ಸಮಾಜದಲ್ಲಿ ಒಡಕುಂಟುಮಾಡುವ ಶ್ರಮವನ್ನು ಎಲ್ಲರೂ ಒಗ್ಗಟ್ಟಿನಿಂದ ಎದುರಿಸಬೇಕು: ಪಿಣರಾಯಿ ವಿಜಯನ್
ತಿರುವನಂತಪುರಂ,ಸೆ.1: ಸಮಾಜದಲ್ಲಿ ಒಡಕು ಸೃಷ್ಟಿಸುವವರನ್ನು ಮತ್ತು ಅಂತಹ ಪ್ರಯತ್ನಗಳನ್ನು ಎಲ್ಲರೂ ಸೇರಿ ಒಗ್ಗಟ್ಟಿನಿಂದ ಎದುರಿಸಬೇಕಾಗಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಕಳೆದ ನೂರುದಿವಸಗಳಲ್ಲಿ ಈನಿಟ್ಟಿನಲ್ಲಿ ಸರಕಾರಕ್ಕೆ ನೀಡಿದ ಬೆಂಬಲವನ್ನು ಮುಂದುವರಿಸಬೇಕೆಂದು ಅವರು ಜನರನ್ನು ವಿನಂತಿಸಿದ್ದಾರೆ. ಸಮಾಜಕಲ್ಯಾಣ- ಅಭಿವೃದ್ಧಿಗಳನ್ನು ಜೊತೆಯಾಗಿ ನಿರ್ವಹಿಸಲಾಗುವುದು, ನೂರು ದಿವಸಗಳಲ್ಲಿ ಜನರು ಸರಕಾರಕ್ಕೆ ಬೆಂಬಲ ನೀಡಿದ್ದು, ಇನ್ನು ಮುಂದೆಯೂ ಅವರು ಬೆಂಬಲಿಸಲಿದ್ದಾರೆಂದು ಮುಖ್ಯಮಂತ್ರಿ ಆಶಾವಾದ ವ್ಯಕ್ತಿಪಡಿಸಿದ್ದಾರೆ. ಎಲ್‌ಡಿಎಫ್ ಸರಕಾರಕ್ಕೆ ನೂರನೆ ದಿನ ಪೂರ್ತಿಯಾದ ಸಂದರ್ಭದಲ್ಲಿ ಮನ್‌ಕಿಬಾತ್ ಮಾದರಿಯಲ್ಲಿ ಪಿಣರಾಯಿವಿಜಯನ್ ಜನರನ್ನುದ್ದೇಶಿಸಿ ರೇಡಿಯೊದಲ್ಲಿ ಮಾತಾಡುತ್ತಾ ಈ ರೀತಿ ಅವರು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆಂದು ವರದಿಯಾಗಿದೆ. ಮಕ್ಕಳಲ್ಲಿ ಮಾದಕವಸ್ತು ಸೇವನೆ ಪ್ರವೃತ್ತಿಯನ್ನು ತಡೆಯಲಿಕ್ಕಾಗಿ ಕಠಿಣ ಕ್ರಮಕೈಗೊಳ್ಳಲಾಗುವುದು. ಈ ಮಹಾವಿಪತ್ತನ್ನು ಕೇರಳದಿಂದ ಕಿತ್ತೆಸೆಯಲು ತಂದೆತಾಯಿಗಳು ಕೂಡಾ ಸರಕಾರಕ್ಕೆ ನೆರವು ನೀಡಬೇಕು. ವಿಷಾಂಶಗಳಿಲ್ಲದ ತರಕಾರಿ ಬೆಳೆದು ಆಹಾರದಲ್ಲಿ ಸ್ವಾಯತ್ತೆಯನ್ನು ಗಳಿಸಬೇಕು. ಮಹಿಳಾಸುರಕ್ಷೆಗೆ, ಬೆಲೆಯೇರಿಕೆ ತಡೆಯಲು, ಉದ್ಯೋಗಸೃಷ್ಟಿಸಲು ಸರಕಾರದ ಪ್ರಯತ್ನ ಮುಂದುವರಿಯಲಿದೆ.ಇದರಿಂದಾದ ಬದಲಾವಣೆ ರಾಜ್ಯದಲ್ಲಿ ಕಾಣಿಸಿಕೊಳ್ಳಲಾರಂಭಿಸಿದೆಎಂದು ಮುಖ್ಯಮಂತ್ರಿ ಹೇಳಿದ್ದಾರೆ.
ಐದು ವರ್ಷದಲ್ಲಿ ಮಾಲಿನ್ಯಮುಕ್ತಕೇರಳಕ್ಕಾಗಿ ಕೆಲಸವನ್ನು ಕೂಡಲೇ ಆರಂಭಿಸಲಾಗುವುದು. ಶುಚೀಕರಣಕ್ಕೆ, ಪರಿಸರ ಸಂರಕ್ಷಣೆಗೆ ಹೊಸ ಹೊಸ ಯೋಜನೆಗಳನ್ನು ರೂಪಿಸಲಾಗುವುದು. ಕೇರಳ ಪಿರವಿ ದಿನದಂದು ಶೇ 100ರಷ್ಟು ಶೌಚಾಲಯಗಳು ಪ್ರತಿಯೊಂದು ಮನೆಯಲ್ಲಿರುವುದನ್ನು ದೃಢಪಡಿಸಿಕೊಳ್ಳಲಾಗುವುದು. ದಕ್ಷಿಣ ಭಾರತದಲ್ಲಿ ಮೊದಲ ಬಯಲು ಶೌಚಾಲಯ ಮುಕ್ತ ರಾಜ್ಯವಾಗುವತ್ತ ಕೇರಳ ದಾಪುಗಾಲಿಡುತ್ತಿದೆ ಎಂದು ಪಿಣರಾಯಿ ವಿಜಯನ್ ಹೇಳಿದ್ದಾರೆಂದು ವರದಿ ತಿಳಿಸಿದೆ.