×
Ad

"ಇನ್ನೊಮ್ಮೆ ಹೀಗೆ ಮಾಡಬೇಡಿ” ಎಂದು ಪ್ರಧಾನಿಯನ್ನು ಎಚ್ಚರಿಸಿದ ರಾಷ್ಟ್ರಪತಿ

Update: 2016-08-31 13:43 IST

ಹೊಸದಿಲ್ಲಿ, ಆ.31: ಶತ್ರು ಆಸ್ತಿ ಕಾಯ್ದೆ ಸಂಬಂಧಿಸಿ ತಿದ್ದುಪಡಿಗೆ ಪ್ರಧಾನ ಮಂತ್ರಿ ವಿಶೇಷ ಅಧಿಕಾರ ಬಳಸಿ ಹೊರಡಿಸಿದ್ದ   ಸುಗ್ರೀವಾಜ್ಞೆಗೆ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರು "ಇನ್ನೊಮ್ಮೆ ಹೀಗೆ ಮಾಡಬೇಡಿ” ಎಂದು ಪ್ರಧಾನಿಯನ್ನು ಎಚ್ಚರಿಸಿ ಸಹಿ ಹಾಕಿರುವ ಘಟನೆ ಬೆಳಕಿಗೆ ಬಂದಿದೆ.
ಪಾರ್ಲಿಮೆಂಟ್‌ನಲ್ಲಿ ಅಂಗೀಕಾರಗೊಳ್ಳದ ಕಾನೂನು ತಿದ್ದುಪಡಿ ಮಸೂದೆ ಅಂಕಿತಕ್ಕಾಗಿ ರಾಷ್ಟ್ರಪತಿ ಬಳಿ ಕಳುಹಿಸಿರುವುದು ಇಂದು ನಾಲ್ಕನೆ ಬಾರಿ , ಆದರೆ ಈ ಬಾರಿ ಸಚಿವ ಸಂಪುಟದಲ್ಲಿ ಅಂಗೀಕಾರ ಪಡೆಯದೆ ನೇರವಾಗಿ ತಮ್ಮ ಬಳಿ ಸಹಿಗಾಗಿ ಕಳುಹಿಸಿರುವುದಕ್ಕೆ ರಾಷ್ಟ್ರಪತಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಂತಿಮವಾಗಿ  ಸುಗ್ರೀವಾಜ್ಞೆಗೆ  ರಾಷ್ಟ್ರಪತಿ ಎಚ್ಚರಿಕೆಯೊಂದಿಗೆ ಅಂಕಿತ ಹಾಕಿದ್ದಾರೆ.
ಸಾರ್ವಜನಿಕ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಸುಗ್ರೀವಾಜ್ಞೆಗೆ ಸಹಿ ಹಾಕಿರುವುದಾಗಿ ಹೇಳಿರುವ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರು ಈ ರೀತಿ ಇನ್ನು ಮುಂದೆ ಸಂಪುಟದ ಮುಂದಿಡದೆ ಸಹಿಗೆ ಕಳುಹಿಸುವ ಪ್ರಕ್ರಿಯೆ ಮಾಡಬಾರದು ಎಂದು ಎಚ್ಚರಿಸಿದ್ದಾರೆ.
