×
Ad

ರಿಯೋದಲ್ಲಿ ನೀರು ನೀಡಲಿಲ್ಲ ಎಂದು ಜೈಶಾ ಸುಳ್ಳು ಹೇಳಿದ್ದರು!

Update: 2016-09-01 15:41 IST

ಭಾರತೀಯ ಮ್ಯಾರಥಾನ್ ಓಟಗಾರ್ತಿ ಜೈಶಾ ರಿಯೋ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದಾಗ ನೀರು ಕೂಡ ಸಿಕ್ಕಿರಲಿಲ್ಲ ಎಂದು ಹೇಳಿರುವುದು ಸುಳ್ಳು ಎಂದು ಸಾಬೀತು ಮಾಡಿರುವುದಾಗಿ ಈಗ ಪತ್ರಕರ್ತ ಶ್ರೀಜಿತ್ ಪಣಿಕ್ಕರ್ ಅವರು ಹೇಳಿದ್ದಾರೆ.

“ಅಂತಾರಾಷ್ಟ್ರೀಯ ಅಸೋಸಿಯೇಶನ್ ಆಫ್ ಅಥ್ಲೆಟಿಕ್ಸ್ ಫೆಡರೇಶನ್ಸ್ (ಐಎಎಎಫ್)ನ 240ನೇ ನಿಯಮವು ಎಂತಹ ಸಂದರ್ಭದಲ್ಲಿ ಮ್ಯಾರಥಾನ್ ನಡೆಸಬೇಕು ಎನ್ನುವುದನ್ನು ಸ್ಪಷ್ಟವಾಗಿ ಹೇಳಿದೆ. ಪ್ರತೀ 5 ಕಿಮೀ ದೂರದಲ್ಲಿ ಪ್ರತೀ ಮ್ಯಾರಥಾನ್ ಓಟಗಾರರಿಗೂ ನೀರು ಮತ್ತು ಇತರ ಪಾನೀಯದ ನಿಲ್ದಾಣಗಳ ವ್ಯವಸ್ಥೆ ಮಾಡಿರಬೇಕು ಎಂದು ಐಎಎಎಫ್ ನಿಯಮಾವಳಿ ಹೇಳುತ್ತದೆ. ಆದರೆ ಜೈಶಾ ಹೇಳುವ ಪ್ರಕಾರ ಗೇಮ್ಸ್ ಸಮಿತಿ ಪ್ರತೀ 8 ಕಿಮೀ ದೂರದಲ್ಲಿ ನೀರಿನ ವ್ಯವಸ್ಥೆ ಮಾಡಿತ್ತು. ಆದರೆ ರಿಯೋ ಒಲಿಂಪಿಕ್ಸ್ ಆಯೋಜಕರ ಜೊತೆಗಿನ ಇಮೇಲ್ ಮಾತುಕತೆಯಲ್ಲಿ ಜೈಶಾ ಹೇಳಿರುವುದು ಸುಳ್ಳೆಂದು ಖಚಿತವಾಗಿದೆ” ಎನ್ನುತ್ತಾರೆ ಶ್ರೀಜಿತ್ ಪಣಿಕ್ಕರ್.

