ಐಐಟಿ-ಬಾಂಬೆ ವಿದ್ಯಾರ್ಥಿಗಳು ಎಷ್ಟು ದಿನಗಳಿಗೊಮ್ಮೆ ಸ್ನಾನ ಮಾಡುತ್ತಾರೆ ಗೊತ್ತೇ ?
ಮುಂಬೈ, ಸೆ.1: ಪ್ರತಿಷ್ಠಿತ ಐಐಟಿ-ಮುಂಬೈನ ವಿದ್ಯಾರ್ಥಿಗಳು ಎಷ್ಟು ದಿನಗಳಿಗೊಮ್ಮೆ ಸ್ನಾನ ಮಾಡುತ್ತಾರೆಂದು ಸಮೀಕ್ಷೆಯೊಂದರ ಮುಖಾಂತರ ತಿಳಿದು ಬಂದಿದ್ದು ಅದರ ವಿವರಗಳು ನಿಜಕ್ಕೂ ಆಶ್ಚರ್ಯ ಹುಟ್ಟಿಸುವಂತಹುದ್ದಾಗಿದೆ.
ಈ ಸಮೀಕ್ಷೆಯಲ್ಲಿ ಕಂಡುಕೊಂಡಂತೆ ಪ್ರತಿ 10 ಮಂದಿ ವಿದ್ಯಾರ್ಥಿಗಳಲ್ಲಿ ಆರು ಮಂದಿ ಎರಡು ಮೂರು ದಿನಗಳಿಗೊಮ್ಮೆ ಸ್ನಾನ ಮಾಡುತ್ತಾರೆ. ಅದಕ್ಕೆ ಅವರು ನೀಡುವ ಕಾರಣ ಸ್ನಾನ ಮಾಡುವ ಕೆಲಸ ‘ತುಂಬಾ ಶ್ರಮದಾಯಕ.’ ಸಮೀಕ್ಷೆಯಲ್ಲಿ ಭಾಗವಹಿಸಿದ ಶೇ.10 ವಿದ್ಯಾರ್ಥಿಗಳು ತಾವು ವಾರಕ್ಕೊಮ್ಮೆ ಸ್ನಾನ ಮಾಡುವುದಾಗಿ ಹೇಳಿದರೆ, ಸುಮಾರು ಶೇ.30 ಮಂದಿ ಪ್ರತಿ ದಿನ ಸ್ನಾನ ಮಾಡುತ್ತೇವೆಂದು ಹೇಳಿದ್ದಾರೆ.
ಶೇ.40ರಷ್ಟು ಹಾಸ್ಟೆಲ್ ವಿದ್ಯಾರ್ಥಿಗಳು ತಾವು ಪದವಿ ಪಡೆದ ನಂತರ ತಮ್ಮ ಸ್ನೇಹಿತರೊಂದಿಗೇ ಇರಲು ಬಯಸಿದರೆ, ಶೇ. 27 ರಷ್ಟು ಮಂದಿ ಮನೆಗೆ ಹಿಂದಿರುಗಿ ಒಬ್ಬರೇ ಇರಲು ಬಯಸುತ್ತಾರೆ. ಸಮೀಕ್ಷೆಯಲ್ಲಿ ಭಾಗವಹಿಸಿದ ಶೇ.66ರಷ್ಟು ಮಂದಿ ತಮ್ಮ ಕುಟುಂಬದೊಂದಿಗೆ ಆತ್ಮೀಯ ಸಂಬಂಧ ಹೊಂದಿದ್ದರೆ, ಶೇ.29.8 ಮಂದಿ ತಮ್ಮ ಹೆತ್ತವರೊಂದಿಗೆ ಕಡಿಮೆ ಸಂವಹನ ನಡೆಸುವವರಾಗಿದ್ದಾರೆ.
ಈ ಸಮೀಕ್ಷೆಯಲ್ಲಿ ಕಂಡುಕೊಂಡಂತೆ ಶೇ. 52.4 ರಷ್ಟು ವಿದ್ಯಾರ್ಥಿಗಳು ತಮ್ಮ ಕನಸಿನ ಗೋವಾಗೆ ಸ್ನೇಹಿತರೊಂದಿಗೆ ತೆರಳಿ ಎಂಜಾಯ್ ಮಾಡಿದ್ದಾರೆ. ಶೇ.70 ರಷ್ಟು ವಿದ್ಯಾರ್ಥಿಗಳು ಟಿಕೆಟ್ ರಹಿತ ಪ್ರಯಾಣವನ್ನು ಲೋಕಲ್ ರೈಲುಗಳಲ್ಲಿ ಮಾಡಿದ್ದರೆ, ಶೇ 55.7ರಷ್ಟು ಮಂದಿ ಜೇಮ್ಸ್ ಬಾಂಡ್ ಸಿನೆಮಾ ‘ಕ್ಯಾಸಿನೊ ರಾಯೇಲ್’ ನಿಂದ ಪ್ರಭಾವಿತರಾಗಿ ಪೋಕರ್ ಅಥವಾ ಬ್ಲ್ಯಾಕ್ ಜ್ಯಾಕ್ ಆಡಿದ್ದಾರೆ.
ವಿವಾಹದ ವಿಚಾರ ಬಂದಾಗ ಶೇ38.15 ಮಂದಿ ಮುಂದಿನ ಐದು ವರ್ಷಗಳ ತನಕ ವಿವಾಹವಾಗಿ ತಮ್ಮ ಗೋರಿಗಳನ್ನು ತಾವೇ ತೋಡ ಬಯಸುವುದಿಲ್ಲವೆಂದು ಹೇಳಿದ್ದಾರೆ. ಶೇ.31 ಮಂದಿ ತಾವು ಯಾವಾಗ ವಿವಾಹವಾಗುತ್ತೇವೆಂದು ಗೊತ್ತಿಲ್ಲವೆಂದು ಹೇಳಿದರೆ, ಶೇ 21.4 ಮಂದಿ ಮುಂದಿನ ಮೂರರಿಂದ ಐದು ವರ್ಷಗಳೊಳಗಾಗಿ ವಿವಾಹವಾಗುವುದಾಗಿ ಹೇಳಿದ್ದಾರೆ.
ಶಿಕ್ಷಣ ಸಂಸ್ಥೆಯಲ್ಲಿ ಹಾಜರಿ ವಿಚಾರದಲ್ಲಿ ಸಮೀಕ್ಷೆ ನಡೆದಾಗ ಶೇ 39.5 ಮಂದಿ ತಾವು ಎಲ್ಲಾ ತರಗತಿಗಳಿಗೆ ಹಾಜರಾಗಬಯಸುವುದಾಗಿ ಹೇಳಿದ್ದರೆ ಶೇ 32.5 ಮಂದಿ ತಾವು ಆದಷ್ಟು ಕಡಿಮೆ ತರಗತಿಗಳಿಗೆ ಹಾಜರಾಗ ಬಯಸುವುದಾಗಿ ಹೇಳಿದರು. ಶೇ.16.2 ರಷ್ಟು ವಿದ್ಯಾರ್ಥಿಗಳು ತಾವು ಸಂಸ್ಥೆಯ ಸೆಂಟ್ರಲ್ ಲೈಬ್ರರಿ ಪ್ರವೇಶಿಸಿಯೇ ಇಲ್ಲವೆಂದು ಹೇಳಿದ್ದಾರೆ.