ಸ್ವತಂತ್ರ ಭಾರತದಲ್ಲಿ ಇದೇ ಮೊದಲ ಬಾರಿ ಸಚಿವ ಸಂಪುಟದ ಒಪ್ಪಿಗೆ ಪಡೆಯದೆ ಕಳಹಿಸಲಾದ ಮಸೂದೆಗೆ ರಾಷ್ಟ್ರಪತಿ ಅಂಕಿತ ಹಾಕಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಸೂದೆಯನ್ನು ಅಂಗಿಕಾರಕ್ಕೆ ಕಳಹಿಸಲು ಉದ್ಯಮ ಮತ್ತು ವ್ಯವಹಾರ ನಿಯಮ  12ನ್ನು ಬಳಸಿದ್ದಾರೆ. ನಲುತ್ತೆಂಟು ವರ್ಷಗಳಷ್ಟು ಹಳೆಯದಾದ' ಶತ್ರು ಆಸ್ತಿ  ಕಾಯ್ದೆ' ಭಾರತದಿಂದ ಪಾಕಿಸ್ತಾನಕ್ಕೆ ವಲಸೆ ಹೋಗಿರುವ ಅಥವಾ ಯುದ್ಧದ ಬಳಿಕ ಚೀನಾ ಸೇರಿದವರ ಆಸ್ತಿಯನ್ನು ಉತ್ತರಾಧಿಕಾರಿಗಳಿಗೆ ವರ್ಗಾವಣೆಗೆ ಸಂಬಂಧಿಸಿದ್ದಾಗಿದೆ. 
ಲೋಕಸಭೆಯಲ್ಲಿ ಈ ವರ್ಷದ ಆರಂಭದಲ್ಲಿ ಕಾನೂನು ತಿದ್ದುಪಡಿ ಮಸೂದೆಯನ್ನು ಮಂಡಿಸಲಾಗಿತ್ತು. ಆದರೆ ವಿಪಕ್ಷ ಲೋಕಸಭೆಯಲ್ಲಿ ಈ ಕಾನೂನು ತಿದ್ದುಪಡಿಯ ಬಗ್ಗೆ ಪುನರ‍್ ಪರಿಶೀಲನೆ ಬಯಸಿತ್ತು. ರಾಜ್ಯಸಭೆಯಲ್ಲಿ ಅಂಗೀಕಾರಕ್ಕೆ ವಿರೋಧ ವ್ಯಕ್ತವಾಗಿತ್ತು. ಇದರಿಂದಾಗಿ ಮಸೂದೆಗೆ ಉಭಯ ಸದನಗಳಲ್ಲೂ ಸರಕಾರಕ್ಕೆ ಅಂಗೀಕಾರ ಪಡೆಯಲು ಸಾಧ್ಯವಾಗಲಿಲ್ಲ. ಈ ಕಾರಣದಿಂದಾಗಿ ಸರಕಾರ ಸುಗ್ರೀವಾಜ್ಞೆ ಹೊರಡಿಸಿ ರಾಷ್ಟ್ರಪತಿಗಳ ಸಹಿಗಾಗಿ ಕಳುಹಿಸಿತ್ತು.
ಕಳೆದ ಮೇ ತಿಂಗಳಲ್ಲಿ ಸರಕಾರ ಅಂಕಿತಕ್ಕಾಗಿ  ಕಳುಹಿಸಿದ್ದ ತಿದ್ದುಪಡಿ ಮಸೂದೆಯನ್ನು ರಾಷ್ಟ್ರಪತಿ ಹಿಂದಕ್ಕೆ ಕಳುಹಿಸಿದ್ದರು. ಆ ಬಳಿಕ ಮೂರು ತಿಂಗಳ ಒಳಗಾಗಿ ಸರಕಾರ ಮತ್ತೆ ಅಂಕಿತಕ್ಕಾಗಿ ಕಳುಹಿಸಬೇಕಿತ್ತು. ಆದರೆ ರವಿವಾರ ಈ ತಿದ್ದುಪಡಿ ಮಸೂದೆಯ ಆಯುಷ್ಯ ಮುಗಿಯುವ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ  ಸಚಿವ ಸಂಪುಟದ ಒಪ್ಪಿಗೆ ಪಡೆಯದೆ ಅಂಕಿತಕ್ಕಾಗಿ ಕಳುಹಿಸಿದ್ದರು. ರಾಷ್ಟ್ರಪತಿ ಇದೀಗ ಎಚ್ಚರಿಕೆ ನೀಡಿದ ಹಿನ್ನೆಲೆಯಲ್ಲಿ ರಾಷ್ಟ್ರಪತಿಗಳ ಅಂಗೀಕಾರದ ಬಳಿಕ ಸಚಿವ ಸಂಪುಟದ ಮುಂದೆ ಮುಂದಿಡಬೇಕಾದ ಸನ್ನಿವೇಶ ಎದುರಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News