ ಹೆಚ್ಚಳಕ್ಕೆ ಕಾರಣವಾಗಿರಬಹುದೆಂದು ಅಂದಾಜಿಸಲಾಗಿದೆ.
ನ್ಯಾಷನಲ್ ಕ್ರೈಮ್ ರೆಕಾರ್ಡ್ಸ್ ಬ್ಯೂರೋವರದಿಯೊಂದರ ಪ್ರಕಾರ ಹರ್ಯಾಣ ರಾಜ್ಯದಲ್ಲಿ ಕಳೆದ ವರ್ಷ 201 ಮತೀಯ ಹಿಂಸೆ ಪ್ರಕರಣಗಳು ವರದಿಯಾಗಿದ್ದರೆ ಕರ್ನಾಟಕದಲ್ಲಿ 163 ಪ್ರಕರಣಗಳ ವರದಿಯಾಗಿದ್ದವು, ಕೇರಳದಲ್ಲಿ ರಾಜಕೀಯ ಸಂಬಂಧಿ ಹಿಂಸಾಚಾರದ 1,031 ಪ್ರಕರಣಗಳು ವರದಿಯಾಗಿದ್ದರೆ, ರಾಜ್ಯದಲ್ಲಿ ಒಟ್ಟು 166 ಇಂತಹ ಪ್ರಕರಣಗಳು ವರದಿಯಾಗಿವೆ.
ಬೆಂಗಳೂರಿನಲ್ಲಿ ಕಳೆದ ವರ್ಷ ಒಟ್ಟು 376 ಹಿಂಸೆಯ ಪ್ರಕರಣಗಳು ವರದಿಯಾಗಿದ್ದರೆ, ಮುಂಬೈ ನಗರದಲ್ಲಿ 396 ಪ್ರಕರಣಗಳು ವರದಿಯಾಗಿವೆ. ಸಾರ್ವಜನಿಕ ಆಸ್ತಿಗೆ ಹಾನಿ ಪ್ರಕರಣಗಳಲ್ಲಿ ಬೆಂಗಳೂರು ದೇಶದಲ್ಲೇ ಮೂರನೆ ಸ್ಥಾನದಲ್ಲಿದ್ದು, 99 ಪ್ರಕರಣಗಳು ವರದಿಯಾಗಿವೆ. ದೆಹಲಿಯಲ್ಲಿ ಸಾರ್ವಜನಿಕ ಆಸ್ತಿ ಹಾನಿಯ 182 ಪ್ರಕರಣಗಳು ವರದಿಯಾಗಿವೆ.
ದಲಿತರ ವಿರುದ್ಧ ಅಪರಾಧ ಪ್ರಕರಣಗಳೂ ಬೆಂಗಳೂರಿನಲ್ಲಿ ಅತ್ಯಧಿಕವಾಗಿವೆ. ನಗರದಲ್ಲಿ ಇಂತಹ ಒಟ್ಟು 127ಪ್ರಕರಣಗಳು ಕಳೆದ ವರ್ಷ ವರದಿಯಾಗಿವೆ.