ಮುಖ್ಯಮಂತ್ರಿಯ ಭಾಷಣ ನಿಲ್ಲಿಸಿದ ದಲಿತ ಮಹಿಳೆಯರು!

Update: 2016-08-31 07:36 GMT

ಅಮೃತಸರ್, ಆ.31: ಪಂಜಾಬ್ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ಭಾಷಣವೊಂದನ್ನು ಮಾಡುತ್ತಿದ್ದಾಗ ಅವರು ಪ್ರಸ್ತಾಪಿಸಿದ ಕೆಲವೊಂದು ವಿಚಾರಗಳನ್ನು ಪ್ರಶ್ನಿಸುವ ಧೈರ್ಯ ತೋರಿದ ಇಬ್ಬರು ದಲಿತ ಮಹಿಳೆಯರು ಅವರ ಭಾಷಣವನ್ನೇ ನಿಲ್ಲಿಸಿದ ಘಟನೆ ಸರ್ ಜಿಲ್ಲೆಯ ಲಂಬಿ ಪಟ್ಟಣದ ಮಂಡಿ ಕಿಲ್ಲಿಯನ್ ವಾಲಿ ಎಂಬಲ್ಲಿ ಮಂಗಳವಾರ ನಡೆದಿದೆ.

ಮುಖ್ಯಮಂತ್ರಿಯ ಸ್ವಕ್ಷೇತ್ರವಾಗಿರುವ ಇಲ್ಲಿ ಶಿರೋಮಣಿ ಅಕಾಲಿ ದಳವು ಮಂಗಳವಾರ ದಲಿತ ಚೇತನಾ ರ್ಯಾಲಿ ಆಯೋಜಿಸಿತ್ತು. ಈ ರ್ಯಾಲಿಯಲ್ಲಿ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್‌ಭಾಗವಹಿಸಿ ಮಾತನಾಡುತ್ತಿದ್ದಾಗ ಈ ಆಶ್ಚರ್ಯಕರ ಘಟನೆ ವರದಿಯಾಗಿದೆ.
ರಾಜ್ಯದ ಶಿರೋಮಣಿ ಅಕಾಲಿ ದಳ-ಬಿಜೆಪಿ ಸರಕಾರ ದಲಿತರ ಕಲ್ಯಾಣಕ್ಕಾಗಿ ಜಾರಿಗೊಳಿಸಿರುವ ಕಾರ್ಯಕ್ರಮಗಳ ವಿಚಾರವಾಗಿ ಬಾದಲ್ ಮಾತನಾಡುತ್ತಿರುವಾಗ ರಾಜ್ ರಾಣಿ ಹಾಗೂ ಮಂಜಿತ್ ಕೌರ್ ಎಂಬ ಇಬ್ಬರು ದಲಿತ ಮಹಿಳೆಯರು ಅವರ ಭಾಷಣವನ್ನು ಮಧ್ಯದಲ್ಲಿಯೇ ತುಂಡರಿಸಿ ಅವರಿಗೆ ಪ್ರಶ್ನೆಗಳ ಸುರಿಮಳೆಗೈಯಲು ಆರಂಭಿಸಿದರು. ‘‘ಒಂದೋ ನಿಮ್ಮ ಅಧಿಕಾರಿಗಳು ಯಾ ನಾಯಕರು ಈ ಯೋಜನೆಗಳ ಎಲ್ಲ ಪ್ರಯೋಜನವನ್ನು ಪಡೆದಿದ್ದಾರೆ. ನಿಜವಾದ ಫಲಾನುಭವಿಗಳು ಏನನ್ನೂ ಪಡೆದಿಲ್ಲ’’ ಎಂದು ಪೊಲೀಸರು ಅವರಿಬ್ಬರನ್ನು ಹೊರಕ್ಕೆ ಕೊಂಡೊಯ್ಯುವ ಮುನ್ನ ಅವರಲ್ಲೊಬ್ಬಳು ಆಕ್ರೋಶ ವ್ಯಕ್ತಪಡಿಸಿದ್ದಳು.
ಈ ಬೆಳವಣಿಗೆಯಿಂದ ಅರೆಕ್ಷಣ ದಂಗಾದ ಮುಖ್ಯಮಂತ್ರಿ ತಮ್ಮ ಭಾಷಣವನ್ನು ಒಂದೇ ನಿಮಿಷದಲ್ಲಿ ಮುಗಿಸಿ ಅಲ್ಲಿಂದ ಹೊರನಡೆದರು.
ಇನ್ನೊಂದು ಘಟನೆಯಲ್ಲಿ ಕಿಶನ್ ಪುರಪಟ್ಟಿ ಗ್ರಾಮದ ದಲಿತ ವ್ಯಕ್ತಿ ಮೌರಾ ಸಿಂಗ್‌ಎಂಬಾತನಿಗೆ ರ್ಯಾಲಿಯಲ್ಲಿ ಭಾಗವಹಿಸಿದ್ದ ಮುಖ್ಯಮಂತ್ರಿಯನ್ನು ಭೇಟಿಯಾಗಲು ಪೊಲೀಸರು ಅನುಮತಿ ನಿರಾಕರಿಸಿದ್ದರಿಂದ ಆತಘೋಷಣೆ ಕೂಗಲಾರಂಭಿಸಿದ್ದ. ತನ್ನ ಪುತ್ರ ಜುಲೈ 27ರಂದು ಆತ್ಮಹತ್ಯೆ ಮಾಡಿದ್ದಾಗಿಯೂ ಆತನಿಗೆ ಆತ್ಮಹತ್ಯೆಗೈಯ್ಯಲು ಪ್ರೇರೇಪಣೆ ನೀಡಿದ್ದಾರೆನ್ನಲಾದ ಇಬ್ಬರ ಮೇಲೆ ದೂರು ದಾಖಲಾಗಿದ್ದರೂ ಪೊಲೀಸರು ಇಲ್ಲಿಯ ತನಕ ಯಾರನ್ನೂ ಬಂಧಿಸಿಲ್ಲ ಎಂದು ಆತ ಬೊಬ್ಬಿಡುತ್ತಿದ್ದ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News