ಶ್ರೀಜಿತ್ ಅವರು ಐಎಎಎಫ್‌ಗೆ ಪತ್ರ ಬರೆದು ರಿಯೋ ಒಲಿಂಪಿಕ್ಸ್‌ನ ಮ್ಯಾರಥಾನ್ ವ್ಯವಸ್ಥೆಯ ವಿವರ ಪಡೆದುಕೊಂಡಿದ್ದಾರೆ. ಅವರ ಮೊದಲ ಇಮೇಲ್‌ನಲ್ಲಿ ಮಹಿಳಾ ಮ್ಯಾರಥಾನ್‌ಗೆ ನೀರು ಎಷ್ಟು ಅಂತರದೊಳಗೆ ಇಡಲಾಗಿತ್ತು ಎಂಬ ಪ್ರಶ್ನೆಗೆ ಮೊನಾಕೋದ ಐಎಎಎಫ್ ಸ್ಪರ್ಧಾ ವಿಭಾಗದ ತಾಂತ್ರಿಕ ಮ್ಯಾನೇಜರ್ ಇಮರ್ ಮಾಟ್ರಾಹಾಜಿ ಅವರು ಉತ್ತರ ನೀಡಿ, “ನೀರಿನ ವ್ಯವಸ್ಥೆಯನ್ನು ಪ್ರತೀ 2.5 km, 7.5 km, 12.5 km, 17.5 km, 22.5 km, 27.5 km, 32.5 km, 37.5 km, 40 km ಗಳಲ್ಲಿ ಮತ್ತು ಆರಂಭದ ಮತ್ತು ಕೊನೆಯ ಸ್ಥಳಗಳಲ್ಲೂ ಇಡಲಾಗಿತ್ತು. ನಿಯಮದ ಪ್ರಕಾರ 10 ಸ್ಥಳಗಳಲ್ಲಿ ನೀರು ಒದಗಿಸಬೇಕಾಗಿದ್ದರೂ, ಸ್ಪರ್ಧೆಯಲ್ಲಿ 11 ಕಡೆ ನೀರು ಇಡಲಾಗಿತ್ತು” ಎಂದಿದ್ದಾರೆ. ಈ ವ್ಯವಸ್ಥೆಯಲ್ಲಿ ಎಲ್ಲಾ ಅಥ್ಲೀಟ್‌ಗಳಿಗೂ ಇತರ ಪಾನೀಯಗಳೂ ಲಭ್ಯವಿದ್ದವು. ಇಂತಹ ಆರು ಪಾನೀಯ ವ್ಯವಸ್ಥೆ ಮ್ಯಾರಥಾನ್ ಓಟದ ಸಂದರ್ಭ ಇತ್ತು ಎಂದೂ ಮಾಟ್ರಾಹಾಜಿ ಹೇಳಿದ್ದರು. ಅಥ್ಲೀಟ್‌ಗಳ ಪ್ರತಿನಿಧಿಗಳಾಗಿ ಅಧಿಕಾರಿಗಳು/ಸ್ವಯಂಸೇವಕರು ಇಲ್ಲದೆ ಸಂದರ್ಭದಲ್ಲಿಯೂ ಈ ಓಟಗಾರರಿಗೆ 11 ಸ್ಥಳಗಳಲ್ಲಿ ನೀರು ಸೌಲಭ್ಯವಿತ್ತೇ ಎನ್ನುವ ಪತ್ರಕರ್ತರ ಇಮೇಲ್ ಪ್ರಶ್ನೆಗೆ, “ಸ್ಥಳೀಯ ಗೇಮ್ಸ್ ಸಮಿತಿ ಸ್ವಯಂಸೇವಕರು ಎಲ್ಲಾ ಸ್ಥಳಗಳಲ್ಲೂ ನೀರು ಇರುವಂತೆ ಖಾತರಿ ಕೊಟ್ಟಿದ್ದಾರೆ” ಎಂದು ಉತ್ತರಿಸಿದ್ದಾರೆ. ಹೀಗಾಗಿ ಜೈಶಾ ತಮಗೆ ನೀರು ಸಿಗಲಿಲ್ಲ ಎಂದು ಹೇಳಿರುವ ಮಾತನ್ನು ನಂಬಲು ಸಾಧ್ಯವಿಲ್ಲ ಎಂದು ಪತ್ರಕರ್ತ ಶ್ರೀಜಿತ್ ಪಣಿಕ್ಕರ್ ಅಭಿಪ್ರಾಯಪಟ್ಟಿದ್ದಾರೆ.

“ಜೈಶಾ ಅಥವಾ ಅವರ ತರಬೇತುದಾರರು ಖಾಸಗಿ ಪಾನೀಯಗಳಿಗಾಗಿ ಭಾರತೀಯ ಸಿಬ್ಬಂದಿಗಳನ್ನು ಕೇಳದೆ ಇದ್ದ ಕಾರಣ ಅವರು ಅದನ್ನು ಒದಗಿಸಿರಲಿಲ್ಲ ಎನ್ನಲಾಗಿದೆ. ಹಾಗಿದ್ದರೂ ಜೈಶಾಗೆ ನೀರು ಲಭ್ಯವಿತ್ತು” ಎಂದು ಶ್ರೀಜಿತ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News