×
Ad

ಸಚಿವೆ ಸುಷ್ಮಾರನ್ನು ಪೇಚಿಗೆ ಸಿಲುಕಿಸಿದ ಎನ್ನಾರೈ ಮಹಿಳೆಯ ದೂರು!

Update: 2016-09-01 12:57 IST

ಹೊಸದಿಲ್ಲಿ,ಸೆಪ್ಟಂಬರ್ 1: ಟ್ವಿಟರ್‌ನಲ್ಲಿ ಸಿಗುವ ದೂರುಗಳಿಗೆ ಸ್ಪಂದಿಸುವ ಮೂಲಕ ಆಗಾಗ ಸುದ್ದಿಯಾಗುತ್ತಿರುವ ವಿದೇಶ ಸಚಿವೆ ಸುಷ್ಮಾ ಸ್ವರಾಜ್‌ರನ್ನು ಇತ್ತೀಚೆಗೆ ಸಿಕ್ಕ ದೂರೊಂದು ಪೇಚಿಗೆ ಸಿಲುಕಿಸಿದೆ ಎಂದು ವರದಿಯಾಗಿದೆ. ತಾನು ಸಚಿವೆಯಾದರೂ ತನ್ನ ಅಧಿಕಾರಕ್ಕೆ ಕೆಲವೊಂದು ವ್ಯಾಪ್ತಿಗಳಿವೆ ಎಂದು ಹೇಳಿ ದೂರುದಾರೆಯ ಮುಂದೆ ತನ್ನ ಅಸಹಾಯಕತೆಯನ್ನು ಸುಷ್ಮಾ ಸ್ವರಾಜ್ ತೋಡಿಕೊಂಡಿದ್ದಾರೆ ಎನ್ನಲಾಗಿದೆ.

ವಿದೇಶದಲ್ಲಿರುವ ಭಾರತೀಯ ಯುವತಿಯೊಬ್ಬರು ತನ್ನ ಪತಿಯ ಪರಸ್ತ್ರೀ ಸಂಬಂಧವನ್ನು ಹುಡುಕಿಕೊಡಬೇಕೆಂದು ಸುಷ್ಮಾರಿಗೆ ಟ್ವಿಟರ್ ಮೂಲಕ ದೂರು ನೀಡಿ ಆಗ್ರಹಿಸಿದ್ದರು. ಆದರೆ ಈ ಯುವತಿಗೆ ಸುಷ್ಮಾಸ್ವರಾಜ್ ನೀಡಿದ ಉತ್ತರ ಈಗ ಮಾಧ್ಯಮಗಳಲ್ಲಿ ಭಾರೀ ಸುದ್ದಿಯಾಗುತ್ತಿದೆ.

ತನ್ನ ತಾಯಿ ಮೃತರಾದ ಹಿನ್ನೆಲೆಯಲ್ಲಿ ತಾನೀಗ ಭಾರತದಲ್ಲೇ ಇದ್ದೇನೆ. ತನ್ನನ್ನು ವಂಚಿಸುತ್ತಿರುವ ಪತಿಯ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಯುವತಿ ಸುಷ್ಮಾರಿಗೆ ಟ್ವಿಟರ್ ಮೂಲಕ ತಿಳಿಸಿದ್ದರು. ತನ್ನ ಪತಿಯು ಥಾಯ್ಲೆಂಡ್‌ನ ಪ್ರೇಯಸಿಯೊಂದಿಗೆ ಭಾರತಕ್ಕೆ ಬಂದು ಸುತ್ತಾಡುತ್ತಿದ್ದಾರೆ ಎಂದು ಸುಷ್ಮಾರಿಗೆ ದೂರುದಾರೆ ವಿವರಿಸಿದ್ದು, ಕಾಲ್‌ ಐಡಿ ಮೂಲಕ ಪತಿಗೆ ಪ್ರೇಯಸಿ ಇರುವುದನ್ನು ತಾನು ಗುರುತಿಸಿದ್ದೇನೆ.ಆದರೆ ಆಕೆಯ ಹೆಸರು ತನಗೆ ಗೊತ್ತಿಲ್ಲ. ಅವಳನ್ನು ಪತ್ತೆಹಚ್ಚಲು ತನಗೆ ನೆರವಾಗಬೇಕೆಂದು ನೊಂದ ಯುವತಿ ಸುಷ್ಮಾರಲ್ಲಿ ವಿನಂತಿಸಿಕೊಂಡಿದ್ದಾಳೆ.

  ಮಹಿಳೆಯ ದೂರಿಗೆ ಪ್ರತಿಕ್ರಿಯಿಸುತ್ತಾ ತನ್ನ ಎಲ್ಲ ಸಹಾನುಭೂತಿಯು ನಿಮಗಿದೆ. ಆದರೆ ದುರದೃಷ್ಟವಶಾತ್ ಇಂತಹ ಸಂಗತಿಗಳಲ್ಲಿ ತನಗೆ ಮಧ್ಯಪ್ರವೇಶಿಸುವ ಅಧಿಕಾರವಿಲ್ಲ ಎಂದು ದೂರುದಾರೆ ಮಹಿಳೆಗೆ ಹೇಳಿದ್ದಾರೆಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News